Asianet Suvarna News Asianet Suvarna News

ಟೋಯಿಂಗ್‌ ವ್ಯವಸ್ಥೆ ಮತ್ತೆ ಜಾರಿಗೊಳಿಸುವ ಪ್ರಸ್ತಾವ ಇಲ್ಲ: ಗೃಹ ಸಚಿವ

 ಬೆಂಗಳೂರು ನಗರದಲ್ಲಿ ಸ್ಥಗಿತಗೊಳಿಸಲಾಗಿರುವ ಟೋಯಿಂಗ್‌ ವ್ಯವಸ್ಥೆಯನ್ನು ಪುನರ್‌ ಜಾರಿಗೊಳಿಸುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ  ಸ್ಪಷ್ಟಪಡಿಸಿದ್ದಾರೆ.

vehicles  Towing policy will not be re-enforced in Bengaluru says Home Minister Araga Jnanendra gow
Author
First Published Sep 18, 2022, 3:44 PM IST

 ಬೆಂಗಳೂರು (ಸೆ.18): ಬೆಂಗಳೂರು ನಗರದಲ್ಲಿ ಸ್ಥಗಿತಗೊಳಿಸಲಾಗಿರುವ ಟೋಯಿಂಗ್‌ ವ್ಯವಸ್ಥೆಯನ್ನು ಪುನರ್‌ ಜಾರಿಗೊಳಿಸುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಸಚಿವರು, ನಗರದಲ್ಲಿ ಸಾರ್ವಜನಿಕ ಸ್ನೇಹಿ ಮತ್ತು ಸುಗಮ ವಾಹನ ಪಾರ್ಕಿಂಗ್‌ ವ್ಯವಸ್ಥೆ, ಜಾರಿಗೊಳಿಸುವ ಬಗ್ಗೆ ವಿಸ್ತೃತವಾದ ಚರ್ಚೆ ಹಾಗೂ ತಜ್ಞರ ಸಲಹೆ ಪಡೆದು, ತೀರ್ಮಾನ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಈ ಬಗ್ಗೆ ಚರ್ಚೆ ನಡೆಸಿದ್ದು, ಟೋಯಿಂಗ್‌ ಬಗ್ಗೆ ಯಾವುದೇ ಅಂತಿಮ ತೀರ್ಮಾನ ವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಟೋಯಿಂಗ್‌ ವ್ಯವಸ್ಥೆ ಬಗ್ಗೆ ಜನಾಕ್ರೋಶ ಹಾಗೂ ಕಿರುಕುಳದ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಮತ್ತೆ ಹಳೇ ವ್ಯವಸ್ಥೆಯನ್ನು ಪುನರ್‌ ಜಾರಿಗೊಳಿಸುವುದಿಲ್ಲ ಎಂದು ತಿಳಿಸಿದ್ದಾರೆ. ಕೆಲ ತಿಂಗಳ ಹಿಂದೆ ಜೀವನ ಭೀಮಾನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಡಿಲಿವರಿ ಬಾಯ್ ಯ ಬೈಕ್ ಟೋಯಿಂಗ್ ಮಾಡುವಾಗ ಆತ ಒಂದು ಕೈಯಲ್ಲಿ ಊಟದ ಬ್ಯಾಗ್ ಒಂದು ಕೈಯಲ್ಲಿ ಬೈಕ್ ಹಿಡಿದುಕೊಳ್ಳಲು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಾದ ನಂತ್ರ ಸಂಪೂರ್ಣವಾಗಿ ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ಬೈಕ್ ಟೋಯಿಂಗ್ ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿತ್ತು. ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಟೋಯಿಂಗ್ ಕಂಪನಿ ಮಾಲೀಕರು ಹೈಕೋರ್ಟ್ ಮೇಟ್ಟಿಲೇರಿದ್ದರು.  
 
ಮತ್ತೆ ಟೋಯಿಂಗ್‌ ವ್ಯವಸ್ಥೆ ಜಾರಿ ಬಗ್ಗೆ ಹೇಳಿಕೆ ನೀಡಿದ್ದ ಪೊಲೀಸ್‌ ಆಯುಕ್ತ
ನಗರಕ್ಕೆ ಟೋಯಿಂಗ್‌ ವ್ಯವಸ್ಥೆಯ ಅಗತ್ಯವಿದೆ. ಯಾವ ಮಾದರಿಯಲ್ಲಿ ಟೋಯಿಂಗ್‌ ವ್ಯವಸ್ಥೆ ರೂಪಿಸಬೇಕು ಎಂಬುದರ ಬಗ್ಗೆ ಇಲಾಖೆ ತೀರ್ಮಾನಿಸಲಿದೆ ಎಂದು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಕೆಲ ದಿನಗಳ ಹಿಂದೆ ಹೇಳಿದ್ದರು. ಇದು ನಗರದ ಜನತೆಗೆ ಮತ್ತೆ ತಲೆನೋವು ತರುವ ಲಕ್ಷಣ ಕಂಡುಬಂತು. ಟೋಯಿಂಗ್‌ ಕುರಿತು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿರುವ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿದ್ದ ಅವರು, ಟೋಯಿಂಗ್‌ ಎಂಬುದು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವಂತೆ ನಿಲುಗಡೆ ಮಾಡಿದ ವಾಹನಗಳನ್ನು ತೆಗೆಸುವ ಕ್ರಮವಾಗಿದೆ. ಬೆಂಗಳೂರು ನಗರಕ್ಕೆ ಟೋಯಿಂಗ್‌ ಅಗತ್ಯವಿದೆ. ಆದರೆ, ಯಾವ ರೀತಿ, ಯಾವ ನಿಯಮಗಳ ಅಡಿಯಲ್ಲಿ ಇಲಾಖೆ ವಿರುದ್ಧ ದೂರುಗಳು ಬಾರದ ರೀತಿ ವ್ಯವಸ್ಥೆ ಮಾಡಬೇಕಿದೆ. ಹೀಗಾಗಿ ಯಾವ ಮಾದರಿಯಲ್ಲಿ ಟೋಯಿಂಗ್‌ ವ್ಯವಸ್ಥೆ ರೂಪಿಸಬೇಕು ಎಂಬುದರ ಬಗ್ಗೆ ಇಲಾಖೆ ತೀರ್ಮಾನಿಸಲಿದೆ ಎಂದಿದ್ದರು.

ಮಾಲೀಕನ ಸಮೇತ ಸ್ಕೂಟರ್ ಟೋಯಿಂಗ್ ಮಾಡಿದ ಅಧಿಕಾರಿಗಳು: ವಿಡಿಯೋ ವೈರಲ್‌

ನಗರದಲ್ಲಿ ಕಳೆದ ಆರು ತಿಂಗಳಿಂದ ಟೋಯಿಂಗ್‌ ರದ್ದುಗೊಳಿಸಲಾಗಿದೆ. ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ಟೋಯಿಂಗ್‌ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಗಲಾಟೆಗಳು ಹೆಚ್ಚಾಗಿದ್ದವು. ಸಂಚಾರ ಪೊಲೀಸರ ಟೋಯಿಂಗ್‌ ವ್ಯವಸ್ಥೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿ ದಿನ ಒಂದಿಲ್ಲೊಂದು ಕಡೆ ಟೋಯಿಂಗ್‌ ಸಿಬ್ಬಂದಿ ಮತ್ತು ವಾಹನ ಸವಾರರ ನಡುವೆ ಸಂಘರ್ಷಗಳು ನಡೆಯುತ್ತಿದ್ದವು. ಹೀಗಾಗಿ ರಾಜ್ಯ ಸರ್ಕಾರ ಟೋಯಿಂಗ್‌ ವ್ಯವಸ್ಥೆಯನ್ನು ರದ್ದುಗೊಳಿಸಿದೆ.

 

 ಬೆಂಗಳೂರಿನಲ್ಲಿ ಶೀಘ್ರವೇ ಮತ್ತೆ ಟೋಯಿಂಗ್ ನೀತಿ ಜಾರಿಯಾಗೋ ಲಕ್ಷಣ!

ಇದೀಗ ಟೋಯಿಂಗ್‌ ವಾಹನ ಮಾಲಿಕರ ಸಂಘಟನೆಗಳು ಮತ್ತೆ ನಗರದಲ್ಲಿ ಟೋಯಿಂಗ್‌ ವ್ಯವಸ್ಥೆ ಜಾರಿಗೆ ಅವಕಾಶ ನೀಡುವಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ ಹೈಕೋರ್ಟ್, ಇನ್ನು ಆರು ವಾರಗಳಲ್ಲಿ ಟೋಯಿಂಗ್‌ ವಾಹನಗಳ ಮಾಲಿಕರ ಸಂಘದ ಮನವಿ ಆಲಿಸುವಂತೆ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. ಇದರ ಬೆನ್ನಲ್ಲೇ ನಗರದಲ್ಲಿ ಮತ್ತೆ ಟೋಯಿಂಗ್‌ ವ್ಯವಸ್ಥೆ ಜಾರಿಯ ಬಗ್ಗೆ ಚರ್ಚೆಗಳು ಆರಂಭವಾಗಿವೆ.

Follow Us:
Download App:
  • android
  • ios