ನರಗುಂದ(ಫೆ.22): ಮಹದಾಯಿ ಹೋರಾಟಗಾರರು ನಿರಂತರ ಹೋರಾಟ ಮಾಡಿದರೂ ಸರ್ಕಾರಗಳು ಯೋಜನೆ ಜಾರಿ ಮಾಡದ್ದಕ್ಕೆ ನಾವು ದಯಾಮರಣ ಅರ್ಜಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದು, ಆದರೆ ಸದ್ಯ, ಸುಪ್ರೀಂ ಕೋರ್ಟ್ ನೀರು ಬಳಕೆಗೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದರಿಂದ ನಾವು ದಯಾಮರಣದ ಅರ್ಜಿಯನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳು ಹೇಳಿದ್ದಾರೆ. 

ಶುಕ್ರವಾರ 1681 ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ಬಂಡಾಯದ ನೆಲದಲ್ಲಿ ಮಲಪ್ರಭೆ ಅಚ್ಚುಕಟ್ಟು ಪ್ರದೇಶ ರೈತರು ಕಳೆದ ಐದು ವರ್ಷದಿಂದ ನಿರಂತರ ಹೋರಾಟ ಮಾಡುವ ಸಂದರ್ಭದಲ್ಲಿ ಮಹದಾಯಿ ಹೋರಾಟಗಾರರ ಮೇಲೆ ರಾಜಕೀಯ ಪಕ್ಷದ ನಾಯಕರು ಹಲ್ಲೆ ಮಾಡಿದ್ದಾರೆ. ಮೇಲಾಗಿ ಈ ಹೋರಾಟಗಾರರಲ್ಲಿ ಒಡಕು ಮೂಡಿಸಿ ರೈತರಲ್ಲಿ ಸಂಘರ್ಷ ಮಾಡಲು ಪ್ರಯತ್ನ ಮಾಡಿದರೂ ನಾವು ಯಾವುದಕ್ಕೂ ಬಗ್ಗಿರಲಿಲ್ಲ. ಎಲ್ಲ ರೀತಿಯ ಹೋರಾಟ ನಡೆಸಿದರೂ ಆಡಳಿತ ಪಕ್ಷಗಳು ಕಣ್ಣು ತೆರೆಯದೇ ಇದ್ದುದರಿಂದ ನಾವು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದೆವು. ಇದೀಗ ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರ ನಮ್ಮ ಪಾಲಿನ ನೀರು ಬಳಕೆ ಕುರಿತು ನೊಟಿಫಿಕೇಶನ್ ಹೊರಡಿಸುವಂತೆ ಆದೇಶ ನೀಡಿದ್ದು ಈ ಭಾಗದ ರೈತರಿಗೆ ದೊಡ್ಡ ಶಕ್ತಿ ಬಂದಂತಾಗಿದೆ ಎಂದರು. 

ಮಹದಾಯಿ ವಿವಾದ: ಕರ್ನಾಟಕ ಬಯಸಿದ್ದು ಅದೇ, ಸುಪ್ರೀಂ ಹೇಳಿದ್ದು ಅದನ್ನೇ..!

ಸರ್ವೋಚ್ಛ ನ್ಯಾಯಾಲಯ ನೀರು ಬಳಕೆ ಮಾಡುವ ಕುರಿತು ಕರ್ನಾಟಕಕ್ಕೆ ಯಾವ ರೀತಿಯ ಸಲಹೆ ನೀಡಿದೆ ಎಂಬುದನ್ನು ಮುಂದಿನ ಎರಡ್ಮೂರು ದಿನಗಳಲ್ಲಿ ವಕೀಲರ ಮೂಲಕ ತಿಳಿದುಕೊಳ್ಳುತ್ತೇವೆ. ಆ ನಂತರ ನಾವು ಸುಪ್ರೀಂ ಕೋರ್ಟ್‌ನಲ್ಲಿ ಹಾಕಿರುವ ಪಿಐಎಲ್ ಹಿಂದಕ್ಕೆ ಪಡೆಯಲು ಚಿಂತನೆ ಮಾಡುತ್ತೇವೆ ಎಂದರು. ನಾವು ನಿರಂತರ ಹೋರಾಟ ಮಾಡಿ 11 ಮಹದಾಯಿ ಹೋರಾಟಗಾರರನ್ನು ಕಳೆದುಕೊಂಡರೂ ಸಹ ಸರ್ಕಾರ ಯೋಜನೆ ಜಾರಿಗೆ ಮುಂದಾಗದ್ದಿಕ್ಕೆ ಬೇಸತ್ತು 250 ಮಹದಾಯಿ ಹೋರಾಟಗಾರರು ದೆಹಲಿಗೆ ಹೋಗಿ ರಾಷ್ಟ್ರಪತಿಗಳ ಭವನದ ಮುಂದೆ ಧರಣಿ ನಡೆಸಿ, ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದೆವು. ಮದಹಾಯಿ ನೀರು ಕೊಡಿ ಇಲ್ಲವಾದರೆ ದಯಾಮರಣ ನೀಡಬೇಕೆಂದು ಮನವಿ ನೀಡಿ ಬಂದಿದ್ದೇವೆ. ಸದ್ಯ ಕೋರ್ಟ್‌ನಿಂದ ನಮಗೆ ನ್ಯಾಯ ಸಿಕ್ಕಿದ್ದರಿಂದ ದಯಾ ಮರಣ ಅರ್ಜಿ ವಾಪಸ್ ಪಡೆದು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆ ಕರೆದು ಚರ್ಚೆ ಮಾಡಿ ಮುಂದಿನ ಹೋರಾಟದ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.

ಈಶಣ್ಣ ಗುಡಿಸಾಗರ, ಎ.ಪಿ. ಪಾಟೀಲ, ವೀರಬಸಪ್ಪ ಹೂಗಾರ, ಎಸ್.ಬಿ. ಜೋಗಣ್ಣವರ, ರಾಘವೇಂದ್ರ ಗುಜಮಾಗಡಿ, ಆನಂದ ತೊಂಡಿಹಾಳ, ಬಿ.ಎಸ್. ಉಪ್ಪಾರ, ಮುತ್ತಣ್ಣ ಕುರಿ, ರಮೇಶ ನಾಯ್ಕರ, ಗುರು ರಾಯನಗೌಡ್ರ, ಹನುಮಂತ ಸರನಾಯ್ಕರ, ಸುಭಾಷ ಗಿರಿಯಣ್ಣವರ, ಅರ್ಜುನ ಮಾನೆ, ವೆಂಕಪ್ಪ ಹುಜರತ್ತ, ಶಿವಪ್ಪ ಸಾತಣ್ಣವರ, ಮಾರುಡಿ ಬಡಿಗೇರ, ಎಲ್.ಬಿ. ಮನನೆಕೊಪ್ಪ, ಪಂಚಪ್ಪ ಹಣಸಿ, ಯಲ್ಲಪ್ಪ ಗುಡದೇರಿ, ಜಗನ್ನಾಥ ಮುಂದೋಳೆ, ಈರಣ್ಣ ಗಡಗಿ, ಕಾಶವ್ವ ಉಳ್ಳಾಗಡ್ಡಿ, ಆನಂದಮ್ಮ ಹಿರೇಮಠ, ಹೇಮಕ್ಕ ಗಾಳಿ, ನಾಗರತ್ನ ಸವಳಭಾವಿ, ಅನಸವ್ವ ಶಿಂದೆ, ಸೋಮಲಿಂಗಪ್ಪ ಆಯಿಟ್ಟಿ, ಯಲ್ಲಪ್ಪ ಚಲವಣ್ಣವರ, ಅಣ್ಣಪ್ಪಗೌಡ ದೇಸಾಯಿ, ಎಂ. ಕೆ.ಹಿರೇಮಠ, ಬಸನಗೌಡ ಪಾಟೀಲ ಇದ್ದರು.