ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ಧ ಎಐ ಬಳಸಿ ಸೃಷ್ಟಿಸಲಾದ ಮಾನಹಾನಿಕರ ವಿಷಯವನ್ನು ಒಂದು ವಾರದಲ್ಲಿ ತೆಗೆದುಹಾಕಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಆಕ್ಷೇಪಾರ್ಹ ವಿಷಯ ನ್ಯಾಯಾಲಯ ಆದೇಶಿಸಿದೆ.

ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಹೈಕೋರ್ಟ್‌

ಬೆಂಗಳೂರು (ಮೇ.15): ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ವಿರುದ್ಧ ಕೃತಕ ಬುದ್ದಿಮತ್ತೆ (ಎಐ) ಬಳಕೆ ಮಾಡಿ ಮಾನಹಾನಿ ಉಂಟು ಮಾಡುವ ಫೋಟೋ, ವಿಡಿಯೋ ಮತ್ತು ಕಂಟೆಂಟ್‌ ಅನ್ನು ಸಾಮಾಜಿಕ ಜಾಲತಾಣಗಳಿಂದ ಒಂದು ವಾರದಲ್ಲಿ ತೆಗೆಯಲು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನಿರ್ದೇಶಕ ಶೀನಪ್ಪ, ನಂದೀಶ್‌ ಕುಮಾರ್‌ ಜೈನ್‌, ವೀರೇಂದ್ರ ಹೆಗ್ಗಡೆ ಸಹೋದರ ಪುತ್ರ ಡಿ.ನಿಶ್ಚಲ್‌ ಮತ್ತು ಪಿ.ಸುನೀಲ್‌ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಅವರ‌ ಏಕಸದಸ್ಯ ಪೀಠ ಸರ್ಕಾರಕ್ಕೆ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.

ಒಂದು ವಾರದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರೀಯ ವಿಭಾಗದ ಸಿಇಎನ್ ಪೊಲೀಸರು, ಎಲ್ಲಾ ಆಕ್ಷೇಪಾರ್ಹವಾದ ಫೋಟೋ, ವಿಡಿಯೋ ಮತ್ತು ಕಂಟೆಂಟ್‌ ಅನ್ನು ಕಾನೂನು ಅನ್ವಯ ತೆರವುಗೊಳಿಸಲು ಸಾಮಾಜಿಕ ಮಾಧ್ಯಮಗಳಾದ ಗೂಗಲ್‌, ಮೆಟಾ, ವಾಟ್ಸಾಪ್‌ ಮತ್ತು ಇನ್‌ಸ್ಟಾಗ್ರಾಂಗೆ ನಿರ್ದೇಶಿಸಬೇಕು ಎಂದು ಪೀಠ ಆದೇಶದಲ್ಲಿ ಸೂಚಿಸಿದೆ.

ಪೊಲೀಸರಿಗೆ ನಿರ್ದೇಶನ ನೀಡಿ:

ಅರ್ಜಿದಾರರ ಪರ ವಕೀಲ ಎಸ್‌.‌ರಾಜಶೇಖರ್‌ ಅವರು, ವೀರೇಂದ್ರ ಹೆಗ್ಗಡೆ ಕುಟುಂಬದವರು ಯಾವುದೇ ಕ್ರಿಮಿನಲ್‌ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಅದಾಗ್ಯೂ, ಅವರ ವಿರುದ್ಧ ಮಾನಹಾನಿ ಮತ್ತು ತಿರುಚಿದ ಕಂಟೆಂಟ್‌ ಆನ್‌ಲೈನ್‌ ಮೂಲಕ ನಿರಂತರವಾಗಿ ಹಂಚಿಕೆ ಮಾಡಲಾಗುತ್ತಿದೆ.‌ ಹೆಗ್ಗೆಡೆ ಮತ್ತವರ ಕುಟುಂಬ ತಮ್ಮದಲ್ಲದ ತಪ್ಪಿಗೆ ಮುಜುಗರ ಎದುರಿಸುವಂತಾಗಿದೆ. ಹಾಗಾಗಿ, ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಕೇವಲ ಮಧ್ಯಸ್ಥಿಕೆ ಸಂಸ್ಥೆಗಳಾಗಿವೆ.‌ ಇಂಥ ಕಂಟೆಂಟ್‌ ಹಂಚಿಕೆ ಮಾಡದಂತೆ ನಿರ್ಬಂಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ರಾಜ್ಯ ಸರ್ಕಾರ ಮತ್ತು ಸಿಇಎನ್ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದರು.

ಸರ್ಕಾರದ ಪರ ವಕೀಲರು,‌ ಸೂಕ್ತ ಕಾಲಾವಕಾಶ ನೀಡಿದರೆ ಸಕ್ಷಮ ಪ್ರಾಧಿಕಾರ ಅರ್ಜಿದಾರರ ಮನವಿಯ ಆ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.