ಮತದಾರರ ಮಾಹಿತಿ ಕಳ್ಳತನ, ಬಿಜೆಪಿ ಮೇಲೆ ಮುಗಿಬಿದ್ದ ಕಾಂಗ್ರೆಸ್, ಚುನಾವಣಾ ಆಯೋಗದಿಂದ ಸ್ಪಷ್ಟನೆ!
ಮತದಾರರ ಪಟ್ಟಿ ನವೀಕರಣಕ್ಕೆ ಬಿಬಿಎಂಪಿ ನೀಡಿದ ಆದೇಶ ದುರುಪಯೋಗ ಮಾಡಿದ ಹಿನ್ನಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ಆರಂಭವಾಗಿದೆ. ಖಾಸಗಿ ಎನ್‌ಜಿಒವೊಂದು ರಹಸ್ಯವಾಗಿ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿದ ಆರೋಪ ಹೊರಿಸಲಾಗಿದ್ದು, ಸರ್ಕಾರ ಕೂಡ ಇದರಲ್ಲಿ ಭಾಗಿಯಾಗಿದೆ ಎಂದು ಹೇಳಿದೆ. ಈ ಕುರಿತಂತೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು (ನ.17): ಮತದಾರರ ಪಟ್ಟಿ ನವೀಕರಣ ಕಾರ್ಯಾಚರಣೆಗೆ ಬಿಬಿಎಂಪಿ ನೀಡಿದ ಆದೇಶ ದುರುಪಯೋಗ ಮಾಡಿಕೊಳ್ಳಲಾಗಿದ್ದು, ಚಿಲುಮೆ ಹೆಸರಿನ ಎನ್‌ಜಿಒವೊಂದು ರಹಸ್ಯವಾಗಿ ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಎನ್‌ಜಿಒ ತಮ್ಮ ಏಜೆಂಟರನ್ನು ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಹಲವು ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿದೆ. ಹಲವು ತಿಂಗಳಿಂದ ಈ ಅಕ್ರಮ ಸರ್ವೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಮತದಾರರ ಪರಿಷ್ಕರಣೆಗೆ 'ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆʼಗೆ ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಚಿಲುಮೆ ಸಂಸ್ಥೆ ಆದೇಶವನ್ನು ದುರುಪಯೋಗಪಡಿಸಿಕೊಂಡಿದೆ. ತನ್ನ ನೂರಾರು ಏಜೆಂಟರಿಗೆ ನಕಲಿ ಐಡಿ-ಕಾರ್ಡ್‌ಗಳನ್ನು ನೀಡಿದೆ ಎಂಬ ಆರೋಪ. ಈ ಐಡಿ ಕಾರ್ಡುಗಳಲ್ಲಿ ಏಜೆಂಟರನ್ನ ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳು ಎಂದು ಗುರುತಿಸಲಾಗಿದೆ. ಬಿಎಲ್‌ಒ ಅವರು ಸರ್ಕಾರಿ, ಅರೆ-ಸರ್ಕಾರಿ ಅಥವಾ ನಿವೃತ್ತ ಸರ್ಕಾರಿ ನೌಕರರಾಗಿರಬೇಕು. ಬಿಎಲ್‌ಒಗಳು ತಮ್ಮನ್ನು ನಿಯೋಜಿಸಲಾದ ಮತಗಟ್ಟೆಯ ನಿವಾಸಿಗಳಾಗಿರಬೇಕು. ಆದರೆ, ಚಿಲುಮೆ ತನ್ನ ಏಜೆಂಟರುಗಳಿಗೆ ಬಿಎಲ್‌ಒ ಎಂದು ನಕಲಿ ಗುರುತಿನ ಚೀಟಿ ಮಾಹಿತಿ ಸಂಗ್ರಹಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಗುರುವಾರ ಈ ಕುರಿತಾಗಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಸುದ್ದಿಗೋಷ್ಟಿ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಮೇಶ್ವರ್, ರಾಮಲಿಂಗಾರೆಡ್ಡಿ, ಎಂಬಿ ಪಾಟೀಲ್, ಕೆಜೆ. ಜಾರ್ಜ್, ರಿಜ್ವಾನ್, ಎಚ್.ಎಂ ರೇವಣ್ಣ, ಸಲೀಂ ಅಹಮದ್ ಭಾಗಿಯಾಗಿದ್ದರು. 'ಈ ಏಜೆಂಟ್ ಗಳು ಮತದಾರರಿಂದ ಜಾತಿ, ಮಾತೃಭಾಷೆ, ವೈವಾಹಿಕ ಸ್ಥಿತಿ, ವಯಸ್ಸು, ಲಿಂಗ, ಉದ್ಯೋಗ ಮತ್ತು ಶಿಕ್ಷಣದ ವಿವರ, ಆಧಾರ್ ಸಂಖ್ಯೆ, ಫೋನ್ ಸಂಖ್ಯೆ, ವಿಳಾಸ, ಮತದಾರರ ಐಡಿ ಸಂಖ್ಯೆ ಮತ್ತು ಇಮೇಲ್ ವಿಳಾಸಗಳನ್ನು ಸಂಗ್ರಹ ಮಾಡಿದ್ದಾರೆ' ಎಂದು ಸುರ್ಜೆವಾಲಾ ಆರೋಪ ಮಾಡಿದ್ದಾರೆ. ಚುನಾಯಿತ ಪ್ರತಿನಿಧಿಗಳ ಕಾರ್ಯದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿದ್ದಾರೆ. ಅಕ್ರಮ ವಿಚಾರ ಬಯಲಾಗ್ತಿದ್ದಂತೆ ಬಿಬಿಎಂಪಿ ತರಾತುರಿಯಲ್ಲಿ ಎನ್‌ಜಿಒ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದೆ. ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ಹಿಂಪಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಜ್ಯದಲ್ಲಿ 19ಕ್ಕೆ, ದೆಹಲಿಯಲ್ಲಿ 21 ರಂದು ಪ್ರತಿಭಟನೆ: ಇದೇ ವಿಚಾರವನ್ನ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ರಾಜ್ಯದಲ್ಲಿ ನವೆಂಬರ್ 19 ರಂದು ಹಾಗೂ ಕೇಂದ್ರದಲ್ಲಿ ನವೆಂಬರ್ 21 ರಂದು ಬೃಹತ್ ಪ್ರತಿಭಟನೆ ಮಾಡಲು ಕಾಂಗ್ರೆಸ್ ಮುಂದಾಗಿದೆ.
ಸಿಎಂ ಬೊಮ್ಮಾಯಿ, ಸರ್ಕಾರದ ಮೇಲೆ ಸುರ್ಜೆವಾಲಾ ವಾಕ್ಸಮರ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತದಾರರ ಮಾಹಿತಿ ಕಳ್ಳತನ ಮಾಡುತ್ತಿದ್ದಾರೆ. ಚುನಾವಣಾ ಪ್ರಕ್ರಿಯೆ ಕೂಡ ಭ್ರಷ್ಟಾಚಾರದಿಂದ ಕೂಡಿದೆ. ಮತದಾರರ ಮಾಹಿತಿ ಕದಿಯುತ್ತಿರುವುದಕ್ಕೆ ಬೊಮ್ಮಾಯಿಗೆ ಅವರೇ ಬೇರ ಹೊಣೆ. ಬಿಬಿಎಂಪಿ ಹಾಗೂ ಅಧಿಕಾರಿಗಳು, ಸಿಎಂ ಬೊಮ್ಮಾಯಿ ಸೇರಿಕೊಂಡೇ ಮತದಾರರ ಮಾಹಿತಿ ಸಂಗ್ರಹಿಸಿದ್ದಾರೆ. ಸಿಎಂ ಬೆಂಗಳೂರು ಉಸ್ತುವಾರಿ ಸಚಿವರೂ ಕೂಡ ಆಗಿದ್ದಾರೆ. ಚಿಲುಮೆ ಎಂಬ ಸಂಸ್ಥೆಗೆ ಆಗಸ್ಟ್ 20 ರಂದು ಬಿಬಿಎಂಪಿ ಅನುಮತಿ ನೀಡಿತ್ತು. ಮಹದೇವಪುರದಲ್ಲಿ ಮೊದಲು ಅನುಮತಿ ನೀಡಲಾಗಿತ್ತು ಚಿಲುಮೆ ಸಂಸ್ಥೆ ಇವಿಎಂ ಪ್ರಿಪರೇಷನ್ ಮಾಡುವ ಕೆಲಸ ಮಾಡುತ್ತೆ ಅಂತ ಹೇಳಿಕೊಂಡಿದ್ದಾರೆ. ಈ ಚಿಲುಮೆ ಸಂಸ್ಥೆ ಡಿಎಪಿ ಹೊಂಬಾಳೆ ಸಂಸ್ಥೆಗೆ ಜೊತೆ ಇದೆ. ಈ ಎರಡೂ ಸಂಸ್ಥೆಗಳ ನಿರ್ದೇಶಕರು ಒಬ್ಬರೇ ಆಗಿದ್ದಾರೆ. ಈ ಚಿಲುಮೆ ಸಂಸ್ಥೆ ಎಲೆಕ್ಷನ್ ಮ್ಯಾನೇಜ್ಮೆಂಟ್ ಕಾರ್ಯ ಮಾಡುತ್ತೆ ಅಂತ ಕೂಡ ಹೇಳಿಕೊಳ್ತಾರೆ. ಈ ಸಂಸ್ಥೆ BLO ಐಡಿ ಕಾರ್ಡ್ ಗಳನ್ನ ನೀಡಿದೆ. ಬಿಎಲ್ಓ ಗಳು ಮತದಾರರ ಮಾಹಿತಿಯನ್ನ ಸಂಗ್ರಹಿಸಿದ್ದಾರೆ. ಈ ಮಾಹಿತಿಯನ್ನ ಚುನಾವಣಾ ಆಯೋಗಕ್ಕೆ ನೀಡಿಲ್ಲ. ಅವರ ಚಿಲುಮೆ ಸಂಸ್ಥೆಯದ್ದೇ ಆದ ಡಿಜಿಟಲ್ ಸಮೀಕ್ಷಾ ಅಪ್ಲಿಕೇಶನ್‌ಗೆ ಅಪ್ಲೋಡ್ ಮಾಡಿದ್ದಾರೆ ಎಂದು ಸುರ್ಜೆವಾಲಾ ಹೇಳಿದ್ದಾರೆ.
ಕೆ.ರವಿಕುಮಾರ್ ಕಿಂಗ್ ಪಿನ್, ಅಶ್ವತ್ಥ ನಾರಾಯಣ ವಿರುದ್ಧ ಆರೋಪ: ಈ ಎಲ್ಲಾ ಅಕ್ರಮಗಳ ಕಿಂಗ್ ಪಿನ್ ಕೃಷ್ಣಪ್ಪ ರವಿಕುಮಾರ್. ಚಿಲುಮೆ ಸಂಸ್ಥೆಯ ಕೃಷ್ಣಪ್ಪ ರವಿಕುಮಾರ್ ಬರ್ತ್ ಡೇಗೆ ಸಚಿವರು ಹೋಗುತ್ತಾರೆ. ಅಲ್ಲದೇ ಈ ಎಲ್ಲಾ ಬೆಳವಣಿಗೆ ನಡೆಯುವುದು ಸಚಿವರ ಮಲ್ಲೇಶ್ವರ ಕ್ಷೇತ್ರದಲ್ಲಿ ಎಂದು ಹೇಳುವ ಮೂಲಕ ವೋಟರ್ ಐಡಿ ಅಕ್ರಮದ ಹಿಂದೆ ಅಶ್ವತ್ಥ ನಾರಾಯಣ ವಿರುದ್ದ ಸುರ್ಜೆವಾಲಾ ಆರೋಪ ಮಾಡಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಕೂಡಲೇ ರಾಜೀನಾಮೆ ನೀಡಬೇಕು. ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೊಮ್ಮಾಯಿ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸಬೇಕು. ಚುನಾವಣಾ ಆಯೋಗ ಸಿಎಂ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸುರ್ಜೆವಾಲಾ ಆಗ್ರಹಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಇದರ ತನಿಖೆ ನಡೆಸಬೇಕು ಆಗ ಮಾತ್ರ ಈ ಪ್ರಕರಣದಲ್ಲಿ ನ್ಯಾಯ ಸಿಗಲಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಆಪ್ತ ಮಲ್ಲೇಶ್ ವಿರುದ್ಧ ಬ್ರಾಹ್ಮಣರು ಕೆಂಡ, ಪ್ರತಿಭಟನೆಗೆ ಕರೆ
ಇದು ಖಾಸಗಿತನದ ವಂಚನೆಯ ಪ್ರಕರಣ: ಯಾಕೆ ಇದೇ ಸಂಸ್ಥೆಗೆ ಅನುಮತಿ ನೀಡಲಾಗಿದೆ? ಖಾಸಗಿ ಏಜೆನ್ಸಿ ಗೆ ಕನ್ನಡಿಗರ ವೈಯಕ್ತಿಕ ಮಾಹಿತಿ ಕಳ್ಳತನ ಮಾಡಲು ಅವಕಾಶ ನೀಡಲಾಗಿದೆ. ಇದು ಖಾಸಗಿತನದ ವಂಚನೆಯ ಪ್ರಕರಣ. ಗುತ್ತಿಗೆ ನೌಕರರು ಹೇಗೆ ಸರ್ಕಾರಿ ನೌಕರರಂತೆ ಬೂತ್ ಲೆವೆಲ್ ಆಫಿಸರ್ ಐಡಿ ಕಾರ್ಡ್ ನೀಡಲಾಗುತ್ತದೆ?. ಖಾಸಗಿ ವೈಯಕ್ತಿಕ ಡೇಟಾಗಳು ಕಮರ್ಷಿಯಲ್ ಆ್ಯಪ್ ಗೆ ಹೇಗೆ ಮಾರಾಟ ಮಾಡಲಾಗುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಕೋಲಾರದಲ್ಲಿ ಸಿದ್ದು ಬಲಿಕೊಡಲು ಕಾಂಗ್ರೆಸ್ ಸಿದ್ಧತೆ: ಸಚಿವ ಸುಧಾಕರ್
ಸಚಿವ ಅಶ್ವಥ್ ನಾರಾಯಣ ತಿರುಗೇಟು: ಕಾಂಗ್ರೆಸ್ ಆರೋಪಕ್ಕೆ ಅಶ್ವಥ್ ನಾರಾಯಣ ತಿರುಗೇಟು ನೀಡಿದ್ದಾರೆ. ಇಂತಹ ನಿರಾಧಾರವಾದ ಆಪಾದನೆಗೆ ಖಂಡಿಸುತ್ತೇನೆ. ಚುನಾವಣೆ ಆಯೋಗದ ಹಿನ್ನೆಲೆಯಲ್ಲಿ ಅದು ನಡೆದಿರುತ್ತೆ. ಆಯೋಗದ ಅಡಿಯಲ್ಲಿ ಇದು ನಡೆಯುತ್ತೆ. ಪಕ್ಷ ಸರ್ಕಾರದ ಅಡಿ ಆಗುವುದಿಲ್ಲ. ಕಳ್ಳನ ಮನಸ್ಸು ಹುಳ್ಳು ಅನ್ನೋ ಹಾಗೆ ಕಾಂಗ್ರೆಸ್ ಮಾತು. ಕಾಂಗ್ರೆಸ್‌ಗೆ ಬೇರೆ ಕೆಲಸವಿಲ್ಲ. ಪುರುಸೊತ್ತಿನಲ್ಲಿ ಇದ್ದಾರೆ. ಹಾಗಾಗಿ ಇಂತಹ ಆರೋಪ ಮಾಡ್ತಿದ್ದಾರೆ. ನಮ್ಮ ನಾಡಿಗೆ ಗೌರವ ತರುವ ಸಂಸ್ಥೆ ನಮ್ಮದು. ಕಾಂಗ್ರೆಸ್ ಅವರಂತೆ ನಾಡಿಗೆ ಅಗೌರವ ತರುವವರು ಅಲ್ಲ. ಹೊಂಬಾಳೆ ಸಂಸ್ಥೆಗೂ ಇದಕ್ಕೂ ಸಂಬಂಧವಿಲ್ಲ ನನ್ನ ಸಹೋದರ ಸಂಸ್ಥೆಗೂ ಇದಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಇನ್ನು ಫೋಟೋ ರಿಲೀಸ್ ಮಾಡಿರುವ ಬಗ್ಗೆ ಮಾತನಾಡಿರುವ ಸಚಿವರು, ಕೃಷ್ಣಪ್ಪ ಯಾರು ಅಂತ ಗೊತ್ತು. ಸಾಮಾಜಿಕ ಕಾರ್ಯಕ್ರಮದಲ್ಲಿ ಕರೆದಾಗ ಹೋಗಿದ್ದೆ. ಕಾಂಗ್ರೆಸ್ ಅವರನ್ನ ಕೇಳಿ ಹೋಗಬೇಕಾ? ಕಾರ್ಯಕ್ರಮಕ್ಕೆ ಕರೆದಿದ್ದರು. ಹೋಗಿದ್ದೆ. ಅದು ತಪ್ಪಾ..? ಕಾಂಗ್ರೆಸ್ ಅವರು ದೂರು ನೀಡಲಿ. ಚುನಾವಣೆ ಆಯೋಗ ತನಿಖೆ ಮಾಡುತ್ತೆ ಚುನಾವಣೆ ಆಯೋಗ ತನಿಖೆ ಬಗ್ಗೆ ತೀರ್ಮಾನ ಮಾಡಲಿ. ಕಾಂಗ್ರೆಸ್ ಗೆ ಮಾಹಿತಿ ಕೊರತೆ, ಆಧಾರದ ಕೊರತೆ ಇದೆ. ಕಾಂಗ್ರೆಸ್ ಅವರು ಮಸಿ ಬಳದುಕೊಂಡು ಇದ್ದಾರೆ. ಕಾಂಗ್ರೆಸ್ ಕಾನೂನು ಉಲ್ಲಂಘನೆ ಮಾಡಿರೋದು. ಡಿಕೆ, ಸಿದ್ದರಾಮಯ್ಯ, ಸುರ್ಜೇವಾಲ ಕಾನೂನು ವಿರುದ್ಧ ಕೆಲಸ ಮಾಡ್ತಿದ್ದಾರೆ. ಆಧಾರ ಇಟ್ಟು ಮಾತಾಡಬೇಕು ಎಂದಿದ್ದಾರೆ.
ಚುನಾವಣಾ ಆಯೋಗ ಸ್ಪಷ್ಟನೆ: ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಈ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಿದ್ದು, 'ಬಿಬಿಎಂಪಿ ಜಿಲ್ಲಾ ಚುನಾವಣಾಧಿಕಾರಿ ಯಾವುದೇ ಸಂಸ್ಥೆಗೆ ಸಮೀಕ್ಷೆ ನಡೆಸಲು ಅಧಿಕಾರ ನೀಡಿರುವುದಿಲ್ಲ.ಮತದಾರರ ಜಾಗೃತಿ ಅಭಿಯಾನದ ಬಗ್ಗೆ ಅರಿವು ಮೂಡಿಸಲು ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ದೂರು ಬಂದ ಕೂಡಲೇ ರದ್ದು ಮಾಡಲಾಗಿದೆ. ಗುರುತಿನ ಚೀಟಿ ದುರುಪಯೋಗ ಸಂಬಂಧಪಟ್ಟಂತೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಿಯಮಾನುಸಾರ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ' ಎಂದು ಹೇಳಿದೆ.