ಪ್ರತಿಮೆಗೆ ಸರ್ಕಾರದ ಹಣ ಬೇಡ ಎಂದು ಮೊದಲೇ ಹೇಳಿದ್ದೆ: ಡಿಕೆಶಿ
ಕೆಂಪೇಗೌಡರ ಪ್ರತಿಮೆಗೆ ಸರ್ಕಾರದ ಹಣ ವೆಚ್ಚ ಮಾಡುವ ಅಗತ್ಯವಿಲ್ಲ, ವಿಮಾನ ನಿಲ್ದಾಣ ಪ್ರಾಧಿಕಾರದಿಂದಲೇ ನಿರ್ಮಾಣ ಮಾಡಿಸಿ ಎಂದು ಶಂಕುಸ್ಥಾಪನೆ ದಿನವೇ ನಾನು ಹೇಳಿದ್ದೆ. ಆದರೆ, ಬಿಜೆಪಿಯವರಿಗೆ ಸರ್ಕಾರದ ಹಣ ಹೇಗೆ ಉಳಿಸಬೇಕು ಎಂಬ ಪರಿಜ್ಞಾನ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ನ.12): ಕೆಂಪೇಗೌಡರ ಪ್ರತಿಮೆಗೆ ಸರ್ಕಾರದ ಹಣ ವೆಚ್ಚ ಮಾಡುವ ಅಗತ್ಯವಿಲ್ಲ, ವಿಮಾನ ನಿಲ್ದಾಣ ಪ್ರಾಧಿಕಾರದಿಂದಲೇ ನಿರ್ಮಾಣ ಮಾಡಿಸಿ ಎಂದು ಶಂಕುಸ್ಥಾಪನೆ ದಿನವೇ ನಾನು ಹೇಳಿದ್ದೆ. ಆದರೆ, ಬಿಜೆಪಿಯವರಿಗೆ ಸರ್ಕಾರದ ಹಣ ಹೇಗೆ ಉಳಿಸಬೇಕು ಎಂಬ ಪರಿಜ್ಞಾನ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮುಂಚಿತವಾಗಿಯೇ ಸಲಹೆ ನೀಡಿದ್ದರೆ ವಿಮಾನ ನಿಲ್ದಾಣದ ಪ್ರಾಧಿಕಾರದಿಂದ ಪ್ರತಿಮೆ ಸ್ಥಾಪಿಸಬಹುದಿತ್ತು ಎಂದು ಕೆಲ ಸಚಿವರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ನಾನು ಶಂಕುಸ್ಥಾಪನೆಯ ದಿನವೇ ಸರ್ಕಾರದ ಹಣದಲ್ಲಿ ಈ ಪ್ರತಿಮೆ ಮಾಡುವ ಅಗತ್ಯವಿಲ್ಲ.
ವಿಮಾನ ನಿಲ್ದಾಣ ಪ್ರಾಧಿಕಾರದವರಿಂದ ಮಾಡಿಸಬಹುದು. ಅವರಿಗೆ 50ರಿಂದ 60 ಕೋಟಿ ರು. ವೆಚ್ಚ ಮಾಡುವುದು ದೊಡ್ಡದಲ್ಲ ಎಂದು ಹೇಳಿದ್ದೆ. ಆದರೆ, ಕೇಳಲಿಲ್ಲ. ಅವರು ಅವರದೇ ಲೆಕ್ಕಾಚಾರ ಹಾಕಿಕೊಂಡು ಮಾಡುತ್ತಿದ್ದಾರೆ. ಸರ್ಕಾರದ ಹಣ ಹೇಗೆ ಉಳಿಸಬೇಕು, ಹೇಗೆ ಕಾಮಗಾರಿ ಮಾಡಿಸಬೇಕೆಂದು ಸಾಮಾನ್ಯ ಪರಿಜ್ಞಾನ ಇರಬೇಕು. ತಾವು ಹೆಸರು ಮಾಡಿಕೊಳ್ಳಲು, ತಮ್ಮ ಹಾಗೂ ತಮ್ಮ ಪಕ್ಷದ ವೈಭವೀಕರಣಕ್ಕೆ ಹೇಗೆ ಹಣ ಖರ್ಚು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಜನ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಸಂಕಲ್ಪ ಮಾಡಿದ್ದಾರೆ ಎಂದರು.
ಸತೀಶ್ ಜಾರಕಿಹೊಳಿ ಬಗ್ಗೆ ಬಿಜೆಪಿ ರಾಜಕೀಯ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್‌ನ ಪ್ರಶ್ನೆಗಳಿಗೆ ಮೋದಿ ಅವರು ಉತ್ತರಿಸದಿದ್ದರೆ ಮುಂದಿನ ನಿಲುವೇನು ಎಂಬ ಪ್ರಶ್ನೆಗೆ, ಉತ್ತರಿಸುತ್ತಾರೆ ಎಂಬ ವಿಶ್ವಾಸವಿದೆ. ಪ್ರಧಾನಿ ಬಂದಾಗ ರಸ್ತೆ ಗುಂಡಿಗಳನ್ನು ಹೇಗೆ ಮುಚ್ಚಲಾಗುತ್ತದೆಯೋ ಹಾಗೆಯೇ ಭ್ರಷ್ಟಾಚಾರವನ್ನು ತೊಡೆದುಹಾಕಲು ಅವರ ನಾಯಕರಿಗೆ ಸಂದೇಶ ನೀಡಬೇಕು. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ ಮುಂದಿನ ಹೋರಾಟದ ಬಗ್ಗೆ ಮುಂದೆ ತಿಳಿಸುತ್ತೇನೆ. ತಕ್ಷಣವೇ ಹೋರಾಟ ರೂಪಿಸಲು ಆಗುವುದಿಲ್ಲ ಎಂದರು.
ಸಂಸತ್ತಿನಲ್ಲೂ ಕೆಂಪೇಗೌಡರ ಪ್ರತಿಮೆ ನಿರ್ಮಿಸಲಿ ಎಂಬ ದೇವೇಗೌಡರು ಬರೆದಿರುವ ಪತ್ರದ ಬಗ್ಗೆ, ಬಹಳ ಸಂತೋಷ, ಸಂಸತ್‌ನಲ್ಲೂ ಪ್ರತಿಮೆ ನಿರ್ಮಾಣ ಮಾಡಲಿ, ವಿಧಾನಸೌಧ ಅವರಣದಲ್ಲೂ ಮಾಡಲಿ ಎಂದರು. ಸಿದ್ದರಾಮಯ್ಯ ಅವರ ಬಗ್ಗೆ ಮುಕುಡಪ್ಪ ಅವರ ಅವಹೇಳನಕಾರಿ ಹೇಳಿಕೆ ಬಗೆಗಿನ ಪ್ರಶ್ನೆಗೆ, ಸಿದ್ದರಾಮಯ್ಯ ಅವರ ಬಗ್ಗೆ ಬೇರೆಯವರು ಏನು ಹೇಳಿದ್ದಾರೆ ಗೊತ್ತಿಲ್ಲ. ಇದು ಖಾಸಗಿಯಾಗಿ ಮಾತನಾಡಿರುವ ವಿಚಾರ. ಈ ಬಗ್ಗೆ ತಿಳಿದು ಮಾತನಾಡುತ್ತೇನೆ. ನಮ್ಮ ನಾಯಕರ ಘನತೆ ಹಾಳು ಮಾಡಲು ಷಡ್ಯಂತ್ರ ನಡೆಯುತ್ತಿದೆ ಎಂದರು.
ಸಿದ್ದು ಕ್ಷೇತ್ರ ಬಾದಾಮಿಯಲ್ಲಿ ಡಿಕೆಶಿ ರಹಸ್ಯ ಸಂಚಾರ?
ನಾಚಿಕೆಗೇಡು: ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಕಾಲೇಜು ಮಕ್ಕಳನ್ನು ಕರೆತರಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು ನಾಚಿಕೆಗೇಡಿನ ವಿಚಾರ. ಇದು ಬಿಜೆಪಿಯ ಜನಶಕ್ತಿ ಕುಸಿದಿರುವುದಕ್ಕೆ ಸಾಕ್ಷಿ. ಈ ಬಗ್ಗೆ ಮೋದಿ ಅವರು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಬೇಕು ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್ ಹೇಳಿದರು. ಬಿಜೆಪಿಯವರಿಗೆ ಜನ ಬೇಕಿದ್ದರೆ ನಮ್ಮನ್ನು ಕೇಳಲಿ ನಮ್ಮ ಕಾರ್ಯಕರ್ತರನ್ನು ಕಳುಹಿಸುತ್ತೇವೆ. ಆದರೆ, ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರದ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರಬಾರದು ಎಂದರು.