ಶಹಾಪುರ: ಬೊಗಸೆ ನೀರಿಗಾಗಿ ಕೃಷ್ಣೆಯೊಡಲು ಬಗೆಯಬೇಕು..!
* ಮೊಸಳೆಗಳ ಭಯದ ಮಧ್ಯೆ ನದಿಯಲ್ಲಿ ವರ್ತಿ ತೆಗೆದು ಶುದ್ಧ ಕುಡಿಯುವ ನೀರು ಸಂಗ್ರಹ
* ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೌಡೂರು ಗ್ರಾಮಸ್ಥರು ನೀರಿಗಾಗಿ ಪರದಾಟ
* ವ್ಯವಸ್ಥೆಯ ವಿರುದ್ಧ ಕಿಡಿ ಕಾರುತ್ತಿರುವ ಗ್ರಾಮಸ್ಥರು
ಮಲ್ಲಯ್ಯ ಪೋಲಂಪಲ್ಲಿ
ಶಹಾಪುರ(ಜೂ.21): ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗಾಗಿ ಶುದ್ಧ ಕುಡಿಯುವ ನೀರಿಗಾಗಿ ಕೋಟ್ಯಂತರ ರುಪಾಯಿಗಳ ಯೋಜನೆ ಮಾಡಿದ್ದೇವೆ ಎಂದೆನ್ನುವ ಸರ್ಕಾರಗಳ ಘೋಷಣೆಗಳು ಅದ್ಹೇಗೆ ಪೊಳ್ಳು ಭರವಸೆಗಳಾಗಿರುತ್ತವೆ ಅನ್ನೋದಕ್ಕೆ ಈ ಗ್ರಾಮವೇ ಸಾಕ್ಷಿ. ಕೃಷ್ಣಾ ನದಿ ತೀರದ, ಗೌಡೂರು ಗ್ರಾಮಸ್ಥರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಹಾಗೆ ನೋಡಿದರೆ, ನದಿಗಂಟಿಕೊಂಡೇ ಗ್ರಾಮವಿದ್ದಾಗ್ಯೂ ಕೂಡ ಶುದ್ಧ ಕುಡಿಯುವ ನೀರು ಇಲ್ಲಿ ಗಗನಕುಸುಮ.
ಶುದ್ಧ ಕುಡಿಯುವ ನೀರಿಗಾಗಿ ಗೌಡೂರು ಗ್ರಾಮಸ್ಥರು ನದಿ ದಡದ ಭಾಗಕ್ಕೆ ತೆರಳಿ ವರ್ತಿ ತೆಗೆಯುತ್ತಾರೆ. ಅಂದರೆ, ಕೈಯಿಂದ ಮರಳು ಬಗೆಯುತ್ತಾ ಸಾಗಿದಾಗ ತಳದಲ್ಲಿ ಜಮೆಯಾಗುವ ನೀರನ್ನು ಬೊಗಸೆಯಲ್ಲಿ ಹಿಡಿದಿಟ್ಟುಕೊಂಡು ಕೊಡಗಳಲ್ಲಿ ಸಂಗ್ರಹಿಸುತ್ತಾರೆ. ಮಳೆಗಾಲದಲ್ಲೇ ಹೀಗಿದ್ದರೆ ಬೇಸಿಗೆಯಲ್ಲಿ ದುಸ್ಥಿತಿ ಹೇಳತೀರದು. ಯಾದಗಿರಿ ಮತಕ್ಷೇತ್ರಕ್ಕೆ ಒಳಪಡುವ, ಶಹಾಪುರ ತಾಲೂಕಿನ ಕೊಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೌಡರು ಗ್ರಾಮ ಸುಮಾರು 2 ಸಾವಿರ ಜನಸಂಖ್ಯೆಯಷ್ಟಿದೆ.
ಕುಡಿಯಲು ವರ್ತಿ ನೀರೇ ಗತಿ:
ಗೌಡೂರಿನ ಬೋರ್ವೆಲ್‌ಗಳಲ್ಲಿ ಬರುವ ನೀರು ಉಪ್ಪುಪ್ಪಾಗಿ, ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಹೀಗಾಗಿ, ಅದನ್ನು ಬಳಕೆಗೆ ಮಾಡುತ್ತಿರುವ ಇಲ್ಲಿನ ಜನ, ಕುಡಿಯಲು ಮಾತ್ರ ಶುದ್ಧ ನೀರು ಬೇಕಾದರೆ ನದಿಯಿಂದ ತರಬೇಕಾಗುತ್ತದೆ ಎನ್ನುತ್ತಾರೆ. ಶುದ್ಧ ನೀರಿನ ಘಟಕ ಕೆಟ್ಟು ತಿಂಗಳುಗಳೆ ಕಳೆದರೂ ದುರಸ್ತಿ ಮಾತೇ ಇಲ್ಲ.
ಯಾದಗಿರಿ: ನಕಲಿ ಹತ್ತಿಬೀಜ ಮಾರಾಟ, ಮುಂಚೂಣಿಯಲ್ಲಿ ಗುರುಮಠಕಲ್ ?
ಇನ್ನು, ಕೃಷ್ಣಾ ನದಿಯಲ್ಲಿ ಮೊದಲೇ ಮೊಸಳೆಗಳ ಕಾಟ ಜೊತೆಗೆ, ಅಕ್ಕಪಕ್ಕದ ಹೊಲಗದ್ದೆಗಳಿಗೆ ಸಿಂಪಡಿಸಿದ ಕ್ರಿಮಿನಾಶಕ ಔಷಧಿ ನೀರಲ್ಲಿ ಬೆರೆತು ಅದು ನದಿಗೆ ಸೇರುತ್ತಿರುವುದರಿಂದ ನದಿಯ ನೀರನ್ನೂ ನೇರವಾಗಿ ಕುಡಿಯುವಂತಿಲ್ಲ. ಬದಲಿಗೆ ನದಿಯಲ್ಲಿ ವರ್ತಿ ತೆಗೆದು, (ಮರಳು ಬಗೆದು) ನೀರು ತುಂಬಿಕೊಂಡು ಬರುತ್ತಾರಂತೆ.
ವರ್ತಿಯಿಂದ ತೆಗೆದುಕೊಂಡು ಬಂದ ನೀರು ಬಹಳ ಹೊತ್ತಿನ ತನಕ ಕೊಡದಲ್ಲಿ ಹಾಗೆ ಇಡಬೇಕು. ರಾಡಿ (ಕೆಸರು) ತಳ ಸೇರಿದ ನಂತರ ಕೊಡದಲ್ಲಿ ನ ಮೇಲಿನ ತಿಳಿ ನೀರು ಕುಡಿಯುತ್ತೇವೆ. ನಮಗೆ ಕುಡಿಯಲು ನೀರಿಲ್ಲದ ಕಾರಣ ಅನಿವಾರ್ಯವಾಗಿ ಹೊಲಸು ನೀರು ಕುಡಿಯುವ ಪರಿಸ್ಥಿತಿ ಬಂದಿದೆ. ಮಳೆಯಾಗಿ ಹೊಳೆ ಬಂದರೆ ಇದಕ್ಕಿಂತಲೂ ಕಲುಷಿತ ನೀರು ಕುಡಿಯುವ ಅನಿವಾರ‍್ಯತೆ ಉಂಟಾಗುತ್ತದೆ . ನಮ್ಮಂತಹ ಕೆಟ್ಟಪರಿಸ್ಥಿತಿ ಯಾರಿಗೂ ಬರಬಾರದು ಎಂದು ನೋವು ತೋಡಿಕೊಳ್ಳುವ ಗ್ರಾಮದ ಬಸವವಾರ್ ಬೆಳ್ಳಿಕಟ್ಟಿ, ಎಲ್ಲರಂತೆ ನಾವು ವೋಟು ಹಾಕುತ್ತೇವೆ, ಸರ್ಕಾರಕ್ಕೆ ಟ್ಯಾಕ್ಸು ಕೊಡುತ್ತೇವೆ ಎಂದು ವ್ಯವಸ್ಥೆಯ ವಿರುದ್ಧ ಕಿಡಿ ಕಾರುತ್ತಾರೆ.
ಈ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಸಂಬಂಧಿತ ಎಲ್ಲ ಅಧಿಕಾರಿಗಳಿಗೆ, ಜನಪ್ರತಿನಿಧಿಗಳೆದುರು ಅಳಲು ತೋಡಿಕೊಂಡು ಮನವಿ ಸಲ್ಲಿಸಿಯಾಗಿದೆ, ಆದರೂ ನಮ್ಮ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ ಅಂತಾರೆ ಗ್ರಾಮ ಪಂಚಾಯಿತಿ ಸದಸ್ಯೆ ಪವಿತ್ರಾ.
ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುಹೋಗಿ ತಿಂಗಳುಗಳೇ ಆಗಿವೆ. ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗೌಡೂರು ಗ್ರಾಮಸ್ಥ ದೇವಿಂದ್ರಪ್ಪ ಚಲವಾದಿ ತಿಳಿಸಿದ್ದಾರೆ.
ನೀರಿನ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಆರ್‌ಓ ಪ್ಲಾಂಟ್ ದುರಸ್ತಿ ಮಾಡುವಂತೆ ಈಗಾಗಲೇ ಸೂಚಿಸಲಾಗಿದೆ. ನಾನೇ ಖುದ್ದಾಗಿ ಹೋಗಿ ಸಂಬಂಧಪಟ್ಟಅಧಿಕಾರಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಯಾದಗಿರಿ ಮತಕ್ಷೇತ್ರ ಶಾಸಕ ವೆಂಕಟರೆಡ್ಡಿ ಮುದ್ನಾಳ ತಿಳಿಸಿದ್ದಾರೆ.