- Home
- Karnataka Districts
- Kolar: ಬರದ ನಡುವೆ ಬಿಳಿ ರಾಗಿ ಬೆಳೆದು ಗಮನ ಸೆಳೆದ ಕೋಲಾರದ ರೈತ; ಆರೋಗ್ಯದ ಜೊತೆಗೆ ಉತ್ತಮ ಆದಾಯ!
Kolar: ಬರದ ನಡುವೆ ಬಿಳಿ ರಾಗಿ ಬೆಳೆದು ಗಮನ ಸೆಳೆದ ಕೋಲಾರದ ರೈತ; ಆರೋಗ್ಯದ ಜೊತೆಗೆ ಉತ್ತಮ ಆದಾಯ!
ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವ ಕೋಲಾರ ಜಿಲ್ಲೆಯಲ್ಲಿ ರೈತ ಶಾಮಣ್ಣ ಬಿಳಿ ರಾಗಿ ಕೃಷಿ ಮಾಡಿ ದುಪ್ಪಟ್ಟು ಲಾಭ ಗಳಿಸುತ್ತಿದ್ದಾರೆ. ಇವರು ರಾಜ್ಯದ ಇತರೆ ರೈತರಿಗೂ ಉಚಿತವಾಗಿ ಬಿತ್ತನೆ ಬೀಜ ವಿತರಿಸಿ ಮಾದರಿಯಾಗಿದ್ದಾರೆ.

ಬರದ ನಡುವೆ ಉತ್ತಮ ಇಳುವರಿ ನಿರೀಕ್ಷೆ!
ಕೋಲಾರ: ಚಿನ್ನದನಾಡು ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಜಿಲ್ಲೆಯ ರೈತರು ಹನಿ ಹನಿ ನೀರಿಗೂ ಪರದಾಡುತ್ತಿದ್ದಾರೆ. ಜಿಲ್ಲೆಯ ಹಲವು ಭಾಗಗಳಲ್ಲಿ 1,800 ರಿಂದ 2,000 ಅಡಿ ಆಳಕ್ಕೆ ಅಂತರ್ಜಲ ಮಟ್ಟ ತಲುಪಿದೆ. ಒಂದೆಡೆ ನೀರಿನ ತೀವ್ರ ಸಂಕಷ್ಟ ನಡುವೆ ಇಲ್ಲಿನ ರೈತರು ಕೃಷಿಯನ್ನು ಮಾತ್ರ ಕೈಬಿಟ್ಟಿಲ್ಲ. ಈ ವರ್ಷ ಮುಂಗಾರು ಮಳೆ ಕೈಕೊಟ್ಟರು, ತೀವ್ರ ಬರದ ಎದೆಗುಂದದ ಕೋಲಾರದ ರೈತರು ವಿಶೇಷ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.
ಕೃಷಿಯಲ್ಲಿ ಹೊಸ ಪ್ರಯೋಗಕ್ಕೆ ಕೋಲಾರ ರೈತರು ಮುಂದು!
ತೀವ್ರ ನೀರಿನ ಅಭಾವದ ನಡುವೆಯೂ ಒಂದಲ್ಲ ಒಂದು ಬೆಳೆ ಬೆಳೆದು ಕೃಷಿಯಲ್ಲಿ ಸಾಧನೆ ಮಾಡುತ್ತಿರುವ ಅನ್ನದಾತರು, ದೇಶದ ಗಮನ ಸೆಳೆಯುತ್ತಿದ್ದಾರೆ. ಇದರ ನಡುವೆ ಕೃಷಿಯಲ್ಲಿ ಹೊಸ ಪ್ರಯೋಗದ ಮೂಲಕ ಮಾಲೂರು ತಾಲೂಕಿನ ರೈತ ಶಾಮಣ್ಣ ದುಪ್ಪಟ್ಟು ಲಾಭ ಪಡೆದುಕೊಳ್ಳುತ್ತಿದ್ದಾರೆ.
ಕೇವಲ ಅರ್ಧ ಎಕರೆ ಜಮೀನಿನಲ್ಲಿ ಬಿಳಿ ರಾಗಿ ಬೆಳೆದು ಯಶಸ್ಸು
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ನೀಲಕಂಠ ಅಗ್ರಹಾರ ಗ್ರಾಮದ ರೈತ ಶಾಮಣ್ಣ ಅವರಿಂದ ಬಿಳಿ ರಾಗಿ ಕೃಷಿ ಮಾಡಿ ಗಮನ ಸೆಳೆದಿದ್ದಾರೆ. ಕೇವಲ ಅರ್ಧ ಎಕರೆ ಜಮೀನಿನಲ್ಲಿ ಬಿಳಿ ರಾಗಿ ಬೆಳೆದು ಯಶಸ್ಸು ಕಂಡು ಮಾದರಿ ರೈತರಾಗಿದ್ದಾರೆ. ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ಬಿಳಿ ರಾಗಿ ಬೆಳೆಯುತ್ತಿರುವ ಶಾಮಣ್ಣ, ಸ್ವಂತ ಕೃಷಿಯ ಜೊತೆಗೆ ರಾಜ್ಯದ ವಿವಿಧ ಭಾಗಗಳ ರೈತರಿಗೆ ಉಚಿತವಾಗಿ ಬಿತ್ತನೆ ಬಿಳಿ ರಾಗಿ ಪೂರೈಕೆ ಮಾಡುತ್ತಿದ್ದಾರೆ.
ಕರ್ನಾಟಕ ಮಂಡ್ಯ ಬಿಳಿ ರಾಗಿ ತಳಿ ಅಭಿವೃದ್ಧಿ
ಕೋಲಾರ ಜಿಲ್ಲೆಯ ರೈತರಿಗೆ ಮಾತ್ರವಲ್ಲದೇ, ಚಿಕ್ಕಬಳ್ಳಾಪುರ ಸೇರಿದಂತೆ ಉತ್ತರ ಕರ್ನಾಟಕದ ರೈತರಿಗೂ ಬಿಳಿ ರಾಗಿ ಬಿತ್ತನೆ ಬೀಜ ವಿತರಣೆ ಮಾಡುತ್ತಿದ್ದಾರೆ. ಜಿಕೆವಿಕೆಯ ಕೃಷಿ ವಿಜ್ಞಾನಿಗಳು ಕರ್ನಾಟಕ ಮಂಡ್ಯ ಬಿಳಿ ರಾಗಿ ತಳಿ ಅಭಿವೃದ್ಧಿಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ರಾಗಿ ತಳಿ ಹಾಗೂ ಕರ್ನಾಟಕದ ರಾಗಿ ತಳಿಯ ಸಂಕರಣದಿಂದ ಹೊಸ ತಳಿ ಅಭಿವೃದ್ಧಿಪಡಿಸಲಾಗಿದೆ.
ಹೆಕ್ಟೇರ್ಗೆ 55 ಕ್ವಿಂಟಲ್ ಇಳುವರಿ ನಿರೀಕ್ಷೆ
ಸಾಮಾನ್ಯ ಕೆಂಪು ಮತ್ತು ಕಪ್ಪು ರಾಗಿಗಿಂತ ಬಿಳಿ ರಾಗಿ ತಳಿ ವಿಭಿನ್ನವಾಗಿರುತ್ತದೆ. 95 ರಿಂದ 100 ದಿನಗಳಲ್ಲಿ ಕಟಾವಿಗೆ ಬರುವ ಅಲ್ಪಾವಧಿ ತಳಿಯಾಗಿದ್ದು, ನೀರಾವರಿ ಪ್ರದೇಶದಲ್ಲಿ ಹೆಕ್ಟೇರ್ಗೆ 50 ರಿಂದ 55 ಕ್ವಿಂಟಲ್ ಇಳುವರಿ ನಿರೀಕ್ಷೆ ಮಾಡಲಾಗುತ್ತದೆ. ಮಳೆಯಾಶ್ರಿತ ಪ್ರದೇಶದಲ್ಲಿ ಹೆಕ್ಟೇರ್ಗೆ 40ರಿಂದ 45 ಕ್ವಿಂಟಲ್ ಇಳುವರಿ ಸಾಧ್ಯತೆ ಇದೆ.
ಐದು ವರ್ಷಗಳಿಂದ ಬಿಳಿ ರಾಗಿ ಬೆಳೆಯುತ್ತಿರುವ ರೈತ ಶಾಮಣ್ಣ
ವಿಶೇಷ ಎಂದರೆ ಮಂಡ್ಯ ಬಿಳಿ ರಾಗಿ ತಳಿ ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿದ್ದು, ಇಡ್ಲಿ, ದೋಸೆ, ಹಪ್ಪಳ ಹಾಗೂ ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಬಿಳಿ ರಾಗಿಗೆ ಬೇಡಿಕೆ ಹೆಚ್ಚಿದೆ. ಅಂತರ್ಜಲ ಕುಸಿತದ ಸಂಕಷ್ಟದ ನಡುವೆಯೂ ಕೃಷಿಯಲ್ಲಿ ಹೊಸ ಭರವಸೆ ಮೂಡಿಸುತ್ತಿರುವ ಕೋಲಾರದ ರೈತ ಶಾಮಣ್ಣ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದು, ಬಿಳಿ ರಾಗಿ ಕೃಷಿ ಇತರ ಬೆಳೆಗಳಿಗಿಂತ ವಿಭಿನ್ನ ಅನುಭವ ನೀಡಿದೆ. ಕಳೆದ ಐದಾರು ವರ್ಷಗಳಿಂದ ಬಿಳಿ ರಾಗಿ ಬೆಳೆದು ಉತ್ತಮ ಅನುಭವ ಪಡೆದುಕೊಂಡಿದ್ದೇನೆ. ಬಿಳಿ ರಾಗಿ ಬೆಳೆಯಲು ಆಸಕ್ತಿ ತೋರುವ ರೈತರಿಗೆ ಬಿತ್ತನೆ ಬೀಜ ನೀಡಲು ಸಿದ್ಧ. ರೈತರು ಹೊಸ ಬೆಳೆಗಳ ಪ್ರಯೋಗಕ್ಕೆ ಮುಂದಾಗಬೇಕು. ಕೆಂಪು ಹಾಗೂ ಕಪ್ಪು ರಾಗಿ ಕೆಜಿಗೆ 50 ರಿಂದ 60 ರೂಪಾಯಿ ಮಾರಾಟವಾಗುತ್ತೆ. ಬಿಳಿ ರಾಗಿ ನೂರು ರೂಪಾಯಿ ವರೆಗೂ ರೈತರು ಮಾರಾಟ ಮಾಡಬಹುದು ಹೇಳಿದ್ದಾರೆ.













