ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ 79ನೇ ಜನ್ಮದಿನದಂದು ‘ವಂದೇ ಭಾರತಂ’ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಬ್ದುಲ್ ಕಲಾಂ ಬಳಸಿದ ನ್ಯಾನೋ ಕಾರು ಮತ್ತು ಬಗ್ಗಿ ಕಾರನ್ನು ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಲಾಯಿತು.

ದಕ್ಷಿಣ ಕನ್ನಡ (ನ.26): ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ 79ನೇ ಜನ್ಮದಿನಾಚರಣೆ ನೆನಪಿಗಾಗಿ ಶನಿವಾರ ‘ವಂದೇ ಭಾರತಂ’ ಪರಿಕಲ್ಪನೆಯಲ್ಲಿ ವೀರವನಿತೆಯರ ಸಂಕ್ಷಿಪ್ತ ಮಾಹಿತಿಯನ್ನೊಳಗೊಂಡ ಸಚಿತ್ರ ಅಂಚೆ ಚೀಟಿಗಳನ್ನು ಹೆಗ್ಗಡೆಯವರ ನಿವಾಸ ಬಿಡಿನಲ್ಲಿ ಸರಳ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಿಲಾಯಿತು.

ಮೂಡುಬಿದಿರೆ ಎಕ್ಸಲೆಂಟ್‌ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ದಾನಚಿಂತಾಮಣಿ ಅತ್ತಿಮಬ್ಬೆ, ರಣಭೈರವಿ ಅಕ್ಕಾದೇವಿ, ಕಾಳಲಾದೇವಿ, ಕಂತಿ, ಚೌಟರರಾಣಿ ಅಬ್ಬಕ್ಕ ದೇವಿ, ನಾಟ್ಯರಾಣಿ ಶಾಂತಲಾದೇವಿ, ಚಂದನಬಾಲೆ. ವಂದೇ ಮಾತರಂ ಗೀತೆಯ ೧೫೦ ವಷ೯ಗಳ ಸ್ಮರಣಾಥ೯ ಹಾಗೂ 2026 ರ ಜಿನಸಮ್ಮಿಲನ ನಡೆಯುವ ಸಮ್ಮೇದಶಿಖರ್ಜಿಯ ವಿಷಯಗಳನ್ನೊಳಗೊಂಡ ಅಂಚೆಪತ್ರಗಳೂ ಸೇರಿದಂತೆ ಒಟ್ಟು ಹತ್ತು ಅಂಚೆಪತ್ರಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಡಾ.ಹೆಗ್ಗಡೆ ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿದರು. ಅಂಚೆ ಇಲಾಖೆಯ ನಿರ್ದೇಶಕ ಶ್ರೀಹರ್ಷ ಎನ್‌. ಮತ್ತು ಪುತ್ತೂರು ಅಂಚೆ ವಿಭಾಗದ ಅಧೀಕ್ಷಕ ರವೀಂದ್ರ ನಾಯ್ಕ ಇದ್ದರು.ಹುಬ್ಬಳ್ಳಿಯ ಮಹಾವೀರ ಕುಂದೂರ, ಎಕ್ಸಲೆಂಟ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್‌, ನಾರಾವಿ, ಕಾರ್ಯದರ್ಶಿ ರಶ್ಮಿತಾ ಜೈನ್‌ ಮತ್ತು ಆಡಳಿತ ನಿರ್ದೇಶಕ ಬಿ.ಪಿ. ಸಂಪತ್‌ಕುಮಾರ್‌ ಇದ್ದರು.

ಕಲಾಂ ಬಳಸಿದ ಕಾರು ಕೊಡುಗೆ:

ರಾಮೇಶ್ವರಂ ನಲ್ಲಿರುವ ಡಾ.ಎ.ಪಿ.ಜೆ., ಅಬ್ದುಲ್‌ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಧರ್ಮಸ್ಥಳದ ಮಂಜೂಷಾ ವಾಹನಗಳ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲು ಅಬ್ದುಲ್‌ಕಲಾಂ ಬಳಸಿದ ಟಾಟಾ ನಾನೋ ಕಾರು ಮತ್ತು ಅದರ ದಾಖಲೆ ಪತ್ರಗಳನ್ನು ಹೆಗ್ಗಡೆಯವರಿಗೆ ಅರ್ಪಿಸಲಾಯಿತು. ಡಾ.ಕಲಾಂ ಸ್ಮರಣಾರ್ಥ ನೀಡಿದ ಎರಡು ಅಮೂಲ್ಯ ವಸ್ತುಗಳಾದ ಟಾಟಾ ನ್ಯಾನೋ ಕಾರು ಮತ್ತು ಅಪೂರ್ವ ಪೆನ್ನಿನ ಬಗ್ಗೆ ಹೆಗ್ಗಡೆ ಕೃತಜ್ಞತೆ ವ್ಯಕ್ತಪಡಿಸಿದರು.

ಡಾ. ಎ.ಪಿ.ಜೆ., ಅಬ್ದುಲ್‌ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ಎ.ಪಿ.ಜೆ.ಎಂ.. ನಝೀಮಾ ಮರೈಕಾಯಲ್‌, ಕಾರ್ಯದರ್ಶಿ ಎ.ಪಿ.ಜೆ.ಎಂ.. ಜೈನೀಲಾಭಿ ಡೀಮ್‌ ಮತ್ತು ಸಹಸಂಸ್ಥಾಪಕ ಎ.ಪಿ.ಜೆ.ಎಂ.. ಶೇಖ್‌ಸಲೀಂ ಪ್ರತಿಷ್ಠಾನದ ಪರವಾಗಿ ಟಾಟಾನಾನೋ ಕಾರು ಮತ್ತು ಪೆನ್‌ ಅನ್ನು ಹೆಗ್ಗಡೆಯವರಿಗೆ ಅರ್ಪಿಸಿದರು.

ಬಗ್ಗಿ ಕಾರು ಕೊಡುಗೆ: 

ಧರ್ಮಸ್ಥಳದ ಭಕ್ತ, ಹಿರಿಯ ಉದ್ಯಮಿ ಬಸವರಾಜ್‌ ಆರ್‌. ಹತ್ತು ಸೀಟುಗಳನ್ನು ಹೊಂದಿರುವ ಬಗ್ಗಿ (ಇ.ವಿ.) ಕಾರನ್ನು ಕ್ಷೇತ್ರಕ್ಕೆ ಅರ್ಪಿಸಿದರು. ಇದನ್ನು ವಿಶೇಷಚೇತನರಿಗೆ ವಸತಿಗೃಹಕ್ಕೆ ಹೋಗಲು ಉಚಿತ ಸೇವೆಗಾಗಿ ಬಳಸಲಾಗುವುದು ಎಂದು ಹೆಗ್ಗಡೆ ತಿಳಿಸಿದರು.

ಸರಳ ಆಚರಣೆ: 

ಬುಧವಾರ ಡಾ.ಹೆಗ್ಗಡೆ ಜನ್ಮದಿನ ಸರಳವಾಗಿ ಸಡಗರದಿಂದ ಆಚರಿಸಲಾಯಿತು. ಜನ್ಮದಿನಾಚರಣೆ ಅಂಗವಾಗಿ ದೇವಸ್ಥಾನ, ಬೀಡು, ವಸತಿಛತ್ರಗಳು ಹಾಗೂ ಎಲ್ಲಾ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನ, ಬಸದಿಗಳಲ್ಲಿ ವಿಶೇಷ ಪೂಜೆಗಳು ನಡೆದವು. ದೇವಳ ನೌಕರರು, ಊರಿನ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಗ್ಗಡೆಯವರಿಗೆ ಫಲ-ಪುಷ್ಪಗಳ ಹಾರದೊಂದಿಗೆ ಗೌರವಾರ್ಪಣೆ ಮಾಡಿದರು.

ಪೆರಿಂಜೆ ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎ. ಜೀವಂಧರ ಕುಮಾರ್ ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಡಾ. ಪ್ರಭಾಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕೆ. ಅಭಯಚಂದ್ರ ಜೈನ್, ಸುದರ್ಶನ ಜೈನ್ ಬಂಟ್ವಾಳ, ಮೂಡಬಿದ್ರೆ ನೋಟರಿ ಶ್ವೇತಾ ಜೈನ್, ಉದ್ಯಮಿ ಪ್ರಭಾತ್ ಮೂಡುಬಿದಿರೆ, ಮಾಳ ಹರ್ಷೇಂದ್ರ ಜೈನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಮೊದಲಾದವರು ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯ ಅರ್ಪಿಸಿದರು.

ರಾಷ್ಟ್ರಪತಿ, ಪ್ರಧಾನಮಂತ್ರಿಗಳಿಂದ ಶುಭಾಶಯ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಡಾ.ಡಿ.ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನದ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕ ಶುಭಾಶಯ ಪತ್ರಗಳ ಮೂಲಕ ಹೆಗ್ಗಡೆಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.