Asianet Suvarna News Asianet Suvarna News

Voters Data Theft Case: ಮತ ಮಾಹಿತಿ ಕದ್ದವರ ಬಂಧನಕ್ಕೆ ಡಿ.ಕೆ.ಶಿವಕುಮಾರ್‌ ಗಡುವು

‘ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿಪರಿಷ್ಕರಣೆ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಶನಿವಾರ ಮಧ್ಯಾಹ್ನ 12ರ ಒಳಗಾಗಿ ನಕಲಿ ಬಿಎಲ್‌ಒ ಗುರುತಿನ ಚೀಟಿ ವಿತರಿಸಿದವರು ಹಾಗೂ ಮತದಾರರ ಮಾಹಿತಿ ಕಲೆ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಮಾಡಬೇಕು.

voters data theft case dk shivakumar gives 1 day deadline for govt to arrest the accused gvd
Author
First Published Nov 19, 2022, 2:11 PM IST

ಬೆಂಗಳೂರು (ನ.19): ‘ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿಪರಿಷ್ಕರಣೆ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಶನಿವಾರ ಮಧ್ಯಾಹ್ನ 12ರ ಒಳಗಾಗಿ ನಕಲಿ ಬಿಎಲ್‌ಒ ಗುರುತಿನ ಚೀಟಿ ವಿತರಿಸಿದವರು ಹಾಗೂ ಮತದಾರರ ಮಾಹಿತಿ ಕಲೆ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಮಾಡಬೇಕು. ಇಲ್ಲದಿದ್ದರೆ ಈ ವಿಚಾರವನ್ನು ದೆಹಲಿಯ ಕೇಂದ್ರ ಚುನಾವಣಾ ಆಯೋಗದವರೆಗೆ ತೆಗೆದುಕೊಂಡು ಹೋಗುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

‘ಚುನಾವಣಾ ಆಯೋಗವು ಪ್ರಾದೇಶಿಕ ಆಯುಕ್ತರಿಗೆ ತನಿಖೆಗೆ ವಹಿಸಿದ್ದಾರೆ. ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಡಿ ಬರುವ ಅಧಿಕಾರಿ. ಖುದ್ದು ಮುಖ್ಯಮಂತ್ರಿಗಳೇ ಪ್ರಕರಣದ ಬಗ್ಗೆ ಉಡಾಫೆಯಾಗಿ ಮಾತನಾಡುತ್ತಾ, ತಪ್ಪಿತಸ್ಥರ ರಕ್ಷಣೆಗೆ ಮುಂದಾಗಿದ್ದಾರೆ. ಹೀಗಾಗಿ ಈ ಸಂಬಂಧ ಶನಿವಾರ ಮಧ್ಯಾಹ್ನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ನಾನು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡುತ್ತೇವೆ. ನ್ಯಾಯ ಸಿಗಲಿಲ್ಲ ಎಂದರೆ ಕೇಂದ್ರ ಚುನಾವಣಾ ಆಯೋಗದವರೆಗೆ (ಭಾರತದ ಚುನಾವಣಾ ಆಯೋಗ -ಇಸಿಐ) ಪ್ರಕರಣವನ್ನು ತೆಗೆದುಕೊಂಡು ಹೋಗುತ್ತೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಮತದಾರರ ಮಾಹಿತಿ ಕಳ್ಳತನ, ಬಿಜೆಪಿ ಮೇಲೆ ಮುಗಿಬಿದ್ದ ಕಾಂಗ್ರೆಸ್‌, ಚುನಾವಣಾ ಆಯೋಗದಿಂದ ಸ್ಪಷ್ಟನೆ!

ಸಿಜೆ ಸುಮೋಟೊ ಪ್ರಕರಣ ದಾಖಲಿಸಬೇಕು: ಈ ಪ್ರಕರಣದ ಬಗ್ಗೆ ರಾಜ್ಯ ಹೈಕೋರ್ಚ್‌ ಮುಖ್ಯ ನ್ಯಾಯಮೂರ್ತಿಗಳು ಸುಮೋಟೊ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು. ಆಕ್ಸಿಜನ್‌ ದುರಂತ ಪ್ರಕರಣದಲ್ಲಿ ನ್ಯಾಯಾಲಯ ಹೇಗೆ ಜವಾಬ್ದಾರಿ ತೆಗೆದುಕೊಂಡು ರಾಜ್ಯದ ಮಾನ ಕಾಪಾಡಿತೋ ಅದೇ ರೀತಿ ಇದರಲ್ಲೂ ಜವಾಬ್ದಾರಿ ವಹಿಸಿಕೊಳ್ಳಬೇಕು. ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮತದಾರರಿಗೆ ತಮ್ಮ ಹಕ್ಕು ಸಿಗುವಂತೆ ಆಡಬೇಕು. ನೀಚ, ಭ್ರಷ್ಟಅಧಿಕಾರಿಗಳ ಬಂಧನವಾಗಬೇಕು ಎಂದು ಹೇಳಿದರು.

ನಮ್ಮ ತಪ್ಪಿದ್ದರೆ ಬಂಧಿಸಲಿ: ನಮ್ಮ ಅವಧಿಯಲ್ಲಿ ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ದುರ್ಬಳಕೆ ಮಾಡಿದ್ದರೆ ನಮ್ಮನ್ನೂ ಬಂಧಿಸಲಿ. ನಮ್ಮ ಅವಧಿಯಲ್ಲಿ ಯಾವ ಅಧಿಕಾರಿ, ಮಂತ್ರಿಗಳು ಅದಕ್ಕೆ ಅವಕಾಶ ನೀಡಿದ್ದರೋ ನನಗೆ ಗೊತ್ತಿಲ್ಲ. ಈಗ ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಆದೇಶವನ್ನು ಬಿಬಿಎಂಪಿ ಆಯುಕ್ತರು ಏಕಾಏಕಿ ಹಿಂಪಡೆದಿದ್ದಾರೆ. ಇದರಿಂದ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದರೆ, ಈಗಾಗಲೇ ಈ ಸಂಸ್ಥೆಯ ಸುಮಾರು 7-8 ಸಾವಿರ ಸಿಬ್ಬಂದಿ ಮನೆ, ಮನೆಗೆ ಹೋಗಿ ಮತದಾರರ ಮಾಹಿತಿ ಕಲೆ ಹಾಕಿದ್ದಾರೆ. ಮತ್ತೊಂದೆಡೆ ಕೆಲವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳುತ್ತಿರುವ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದರು.

ಮತದಾರರ ಪಟ್ಟಿ ಪರಿಶೀಲಿಸಿಕೊಳ್ಳಿ: ‘ಈ ಸಮಯದಲ್ಲಿ ನಾನು ಜೆಡಿಎಸ್‌, ಕಮ್ಯುನಿಸ್ಟ್‌, ರೈತ ಸಂಘ ಹಾಗೂ ನಮ್ಮ ಪಕ್ಷದವರಿಗೆ ತಮ್ಮ ತಮ್ಮ ಬೂತ್‌ಗಳಿಗೆ ಹೋಗಿ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ ಎಂದು ಸಲಹೆ ನೀಡುತ್ತೇನೆ. ಅನೇಕರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. 26 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, 14 ಲಕ್ಷ ಹೆಸರನ್ನು ಹೊಸದಾಗಿ ಸೇರಿಸಲಾಗಿದೆ ಎಂದು ಅವರೇ ಹೇಳಿದ್ದಾರೆ. ಯಾರ ಹೆಸರು ಕೈ ಬಿಟ್ಟು, ಯಾರ ಹೆಸರು ಸೇರಿಸಿದ್ದಾರೆ? ಎಂಬುದು ಗೊತ್ತಿಲ್ಲ. ಹೀಗಾಗಿ ಕಾರ್ಯಕರ್ತರು ಜಾಗರೂಕತೆಯಿಂದ ಈ ಬಗ್ಗೆ ಗಮನ ನೀಡಬೇಕು’ ಎಂದು ಡಿಕೆಶಿ ಕರೆ ನೀಡಿದರು.

ತಡ ಮಾಡದೇ ದಾವೆ ಹೂಡಿ: ‘ಕಾಂಗ್ರೆಸ್‌ನವರ ವಿರುದ್ಧ ಮಾನನಷ್ಟಮೊಕದ್ದಮೆ ದಾಖಲಿಸುವುದಾಗಿ ಸಚಿವ ಅಶ್ವತ್ಥನಾರಾಯಣ್‌ ಹೇಳಿದ್ದಾರೆ. ಅವರು ತಡ ಮಾಡುತ್ತಿರುವುದೇಕೆ? ಕೂಡಲೇ ಮಾನನಷ್ಟಮೊಕದ್ದಮೆ ದಾಖಲಿಸಲಿ. ನಮ್ಮ ಬಳಿಯೂ ಈ ಸಂಸ್ಥೆಯ ಎಲ್ಲ ಅಕ್ರಮದ ದಾಖಲೆಗಳೂ ಇವೆ’ ಎಂದು ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು. ‘ಸಚಿವ ಮುನಿರತ್ನ ನಮ್ಮ ಪಕ್ಷದಲ್ಲಿದ್ದಾಗ ಅವರ ಮೇಲೆ ದಾಖಲಾಗಿದ್ದ ಮತದಾರರ ಗುರುತಿನ ಚೀಟಿ ಪ್ರಕರಣ ಇನ್ನೂ ನಡೆಯುತ್ತಿದೆ. ತುಳಸಿ ಮುನಿರಾಜು ಗೌಡ ಅವರ ಮೇಲಿನ ಕೇಸ್‌ ಕೂಡ ವಾಪಸು ಪಡೆದಿಲ್ಲ. ಆ ಪ್ರಕರಣ ಏನಾಯಿತು? ಯಾಕೆ ಯಾರನ್ನೂ ಬಂಧಿಸಿಲ್ಲ ಎಂಬ ಬಗ್ಗೆಯೂ ಮಾತನಾಡಲಿ’ ಎಂದರು.

ಪ್ರತಿಮೆಗೆ ಸರ್ಕಾರದ ಹಣ ಬೇಡ ಎಂದು ಮೊದಲೇ ಹೇಳಿದ್ದೆ: ಡಿಕೆಶಿ

ಕಾಂಗ್ರೆಸ್‌ ಸೇರುವವರ ದೊಡ್ಡ ಪಟ್ಟಿಇದೆ: ಬಿಜೆಪಿಗೆ ರಾಜೀನಾಮೆ ನೀಡಿರುವ ಮಾಜಿ ಶಾಸಕ ಯು.ಬಿ. ಬಣಕಾರ್‌ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌,‘ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗುವವರ ದೊಡ್ಡ ಪಟ್ಟಿಯೇ ಇದೆ. ಇದನ್ನು ನಾನು ಈಗ ಬಹಿರಂಗಪಡಿಸಲ್ಲ. ಅವರು ಪಕ್ಷಕ್ಕೆ ಸೇರುವ ದಿನ ಹೆಸರುಗಳನ್ನು ನಿಮಗೆ ತಿಳಿಸುತ್ತೇನೆ’ ಎಂದಷ್ಟೇ ಹೇಳಿದರು.

Follow Us:
Download App:
  • android
  • ios