Asianet Suvarna News Asianet Suvarna News

ರೈತರ ಕನಸು ನನಸು ಮಾಡಿದ ಸಿಎಂ, ರೈತರಿಂದ ಬೊಮ್ಮಾಯಿಗೆ ಜೋಡೆತ್ತು ಗಿಫ್ಟ್

* ವಿಜಯಪುರದಲ್ಲಿ ರೈತರ ಬಹುದಿನಗಳ ಕನಸನ್ನ ನನಸು ಮಾಡಿದ ಸಿಎಂ
• ಮಹತ್ವದ ಯೋಜನೆ ಜಾರಿ ಮಾಡಿದ ನಾಡದೊರೆಗೆ ಜೋಡೆತ್ತಿನ ಗಿಫ್ಟ್..
• ಹಾಯಲು ಬಂದ ಬಸವನಿಗೆ ಮುತ್ತಿಕ್ಕಿದ ಸಿಎಂ..

Vijayapura Farmers Gives Gifts To CM Basavaraj Bommai After inaugurates water irrigation project rbj
Author
Bengaluru, First Published Apr 26, 2022, 6:43 PM IST

ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್.

ವಿಜಯಪುರ (ಏ26) :
ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರು ಗ್ರಾಮದಲ್ಲಿ ಇಂದು(ಮಂಗಳವಾರ) ಮಹತ್ವದ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ನಾಡದೊರೆಗೆ ರೈತರು ಭರ್ಜರಿ ಗಿಫ್ಟ್ ನೀಡಿದ್ದಾರೆ.

ಹೌದು.. ತಾಳಿಕೋಟೆ- ದೇವರಹಿಪ್ಪರಗಿ- ಮುದೇಬಿಹಾಳ ಭಾಗದ ರೈತರ ಬಹುದಿನಗಳ ಕನಸನ್ನ ನನಸು ಮಾಡಿದ ಸಿಎಂ ಬಸವರಾಜ ಬೊಮ್ಮಾಯಿಗೆ ರೈತರು ಭರ್ಜರಿ ಗಿಫ್ಟ್ ನೀಡಿದ್ದಾರೆ.. ಎರೆಡು ಜೋಡು ಎತ್ತುಗಳನ್ನ ಗಿಫ್ಟ್ ನೀಡುವ ಮೂಲಕ ರೈತರು ತಮ್ಮ ಹರ್ಷ ವ್ಯಕ್ತಪಡೆಸಿದ್ದಾರೆ.

ಬಂಟನೂರು ರೈತರಿಂದ ಭರ್ಜರಿ ಕೊಡುಗೆ..!
ಇದೆ ವೇಳೆ ಬಂಟನೂರ ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ರೈತರ ಬದುಕಿನ ಸಂಕೇತದ ಜೋಡೆತ್ತುಗಳನ್ನ ಕಾಣಿಕೆಯಾಗಿ ನೀಡಿದರು. ಇದೆ ವೇಳೆ ಜೋಡೆತ್ತುಗಳು ಮತ್ತು ಮಡಕೆಯನ್ನು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ಸೋಮನಗೌಡ ಬ.ಪಾಟೀಲ ಸಾಸನೂರ ಅವರಿಗೆ ಸಮರ್ಪಿಸಲಾಯಿತು.

'ಅನಭಾಗ್ಯ ಯೋಜನೆ ದರಿದ್ರ ಮಾಡೋ ಯೋಜನೆ, ಬಂದ್ ಮಾಡಿ ಆಗಿದ್ದಾಗ್ಲಿ'

ಸಿಎಂ ಕಂಡು ಬೆದರಿದ ಬಸವ..!
Vijayapura Farmers Gives Gifts To CM Basavaraj Bommai After inaugurates water irrigation project rbj

ಎತ್ತುಗಳನ್ನ ಪೂಜೆ ಮಾಡಲು ಸಿಎಂ ಬರ್ತಿದ್ದಂತೆ ಅವುಗಳ ಮೇಲೆ ಕೈ ಆಡಿಸಿದ್ರು. ಆದ್ರೆ ಈ ವೇಳೆ ಗಲಿಬಿಲಿಗೊಂಡ ಬಸವ ಬುಸ್ ಎಂದಿದೆ. ಬೆದರಿದ ಬಸವ ಸಿಎಂಗೆ ಹಾಯೋದಕ್ಕೆ ಬಂತು.. ಇದರಿಂದ ಬಸವನ ಪೂಜೆಗೆ ಬಂದ ಸಿಎಂ ಗಾಬರಿಯಾದ ಘಟನೆಯು ನಡೆಯಿತು..

ಇನ್ನು ಹಾಯಲು ಬಂದ ಎತ್ತಿಗೆ ಸಿಎಂ ಮುತ್ತು ಕೊಟ್ಟು ಮುದ್ದಿಸಿದ ಪ್ರಸಂಗವು ನಡೆಯಿತು.. ಸಿಎಂ ಕಂಡು ಬೆದರಿದ ಬಸವನಿಗೆ ಮತ್ತೆ ಮೆತ್ತಗೆ ಕಯ್ಯಾಡಿಸಿ ಸಮಾಧಾನ ಪಡೆಸಿದ್ದಾರೆ. ಬಳಿಕ ಎತ್ತಿಗೆ ಮುತ್ತುಕೊಟ್ಟು ಬಸವನ ಮೇಲಿನ ಪ್ರೀತಿಯನ್ನ ಸಿಎಂ ಬಸವರಾಜ್ ಬೊಮ್ಮಾಯಿ ತೋರ್ಪಡಿಸಿದ್ದಾರೆ..

ಬೆಳ್ಳಿ ಗಧೆ ದೇವರಿಗೆ, ಜೋಡೆತ್ತು ಗೋಶಾಲೆಗೆ ಸಮರ್ಪಿಸಿದ ನಾಡದೊರೆ..!
ಇನ್ನು ಜೋಡೆತ್ತಿನ ಜೊತೆಗೆ ಬೆಳ್ಳಿ ಗಧೆಯನ್ನು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಕಾಣಿಕೆಯಾಗಿ ನೀಡಲಾಯಿತು. ಆದರೆ ತಾವು ಇಟ್ಟುಕೊಂಡ ರೂಢಿಯಂತೆ ವೇದಿಕೆ ಮೇಲೆ ಬಳ್ಳಿ ಗಧೆ ಪಡೆದ ಸಿಎಂ, ಬಳಿಕ ಗಧೆಯನ್ನ ಯಲಗೂರು ಆಂಜನೇಯ ದೇಗುಲಕ್ಕೆ ನೀಡುವಂತೆ ಹೇಳಿದರು.. ಹಾಗೆಯೆ ಜೋಡೆತ್ತುಗಳನ್ನು ಯಲಗೂರು ಆಂಜನೇಯ ದೇಗುಲದ ಗೋಶಾಲೆಗೆ ನೀಡಿದ್ದಾರೆ.

ಬರದ ನಾಡು ಬಿರುದು ಅಳಿಸಿ ಜಲದ ನಾಡಾಗಿಸುವ ಪ್ರಯತ್ನ
Vijayapura Farmers Gives Gifts To CM Basavaraj Bommai After inaugurates water irrigation project rbj

ವಿಜಯಪುರಕ್ಕೆ  ಇರುವ ಬರದ ನಾಡಿನ ಬಿರುದು ಅಳಿಸಿ, 'ಜಲದ ನಾಡ'ನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಜಲ ಸಂಪನ್ಮೂಲ ಇಲಾಖೆ, ಕೃಷ್ಣಾ ಜಲ ಭಾಗ್ಯ ಜಲ ನಿಗಮದಿಂದ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದ ಜಮೀನಿನೊಂದರಲ್ಲಿ ಏಪ್ರೀಲ್ 26ರಂದು ಆಯೋಜನೆ ಮಾಡಲಾಗಿದ್ದ ಭವ್ಯ ಸಮಾರಂಭದಲ್ಲಿ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರ ರೈತರ ಅರ್ಥಿಕ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಈ ಭಾಗದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ಕೊಡುವುದಾಗಿ ತಿಳಿಸಿದರು.

ಈ ಭಾಗಕ್ಕೆ ನೀರಾವರಿ ಸೌಕರ್ಯ ಕಲ್ಪಿಸಬೇಕು ಎನ್ನುವ ನಮ್ಮ  ಹಂಬಲವು ಜಮೀನು ನೀಡಿದ ಮಹನೀಯರ ತ್ಯಾಗದಿಂದಲೇ ಆಗಿದೆ. ಆ ತ್ಯಾಗಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು, ಜಮೀನು ಕಳೆದುಕೊಂಡ ಮಹನಿಯರ ತ್ಯಾಗಕ್ಕೆ ತಾವು ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಈ ಏತ ನೀರಾವರಿ ಯೋಜನೆಯನ್ನು  ಕಾಲಮಿತಿಯಲ್ಲಿ ಪೂರ್ಣಗೊಳಿಸಿ ನೀರು ಬರುವವರೆಗೂ ವಿರಮಿಸುವುದಿಲ್ಲ ಎಂದು ಬೊಮ್ಮಾಯಿ ಅವರು ಅಭಯ ನೀಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ: 
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ನೀಡಲು ನಮ್ಮ ಸರ್ಕಾರ ಬದ್ದವಾಗಿದೆ. ಆಲಮಟ್ಟಿಯ ಶಾಸ್ತೀ ಜಲಾಶಯಕ್ಕೆ 524 ಮೀಟರಗೆ ಗೇಟ್ ಅಳವಡಿಸುವುದರಿಂದ‌ ಮುಳುಗಡೆಯಾಗುವ 20 ಹಳ್ಳಿಗಳಿಗೆ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.

ಸರ್ಕಾರವು ಇದೀಗ 16,000 ಕೋಟಿ ರೂ.ನಷ್ಟು ಆದಾಯ ಹೆಚ್ಚಿಸಿಕೊಂಡಿದೆ. ಹಣದ ಸೋರಿಕೆ ಕಡಿಮೆ‌ ಮಾಡಿ ಆರ್ಥಿಕ ಸಬಲತೆ ಕಂಡಿದ್ದರಿಂದ ನೀರಾವರಿ ಯೋಜನೆಗಳಿಗೆ ಹಣ ನೀಡಲು ಸಾಧ್ಯವಾಗಿದೆ ಎಂದು ಸಿಎಂ ಹೇಳಿದರು.

ತಮ್ಮ ಅವಧಿಯಲ್ಲಿ 110 ಕೋಟಿ ರೂ ವೆಚ್ಚದಲ್ಲಿ ವಿಜಯಪುರದಲ್ಲಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನಗೊಳಿಸಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಈಗ ಕಾಲ ಕೂಡಿ ಬಂದಿದ್ದು, ಹಂತಹಂತವಾಗಿ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.

ಭಗೀರಥನಾಗುವ ಕನಸಿಲ್ಲ:
ರೈತರು ಯಾವುದೇ ಪಕ್ಷಕ್ಕೆ ಸೇರಿಲ್ಲ, ಎಲ್ಲ ಪಕ್ಷಗಳೂ ರೈತರಿಗೆ ಸೇರಿವೆ ಎಂಬುದನ್ನರಿತು ತಾವು ಕೆಲಸ ಮಾಡುತ್ತಿರುವುದಾಗಿ ಹೇಳಿದರು.
ತಮಗೆ ಭಗೀರಥನಾಗುವ ಕನಸಿಲ್ಲ, ಶಕ್ತಿಯೂ ಇಲ್ಲ. ಆದರೆ, ರೈತರು ನಲುಗಬಾರದೆನ್ನುವುದು ತಮ್ಮ ಕಾಳಜಿಯಾಗಿದೆ. ಬರದ ನೆಲಕ್ಕೆ ಹಸಿರು ಸೀರೆ ಉಡಿಸಬೇಕೆಂಬುದು ತಮ್ಮ ಕನಸಾಗಿದೆ. ಇಂತಹ ಕಾರಣ-ಕಾಳಜಿಯಿಂದಾಗಿ ಏತ ನೀರಾವರಿಯಂತಹ ನೀರಾವರಿ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಾಗಿದೆ ಎಂದು ಎಂದರು.

ಆಡಳಿತದಲ್ಲಿ ಪಾರದರ್ಶಕತೆ:
ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ಮಾತನಾಡಿ, ಸರ್ಕಾರವು ಆಡಳಿತದಲ್ಲಿ ಅತ್ಯಂತ ಪಾರದರ್ಶಕತೆ ಕಾಯ್ದುಕೊಂಡಿದೆ.  ಕಾಲಮಿತಿಯೊಳಗೆ ರಾಜ್ಯದ ಮಹತ್ವದ ವಿವಿಧ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಚಿಂತನೆ ಮಾನ್ಯ ಮುಖ್ಯಮಂತ್ರಿ ಅವರಿಗಿದೆ ಎಂದು ತಿಳಿಸಿದ ಅವರು, ಜಿಲ್ಲೆಯ ಸಂಸದರ ಮತ್ತು ಸಚಿವರ ನೀರಾವರಿ ಯೋಜನೆಯ ಬೇಡಿಕೆಗಳನ್ನು ತಾವು ಪರಿಶೀಲಿಸುವುದಾಗಿ ಹೇಳಿದರು.

ರೈತರ ಸಂಕಷ್ಟ‌ ದೂರ: 
ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ಸೋಮನಗೌಡ ಬ.ಪಾಟೀಲ ಸಾಸನೂರ ಅವರು ಮಾತನಾಡಿ, ತಾಳಿಕೋಟೆ ತಾಲೂಕಿನ 38 ಹಳ್ಳಿಗಳಿಗೆ ಮತ್ತು ದೇವರ ಹಿಪ್ಪರಗಿ ತಾಲೂಕಿನ 9 ಹಳ್ಳಿಗಳಿಗೆ ನೀರಾವರಿ ಕಲ್ಪಿಸಲು ಉದ್ದೇಶಿಸಿರುವ ಏತ ನೀರಾವರಿ ಯೋಜನೆಗೆ ಚಾಲನೆ ಸಿಗುವ‌ ಮೂಲಕ ಈ ಭಾಗದ ಜನರ ಸಂಕಷ್ಟ  ದೂರಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಯೋಜನೆಯಿಂದ ರೈತರಿಗೆ ಅನುಕೂಲವಾಗುವುದರ ಜೊತೆಗೆ ಉದ್ಯೋಗವಕಾಶಕ್ಕೂ ಅವಕಾಶ ಸಿಕ್ಕಂತಾಗಿದೆ ಎಂದು ತಿಳಿಸಿದರು.  

ನೀರಾವರಿ ಯೋಜನೆಯ ಭಗೀರಥ
ಮುದ್ದೇಬಿಹಾಳ ಕ್ಷೇತ್ರದ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ ಅವರು ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳು
ಸ್ಪಷ್ಟ ಮುನ್ನೋಟದ ನೀರಾವರಿ ಯೋಜನೆಯೊಂದನ್ನು ಅನುಷ್ಠಾನ ಮಾಡಿದ ಭಗೀರಥ ಎಂದು ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ನೀರಾವರಿಗೆ 10 ಸಾವಿರ ಕೋಟಿ ಮೀಸಲಿಡಿ: 
Vijayapura Farmers Gives Gifts To CM Basavaraj Bommai After inaugurates water irrigation project rbj

ವಿಜಯಪುರ ನಗರ ಮತಕ್ಷೇತ್ರದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಮಾತನಾಡಿ, ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯ ಅನುಷ್ಠಾನದ ಮೂಲಕ ಬಹಳ ದಿನದ ಕನಸು ನನಸಾದಂತಾಗಿದೆ. ಜನಪರ ಯೋಜನೆಯ ಚಿಂತನೆಗೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು. 10 ಸಾವಿರ ಕೋಟಿ ರೂ.ಗಳನ್ನು ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗೆ ಮೀಸಲಿಡುವಂತೆ ಶಾಸಕರು ಇದೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಮಡಿವಾಳ ದೇವರು ಅವರು ಆಶೀರ್ವಚನ ನೀಡಿ, ಜೀವಜಲ ಮನುಷ್ಯನಿಗೆ ಅತೀ ಅವಶ್ಯ. ಈ ಹಿನ್ನೆಲೆಯಲ್ಲಿ
ವಿಜಯಪುರ ಜನತೆಗೆ ಅತ್ಯಂತ ಮಹತ್ವದ ನೀರಾವರಿ ಯೋಜನೆಯ ಸೌಕರ್ಯ ಒದಗಿಸಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಶಾಸಕರು, ಮುಖಂಡರಾದ ಎಸ್.ಕೆ.ಬೆಳ್ಳುಬ್ಬಿ, ಆರ್.ಜಿ.ಪಾಟೀಲ, ಅಧಿಕಾರಿಗಳು, ಗಣ್ಯರು ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

Follow Us:
Download App:
  • android
  • ios