Asianet Suvarna News Asianet Suvarna News

ವೀರೇಂದ್ರ ಹೆಗ್ಗಡೆ ಮಾತನಾಡುವ ದೇವರು: ಸಚಿವ ಸುಧಾಕರ್

*   ಬಡವರ ಪಾಲಿನ ಕಲ್ಪವೃಕ್ಷವಾಗಿ ಸೇವೆ ಸಲ್ಲಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ 
*   ವಿಶ್ವಕ್ಕೇ ಆದರ್ಶ ವ್ಯಕ್ತಿ
*  ಇಷ್ಟು ವಹಿವಾಟು ನಡೆದರೂ 2.19 ಕೋಟಿ ರೂಪಾಯಿ ಮಾತ್ರ ಸುಸ್ತಿಯಾಗಿರುವುದು ಮಹಿಳೆಯರ ಬದ್ಧತೆಗೆ ಸಾಕ್ಷಿ

Veerendra Heggade is a Talking God Says Minister Dr K Sudhakar grg
Author
Bengaluru, First Published Jul 9, 2022, 12:00 AM IST

ವರದಿ- ರವಿಕುಮಾರ್ ವಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ(ಜು.09):  ರಾಜ್ಯದಲ್ಲಿ ಅಕ್ಷರ, ಅನ್ನ, ಆರೋಗ್ಯ ದಾಸೋಹದ ಜೊತೆಗೆ ಕೆರೆ ಹೂಳೆತ್ತುವ ಕಾರ್ಯಕ್ರಮಗಳು, ಪರಿಸರ ರಕ್ಷಣೆ ಸೇರಿದಂತೆ ಎಲ್ಲ ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ವೀರೇಂದ್ರ ಹೆಗ್ಗಡೆ ಅವರು ಮಾತನಾಡುವ ದೇವರಾಗಿ ಪ್ರಸಿದ್ಧಿ ಪಡೆದಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಶ್ಲಾಘಿಸಿದರು.

ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಮಾತನಾಡಿದ ಅವರು, ನಾಡಿನ ಲಕ್ಷಾಂತರ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಸಹಕಾರಿಯಾಗಿದ್ದು, ಬಡವರ ಪಾಲಿನ ಕಲ್ಪವೃಕ್ಷವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಬಣ್ಣಿಸಿದರು.

ವಿಶ್ವಕ್ಕೇ ಆದರ್ಶ ವ್ಯಕ್ತಿ

ಮಾತನಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ವಿರೇಂದ್ರ ಹೆಗ್ಗಡೆ ಅವರು ನಾಡು, ದೇಶಕ್ಕೆ ಮಾತ್ರವಲ್ಲದೆ, ವಿಶ್ವಕ್ಕೇ ಆದರ್ಶ ಪ್ರಾಯವಾದ ವ್ಯಕ್ತಿತ್ವ ಹೊಂದಿದ್ದಾರೆ. ಅವರ ಪ್ರತಿ ಕಾರ್ಯದಲ್ಲಿ ಅಂತಃಕರಣ ಹೊಂದಿದ್ದು, ಮಹಿಳೆಯರಿಗೆ ಆರ್ಥಿಕೆ ಚೈತನ್ಯ ತುಂಬುವ ಮಹತ್ತರ ಕೆಲಸಗಳನ್ನು ಮಾಡುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.

ಧರ್ಮಸ್ಥಳದಲ್ಲಿ ಇತ್ತೀಚಿಗೆ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬಕ್ಕೆ ವಿಶೇಷ ಗೌರವ ಸೂಚಿಸುವ ಮೂಲಕ ತಮ್ಮ ಆತಿಥ್ಯವನ್ನು ನೀಡಿರುವುದು ನನ್ನ ಪೂರ್ವಜನ್ಮದ ಸುಕೃತ ಎಂದು ಸ್ಮರಿಸಿದ ಸಚಿವರು, ಕಳೆದ 60 ವರ್ಷದಿಂದ ನಿರಂತರವಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಅವರ ಜನಪರ ಕಾಳಜಿಗೆ ನಿದರ್ಶನವಾಗಿದೆ ಎಂದರು.

ಚಿಕ್ಕಬಳ್ಳಾಪುರಕ್ಕೂ ಎಂಟ್ರಿ ಕೊಟ್ಟ ಅರಬ್ ಖರ್ಜೂರ: ಬಂಪರ್ ಬೆಳೆ ಬೆಳೆದು ಸೈ ಎನಿಸಿಕೊಂಡ ರೈತ

ಹೆಗ್ಗಡೆ ಅವರ ಸೇವೆ ನಿರಂತರವಾಗಿದ್ದು, ಅದನ್ನು ನೋಡಲು ಮತ್ತು ಗುರ್ತಿಸಲು ಹೃದಯ ಬೇಕು. ಅಂತಹ ಹೃದಯ ಹೊಂದಿರುವ ಕಾಯಕ ಯೋಗಿ ಪ್ರಧಾನಿ ನರೇಂದ್ರ ಮೋದಿಜೀ ಅವರು, ಹೆಗ್ಗಡೆ ಅವರಂತಹ ಮಹನೀಯರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ಆ ಸ್ಥಾನದ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.

ಸ್ಥಾನಕ್ಕೆ ಗೌರವ ಸಿಕ್ಕಂತಾಗಿದೆ

ಪ್ರತಿಯೊಬ್ಬರೂ ಅಧಿಕಾರ ದೊರೆತ ಕಾರಣಕ್ಕೆ ಗೌರವಕ್ಕೆ ಪಾತ್ರರಾಗಬಹುದು. ಆದರೆ ಹೆಗ್ಗಡೆ ಅಂತಹವರು ರಾಜ್ಯಸಭೆಯಲ್ಲಿ ಕುಳಿತರೆ ಆ ಸ್ಥಾನಕ್ಕೆ ಗೌರವ ಸಿಗಲಿದೆ. ಬುದ್ಧಿವಂತರ ಚಾವಡಿಯಲ್ಲಿ ಸ್ಥಾನ ಕಲ್ಪಿಸುವ ಮೂಲಕ ಜನೋಪಕಾರಿ ಕಾರ್ಯಕ್ರಮಗಳನ್ನು ಗುರ್ತಿಸಿರುವ ಪ್ರಧಾನಿ ಮೋದಿ ಜೀ ಅವರು ಮತ್ತು ರಾಜ್ಯ ಸಭಾ ಸ್ಥಾನಕ್ಕೆ ಗೌರವ ತಂದುಕೊಡುವ ಹೆಗ್ಗಡೆ ಅವರು ಸೇರಿ ಉಭಯರೂ ಅಭಿನಂದನಾರ್ಹರು ಎಂದರು. 

ಅಬಲೆಯರನ್ನು ಸಬಲೆಯರನ್ನಾಗಿ ಮಾಡುವ ಕಾರ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ನಿಂದ ನಡೆಯುತ್ತಿದೆ. ಲಕ್ಷಾಂತರ ಮಹಿಳೆಯರು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಟ್ರಸ್ಟ್ ಕಾರಣವಾಗಿದೆ. 1985 ರಿಂದ ಈವರೆಗೆ 85 ಸಾವಿರ ಕೋಟಿ ರೂಪಾಯಿ ವಹಿವಾಟು ಟ್ರಸ್ಟ್ ನಿಂದ ನಡೆದಿದೆ. ಈಗ 16.5 ಸಾವಿರ ಕೋಟಿ ಸಾಲ ಮಹಿಳೆಯರ ಮೇಲಿದೆ. ಇಷ್ಟು ವಹಿವಾಟು ನಡೆದರೂ 2.19 ಕೋಟಿ ರೂಪಾಯಿ ಮಾತ್ರ ಸುಸ್ತಿಯಾಗಿರುವುದು ಮಹಿಳೆಯರ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಕಾಂಗ್ರೆಸ್‌ ಹಿರಿಯ ನಾಯಕರಿಬ್ಬರ ಕಚ್ಚಾಟ ಈಗ ಹೈಕಮಾಂಡ್ ಅಂಗಳಕ್ಕೆ..!

ಹೆಣ್ಣು ಕಲಿತರೆ ಶಾಲೆ ತೆರೆದಂತೆ, ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರತಿ ಕ್ಷೇತ್ರದಲ್ಲಿಯೂ ಶ್ರೀಗಳು ವಿಶೇಷ ಯೋಜನೆ ರೂಪಿಸಿದ್ದಾರೆ. ಜಿಲ್ಲೆಯಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಸದಸ್ಯರು ಟ್ರಸ್ಟ್ ನಲ್ಲಿದ್ದಾರೆ. ಶಿಡ್ಲಘಟ್ಟ ತಾಲೂಕಿನಲ್ಲಿ ಸುಮಾರು 3.300 ಸಂಘಗಳಿವೆ. 50 ಸಾವಿರ ಕುಟುಂಬಗಳಿಗೆ ಆರ್ಥಿಕ ಚೈತನ್ಯ ನೀಡುವ ಕಾರ್ಯಕ್ರಮ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗುರುಗಳ ಜೊತೆ ಇದ್ದು, ಸಹಕಾರ ನೀಡುವ ಭರವಸೆಯನ್ನು ಸಚಿವರು ನೀಡಿದರು.

ಕಾರ್ಯಕ್ರಮದಲ್ಲಿ ವೀರೇಂದ್ರ ಹೆಗಡೆ, ಶ್ರದ್ಧಾ ಹೆಗ್ಗಡೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್, ಶಾಸಕ ವಿ. ಮುನಿಯಪ್ಪ, ಲೋಕಸಭಾ ಸದಸ್ಯ ಮುನಿಸ್ವಾಮಿ, ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಮಾಜಿ ಶಾಸಕರಾದ ಪಿಳ್ಳ ಮುನಿಸ್ವಾಮಪ್ಪ, ರಾಜಣ್ಣ, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್ ಸೇರಿದಂತೆ ಇತರರು ಇದ್ದರು.
 

Follow Us:
Download App:
  • android
  • ios