ಬಸನಗೌಡ ಪಾಟೀಲ ಯತ್ನಾಳ ವಿಷಕಾರುವ ಮಾತುಗಳಿಂದ ಜನರಲ್ಲಿ ಆತಂಕ, ಗೊಂದಲ ಮೂಡಿಸುತ್ತಿದ್ದಾರೆ| ಪೊಲೀಸ್‌ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಯತ್ನಾಳ್‌ ಮೇಲೆ ಕಠಿಣ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು: ಮಹ್ಮದ ರಫೀಕ ಟಪಾಲ|

ವಿಜಯಪುರ(ಏ.12): ದೇಶದಲ್ಲಿ ಕೊರೋನಾ ವೈರಸ್‌ನಿಂದ ಜನರಲ್ಲಿ ಭಯ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಷಕಾರುವ ಮಾತುಗಳಿಂದ ಜನರಲ್ಲಿ ಮತ್ತೆ ಆತಂಕ ಹಾಗೂ ಗೊಂದಲ ಮೂಡಿಸುತ್ತಿದ್ದಾರೆ. ಕೂಡಲೇ ಯತ್ನಾಳ್‌ ಅವರ ಮೇಲೆ ಪೊಲೀಸರು ಸ್ವಯಂ ಪ್ರೇರಿತರಾಗಿ ಎಫ್‌ಐಆರ್‌ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮಹ್ಮದ ರಫೀಕ ಟಪಾಲ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶಾಂತಿ, ಸುವ್ಯವಸ್ಥೆ ಕಾಪಾಡುವುದನ್ನು ಬಿಟ್ಟು ಅನಾವಶ್ಯಕವಾಗಿ ಸರ್ಕಾರಕ್ಕೂ ಹಾಗೂ ಸ್ಥಳೀಯ ಜಿಲ್ಲಾಡಳಿತಕ್ಕೂ ಮುಜುಗರ ಉಂಟು ಮಾಡುತ್ತಿದ್ದು, ಶಾಸಕರಾಗಿ ಮುಂದುವರಿಯಲ್ಲಿಕ್ಕೆ ಲಾಯಕ್ಕಾಗಿಲ್ಲ. ಇತ್ತೀಚೆಗೆ ಶಾಸಕರು ತಬ್ಲೀಘಿಗಳನ್ನು ಗುಂಡಿಕ್ಕಿ ಕೊಲ್ಲುವ ಹೇಳಿಕೆ ನೀಡಿ ಅಲ್ಪಸಂಖ್ಯಾತರಲ್ಲಿ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ.

ತಬ್ಲಿಘಿ: ರೇಣುಕಾಚಾರ್ಯ ಆಯ್ತು ಯತ್ನಾಳ್‌ರಿಂದ ವಿವಾದದ ಕಿಡಿ

ಇಡೀ ರಾಜ್ಯಾದ್ಯಂತ ಖಂಡನೆಗೆ ಗುರಿಯಾಗಿದ್ದು, ಇದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಅವರು ಡಿ.ಜಿ.ಪಿಗೆ ದೂರು ಸಲ್ಲಿಸಿದ್ದು, ಪೊಲೀಸ್‌ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಯತ್ನಾಳ್‌ ಮೇಲೆ ಕಠಿಣ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.