ಮಾಲೀಕನ ಸಮೇತ ಸ್ಕೂಟರ್ ಟೋಯಿಂಗ್ ಮಾಡಿದ ಅಧಿಕಾರಿಗಳು: ವಿಡಿಯೋ ವೈರಲ್
ನಾಗಪುರದಲ್ಲಿ ಟೋಯಿಂಗ್ ಸಿಬ್ಬಂದಿ ನೋ ಪಾರ್ಕಿಂಗ್ ಸ್ಥಳದಲ್ಲಿದ್ದ ಸ್ಕೂಟರ್‌ನ್ನು ಅದರ ಮಾಲೀಕನ ಸಮೇತ ಟೋಯಿಂಗ್ ಮಾಡಲು ಮುಂದಾಗಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ನಾಗಪುರ: ನಗರಗಳಲ್ಲಿ ವಾಹನ ನಿಲ್ಲಿಸಲು ಸರಿಯಾದ ಜಾಗಗಳೇ ಇರುವುದಿಲ್ಲ. ಇದರಿಂದ ಕೆಲವೊಮ್ಮೆ ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ತೆರಳುತ್ತಾರೆ. ಇದು ಸಂಚಾರ ಅಡಚಣೆಗೂ ಕಾರಣವಾಗುತ್ತದೆ. ಇದರಿಂದ ಕಂಗೆಟ್ಟ ಅಧಿಕಾರಿಗಳು ಹೀಗೆ ಎಲ್ಲೆಂದರಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ವಾಹನಗಳನ್ನು ಕ್ರೇನ್ ಮೂಲಕ ಟೋಯಿಂಗ್ ಮಾಡಿ ಸ್ಥಳದಿಂದ ಹೊತ್ತೊಯ್ಯುತ್ತಾರೆ. ಹೀಗೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಸವಾರರಿಗೆ ಹೀಗೆ ಬುದ್ಧಿ ಕಲಿಸಲು ಆಡಳಿತ ಮುಂದಾಗಿದೆ. ಇದು ಹಳೆ ವಿಚಾರ ಇದರಲ್ಲೇನು ವಿಶೇಷ ಅಂತ ಕೇಳ್ತಿದ್ದೀರಾ. ಮಹಾರಾಷ್ಟ್ರದ ನಾಗಪುರದಲ್ಲಿಯೂ ಹೀಗೆಯೇ ಪೊಲೀಸರು ರಸ್ತೆ ಬದಿ ಎರ್ರಾಬಿರಿಯಾಗಿ ನಿಲ್ಲಿಸಿದ್ದ ವಾಹನ ಟೋಯಿಂಗ್‌ಗೆ ಮುಂದಾಗಿದ್ದಾರೆ. ಆದರೆ ಎಷ್ಟರಲ್ಲಾಗಲೇ ಸ್ಕೂಟರ್ ಮಾಲೀಕ ಸ್ಥಳಕ್ಕೆ ಬಂದಿದ್ದು, ಸ್ಕೂಟರ್‌ನ್ನು ಬಿಡುವಂತೆ ಕೇಳಿ ಕೊಂಡಿದ್ದಾರೆ. ಅಲ್ಲದೇ ತಮ್ಮ ಸ್ಕೂಟರ್ ಏರಿ ಕುಳಿತುಕೊಂಡಿದ್ದಾರೆ. ಇತ್ತ ಸ್ಕೂಟರ್ ಎತ್ತಾಕಿಕೊಂಡು ಹೋಗಲು ಸ್ಕೂಟರ್‌ಗೆ ಕೇಬಲ್ ಕಟ್ಟಿದ್ದ ಸಿಬ್ಬಂದಿ ಸ್ಕೂಟರ್ ಸವಾರನ ಮನವಿಗೆ ಕರಗದೇ ಆತ ಇರುವಾಗಲೇ ಸ್ಕೂಟರ್‌ನ್ನು ಮೇಲೆತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಸರ್ದಾರ್ ಬಜಾರ್‌ನಲ್ಲಿ ಈ ವಿಡಿಯೋ ಸೆರೆ ಆಗಿದ್ದು, ನೋಡುಗರಲ್ಲಿ ನಗೆಯುಕ್ಕಿಸುತ್ತಿದೆ. ಸರ್ದರ್ ಬಜಾರ್‌ನ ಅಂಜುಮನ್ ಸಂಕೀರ್ಣದ ಬಳಿ ನೋ ಪಾರ್ಕಿಂಗ್ ಸ್ಥಳದಲ್ಲಿದ್ದ ವಾಹನಗಳನ್ನು ಟ್ರಾಫಿಕ್ ಪೊಲೀಸರು ಹಾಗೂ ಟೋಯಿಂಗ್ ಸಿಬ್ಬಂದಿ ಟೋಯಿಂಗ್ ಟ್ರಕ್ ಮೂಲಕ ತೆರವು ಮಾಡಲು ಮುಂದಾಗಿದ್ದಾರೆ. ಎರಡು ಮೂರು ದ್ವಿಚಕ್ರವಾಹನಗಳನ್ನು ಈಗಾಗಲೇ ಟ್ರಕ್‌ಗೆ ಲೋಡ್ ಮಾಡಿದ್ದ ಸಿಬ್ಬಂದಿ ಮತ್ತೊಂದು ವಾಹನವನ್ನು ಲೋಡ್ ಮಾಡಲು ಮುಂದಾಗಿ ಅದಕ್ಕೆ ಕೇಬಲ್‌ನ್ನು ಕಟ್ಟಿದ್ದಾರೆ. ಅಷ್ಟರಲ್ಲಿ ಅದರ ಮಾಲೀಕ ವಿಷಯ ತಿಳಿದು ಎದ್ನೋ ಬಿದ್ನೋ ಅಂತ ಅಲ್ಲಿಗೆ ಓಡಿ ಬಂದಿದ್ದು, ಸ್ಕೂಟರ್‌ನ್ನು ಟೋ ಮಾಡದಂತೆ ಕೇಳಿದ್ದಾನೆ. ಆದರೆ ಅಧಿಕಾರಿಗಳು ಈತನ ಮಾತಿಗೆ ತಲೆಕೆಡಿಸಿಕೊಂಡಿಲ್ಲ. ಇದರಿಂದ ಆತ ಕೂಡಲೇ ತನ್ನ ಸ್ಕೂಟರ್ ಮೇಲೆ ಕುಳಿತಿದ್ದಾನೆ. ಈತನ ಸಮೇತ ಟೋಯಿಂಗ್ ಸಿಬ್ಬಂದಿ ಸ್ಕೂಟರ್‌ನ್ನು ಮೇಲೆತ್ತಿದ್ದಾರೆ. ಈ ಘಟನೆಯನ್ನು ಯಾರೋ ನೋಡುಗರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.
ಸ್ಕೂಟರ್ ಸವಾರನ್ನು ಈ ವೇಳೆ ಏನು ಭಯಗೊಳ್ಳದೇ ಆರಾಮವಾಗಿ ಸ್ಕೂಟರ್‌ನಲ್ಲಿ ಕುಳಿತು ಗಾಳಿಯಲ್ಲಿ ತೇಲಾಡಿದ್ದಾನೆ. ಹಮ್ ನಾಗ್‌ಪುರ್‌ಕರ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಜುಲೈನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 83 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ನೆಟ್ಟಿಗರು ಈ ವಿಡಿಯೋಗೆ ಸ್ವಾರಸ್ಯಕರವಾಗಿ ಕಾಮೆಂಟ್ ಮಾಡಿದ್ದಾರೆ. ಆತ ತನ್ನ ಪ್ರಾಣಕ್ಕಿಂತ ಹೆಚ್ಚು ತನ್ನ ಸ್ಕೂಟರ್‌ನ್ನು ಇಷ್ಟಪಡುತ್ತಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರಿನ ಈ ಪಾರ್ಕ್‌ನಲ್ಲಿ ವಾಕಿಂಗ್ ರನ್ನಿಂಗ್ ಜಾಗಿಂಗ್ ಮಾಡಂಗಿಲ್ಲ: BBMP ಬೋರ್ಡ್ ವೈರಲ್
ಮತ್ತೆ ಕೆಲವರು ಆ ವ್ಯಕ್ತಿ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದು, ಮೊದಲಿಗೆ ಸ್ಥಳೀಯಾಡಳಿತ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಮಾಡಿರುವುದಿಲ್ಲ. ಮತ್ತೊಂದೆಡೆ ರಸ್ತೆಯ ಸುತ್ತಲ ಪ್ರದೇಶಗಳು ಒತ್ತುವರಿಯಾಗಿರುತ್ತವೆ. ಹೀಗಿರುವಾಗ ಕಾರುಗಳನ್ನು ಎಲ್ಲಿ ಪಾರ್ಕ್ ಮಾಡಬೇಕು. ರಸ್ತೆಯಲ್ಲಿ ಪಾರ್ಕ್ ಮಾಡಲು ಅವಕಾಶವಿಲ್ಲದಿದ್ದರೆ ಆರ್‌ಟಿಒ ತೆರಿಗೆ ತೆಗೆದುಕೊಳ್ಳಬಾರದು ಎಂದು ಕಾಮೆಂಟ್ ಮಾಡಿದ್ದಾರೆ.
ನೋ ಪಾರ್ಕಿಂಗ್‌ನಲ್ಲಿ ವಾಹನ ನಿಂತ ಚಿತ್ರ ಕಳಿಸಿದರೆ ಸಿಗುತ್ತೆ ಬಹುಮಾನ!