ಬೆಂಗಳೂರು(ಜ.08): ಹಲವು ಸಮಸ್ಯೆಗಳಿಂದ ನರಳುತ್ತಿರುವ ಕೃಷಿ ಕ್ಷೇತ್ರ ಮತ್ತು ರೈತರ ಜೀವನ ಸುಧಾರಣೆಗೆ ಸಾಲಮನ್ನಾ, ಉಚಿತ ವಿದ್ಯುತ್‌ ನೀಡುವುದೊಂದೇ ಮಾರ್ಗವಲ್ಲ, ರೈತರ ಬದುಕು ಹಸನಾಗಿಸಲು ವಿಜ್ಞಾನಿಗಳು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ಸಂಶೋಧನೆಗಳತ್ತ ಹೆಚ್ಚು ಗಮಹರಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.

ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಲಸೆ ಹೋಗುತ್ತಿದ್ದರೂ ಶೇ.60ರಷ್ಟು ಮಂದಿ ಹಳ್ಳಿಗಳಲ್ಲಿ ನೆಲೆಸಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಹಲವು ಸವಾಲುಗಳನ್ನು ರೈತರು ಎದುರಿಸುತ್ತಿದ್ದಾರೆ. ನಕಾರಾತ್ಮಕ ಮಾರುಕಟ್ಟೆ ವಾತಾರಣ, ಮಧ್ಯವರ್ತಿಗಳ ಹಾವಳಿ, ಬೆಳೆಗೆ ಸೂಕ್ತ ಬೆಲೆ ಸಿಗದಿರುವುದು, ಬೆಂಬಲ ಬೆಲೆ ದೊರಕದಿರುವುದು ಹೀಗೆ ಹಲವು ಸಂಕಷ್ಟಗಳಿಗೆ ತುತ್ತಾಗಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಂಡು ಸುಸ್ಥಿರ ಕೃಷಿಗೆ ಒತ್ತು ನೀಡುವ ಜವಾಬ್ದಾರಿ ವಿಜ್ಞಾನಿಗಳ ಮೇಲಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಮಂಗಳವಾರ ನಡೆದ ಪ್ರತಿಷ್ಠಿತ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರ ಮತ್ತು ಕೃಷಿಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಬೆಳೆ ಉತ್ಪಾದಕತೆ ಮತ್ತು ರೈತರ ಆದಾಯವನ್ನು ಸುಧಾರಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಹೆಚ್ಚು ಹೊಸ ಸಂಶೋಧನೆ ಮಾಡುವ ಅಗತ್ಯ ಇದೆ. ಸುಧಾರಿತ ಕೃಷಿ ಚಟುವಟಿಕೆಗಳನ್ನು ಮಾಡಲು ವೈಜ್ಞಾನಿಕ ಸಂಶೋಧನೆಗಳು ಗಮನ ಹರಿಸಬೇಕು. ಆಧುನಿಕ ಯಂತ್ರೋಪಕರಣಗಳನ್ನು ವೈವಿಧ್ಯಮಯವಾಗಿ ಅಳವಡಿಕೊಂಡು ಮುಂದಿನ ವರ್ಷದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ದೃಷ್ಟಿಯನ್ನು ಸಾಕಾರಗೊಳಿಸಲು ತಂತ್ರಜ್ಞಾನ ಸಹಕಾರಿಯಾಗಬೇಕು ಎಂದು ಪ್ರತಿಪಾದಿಸಿದರು.

ಭಾರತದಂತಹ ದೇಶವು ಆಮದು ಮಾಡಿದ ಆಹಾರ ಸುರಕ್ಷತೆಯನ್ನು ಅವಲಂಬಿಸಲಾಗುವುದಿಲ್ಲ. ನಾವು ನಮ್ಮದೇ ಆಹಾರ ಭದ್ರತೆಯನ್ನು ಹೊಂದಿರಬೇಕು. ಈ ದಿಕ್ಕಿನಲ್ಲಿ ಏಕೀಕೃತ ಪ್ರಯತ್ನಗಳು ಇರಬೇಕು. ಇಲ್ಲದಿದ್ದರೆ ಜನರು ಕೃಷಿಯನ್ನು ತೊರೆದು ಇತರ ಉದ್ಯೋಗಗಳಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಉತ್ಪಾದನಾ ಪೂರ್ವ ಹಂತದಲ್ಲಿ ಒಳಹರಿವಿನ ಬಳಕೆಯಿಂದ ಉತ್ಪಾದನಾ ನಂತರದ ಸಂಗ್ರಹಣೆ, ಸಂಸ್ಕರಣೆ, ಪ್ಯಾಕೇಜಿಂಗ್‌, ಮಾರ್ಕೆಟಿಂಗ್‌ವರೆಗೆ ಕೃಷಿ ಮೌಲ್ಯ ಮತ್ತು ಗುಣಮಟ್ಟವನ್ನು ಹೆಚ್ಚಿಸುವಲ್ಲಿ ತಂತ್ರಜ್ಞಾನ ವಹಿಸಬಹುದಾದ ನಿರ್ಣಾಯಕ ಪಾತ್ರ ಬಹಳ ಮಹತ್ವದಾಗಿರುತ್ತದೆ. ಭವಿಷ್ಯದಲ್ಲಿ ಆಹಾರ ಭದ್ರತೆ ಬಹಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸುವುದು ಬಹಳ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಉನ್ನತ ಶಿಕ್ಷಣ ಸಂಸ್ಥೆಗಳಿಂದ ಹೊರ ಬರುವವರಿಗೆ ಉದ್ಯೋಗ ಒದಗಿಸುವುದು ಮಾತ್ರವಲ್ಲದೇ, ಸಂಶೋಧನೆಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಬೇಕಾದ ಅಗತ್ಯ ಇದೆ. ಆರೋಗ್ಯ ಕ್ಷೇತ್ರದಲ್ಲಿಯೂ ದೊಡ್ಡ ಆವಿಷ್ಕಾರಗಳಾಗಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಹೆಚ್ಚು ಕ್ರಮ ಕೈಗೊಳ್ಳಬೇಕಾಗಿದೆ. ಹವಾಮಾನ ವೈಪರೀತ್ಯದಿಂದಾಗುವ ದುಷ್ಪರಿಣಾಮಗಳನ್ನು ತಡೆಯುವಲ್ಲಿಯೂ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆ ಮಾಡುವತ್ತ ಗಮನಹರಿಸಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಭಾರತೀಯ ವಿಜ್ಞಾನ ಕಾಂಗ್ರೆಸ್‌ ಸಮ್ಮೇಳನದ ಅಧ್ಯಕ್ಷ ಪ್ರೊ.ಕೆ.ಎಸ್‌.ರಂಗಪ್ಪ, ಕೃಷಿ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌, ಕಾಂಗ್ರೆಸ್‌ ಸಮ್ಮೇಳನದ ನಿಯೋಜಿತ ಅಧ್ಯಕ್ಷೆ ಪ್ರೊ.ವಿಜಯಲಕ್ಷ್ಮೇ ಸಕ್ಸೆನಾ ಇತರರು ಉಪಸ್ಥಿತರಿದ್ದರು.

ಪ್ರತಿಷ್ಠಿತ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನ ಅಧ್ಯಕ್ಷ ಪ್ರೊ.ಕೆ.ಎಸ್‌.ರಂಗಪ್ಪ ಅವರು ವಿಜ್ಞಾನ ಜ್ಯೋತಿಯನ್ನು ಕಾಂಗ್ರೆಸ್‌ ಸಮ್ಮೇಳನದ ನಿಯೋಜಿತ ಅಧ್ಯಕ್ಷೆ ಪ್ರೊ.ವಿಜಯಲಕ್ಷ್ಮೇ ಸಕ್ಸೆನಾಗೆ ಹಸ್ತಾಂತರಿಸಿದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸಿಎಂ ಬಿ.ಎಸ್‌.ಯಡಿಯೂರಪ್ಪ ಇತರರಿದ್ದರು.