Asianet Suvarna News Asianet Suvarna News

Karnataka Assembly Election 2023: ಬೆಂಗಳೂರಿನ 8,802 ಮತಗಟ್ಟೆಗಳಲ್ಲಿ ಮತದಾನ

389 ಅಭ್ಯರ್ಥಿಗಳ ಭವಿಷ್ಯ ಬರೆಯಲಿರುವ 97.13 ಲಕ್ಷ ಮತದಾರರು, ಮತದಾನ ಕರ್ತವ್ಯಕ್ಕೆ 41 ಸಾವಿರ ಅಧಿಕಾರಿ ಸಿಬ್ಬಂದಿ ನಿಯೋಜನೆ, 187 ಮತಗಟ್ಟೆಹೆಚ್ಚಳ, ಆ್ಯಪಲ್ಲಿ ಮತದಾನದ ಸಮಯ ನಿಗದಿಗೆ ಅವಕಾಶ, ವಾಹನಗಳಿಗೆ ಪಾರ್ಕಿಂಗ್‌, ಎಡಗೈ ತೋರು ಬೆರಳಿಗೆ ಶಾಯಿ. 

Voting in 8802 Polling Booths in Bengaluru of Karnataka Assembly Election 2023 grg
Author
First Published May 10, 2023, 5:35 AM IST

ಬೆಂಗಳೂರು(ಮೇ.10): ರಾಜಧಾನಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ 8,802 ಮತಗಟ್ಟೆಗಳಲ್ಲಿ ಬುಧವಾರ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಲಿರುವ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮತದಾರರನ್ನು ಮತಗಟ್ಟೆಗೆ ಆಕರ್ಷಿಸಲು 264 ಮತಗಟ್ಟೆಗಳನ್ನು ವಿವಿಧ ಮಾದರಿಯಲ್ಲಿ ಸಜ್ಜುಗೊಳಿಸಲಾಗಿದೆ.

28 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 389 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ರಾಜಕೀಯ ಭವಿಷ್ಯವನ್ನು ಮತದಾರರು ಬುಧವಾರ ಇವಿಎಂಗಳಲ್ಲಿ ಬರೆಯಲಿದ್ದಾರೆ. ಮಸ್ಟರಿಂಗ್‌ ಕೇಂದ್ರಗಳಿಂದ ಸಿಬ್ಬಂದಿಯು ತಮಗೆ ನಿಗದಿ ಪಡಿಸಿರುವ ಮತಗಟ್ಟೆಗಳಿಗೆ ಇವಿಎಂಗಳನ್ನು ತೆಗೆದುಕೊಂಡು ತೆರಳಿದ್ದಾರೆ. ಮಂಗಳವಾರ ರಾತ್ರಿಯೇ ಮತಗಟ್ಟೆಗಳಿಗೆ ತಲುಪಿರುವ ಸಿಬ್ಬಂದಿ ಅಗತ್ಯ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಮತದಾನ ಮುಕ್ತಾಯವಾಗುವವರೆಗೆ ಪ್ರತಿಬಂಧಕಾಜ್ಞೆಯ ಜಾರಿ

ಬುಧವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾರರು ತಮ್ಮ ಹಕ್ಕು ಚಲಾಯಿಸಬಹುದು. ಮತ ಚಲಾಯಿಸುವವರ ಎಡಗೈ ತೋರು ಬೆರಳಿಗೆ ಶಾಯಿಯನ್ನು ಹಾಕಲಾಗುತ್ತದೆ. ಮೇ 13ರಂದು ಮತ ಎಣಿಕೆ ನಡೆಯಲಿದ್ದು, ಬುಧವಾರ ಬೆಳಗ್ಗೆ 5.30ಕ್ಕೆ ನಡೆಯಲಿರುವ ಅಣಕು ಮತದಾನದ ವೇಳೆ ಇವಿಎಂನಲ್ಲಿ ಲೋಪದೋಷಗಳು ಕಂಡು ಬಂದರೆ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ.

ಮತದಾರ ಸ್ನೇಹಿ ವ್ಯವಸ್ಥೆ

ಮತಗಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಅಂಗವಿಕಲರು ಮತ್ತು ಹಿರಿಯ ನಾಗರಿಕರು ಮತ ಕೇಂದ್ರದ ಒಳಗೆ ಪ್ರವೇಶಿಸಲು ಇಳಿಜಾರು ಮೆಟ್ಟಿನ ವ್ಯವಸ್ಥೆ, ಗಾಲಿಕುರ್ಚಿ ವ್ಯವಸ್ಥೆ, ನೆರಳಿನ ವ್ಯವಸ್ಥೆ, ವಾಹನ ವಾರ್ಕಿಂಗ್‌ಗೆ ಸ್ಥಳ ನಿಗದಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ.

97 ಲಕ್ಷ ಮತದಾರರು:

ನಗರದಲ್ಲಿ ಒಟ್ಟು 97.13 ಲಕ್ಷ ಮತದಾರರಿದ್ದಾರೆ. ಈ ಪೈಕಿ 50.24 ಲಕ್ಷ ಪುರುಷರು ಹಾಗೂ 46.88 ಲಕ್ಷ ಮಹಿಳಾ ಮತದಾರರಿದ್ದಾರೆ. 2.37 ಲಕ್ಷ 80 ವರ್ಷ ಮೇಲ್ಪಟ್ಟವರಿದ್ದು, 25,790 ಮಂದಿ ಅಂಗವಿಕಲ ಮತದಾರರಿದ್ದಾರೆ. 2,017 ಎನ್‌ಆರ್‌ಐ ಮತದಾರರಿದ್ದಾರೆ. 1,43,536 ಯುವ ಮತದಾರರು, 1,760 ಸೇವಾ ಮತದಾರರಿದ್ದಾರೆ.

187 ಮತಗಟ್ಟೆ ಹೆಚ್ಚಳ:

ಒಟ್ಟು ಮತಗಟ್ಟೆಗಳ ಸಂಖ್ಯೆ 8,002 ಇದ್ದಿದ್ದು, ಈ ಪೈಕಿ 2,006 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಎಂದು ಪರಿಗಣಿಸಲಾಗಿದೆ. ಇದರಲ್ಲಿ 264 ಮತಗಟ್ಟೆಗಳನ್ನು ಮಹಿಳಾ, ಯುವ, ವಿಜ್ಞಾನ ತಂಜ್ಞಾನ, ಪರಿಸರ, ಆರೋಗ್ಯ ಸೇರಿದಂತೆ ವಿವಿಧ ವಿಷಯಾಧಾರಿತವಾಗಿ ರೂಪಿಸಲಾಗಿದೆ.

41 ಸಾವಿರ ಅಧಿಕಾರಿ ಸಿಬ್ಬಂದಿ:

ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲು ಒಟ್ಟು 41 ಸಾವಿರ ಅಧಿಕಾರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಈ ಪೈಕಿ 36 ಸಾವಿರ ಮಂದಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಶೇ.20 ರಷ್ಟುಅಧಿಕಾರಿ ಸಿಬ್ಬಂದಿಯನ್ನು ಕಾಯ್ದಿರಿಸಲಾಗಿದೆ.

5 ಲಕ್ಷ ಮತದಾರರ ಹೆಚ್ಚಳ

ಜನವರಿಯಲ್ಲಿ ಪ್ರಕಟಿಸಲಾದ ಮತದಾರರ ಅಂತಿಮ ಪಟ್ಟಿಯಲ್ಲಿ 92.09 ಲಕ್ಷ ಮತದಾರರಿದ್ದರು. ಏ.27 ರಂದು ಚುನಾವಣಾ ಆಯೋಗ ಪ್ರಕಟಿಸಿರುವ ಪಟ್ಟಿಯಲ್ಲಿ 97.13 ಲಕ್ಷ ಮತದಾರರಿದ್ದಾರೆ. ಕಳೆದ ಮೂರುವರೆ ತಿಂಗಳಲ್ಲಿ 5.03 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಆ ಪೈಕಿ 2.43 ಲಕ್ಷ ಪುರುಷ ಮತದಾರರು, 2.59 ಲಕ್ಷ ಮಹಿಳಾ ಮತದಾರರಾಗಿದ್ದಾರೆ.

ಮನೆಯಿಂದ 8,631 ಮಂದಿ ಮತದಾನ

ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಿತ್ತು. ನೋಂದಣಿ ಮಾಡಿಕೊಂಡ 9,271 ಮಂದಿಯ ಪೈಕಿ ಈಗಾಗಲೇ 8,631 ಮಂದಿ ಮತದಾನ ಮಾಡಿದ್ದಾರೆ. 494 ಮಂದಿ ಮತದಾನಕ್ಕೆ ಲಭ್ಯವಾಗಿಲ್ಲ. ಮತದಾನ ಮಾಡಿದವರ ಪೈಕಿ 8,519 ಮಂದಿ 80 ವರ್ಷ ಮೇಲ್ಪಟ್ಟವರು ಹಾಗೂ 112 ಮಂದಿ ಅಂಗವಿಕಲರು ಮತದಾನ ಮಾಡಿದ್ದಾರೆ. 390 ಮಂದಿ 80 ವರ್ಷ ಮೇಲ್ಪಟ್ಟವರು ಹಾಗೂ ನಾಲ್ವರು ಅಂಗವಿಕಲರು ಲಭ್ಯವಾಗಿಲ್ಲ. 97 ಮಂದಿ 80 ವರ್ಷ ಮೇಲ್ಪಟ್ಟವರು ಹಾಗೂ ಮೂವರು ಅಂಗವಿಕಲರು ಮತದಾನ ಮಾಡಲು ನಿರಾಕರಿಸಿದ್ದಾರೆ.

ಆ್ಯಪ್‌ ಬಳಸಿ ಮತಗಟ್ಟೆ ಮಾಹಿತಿ ಪಡೆಯಿರಿ

ಮತದಾರರಿಗೆ ಮತಗಟ್ಟೆಮಾಹಿತಿ ಸೇರಿದಂತೆ ಇತರೆ ವಿವರ ಪಡೆಯಲು ಚುನಾವಣಾ ಆಯೋಗದ ‘ಚುನಾವಣಾ’ ಆ್ಯಪ್‌ ಬಳಸಬಹುದು. ಇದರಲ್ಲಿ ಹೆಸರು ಪರಿಶೀಲನೆ,ಮತಗಟ್ಟೆಮಾಹಿತಿ ಲಭ್ಯವಾಗಲಿದೆ. ವಿಕಲಚೇತರು ಗಾಲಿಕುರ್ಚಿ ಮತ್ತು ಮತಗಟ್ಟೆಕರೆದೊಯ್ಯುವ ಸೇವೆ ಕಾಯ್ದಿರಿಸಬಹುದಾಗಿದೆ. ಇನ್ನು ‘ಕ್ಯೂ ಆಪ್‌’ ಮೂಲಕ ಮತದಾನಕ್ಕೆ ಸಮಯ ನಿಗದಿ ಪಡಿಸಿಕೊಳ್ಳಬಹುದು. 600 ಕಡೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಪ್ರತಿ 15ರಿಂದ 20 ನಿಮಿಷಕ್ಕೆ ಕ್ಯೂ ಆಪ್‌ ಅಪ್‌ಡೇಟ್‌ ಆಗಲಿದೆ. ಪರಿಶೀಲಿಸಿಕೊಂಡು ಮತಗಟ್ಟೆಹೋಗಿ ಮತದಾನ ಮಾಡಬಹುದಾಗಿದೆ.

264 ಥೀಮ್‌ಬೇಸ್ಡ್‌ ಮತಗಟ್ಟೆಗಳ ಸ್ಥಾಪನೆ

ಬೆಂಗಳೂರು ಕೇಂದ್ರ 68, ಬೆಂಗಳೂರು ಉತ್ತರ 62, ಬೆಂಗಳೂರು ದಕ್ಷಿಣ 64, ಬೆಂಗಳೂರು ನಗರದಲ್ಲಿ 70 ಥೀಮ್‌ ಬೇಸ್ಡ್‌ ಮತಗಟ್ಟೆಗಳನ್ನು ರೂಪಿಸಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ 5 ಮಹಿಳಾ ಮಾದರಿ ಮತಗಟ್ಟೆಗಳಿವೆ. ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರ್ಕಿಡ್‌ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿ ಮಾದರಿ ಪಿಂಕ್‌ ಬೂತ್‌ ಸ್ಥಾಪನೆ ಮಾಡಲಾಗಿದೆ. ಒಟ್ಟಾರೆ 140 ಸಖಿ ಮತಗಟ್ಟೆಗಳು, 24 ಯುವ ಮತಗಟ್ಟೆ, ಅಂಗವಿಕಲರಿಗೆ 36, ನಿವೃತ್ತ ಸೇನಾ ಸಿಬ್ಬಂದಿಗಳಿಗೆ 5, ಹಸಿರು ಮತ್ತು ಪರಿಸರ 12, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ 5, ಎರಡು ಕ್ರೀಡಾ ಮತಗಟ್ಟೆಹಾಗೂ ತೃತಿಯ ಲಿಂಗಿಗಳಿಗೆ ಒಂದು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಪರ್ಯಾಯ ಗುರುತಿನ ಚೀಟಿ

ಮತದಾರ ಪಟ್ಟಿಯಲ್ಲಿ ಹೆಸರು ಹೊಂದಿದ್ದು, ಮತದಾರ ಗುರುತಿನ ಚೀಟಿ ಇಲ್ಲದವರು ಚುನಾವಣಾ ಆಯೋಗ ಅನುಮೋದಿಸಿರುವ ಈ 12 ಮಾದರಿಯ ಗುರುತಿನ ಚೀಟಿಯನ್ನು ಮತಗಟ್ಟೆಅಧಿಕಾರಿಗಳಿಗೆ ತೋರಿಸಿ ಮತದಾನ ಮಾಡಬಹುದಾಗಿದೆ. ಆಧಾರ್‌ ಕಾರ್ಡ್‌, ವಾಹನ ಚಾಲನ ಪರವಾನಗಿ, ಎಂಜಿಎನ್‌ಆರ್‌ಇಜಿಎ ಜಾಬ್‌ ಕಾರ್ಡ್‌, ಎಂಒಎಲ್‌ ಮತ್ತು ಇ ಅನ್ವಯ ನೀಡುವ ಸ್ಮಾರ್ಚ್‌ ಕಾರ್ಡ್‌, ಭಾರತೀಯ ಪಾಸ್‌ ಪೋರ್ಚ್‌, ಬ್ಯಾಂಕ್‌ ಹಾಗೂ ಅಂಚೆ ಕಚೇರಿಯ ಭಾವಚಿತ್ರ ಇರುವ ಪಾಸ್‌ ಬುಕ್‌, ಸರ್ಕಾರದ ಆರೋಗ್ಯ ಸ್ಮಾರ್ಚ್‌ ಕಾರ್ಡ್‌, ಭಾವಚಿತ್ರ ಇರುವ ಪಿಂಚಣಿ ದಾಖಲೆ ಪತ್ರ, ಪಾನ್‌ ಕಾರ್ಡ್‌, ಎಂಎಲ್‌ಎ ಮತ್ತು ಎಂಪಿ ಗುರುತಿನ ಚೀಟಿ, ಸರ್ಕಾರಿ ಮತ್ತು ಸಾರ್ವಜನಿಕ ಇಲಾಖೆಯ ಗುರುತಿನ ಚೀಟಿ, ವಿಶೇಷಚೇತನ ವ್ಯಕ್ತಿಗೆ ನೀಡಲಾಗುವ ಗುರುತಿನ ಚೀಟಿ ಬಳಕೆ ಮಾಡಬಹುದಾಗಿದೆ.

ನೀವು ನೀಡುವ ಮತ ಇತಿಹಾಸವಾಗಲಿ: ಲಾಲ್‌

389 ಮಂದಿ ಕಣದಲ್ಲಿ

28 ವಿಧಾನಸಭಾ ಕ್ಷೇತ್ರಗಳಲ್ಲಿ 389 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. 137 ಮಂದಿ ಪಕ್ಷೇತರರಾಗಿ, 115 ಅಭ್ಯರ್ಥಿಗಳು ಸಣ್ಣ ಮಟ್ಟದ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಮತ್ತು ಆಮ್‌ ಆದ್ಮಿ ಪಕ್ಷಗಳು ಎಲ್ಲ 28 ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್‌ 24 ಕ್ಷೇತ್ರ, ಎಡಿಯು 4, ಎನ್‌ಪಿಪಿಯ ಇಬ್ಬರು, ಸಿಪಿಐಎಂನಿಂದ ಒಬ್ಬರು ಚುನಾವಣೆ ಎದುರಿಸುತ್ತಿದ್ದಾರೆ.

ಯಲಹಂಕದಲ್ಲಿ ಹೆಚ್ಚು ಅಭ್ಯರ್ಥಿ

ನಗರದ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಳಿದಂತೆ ರಾಜಾಜಿನಗರ ಕ್ಷೇತ್ರದಲ್ಲಿ 18, ಬ್ಯಾಟರಾಯನಪುರ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಚುನಾವಣೆ ಎದುರಿಸುತ್ತಿದ್ದಾರೆ.

ಎಲ್ಲೆಲ್ಲಿ ಮತ ಎಣಿಕೆ ಕೇಂದ್ರ

*ಬೆಂಗಳೂರು ಕೇಂದ್ರ: ಬಸವನಗುಡಿಯ ಬಿಎಂಎಸ್‌ ಮಹಿಳಾ ಕಾಲೇಜು.
*ಬೆಂಗಳೂರು ದಕ್ಷಿಣ: ಜಯನಗರ 4ನೇ ಬ್ಲಾಕ್‌ನ ಎಸ್‌.ಎಸ್‌.ಎಂ.ಆರ್‌.ವಿ ಪಿಯು ಕಾಲೇಜು
*ಬೆಂಗಳೂರು ಉತ್ತರ: ವಸಂತನಗರದ ಮೌಂಟ್‌ ಕಾರ್ಮಲ್‌ ಕಾಲೇಜು
*ಬೆಂಗಳೂರು ನಗರ: ವಿಠಲ್‌ಮಲ್ಯರಸ್ತೆಯ ಸೆಂಟ್‌ ಜೋಸೆಫ್‌ ಇಂಡಿಯನ್‌ ಹೈ ಸ್ಕೂಲ್‌

2018ರ ಮತದಾನ ಪ್ರಮಾಣ ಜಿಲ್ಲೆ ಶೇಕಡಾ ಮತದಾನ

ಬೆಂಗಳೂರು ಕೇಂದ್ರ 55.18
ಬೆಂಗಳೂರು ದಕ್ಷಿಣ 51.98
ಬೆಂಗಳೂರು ಉತ್ತರ 53.47
ಬೆಂಗಳೂರು ನಗರ 57.00

Follow Us:
Download App:
  • android
  • ios