ವಿಜಯನಗರ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ತಮ್ಮ ಮೆಕ್ಕೆಜೋಳದ ಬೆಳೆಯನ್ನು ಕೈಯಾರೆ ನಾಶಪಡಿಸುತ್ತಿದ್ದಾರೆ. ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಒಣಗುತ್ತಿದ್ದು, ಸರ್ಕಾರವು ಸಾಲ ಮನ್ನಾ ಮಾಡಿ, ಬರಪೀಡಿತ ಎಂದು ಘೋಷಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

ವಿಜಯನಗರ (ಜು.20): ಮಳೆಯನ್ನೇ ನಂಬಿ ಜಮೀನಿನಲ್ಲಿ ಬಿತ್ತನೆ ಮಾಡಿದ ರೈತನಿಗೆ ಈ ಬಾರಿ ಮುಂಗಾರು ಮಳೆ (Monsoon) ಭಾರೀ ಕೈಕೊಟ್ಟಿದೆ. ಬಿತ್ತನೆ ಮಾಡಿ ಮಳೆರಾಯನ ಆಗಮನಕ್ಕಾಗಿ ಕಾದು ಕುಳಿತಿದ್ದ ರೈತರು, ಈಗ ವಿಧಿಯಿಲ್ಲದೆ ತಮ್ಮ ಕೈಯಾರೆ ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿರುವ ಮನಕಲಕುವ ಘಟನೆ ವಿಜಯನಗರ (Vijayanagara) ಜಿಲ್ಲೆಯಲ್ಲಿ ಜರುಗಿದೆ.

ಮೊಳಕೆಯೊಡೆಯದ ಮೆಕ್ಕೆಜೋಳ:

ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ (Huvina Hadagali Taluk Holagundi Village) ವ್ಯಾಪ್ತಿಯ ಇಟಗಿ, ಉತ್ತಂಗಿ ಹಾಗೂ ಸೋಗಿ ಭಾಗದಲ್ಲಿ ಮಳೆ ಕೊರತೆಯಿಂದಾಗಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ರೈತರು ಹೆಚ್ಚಿನ ನಿರೀಕ್ಷೆಯೊಂದಿಗೆ ಮೆಕ್ಕೆಜೋಳ (Maize) ಬಿತ್ತನೆ ಮಾಡಿದ್ದರು. ಆದರೆ, ಬಿತ್ತನೆ ಮಾಡಿದ ನಂತರ ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆಗಳು ಮೊಳಕೆಯೊಡೆಯಲೇ ಇಲ್ಲ. ಬೆಳೆದ ಒಂದಷ್ಟು ಬೆಳೆಯೂ ಕೂದ ಮಳೆಯಿಲ್ಲದೇ ಒಣಗಿ ಬೀಳುತ್ತಿದೆ. ತಾನೇ ಬಿತ್ತಿ ಬೆಳೆಸಿದ ಜೋಳ ಕಮರಿ ಹೋಗುವುದನ್ನು ನೋಡಲಾರದೆ ಕಂಗಾಲಾದ ರೈತ, ಈ ಬೆಳೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸಿ, ಎತ್ತುಗಳನ್ನು ಕಟ್ಟಿಕೊಂಡು ರಂಟೆಯಿಂದ ಹರಗುವ ಮೂಲಕ ತಮ್ಮ ಕೈಯಾರೆ ಬೆಳೆಗಳನ್ನು ನಾಶ ಮಾಡುತ್ತಿದ್ದಾರೆ.

ಸಾಲ ಮನ್ನಾಕ್ಕೆ ಹೆಚ್ಚಿದ ಒತ್ತಾಯ :

ಈ ಸಂಕಷ್ಟದ ಪರಿಸ್ಥಿತಿಯನ್ನು ಕಂಡು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್‌ ಅವರು, 'ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಕೈಗೆ ಬರಬೇಕಾದ ಬೆಳೆ ಕಣ್ಣೆದುರೇ ನಾಶವಾಗುತ್ತಿದೆ. ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ರೈತರ ಹಿತದೃಷ್ಟಿಯಿಂದ ಅವರ ಸಂಪೂರ್ಣ ಸಾಲವನ್ನು ಮನ್ನಾ (Complete Loan Waiver) ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.

ಬರಗಾಲದ ಆತಂಕ :

ಕೇವಲ ವಿಜಯನಗರ ಜಿಲ್ಲೆಯಲ್ಲದೆ ರಾಜ್ಯದಾದ್ಯಂತ ಹಲವು ಕಡೆ ಮಳೆ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತವಾಗಿವೆ. ಬಿತ್ತನೆ ಮಾಡಿದ ಬೀಜಗಳು ಮಣ್ಣಿನಲ್ಲೇ ಒಣಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರವು ಕೂಡಲೇ ಜಿಲ್ಲೆಯನ್ನು ಬರಪೀಡಿತ (Drought Affected) ಎಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ (Compensation) ನೀಡಬೇಕು ಎಂಬುದು ಇಲ್ಲಿನ ಜನರ ಒಕ್ಕೊರಲ ಆಗ್ರಹವಾಗಿದೆ.

ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ರೈತರು, ಈಗ ಬೆಳೆಯೂ ಇಲ್ಲದೆ, ಸಾಲ ತೀರಿಸಲಾಗದೆ ಕಣ್ಣೀರು ಹಾಕುತ್ತಿದ್ದಾರೆ. ವಿಜಯನಗರ ಜಿಲ್ಲೆಯ ಈ ಪರಿಸ್ಥಿತಿ ರಾಜ್ಯದ ಕೃಷಿ ಕ್ಷೇತ್ರದ ದುಸ್ಥಿತಿಗೆ ಕೈಗನ್ನಡಿಯಾಗಿದೆ.