ವಿಜಯಪುರದ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಕೆರೆಗಳಿಗೆ ನೀರು ತುಂಬಿಸುವಲ್ಲಿ ತಾರತಮ್ಯವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಬಿಡದಿದ್ದರೆ ಇಂಡಿ ಭಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ವಿಜಯಪುರ: ಸರ್ಕಾರಿ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳು, ಅನುದಾನ ಬಳಕೆ ಮತ್ತು ಸಾರ್ವಜನಿಕ ಸಮಸ್ಯೆಗಳ ಪ್ರಗತಿ ಪರಿಶೀಲನೆಗಾಗಿ ನಡೆದ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಬಗ್ಗೆ ಗಂಭೀರ ಚರ್ಚೆ ನಡೆಸಲಾಗಿದೆ. ಈ ಸಭೆಯಲ್ಲಿ ಮಾತನಾಡಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ನೀರು ಬಿಡಿ, ಇಲ್ಲಾ ಅಂದರೆ ಮಹಾರಾಷ್ಟ್ರಕ್ಕೆ ಸೇರಬೇಕಾಗುತ್ತೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬರ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಇಳಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಕೆರೆಗೆ ನೀರು ತುಂಬಿಸುವಲ್ಲಿ ತಾರತಮ್ಯ ಮಾಡಿದ್ದಾರೆ ಅಂತ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಆಕ್ರೋಶ ಹೊರ ಹಾಕಿದ್ದಾರೆ.
ಇಂಡಿ ತಾಲೂಕು ಕೊನೆಯ ಭಾಗ, ಈ ಹಿಂದೆ ಆಗಿರುವ ನಿರ್ಣಯದಂತೆ ನೀರು ಬಿಟ್ಟಿದ್ದೀರಾ ಎಂದು ಯಶವಂತರಾಯಗೌಡ ಪಾಟೀಲ್ ಪ್ರಶ್ನಿಸಿದ್ದು, ಮಹಾರಾಷ್ಟ್ರ ಗಡಿಭಾಗದ ಕನ್ನಡಿಗರು ಕರ್ನಾಟಕಕ್ಕೆ ಸೇರ್ಪಡೆ ಮಾಡಿ ಅಂತಿದ್ದರು. ಆದರೆ ಈಗ ನಾವು ಇಂಡಿ ಭಾಗ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿ ಎನ್ನುವಂತಾಗಿದೆ. ನೀರಿನ ಗಂಭೀರ ಪರಿಸ್ಥಿತಿ ತೋರಿದ ಹಿನ್ನೆಲೆ ಇಂಡಿ ಭಾಗ ಮಹಾರಾಷ್ಟ್ರಕ್ಕೆ ಸೇರ್ಪಡೆ ಆಗಬೇಕೆನ್ನುವಂತಾಗಿದೆ. ಒಂದೆಡೆ ಭೀಮಾ ನದಿಯಲ್ಲೂ ನೀರಿಲ್ಲ. ಯಾರದೋ ಒತ್ತಡಕ್ಕೆ ಮಣಿದು ಅಧಿಕಾರಿಗಳು ನೀರು ಸಮರ್ಪಕವಾಗಿ ಬಿಡುಗಡೆ ಮಾಡುತ್ತಿಲ್ಲ. ಕೆರೆಗೆ ನೀರು ಬಿಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ವೇಳೆ ಯಶವಂತರಾಯಗೌಡ ಪಾಟೀಲ್ ಮಾತಿಗೆ ನಮ್ಮ ಭಾಗದ ಕೆರೆಗೆ ನೀರು ಬಂದಿಲ್ಲ ಎಂದ ಮುದ್ದೇಬಿಹಾಳ ಶಾಸಕ ಸಿಎಸ್ ನಾಡಗೌಡ, ಶಾಸಕ ವಿಠ್ಠಲ ಕಟಕದೊಂಢ್ , ಅಶೋಕ್ ಮನಗೂಳಿ ಧ್ವನಿಗೂಡಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್, ನಮ್ಮ ಭಾಗದ ಕೆರೆಗಳಿಗೆ ನೀರು ಬಂದಿಲ್ಲ. ಈ ಬಗ್ಗೆ ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಮಾಡಿ ನಿರ್ಣಯ ಮಾಡೋಣ, ನದಿ ತೀರದ ಭಾಗದಲ್ಲಿ ಪಂಪ್ಸೆಟ್ ಅಳವಡಿಸಿದ 130ಕ್ಕೂ ಹೆಚ್ಚು ರೈತರ ಮೇಲೆ ಕೇಸ್ ದಾಖಲಿಸಿದ್ದೇನೆ ಎಂದು ತಿಳಿಸಿದರು. ಅಲ್ಲದೇ ಸಭೆಯಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡುವ ಕಾರಣ, ಆಲಮಟ್ಟಿ ಅಣೆಕಟ್ಟೆ ಜಲಾಶಯದಿಂದ ಇನ್ಮುಂದೆ ನೀರು ನಾರಾಯಣಪುರ ಜಲಾಶಯಕ್ಕೆ ಬಿಡದಂತೆ ನಿರ್ಧಾರ ಮಾಡಲಾಯಿತು.
ಭೀಮಾಶಂಕರ ಕಾರ್ಖಾನೆಯಿಂದ ಕಬ್ಬಿಗೆ ಹೆಚ್ಚಿನ ದರ
ಕಬ್ಬಿನ ದರ ಹೆಚ್ಚಳ ಬಗ್ಗೆ ಪ್ರತಿಕ್ರಿಯೆ ನೀಡಿದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಆಗಿರೋ ಶಾಸಕ ಯಶವಂತರಾಯಗೌಡ ಪಾಟೀಲ್, ಕಬ್ಬಿಗೆ 3600 ದರದ ಬೇಡಿಕೆ ಇತ್ತು, ನಾವು 3700 ಕೊಟ್ಟಿದ್ದೇವೆ. ನಾನು ಸಹ ರೈತ, ರೈತರ ಸಂಕಷ್ಟ ಗೊತ್ತಿದೆ. ಸಕ್ಕರೆ ಕಾರ್ಖಾನೆಗಳ ಸಂಕಷ್ಟವು ಗೊತ್ತಿದೆ. ಭೀಮಾತೀರದ ರೈತರಿಗೆ ಅನುಕೂಲವಾಗಲಿ ಎಂದು ಡಿಮ್ಯಾಂಡ್ ಗಿಂತ ಜಾಸ್ತಿ ದರ ನೀಡಿದ್ದೇವೆ. ಇತಿಹಾಸದಲ್ಲೆ ಬೇಡಿಕೆಗಿಂತ ಜಾಸ್ತಿ ದರ ನೀಡಿದ್ದೇವೆ. ಬರಗಾಲದಲ್ಲಿ ರೈತರಿಗೆ ಅನುಕೂಲವಾಗಲಿ ಎಂದು ಮಾಡಿದ್ದೇವೆ. ಇದು ರೈತ ವರ್ಗದಲ್ಲಿ ಸಂತಸ ಮೂಡಿಸಿದೆ. ಕಾರ್ಖಾನೆಯಿಂದಲೇ ಟನ್ ಗೆ 3700 ನೀಡ್ತಿದ್ದೇವೆ. ಮಳೆ ಇದ್ದರೆ ಕಬ್ಬಿಗೆ ಇಳುವರಿ ಬರ್ತಿತ್ತು, ಆದರೆ ಈಗ ಬರದಿಂದ ಇಳುವರಿ ಕಡಿಮೆ ಇದೆ. ವೈಜ್ಞಾನಿಕವಾಗಿ ಎಲ್ಲವನ್ನೂ ವಿಚಾರ ಮಾಡಿ ಕಬ್ಬಿನ ದರ ನಿಗದಿ ಮಾಡಿದ್ದೇವೆ. ಇದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ ಎಂದು ತಿಳಿಸಿದರು.
ಮಹಾರಾಷ್ಟ್ರ ಸರ್ಕಾರದ ನಿರ್ಣಯ ಖಂಡಿಸುವೆ
ಭೀಮಾನದಿಗೆ ನೀರು ಬಿಡೋ ವಿಚಾರ ಮಾತನಾಡಿದ ಯಶವಂತರಾಯಗೌಡ ಪಾಟೀಲ್, ನೀರು ಹರಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದರು. ದಸೂರು, ಉಮರಜ್, ನಿವರಗಿ ವರೆಗೆ ಆದರೂ ನೀರು ಬರಬೇಕಿತ್ತು. ಗಡಿಯ ಬ್ಯಾರೇಜ್ ಗೆ ತಂದು ನೀರು ನಿಲ್ಲಿಸಿದ್ದಾರೆ. ಇದರಿಂದ ಇದು ನೋವಾಗಿದೆ. ಅಲ್ಲಿ ಇನ್ನೂ 27 ಟಿಎಂಸಿ ನೀರು ಇದೆ, 7 ಟಿಎಂಸಿ ಕೊಡಬೇಕಿದೆ. ಇಂಡಿ ಬ್ಯಾರೇಜ್ ಗೆ ಬರಲು 7 ಟಿಎಂಸಿ ಬೇಕು. 7 ಟಿಎಂಸಿ ಬಿಡಬೇಕಿತ್ತು. ನಾನು ಮಹಾರಾಷ್ಟ್ರ ಅಧಿಕಾರಿಗಳಿಗೆ ಮಾತನಾಡಿದ್ದೇನೆ. ಡಿಸೆಂಬರ್, ಮಾರ್ಚ್ ನಲ್ಲಿ ನೀರು ಹರಿಸ್ತಿವಿ ಎಂದಿದ್ದಾರೆ. ನೀರು ಕೊಟ್ಟರೆ ರೈತರು ಬದುಕುತ್ತಾರೆ. ಮುಂದಿನ ದಿನಮಾನಗಳು ಹೇಗಿರ್ತಾವೊ ನೋಡಬೇಕು. ಇದಕ್ಕೆ ಶಾಶ್ವತ ಪರಿಹಾರ ಸಿಗಬೇಕಿದೆ. ರಾಜ್ಯ, ಕೇಂದ್ರ ಸರ್ಕಾರಗಳು ಜನರಿಗೆ ಅನುಕೂಲವಾಗುವ ರೀತಿ ನಡೆದುಕೊಳ್ಳಲಿ. ಮಹಾರಾಷ್ಟ್ರ ಸರ್ಕಾರದ ನಿರ್ಣಯ ಖಂಡಿಸುವೆ ಎಂದು ಹೇಳಿದರು.
ಜನರ ಭಾವನೆಗಳನ್ನು ಹೇಳಿದ್ದೇನೆ ಅಷ್ಟೇ!
ಅಲ್ಲದೇ, ನೀರು ಕೊಡದೆ ಇದ್ದರೆ ಮಹಾರಾಷ್ಟ್ರಕ್ಕೆ ಸೇರಬೇಕಾಗುತ್ತೆ ಎಂದ ವಿಚಾರವಾಗಿ ಸ್ಪಷ್ಟನೆ ನೀಡಿ, ಅಲ್ಲಿ ನಮ್ಮ ಜನರ ಭಾವನೆಗಳು. ಗಡಿಯಲ್ಲಿದ್ದವರು ಹಾಗೇ ಹೇಳ್ತಿರ್ತಾರೆ. ನಾವೆಲ್ಲ ಕನ್ನಡದವರು, ಕನ್ನಡದ ಬಗ್ಗೆ ವಿಶೇಷ ಗೌರವ ಇದೆ. ನಾವು ಕನ್ನಡಿಗರಾಗಿ ಮಾಡಲ್ ಇದ್ದೇವೆ. ತೀವ್ರತೆ ತೋರಿಸಲು ಹಾಗೇ ಮಾತನಾಡಿದ್ದು, ಮಹಾರಾಷ್ಟ್ರದವರು ನಮ್ಮನ್ನ ನೋಡಿ ಕಲಿಯಬೇಕು. ನೀರಿಲ್ಲ ಅಲ್ಲಿ, ಮಹಾರಾಷ್ಟ್ರದವರು ನೀರು ಬಿಡಬೇಕು. ನಮ್ಮ ಜನ ಮಾತನಾಡಿಕೊಳ್ತಿದ್ದದ್ದನ್ನ ನಾನು ಹೇಳಿದ್ದೇನೆ. ಮಹಾರಾಷ್ಟ್ರದವರು ನಮಗೆ ನೀರು ಕೊಡಬೇಕು. ಅಲ್ಲಿ ಬಂದು ನೋಡಿ ಹನಿ ನೀರು ಇಲ್ಲ. ಮಹಾರಾಷ್ಟ್ರದವರು ನಮಗೆ ನೀರು ಬಿಡಬೇಕು, ಮಹಾರಾಷ್ಟ್ರ ನಮ್ಮ ಸಹೋದರ ರಾಜ್ಯ ಅಷ್ಟೇ. ಅಲ್ಲಿನ ಕನ್ನಡಿಗರು ಸಹ ಕರ್ನಾಟಕಕ್ಕೆ ಸೇರುತ್ತೇವೆ ಎನ್ತಿರ್ತಾರೆ. ನಾನು ನೇರವಾಗಿ ಮಾತನಾಡುವವ, ಜನರಿಗಾಗಿ ಮಾತನಾಡಿದ್ದೇನೆ ಎಂದು ತಿಳಿಸಿದರು.
















