'ಸಿದ್ದರಾಮಯ್ಯ ಹೋರಾಟದ ನೇತೃತ್ವ ವಹಿಸಿಕೊಳ್ಳಲಿ, RSS, ಈಶ್ವರಪ್ಪ ಯಾಕೆ ಬೇಕು?'
ಕುರುಬ ಸಮಾಜದ ಎಸ್ಟಿ ಹೋರಾಟದ ಹಿಂದೆ ಆರ್‌ಎಸ್‌ಎಸ್ ಕೈವಾಡ| ಈ ಹೇಳಿಕೆ ಸಿದ್ದರಾಮಯ್ಯ ಸ್ಥಾನಕ್ಕೆ ಗೌರವ ತರುವ ವಿಚಾರವಲ್ಲ| ಸಿದ್ದರಾಮಯ್ಯ ಕುರುಬ ಸಮಾಜದ ಪ್ರಶ್ನಾತಿತ ನಾಯಕ: ಮಾಜಿ ಸಂಸದ ಕೆ ವಿರೂಪಾಕ್ಷಪ್ಪ|
ಕೊಪ್ಪಳ(ಡಿ.06): ಮಾಜಿ ಸಿಎಂ ಸಿದ್ದರಾಮಯ್ಯನವರೇ ಬಂದು ಹೋರಾಟದ ನೇತೃತ್ವ ವಹಿಸಿಕೊಳ್ಳಲಿ. ಆರ್‌ಎಸ್‌ಎಸ್, ಈಶ್ವರಪ್ಪ ಯಾಕೆ ಬೇಕು? ಆತನೇ ನೇತೃತ್ವ ವಹಿಸಿಕೊಂಡರೆ ಈಶ್ವರಪ್ಪನೂ ಹೋಗುತ್ತಾನೆ. ಆರ್‌ಎಸ್‌ಎಸ್ ಕೂಡ ಹೋಗುತ್ತೆ ಎಂದು ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಹೇಳಿದ್ದಾರೆ.
ಕುರುಬ ಸಮಾಜದ ಎಸ್ಟಿ ಹೋರಾಟದ ಹಿಂದೆ ಆರ್‌ಎಸ್‌ಎಸ್ ಕೈವಾಡ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹೇಳಿಕೆ ಸಿದ್ದರಾಮಯ್ಯ ಸ್ಥಾನಕ್ಕೆ ಗೌರವ ತರುವ ವಿಚಾರವಲ್ಲ. ಆರ್‌ಎಸ್‌ಎಸ್‌ನವರನ್ನು ನೆಪ ಮಾಡಿದರೆ ಸಮಾಜ ದೂರ ಸರಿಯುತ್ತದೆ ಎಂದು ಸಿದ್ದರಾಮಯ್ಯ ತಿಳಿದುಕೊಂಡಿರಬಹುದು. ಸಮಾಜ ನನ್ನನ್ನು ಬಿಡುತ್ತದೆ ಎನ್ನುವ ಆತಂಕ ಆತನಿಗೆ ಏಕೆ ಬಂದಿದೆಯೋ ಗೊತ್ತಿಲ್ಲ. ಕೆಲವರು ಸ್ವಾರ್ಥಕ್ಕೆ ಏನೇನೋ ಮಾಡುತ್ತಾರೆ, ಸಿದ್ದರಾಮಯ್ಯ ಕುರುಬ ಸಮಾಜದ ಪ್ರಶ್ನಾತಿತ ನಾಯಕರಾಗಿದ್ದಾರೆ. ನಮಗೆ ಆರ್‌ಎಸ್‌ಎಸ್, ಬಿಜೆಪಿ ಸೇರಿದಂತೆ ಯಾರೇ ಸಪೋರ್ಟ್ ಮಾಡಿದರೂ ಸ್ವಾಗತ ಎಂದು ಹೇಳಿದ್ದಾರೆ.
RSS ಕೈವಾಡ ಇರೋದ್ರಿಂದ ಕುರುಬ ಹೋರಾಟಕ್ಕೆ ಹೋಗಲ್ಲ: ಸಿದ್ದರಾಮಯ್ಯ
ಈ ಹೋರಾಟ ಬಹಳ ವರ್ಷಗಳಿಂದ ನಡೆದಿದೆ. ಇವತ್ತು ಆರ್‌ಎಸ್‌ಎಸ್‌ನವರು ಇರಬಹುದು. ನಾವು ಹೋರಾಟ ಪ್ರಾರಂಭ ಮಾಡಿದಾಗ ಆರ್‌ಎಸ್‌ಎಸ್‌ನವರು ಇದ್ದಿಲ್ಲ. ಸಿದ್ದರಾಮಯ್ಯ ಕಾಲದಲ್ಲೂ ಬೇಡಿಕೆ ಇದೆ. ಆದರೆ ಅವರು ಯಾಕೆ ಶಿಫಾರಸ್ಸು ಮಾಡಿಲ್ಲ ಎನ್ನುವುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ನವರು ಇದ್ದಾರೆ. ಯಾವ ನಾಯಕರು ಬರದಿದ್ದರೂ ಈ ಹೋರಾಟ ಮಠಾಧೀಶರ ನೇತೃತ್ವದಲ್ಲಿ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮನೆಗೆ ಭೇಟಿ ನೀಡಿದ ವಿಚಾರ ಬಗ್ಗೆ ಮಾತನಾಡಿದ ವಿರೂಪಾಕ್ಷಪ್ಪ ಸುಮ್ಮನೆ ಮನೆಗೆ ಬಂದು ಚಹಾ ಕುಡಿದು ಹೋಗಿದ್ದಾರೆ. ನಾನು ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.