ಶಿವಮೊಗ್ಗ: ವಿದ್ಯುತ್ ಅವಘಡದಲ್ಲಿ ಯುವಕ ಸಾವು, ಶವ ಇಟ್ಟು ಗ್ರಾಮಸ್ಥರ ಪ್ರತಿಭಟನೆ
ಕುಟುಂಬಕ್ಕೆ ಆಸರೆಯಾಗಿದ್ದ ಏಕೈಕ ಮಗನನ್ನು ಪೋಷಕರು ಕಳೆದುಕೊಂಡಿದ್ದಾರೆ. ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ವರದಿ: ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ
ಶಿವಮೊಗ್ಗ(ಡಿ.20): ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಯುವಕನ ಶವವನ್ನಿಟ್ಟು ಸೊರಬ ತಾಲೂಕಿನ ಆನವಟ್ಟಿಯ ಮೆಸ್ಕಾಂ ಉಪವಿಭಾಗ ಕಚೇರಿ ಎದುರು ಮೃತ ಯುವಕನ ಸಂಬಂಧಿಗಳು ಹಾಗೂ ಗ್ರಾಮಸ್ಥರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ವಿದ್ಯುತ್ ಗುತ್ತಿಗೆದಾರರ ಬಳಿ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಎಣ್ಣೆಕೊಪ್ಪ ಗ್ರಾಮದ ರವಿ ದುರ್ಗಪ್ಪ (24) ಕುಬಟೂರು ಗ್ರಾಮದಲ್ಲಿ ಶನಿವಾರ ವಿದ್ಯುತ್ ಪರಿವರ್ತಕ ಅಳವಡಿಕೆ ವೇಳೆ ವಿದ್ಯುತ್ ತಗುಲಿ ತೀವ್ರ ಗಾಯಗೊಂಡಿದ್ದನು. ಆತನಿಗೆ ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಿಸದೇ ಸೋಮವಾರ ಮೃತಪಟ್ಟಿದ್ದನು. ಕುಟುಂಬಕ್ಕೆ ಆಸರೆಯಾಗಿದ್ದ ಏಕೈಕ ಮಗನನ್ನು ಪೋಷಕರು ಕಳೆದುಕೊಂಡಿದ್ದಾರೆ. ಆತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಮೆಸ್ಕಾಂ ಕಚೇರಿಯ ಮುಂಭಾಗ ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನೂ ರವಿಗೆ ವಿವಾಹ ಕೂಡ ನಿಶ್ಚಯವಾಗಿತ್ತು. ಆದರೆ, ವಿಧಿಯಾಟ ಬೇರೆಯಾಗಿದ್ದು, ಮದುವೆಯಾಗಬೇಕಿದ್ದ ಯುವಕನನ್ನು ವಿದ್ಯುತ್ ಅವಘಡ ಮಸಣ ಸೇರುವಂತೆ ಮಾಡಿದೆ.
ತಾಪಂ ಮಾಜಿ ಅಧ್ಯಕ್ಷ ರುದ್ರಪ್ಪ ಕಡ್ಲೇರ್ ಮಾತನಾಡಿ, ಮೃತಪಟ್ಟ ಯುವಕನ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಈ ಬಗ್ಗೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಚರ್ಚಿಸಿ ಮಾನವೀಯತೆಯ ಆಧಾರದ ಮೇಲೆ ಗುತ್ತಿಗೆದಾರರ ಸಂಘ ಹಾಗೂ ಮೆಸ್ಕಾಂ ಇಲಾಖೆಯ ನೌಕರರ ಸಂಘದಿಂದ ಒಂಬತ್ತು ಲಕ್ಷ ರೂ, ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಕುಟುಂಬಸ್ಥರು ಸಹಮತ ಸೂಚಿಸಬೇಕು ಎಂದು ವಿನಂತಿಸಿದರು.
SHIVAMOGGA: ಸಾಗರ ಕೋರ್ಟ್ ಗೆ ವಿವಾದಾತ್ಮಕ ಸಾಹಿತಿ ಭಗವಾನ್ ಹಾಜರು
ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಸಮಿತಿ ಸದಸ್ಯ ಮಹಾಲಿಂಗೇಗೌಡ ಮಾತನಾಡಿ, ಮೃತ ಯುವಕನ ಕುಟುಂಬಕ್ಕೆ ನ್ಯಾಯಕ್ಕಾಗಿ ಗುತ್ತಿಗೆದಾರರ ಜಿಲ್ಲಾ ಸಂಘವು ಸಹ ಪ್ರತಿಭಟನೆಗೆ ಬೆಂಬಲ ಸೂಚಿಸಿತ್ತು. ಯುವಕನ ಪೋಷಕರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಕಾನೂನಿನ ಚೌಕಟಿನಲ್ಲಿ ಹೋರಾಟ ಮಾಡಿ ಪರಿಹಾರ ಪಡೆಯಲು ವಿಳಂಬವಾಗುವ ಸಾಧ್ಯವಿರುವ ಸಂಭವವಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಂಘದಿಂದ ಪರಿಹಾರ ನೀಡಲು ತೀರ್ಮಾನಿಸಿರುವುದಾಗಿ ತಿಳಿಸಿದರು.
ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಹಲವು ಪರ-ವಿರೋಧ ಚರ್ಚೆಗಳ ನಡೆಯಿತು. ನಂತರ ಅಧಿಕಾರಿಗಳ ಹಾಗೂ ಗ್ರಾಮದ ಮುಖಂಡರ ಮಾತಿಗೆ ಮಣಿದ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.
Shivamogga: ಶಿವಮೊಗ್ಗದಲ್ಲಿ ಮುಸ್ಲಿಂ ಏರಿಯಾಗಳೇ ಟಾರ್ಗೆಟ್: ಆತಂಕ ಸೃಷ್ಟಿಸಿದ ಜಮ್ಮು & ಕಾಶ್ಮೀರ ಗ್ಯಾಂಗ್
ಪ್ರತಿಭಟನೆಯಲ್ಲಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೆ. ಮಹಾಲಿಂಗಪ್ಪ, ಜಿಲ್ಲಾ ನಿರ್ದೇಶಕ ಸಮೀರ್ ಬಾಷಾ, ಎಸ್.ಕೆ. ಲೋಕೇಶ್, ಮಹೇಶ್ ಕವಲಿ, ಎಚ್.ಎಂ. ಮುತ್ತೇಶ, ಹನುಮಂತಪ್ಪ, ರಾಘವೇಂದ್ರ ಆಚಾರ್, ದಿವಾಕರಯ್ಯ, ಶಿವಯೋಗಿಸ್ವಾಮಿ, ಪಾಂಡು, ರಾಮು, ಸುಹೇಲ್, ಕುಟುಂಬಸ್ಥರಾದ ದುರ್ಗಪ್ಪ, ಅಶ್ವಿನಿ, ಜಯಮ್ಮ, ಸಾವಿತ್ರಮ್ಮ, ಖಂಡ್ಯಪ್ಪ, ಗ್ರಾಮಸ್ಥರಾದ ಮೈಲಾರಿ ನಾಯ್ಕ್, ಎನ್.ರವಿ, ಹೊನ್ನಪ್ಪ, ಮಂಜಪ್ಪ ಉದ್ರಿ, ಧರ್ಮಾನಾಯ್ಕ್, ಸುರೇಶ, ಪರಸಪ್ಪ, ಬಸವಣ್ಯಪ್ಪ ಉಪ್ಪಾರ್, ಅಶೋಕ್, ಆನಂದ, ಸೇರಿದಂತೆ ಮತ್ತಿತರರಿದ್ದರು.
ಮೆಸ್ಕಾಂ ಇಲಾಖೆಗೆ ಸಂಬಂಧವಿಲ್ಲ
ಕುಬಟೂರು ಗ್ರಾಮದಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ ಮೃತ ಪಟ್ಟ ಯುವಕ ಗುತ್ತಿಗೆದಾರರ ಬಳಿ ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದನು. ಗುತ್ತಿಗೆದಾರರು ಕಾರ್ಯನಿರ್ವಹಿಸುವಾಗ ಸಾಕಷ್ಟು ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳಬೇಕು ಹಾಗೂ ಶಾಖಾಧಿಕಾರಿಗಳಿಂದ ಲೈನ್ ಕ್ಲಿಯರೆನ್ಸ್ ಪಡೆದ ತರುವಾಯ ಕಾರ್ಯನಿರ್ವಹಿಸಬೇಕು. ಯುವಕನ ಸಾವಿಗೂ ಹಾಗೂ ಮೆಸ್ಕಾಂ ಇಲಾಖೆಗೆ ಸಂಬಂಧವಿಲ್ಲ. ಆದರೆ, ಗುತ್ತಿಗೆದಾರರ ಬಳಿ ಕಾರ್ಯನಿರ್ವಹಿಸುವ ನೌಕರರಿಗೆ ಜೀವನ ಭದ್ರತೆ ಇರುವುದಿಲ್ಲ ಎಂಬುದನ್ನು ಮನಗಂಡು ಮಾನವೀಯತೆಯ ಆಧಾರಮೇಲೆ ಗುತ್ತಿಗೆದಾರರ ಸಂಘ ಮತ್ತು ಮೆಸ್ಕಾಂ ಇಲಾಖೆಯ ನೌಕರರು ಒಗ್ಗೂಡಿ ಪರಿಹಾರ ನೀಡುತ್ತಿದ್ದೇವೆ ಎಂದು ಮೆಸ್ಕಾಂ ಇಇ ಇಂಧೂದರ ತಿಳಿಸಿದರು.