Asianet Suvarna News Asianet Suvarna News

Kollegal: ದೇವಾಲಯಕ್ಕೆ ಅನುದಾನ ಕೊಡಲು ವಿಳಂಬ: ಶಾಸಕರ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು..!

*   ಗ್ರಾಮಸ್ಥರ ಸ್ವಂತ ಹಣದಲ್ಲಿ ದೇವಾಲಯ ನಿರ್ಮಾಣ
 *  ಶಾಸಕರಿಂದ ಬಂದ ಅನುದಾನ ವಾಪಾಸ್ ಪಡೆಯುವಂತೆ ಗ್ರಾಮಸ್ಥರಿಂದ ಲಿಖಿತ ಪತ್ರ
 *  ಹನೂರು ಶಾಸಕ ನರೇಂದ್ರ ವಿರುದ್ಧ ಗ್ರಾಮಸ್ಥರು ಗರಂ 
 

Villagers Outrage Against Hanur MLA Narendra For Delay in Grant to Temple at Kollegal grg
Author
Bengaluru, First Published Apr 17, 2022, 8:58 AM IST

ಚಾಮರಾಜನಗರ(ಏ.17):  ಗ್ರಾಮದಲ್ಲಿ ದೇವಾಲಯ(Temple) ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿಸಿ ಅನುದಾನ ನೀಡುವ ಭರವಸೆ ನೀಡಿದ್ದ ಶಾಸಕರಿಗೆ ಗ್ರಾಮಸ್ಥರು(Villagers) ತಿರುಗೇಟು ನೀಡಿದ್ದಾರೆ.‌ ಐದು ವರ್ಷದಿಂದ ಈ ಬಗ್ಗೆ ಗಮನ ಹರಿಸದ ಶಾಸಕರು ಚುನಾವಣೆ ಸಮೀಪಿಸುತ್ತಿದ್ದಂತೆ ಅನುದಾನ ನೀಡಲು ಮುಂದಾಗಿದ್ದು ಗ್ರಾಮಸ್ಥರು ಆ ಅನುದಾನ ಬೇಡವೆಂದು ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್‌ಗೆ ಪತ್ರ ಬರೆದಿದ್ದಾರೆ.

Villagers Outrage Against Hanur MLA Narendra For Delay in Grant to Temple at Kollegal grg

ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕು ಸತ್ತೇಗಾಲ ಗ್ರಾಮದಲ್ಲಿ 250 ಕುಟುಂಬಸ್ಥರು ಸೇರಿ ಶಾಸಕ ನರೇಂದ್ರ(Narendra) ಅವರಿಗೆ ಸೆಡ್ಡು ಹೊಡೆದಿದ್ದಾರೆ. ಗ್ರಾಮದ ಕೋಟೆ ಬೀದಿಯಲ್ಲಿ ಸಿದ್ದಪ್ಪಾಜಿ ದೇವಸ್ಥಾನ(Siddappaji Temple) ನಿರ್ಮಾಣಕ್ಕೆ ಐದು ವರ್ಷಗಳ ಹಿಂದೆ ಭೂಮಿಪೂಜೆ ನೆರವೇರಿಸಿದ್ದರು. ಇಷ್ಟು ಮಾತ್ರವಲ್ಲದೆ ಶಾಸಕರ ಅನುದಾನದಡಿ 12 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿ ಚಪ್ಪಾಳೆ ಸಹ ಗಿಟ್ಟಿಸಿದ್ದರು. ಆದರೆ, ಊರಿಗೊಂದು ಭವ್ಯ ದೇವಾಲಯ ಆಗುತ್ತಲ್ಲ ಎಂಬ ಗ್ರಾಮಸ್ಥರ ನಿರೀಕ್ಷೆಯನ್ನು ಶಾಸಕರು ಹುಸಿಗೊಳಿಸಿದರು. ಊರಿನವರೆಲ್ಲ ಸಮಯ ಸಿಕ್ಕಾಗಲೆಲ್ಲ ಶಾಸಕರನ್ನು ಭೇಟಿಯಾಗಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಶಾಸಕರ ನಡೆಗೆ ಆಕ್ರೋಶಗೊಂಡ ಗ್ರಾಮಸ್ಥರು ಸ್ವತಃ ಚಂದಾ ಎತ್ತಿ ದೇವಾಲಯ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಪ್ರತಿ ಮನೆಗೆ 10 ಸಾವಿರ ರೂ. ಸಂಗ್ರಹಿಸಿ ಸುಮಾರು 20 ಲಕ್ಷ ರೂ. ಖರ್ಚು ಮಾಡಿ ಭವ್ಯ ದೇವಾಲಯ ನಿರ್ಮಿಸಿದ್ದಾರೆ.

ಕೋರ್ಟ್‌ ಅಂಗಳಕ್ಕೆ ಚಾಮರಾಜನಗರದ ಉಮ್ಮತ್ತೂರು ಉರುಕಾತೇಶ್ವರಿ ದೇವಸ್ಥಾನ ವಿವಾದ

ಇನ್ನು ಗ್ರಾಮಸ್ಥರೇ ಒಟ್ಟಾಗಿ ದೇವಾಲಯ ನಿರ್ಮಿಸಿಕೊಂಡಿರುವ ವಿಚಾರ ತಿಳಿದ ಶಾಸಕರು ತಮ್ಮ ಅನುದಾನದಡಿ(Grant) 3 ಲಕ್ಷ ರೂ. ಮಂಜೂರು ಮಾಡಿಸಿದ್ದು, ಅದನ್ನು ಗ್ರಾಮಸ್ಥರು ತಿರಸ್ಕರಿಸಿದ್ದಾರೆ. ಶಾಸಕರು ನೀಡಿರುವ ಅನುದಾನ ಬೇಕಿಲ್ಲ. ಸ್ವಂತ ಖರ್ಚಿನಲ್ಲಿ ದೇವಾಲಯ ನಿರ್ಮಾಣವಾಗಿದೆ. ಸಮಯಕ್ಕೆ ಆಗದ ಹಣ ಬೇಕಿಲ್ಲ. ಊರಿನ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಬೇರೆ ಕಾಮಗಾರಿಗೆ ಸಹಕರಿಸಲಿ ಎಂದು ಪತ್ರದ ಮೂಲಕ ಟಾಂಗ್ ನೀಡಿದ್ದಾರೆ.

ಸತ್ತೇಗಾಲ ಗ್ರಾಮಸ್ಥರು ಶಾಸಕರ ವಿರುದ್ಧ ಗುಟುರು ಹಾಕಿದ್ದಾರೆ. ಶಾಸಕರ 12 ಲಕ್ಷ ರೂಪಾಯಿ ಅನುದಾನಕ್ಕಾಗಿ ಕಾಯದೆ ಸ್ವಂತ ದುಡ್ಡಲ್ಲಿ ತಮ್ಮ ಕನಸಿನ ದೇಗುಲವನ್ನು ನಿರ್ಮಿಸಿಕೊಂಡಿದ್ದು ಅದ್ಧೂರಿ ಜಾತ್ರೆಗೂ ತಯಾರಿ ನಡೆಸಿದ್ದಾರೆ.
 

Follow Us:
Download App:
  • android
  • ios