Asianet Suvarna News Asianet Suvarna News

Vijayapura: 3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿದ ಕಂಡೆಕ್ಟರ್, ನಿರ್ವಾಹಕನ ಪ್ರಾಮಾಣಿಕತೆಗೆ ಜನರ ಬಿಗ್ ಸೆಲ್ಯುಟ್

3 ಲಕ್ಷ ಮೌಲ್ಯದ ಚಿನ್ನದ ಆಭರಣ ಮರಳಿಸಿದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಕರ್ನಾಟಕ ಸರ್ಕಾರಿ ಸಾರಿಗೆ ಬಸ್ ನಿರ್ವಾಹಕ. ನಿರ್ವಾಹಕನ ಪ್ರಾಮಾಣಿಕತೆಗೆ ಬಿಗ್ ಸೆಲ್ಯುಟ್ ಎಂದ ಜನತೆ.

Vijayapura bus Conductor returns gold jewellery worth Rs 3 lakh to owner gow
Author
First Published Dec 16, 2022, 9:16 PM IST

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಡಿ.16): ರಸ್ತೆಯಲ್ಲಿ 100ರೂಪಾಯಿ ನೋಟು ಬಿದ್ದಿದ್ದರೆ ಕದ್ದು ಮುಚ್ಚಿ ಕಿಸೆಗೆ ಹಾಕಿಕೊಂಡು ಹೋಗುವವರೆ ಜಾಸ್ತಿ. ಆದ್ರೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಕರ್ನಾಟಕ ಸರ್ಕಾರಿ ಸಾರಿಗೆ ಬಸ್ ನಿರ್ವಾಹಕ ಮಾಡಿದ ಅದೊಂದು ಕೆಲಸದ ಬಗ್ಗೆ ಕೇಳಿದ್ರೆ ನೀವು ಭೇಷ್ ಅಂತಿರಿ.. ಅವರ ಕಾರ್ಯಕ್ಕೆ ಹ್ಯಾಂಡ್ಸ್ ಅಫ್ ಅಂತಿರಿ.  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುದ್ದೇಬಿಹಾಳ ಸಾರಿಗೆ ಘಟಕದ ಚಾಲಕ ಕಂ ನಿರ್ವಾಹಕ ಸಿ.ಆರ್.ಪತ್ತೇಪೂರ ಅವರು ಪ್ರಯಾಣಿಕರೊಬ್ಬರು ಬಸ್‍ನಲ್ಲಿ ಬಿಟ್ಟು ಹೋಗಿದ್ದ ಅಂದಾಜು 3 ಲಕ್ಷ ಮೌಲ್ಯದ ಚಿನ್ನದ ಸಾಮಗ್ರಿ ಇರುವ ಬ್ಯಾಗ್ ಅನ್ನು ವಾರಸುದಾರರಿಗೆ ಮರಳಿಗೆ ಪ್ರಾಮಾಣಿಕತೆ ಮೆರೆದಿದ್ದಾರೆ‌. ಮುದ್ದೇಬಿಹಾಳ-ನಾಲತವಾಡ-ನಾರಾಯಣಪುರ ತಡೆ ರಹಿತ ನಿರ್ವಾಹಕ ಪತ್ತೇಪೂರ ಅವರು ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯದಲ್ಲಿದ್ದರು. ಸಂಜೆ 6 ಗಂಟೆ ಸುಮಾರಿಗೆ ಮುದ್ದೇಬಿಹಾಳದಿಂದ ನಾಲತವಾಡಕ್ಕೆ ಪ್ರಯಾಣಿಸಿದ್ದ ಮಹಿಳಾ ಪ್ರಯಾಣಿಕರೊಬ್ಬರು ಕಿವಿಯೋಲೆ, ಉಂಗುರ, ಬೋರಮಾಳ, ಚೈನ್ ಮುಂತಾದ ಚಿನ್ನದ ಆಭರಣಗಳಿದ್ದ ಬ್ಯಾಗನ್ನು ಸೀಟಿನಲ್ಲೇ ಮರೆತು ಇಳಿದು ಹೋಗಿದ್ದರು. 

ಬ್ಯಾಗ್ ಜೋಪಾನವಾಗಿಟ್ಟ ನಿರ್ವಾಹಕ
ಹೀಗೆ ಸೀಟ್ ಮೇಲೆ ಬಿಟ್ಟು ಹೋಗಿದ್ದ ಬ್ಯಾಗ್ ಪತ್ತೇಪೂರ ಕಣ್ಣಿಗೆ ಬಿದ್ದಿತ್ತು. ಬ್ಯಾಗನ್ನು ಗಮನಿಸಿದ ಪತ್ತೇಪೂರ ಅವರು ಯಾರೋ ಪ್ರಯಾಣಿಕರು ಬಿಟ್ಟು ಹೋಗಿರಬಹುದು ಎಂದು ಭಾವಿಸಿ ಅದನ್ನು ಜೋಪಾನವಾಗಿ ತೆಗೆದಿರಿಸಿದ್ದರು. ನಿರ್ವಾಹಕ ಅದೇಷ್ಟು ಪ್ರಮಾಣಿಕರು ಎಂದರೆ ಕನಿಷ್ಟ ಬ್ಯಾಗ್‌ನಲ್ಲಿ ಏನಿಟ್ಟಿದ್ದಾರೆ ಅನ್ನೋದನ್ನು ಚೆಕ್ ಮಾಡಿಲ್ಲ. ಹೀಗೆ ಮತ್ತೊಬ್ಬರು ಮರೆತು ಬಿಟ್ಟು ಹೋದ ಬ್ಯಾಗ್  ಚೆಕ್ ಮಾಡುವುದು ಸರಿಯಲ್ಲ ಎಂದು ಪತ್ತೇಪುರ್ ಜೋಪಾನವಾಗಿ ಬ್ಯಾಗನ್ನ ಕಾಯ್ದಿದ್ದಾರೆ. ಬ್ಯಾಗ್ ಮಾಲಿಕರ ಬರವಿಗಾಗಿ ಕಾಯ್ದಿದ್ದಾರೆ.

ಗಾಬರಿಯಿಂದ ಬಸ್ ನಿಲ್ದಾಣಕ್ಕೆ ಓಡೋಡಿ ಬಂದ ಮಹಿಳೆ 
ಬಸ್  ಮರಳಿ ಮುದ್ದೇಬಿಹಾಳದತ್ತ ಬಂದಾಗ ಬ್ಯಾಗ್ ಬಿಟ್ಟು ಹೋಗಿದ್ದ ಮಹಿಳೆ ಆಫ್ರೀನ್ ನಾಯ್ಕೋಡಿ ತನ್ನ ಪತಿಯ ಸಮೇತ ಇಲ್ಲಿನ ಸಾರಿಗೆ ಘಟಕಕ್ಕೆ ಧಾವಿಸಿ ಬಂದು ಇಂಥ ಬಸ್‍ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದು ಸಿಕ್ಕಿದೆಯೇ ಎಂದು ವಿಚಾರಿಸತೊಡಗಿದ್ದರು. ಅವರ ಮುಖದಲ್ಲಿ ಗಾಭರಿ, ಆತಂಕ ಎದ್ದು ಕಾಣುತ್ತಿತ್ತು. ಪತ್ತೇಪೂರ ಅವರು ತಮಗೆ ಸಿಕ್ಕ ಬ್ಯಾಗನ್ನು ಘಟಕದ ಭದ್ರತಾ ಸಿಬ್ಬಂದಿ ಮತ್ತು ಸಾರಿಗೆ ನಿರೀಕ್ಷಕರ ಸುಪರ್ದಿಗೆ ಒಪ್ಪಿಸಿದ್ದರು. ಈ ವಿಷಯ ತಿಳಿದ ಪತ್ತೇಪೂರ ಅವರು ಮಹಿಳೆ ಮತ್ತು ಆಕೆಯ ಪತಿಯನ್ನು ಘಟಕದ ಭದ್ರತಾ ಸಿಬ್ಬಂದಿ ಕೊಠಡಿಗೆ ಕರೆದೊಯ್ದು ಬ್ಯಾಗ್‍ನೊಳಗೆ ಏನೇನು ಇದ್ದವು ಎಂದು ಕೇಳಿ ತಿಳಿದರು.

ನಂತರ ಎಲ್ಲರ ಸಮ್ಮುಖ ಮಹಿಳೆಗೆ ಬ್ಯಾಗ್ ನೀಡಿ ಅದರಲ್ಲಿರುವ ಚಿನ್ನದ ಆಭರಣಗಳು ಜೋಪಾನವಾಗಿರುವುದನ್ನು ಪರಿಶೀಲಿಸಲು ತಿಳಿಸಿದರು. ದುಗುಡ, ಗಾಭರಿಯಿಂದಲೇ ಬ್ಯಾಗ್‍ನಲ್ಲಿದ್ದ ಕೆಲ ಸಣ್ಣಪುಟ್ಟ ಬ್ಯಾಗ್ ಪರಿಶೀಲಿಸಿ ಚಿನ್ನದ ಆಭರಣಗಳನ್ನು ತೆಗೆದು ನೋಡಿ ಎಲ್ಲವೂ ಜೋಪಾನವಾಗಿವೆ ಎಂದು ಆಫ್ರೀನ್ ತಿಳಿಸಿ ಪತ್ತೇಪೂರ ಅವರಿಗೆ ಕೃತಜ್ಞತೆ ತಿಳಿಸಿದರು.

ಬ್ಯಾಗ್ ಕಳಿದುಕೊಂಡವರಿಗೆ ಮುಟ್ಟಿಸಿದ ಸಂತೃಪ್ತಿ ಇದೆ
ಈ ಕುರಿತು ಮಾತನಾಡಿದ ಪತ್ತೇಪೂರ ಅವರು ಪ್ರಯಾಣಿಕರು ಬಸ್‍ನಲ್ಲಿ ಬಿಟ್ಟು ಹೋಗಿದ್ದ ಬ್ಯಾಗು ಬೇರೆ ಪ್ರಯಾಣಿಕರ ಕೈಗೆ ಸಿಕ್ಕಿದ್ದರೆ ಬಹುಶಃ ಅದು ಮರಳಿ ವಾರಸುದಾರರಿಗೆ ಸಿಗುವ ಸಂಭವ ಕಡಿಮೆ ಇತ್ತು. ನನಗೆ ಸಿಕ್ಕಿದ್ದರಿಂದ ಅದನ್ನು ಯಾರಾದರೂ ಕೇಳಿಕೊಂಡು ಬಂದರೆ ಮರಳಿಸಲು ನಿರ್ಧರಿಸಿದ್ದೆ. ಅದರಂತೆ ನನಗೆ ಸಿಕ್ಕ ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಕಳೆದುಕೊಂಡವರಿಗೆ ಮರಳಿಸಿದ ಸಂತೃಪ್ತಿ ಮೂಡಿದೆ ಎಂದರು.

ರಸ್ತೆಯಲ್ಲಿ ಬಿದ್ದಿದ್ದ ಸಾವಿರಾರು ರೂ. ಹಣ ಮರಳಿಸಿ ಪ್ರಾಮಾಣಿಕತೆ ಮೆರೆದ Srilanka ತಮಿಳು ನಿರಾಶ್ರಿತೆ

ಕಂಡೆಕ್ಟರ್ ಪ್ರಾಮಾಣಿಕತೆಗೆ ಬಹುಪರಾಕ್
ಆಭರಣ ಮರಳಿ ಸಿಕ್ಕ ಸಂತಸದಲ್ಲಿದ್ದ ಆಫ್ರೀನ್ ಮಾತನಾಡಿ ಮನೆಯಲ್ಲಿ ಮದುವೆ ಇದ್ದ ಕಾರಣ ಚಿನ್ನದ ಆಭರಣಗಳನ್ನು ಮದುವೆಯಲ್ಲಿ ಧರಿಸಲು ತೆಗೆದುಕೊಂಡು ಹೋಗುತ್ತಿದ್ದೆ. ಮರೆತು ಬ್ಯಾಗ್ ಬಿಟ್ಟು ಬಸ್ಸಿನಿಂದ ಕೆಳಗಿಳಿದಿದ್ದೆ. ನೆನಪಾದಾಗ ಬಸ್ ಹೋಗಿತ್ತು. ಕೂಡಲೇ ನನ್ನ ಗಂಡನ ಮೂಲಕ ಬಸ್ ನಿಲ್ದಾಣ, ಬಸ್ ಘಟಕ ಸಂಪರ್ಕಿಸಿ ಇಲ್ಲಿಗೆ ಓಡೋಡಿ ಬಂದೆವು. ನಮಗೆ ಹೋದ ಜೀವ ಬಂದಂತಾಗಿದೆ. ಕಂಡಕ್ಟರ್ ಅಣ್ಣನಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.

Bengaluru: ಪ್ರಾಮಾಣಿಕತೆ ಮೆರೆದ ಆಟೋ ಚಾಲಕ, ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸರು!

ಕಂಡೆಕ್ಟರ್ ಪ್ರಾಮಾಣಿಕತೆಗೆ ಜನಮೆಚ್ಚುಗೆ 
ಘಟಕದ ಸಹಾಯಕ ನಿಯಂತ್ರಕ ವಿಠ್ಠಲ ಲಮಾಣಿ, ಸಾರಿಗೆ ನೌಕರರ ಸಂಘಟನೆಯ ಮುಖಂಡ ಯಮನಪ್ಪ ಹಂಗರಗಿ, ಮಹಿಬೂಬ ನಾಯ್ಕೋಡಿ, ಘಟಕದ ಭದ್ರತಾ ಸಿಬ್ಬಂದಿ, ಸಾರಿಗೆ ಸಿಬ್ಬಂದಿ ಇದ್ದು ಕಂಡಕ್ಟರ್ ಪತ್ತೇಪೂರ ಅವರ ಪ್ರಾಮಾಣಿಕತೆಯನ್ನು ಶ್ಲಾಘಿಸಿದರು.

Follow Us:
Download App:
  • android
  • ios