ಕಳೆದ 2018ರ ಚುನಾವಣೆಯಲ್ಲಿ ನನಗೆ ಸೋಲಿನಲ್ಲೂ ಗೆಲುವು ದೊರೆತಿದೆ. ನಾನು ಸೋತರು ಕೂಡ 5ವರ್ಷವು ನಿಮ್ಮ ಮನೆಮಗನಾಗಿ ಜೊತೆಯಲ್ಲೇ ಇದ್ದೆ. 2023ರ ಚುನಾವಣೆಗೆ ನನಗೆ ನೀವು ಗೆಲುವು ನೀಡಿ. ಸಾಕ್ಷಿಗುಡ್ಡೆ ಕೇಳುವ ನಾಯಕರಿಗೆ ಇಂದು ನೀವು ನೀಡುವ ಮತವೇ ಸಾಕ್ಷಿಯಾಗಿ ಇತಿಹಾಸ ಸೃಷ್ಟಿಸಲಿ ಎಂದು ಮಾಜಿ ಶಾಸಕ ಪಿ.ಆರ್‌.ಸುಧಾಕರಲಾಲ್‌ ತಿಳಿಸಿದರು.

ಕೊರಟಗೆರೆ : ಕಳೆದ 2018ರ ಚುನಾವಣೆಯಲ್ಲಿ ನನಗೆ ಸೋಲಿನಲ್ಲೂ ಗೆಲುವು ದೊರೆತಿದೆ. ನಾನು ಸೋತರು ಕೂಡ 5ವರ್ಷವು ನಿಮ್ಮ ಮನೆಮಗನಾಗಿ ಜೊತೆಯಲ್ಲೇ ಇದ್ದೆ. 2023ರ ಚುನಾವಣೆಗೆ ನನಗೆ ನೀವು ಗೆಲುವು ನೀಡಿ. ಸಾಕ್ಷಿಗುಡ್ಡೆ ಕೇಳುವ ನಾಯಕರಿಗೆ ಇಂದು ನೀವು ನೀಡುವ ಮತವೇ ಸಾಕ್ಷಿಯಾಗಿ ಇತಿಹಾಸ ಸೃಷ್ಟಿಸಲಿ ಎಂದು ಮಾಜಿ ಶಾಸಕ ಪಿ.ಆರ್‌.ಸುಧಾಕರಲಾಲ್‌ ತಿಳಿಸಿದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚನ್ನರಾಯನದುರ್ಗ ಮತ್ತು ಪುರವಾರ ಹೋಬಳಿ ಹಾಗೂ ಕೊರಟಗೆರೆ ಪಟ್ಟಣದಲ್ಲಿ ಜೆಡಿಎಸ್‌ ಪಕ್ಷದಿಂದ ಸೋಮವಾರ ಏರ್ಪಡಿಸಲಾಗಿದ್ದ ಪಂಚರತ್ನ ಯೋಜನೆಯ ಬಗ್ಗೆ ಅರಿವು ಮತ್ತು ಜೆಡಿಎಸ್‌ ಪಕ್ಷದ ಪರವಾಗಿ ಪ್ರಚಾರ ನಡೆಸಿದ ವೇಳೆ ಮಾತನಾಡಿದರು.

ಮೇ 10ರಂದು ನನ್ನ ಮತದಾರರು ಬೂತ್‌ನಲ್ಲಿ ಅಭಿವೃದ್ಧಿಯ ಮತಗಳ ಸಾಕ್ಷಿಯನ್ನಾಗಿ ನೀಡುತ್ತಾರೆ. ಮೇ13ರಂದು ನಾನು ಮಾಡಿರುವ ಅಭಿವೃದ್ಧಿ ಸಾಕ್ಷಿಗುಡ್ಡೆ ಕಾಂಗ್ರೆಸ್‌ ನಾಯಕರಿಗೆ ಕಾಣಲಿದೆ. 2023ರ ಚುನಾವಣೆಯು ಹಣವಂತ ಮತ್ತು ಗುಣವಂತ ನಡುವಿನ ಚುನಾವಣೆ ಆಗಿದೆ. ನನ್ನ ಜನ ಎಂದಿಗೂ ನನಗೇ ಮೋಸ ಮಾಡುವುದಿಲ್ಲ. ನಾನು ಮಾಡಿದ ಸೇವೆಯನ್ನ ನೆನೆದು ನನ್ನನ್ನು ಮತ್ತೇ ಆಯ್ಕೆ ಮಾಡಿಯೇ ಮಾಡುವರು. ನನ್ನ ನಂಬಿಕೆ ಎಂದಿಗೂ ಸುಳ್ಳಾಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೋವಿನಕೆರೆ ಗ್ರಾಪಂ ಅಧ್ಯಕ್ಷ ನಾಗರಾಜು ಮಾತನಾಡಿ ಕೊರಟಗೆರೆ ಕ್ಷೇತ್ರದ 35ಸಾವಿರ ಮನೆಯಲ್ಲಿ ಸುಧಾಕರಲಾಲ್‌ ಸಹಾಯಹಸ್ತ ಮಾಡಿರುವ ಸಾಕ್ಷಿ ಗುಡ್ಡೆಗಳಿವೆ. 2013ರಲ್ಲಿ ಲಾಲ್‌ಗೆ 72 ಸಾವಿರ ಮತಗಳು ಬಂದಿವೆ. 2018ರಲ್ಲಿ ಲಾಲ್‌ ಸೋತರು 74 ಸಾವಿರ ಮತ ಪಡೆದಿದ್ದಾರೆ. ಅಂತರ್ಜಲ ಅಭಿವೃದ್ಧಿ, ಗಂಗಾ ಕಲ್ಯಾಣ ಯೋಜನೆ ಮತ್ತು ಸಾಗುವಳಿ ಚೀಟಿಯ ಅನುಕೂಲ ಸಾವಿರಾರು ರೈತರಿಗೆ ಆಗಿದೆ. 3ಸಾವಿರಕ್ಕೂ ಅಧಿಕ ಜನರಿಗೆ ಸರಕಾರದ ಸಾಲ ಸೌಲಭ್ಯ ದೊರೆತಿವೆ ಎಂದು ತಿಳಿಸಿದರು.

ಚುನಾವಣೆ ಪ್ರಚಾರದ ವೇಳೆ ಹಿಂದುಳಿದ ವರ್ಗದ ಕಾರ್ಯಧ್ಯಕ್ಷ ಮಹಾಲಿಂಗಪ್ಪ, ಜೆಡಿಎಸ್‌ ಕಾರ್ಯಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್‌, ವಕ್ತಾರ ಲಕ್ಷ್ಮೇಶ್‌, ಜಿಪಂ ಮಾಜಿ ಸದಸ್ಯ ಶಿವರಾಮಯ್ಯ, ಮುಖಂಡರಾದ ಸಿದ್ದಮಲ್ಲಪ್ಪ, ಶಿವರಾಮಯ್ಯ, ನಟರಾಜ್‌, ಮಂಜುನಾಥ, ರಮೇಶ್‌, ಅಮರ, ಪವನ್‌, ಕಾಕಿಮಲ್ಲಣ್ಣ, ಸೈಯ್ಯದ್‌ ಸೈಪುಲ್ಲಾ, ಕಲೀಂವುಲ್ಲಾ ಸೇರಿದಂತೆ ಇತರರು ಇದ್ದರು.

ವಿಶೇಷ ಚೇತನರಿಂದ ದೇಣಿಗೆ

ಮಾಜಿ ಶಾಸಕ ಸುಧಾಕರಲಾಲ್‌ ಚುನಾವಣಾ ಪ್ರಚಾರ ಬರುತ್ತಾರೆ ಎಂದು ತಿಳಿದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಕಾದುಕುಳಿತು ವೀಳ್ಯದೆಲೆಯ ಜೊತೆ ದೇಣಿಗೆ ನೀಡಿ ಗೆಲುವು ಪಡೆಯುವಂತೆ ಶುಭಹಾರೈಸಿದರು. ವಿಶೇಷ ಚೇತನರು ತಮ್ಮ ತಿಂಗಳ ವೇತನವನ್ನು ಲಾಲ್‌ಗೆ ನೀಡುವುದರ ಜೊತೆಗೆ ತ್ರೀಚಕ್ರ ವಾಹನದಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಸಂಚಲನ ಸೃಷ್ಟಿಸಿದರು.

ಹಿರಿಯ ನಾಗರಿಕರಿಗೆ 5ಸಾವಿರ, ಮಹಿಳೆಯರು ಮತ್ತು ವಿಶೇಷ ಚೇತನರಿಗೆ 2500ಸಾವಿರ, ಅನ್ನದಾರ ಪ್ರತಿ ಎಕರೇ 10ಸಾವಿರ, ಸ್ತ್ರೀಶಕ್ತಿ ಸಾಲ ಸಂಪೂರ್ಣ ಮನ್ನಾ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಎಲೆಕ್ಟ್ರಿಕ್‌ ಮೂಪೆಡ್‌, ಆಟೋ ಚಾಲಕರ ನೆಮ್ಮದಿಗೆ ಮಾಸಿಕ 2ಸಾವಿರ, ಭೂ ರಹಿತ ಕೃಷಿ ಕಾರ್ಮಿಕರಿಗೆ 2ಸಾವಿರ, ರೈತರ ಪಂಪಸೆಟ್‌ಗೆ ನಿರಂತರ ವಿದ್ಯುತ್‌ ಕಲ್ಪಿಸುವುದು ಜೆಡಿಎಸ್‌ ಪಕ್ಷದ ಪ್ರಣಾಳಿಕೆ ಆಗಿದೆ. ನನಗೆ ಜನಸೇವೆಗೆ ಅವಕಾಶ ಮಾಡಿಕೋಡಬೇಕಿದೆ.

ಪಿ.ಆರ್‌.ಸುಧಾಕರಲಾಲ್‌, ಮಾಜಿ ಶಾಸಕ