ಕೊಪ್ಪಳದ ಕನಕಗಿರಿ ತಾಲೂಕಿನ ವಡಕಿ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದ ಅಪ್ರಕಟಿತ ವೀರಗಲ್ಲೊಂದು ಪತ್ತೆಯಾಗಿದೆ. ಈ ವೀರಗಲ್ಲಿನಲ್ಲಿ ವೀರ ಹಾಗೂ ಆತನ ಪರಿಚಾರಕರ ಚಿತ್ರಣವಿದ್ದು, ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ಈ ಹಿಂದೆಯೂ ಇಲ್ಲಿ ಇಂಥಹುದೇ ಪುರಾತನ ವೀರಗಲ್ಲುಗಳು ಪತ್ತೆಯಾಗಿದ್ದವು.

ಕೊಪ್ಪಳ: ಕನಕಗಿರಿ ತಾಲೂಕಿನ ವಡಕಿ ಗ್ರಾಮದ ಆರಾಧ್ಯದೇವಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಹಿಂಭಾಗದ ಜಮೀನಿನೊಂದರಲ್ಲಿ ಶುಕ್ರವಾರ ವಿಜಯನಗರ ಕಾಲದ ಅಪ್ರಕಟಿತ ವೀರಗಲ್ಲೊಂದು ಪತ್ತೆಯಾಗಿದೆ.

ಕಲ್ಲಿನ ಉಬ್ಬು ಶಿಲೆಯಲ್ಲಿ ವೀರನು ಹಾಗೂ ಆತನ ಇಬ್ಬರ ಪರಿಚಾರಕರನ್ನು ಹೊಂದಿರುವ ವೀರಗಲ್ಲು ಕಂಡುಬಂದಿದ್ದು, ಇದನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೆತ್ತನೆ ಮಾಡಲಾಗಿದೆ. ವೀರನ ಬಲಗೈಯಲ್ಲಿ ಕತ್ತಿ ಹಾಗೂ ಎಡಗೈಯಲ್ಲಿ ಬಾಕುವಿನ ಚಿತ್ರಣವಿದೆ.

ವೀರನ ಅಕ್ಕಪಕ್ಕದಲ್ಲಿನ ಇಬ್ಬರು ಪರಿಚಾರಕರ ಕೈಯಲ್ಲಿ ಛತ್ರಿ, ಚಾಮರ ಹಿಡಿದುಕೊಂಡಿದ್ದಾರೆ. ವೀರನ ಸಾಹಸಕ್ಕೆ ತಕ್ಕಂತೆ ತಲೆಯಲ್ಲಿ ಮುಡಿಗಳು, ಕೈಗಡಗ, ತೋಳ್ಬಂದಿ, ಕಾಲ್ಗಡಗ, ಕೊರಳಲ್ಲಿ ಹಾರ ಹಾಗೂ ಕಿವಿಯ ಒಲೆಗಳಂತಹ ಆಭರಣಗಳ ಜತೆಗೆ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರ ಚಿತ್ರಗಳಿವೆ. ರಾಜಮರ್ಯಾದೆ, ಉನ್ನತ ಅಧಿಕಾರ, ದೈವಿಕ ಗೌರವ ಹಾಗೂ ವೀರ ಹುತಾತ್ಮನ ಸವಿ ನೆನಪಿಗಾಗಿ ಈ ವೀರಗಲ್ಲನ್ನು ಕೆತ್ತಲಾಗಿದೆ.

ಈ ವೀರಗಲ್ಲಿನಲ್ಲಿ ಛತ್ರಿಗಳನ್ನು ಅರಸರಿಗೆ ಮಾತ್ರವಲ್ಲದೆ, ಪ್ರತಿಷ್ಠಿತರಾದ ವೀರರಿಗೂ ಅವರ ಸೇವಕರು ಯುದ್ಧಭೂಮಿಯಲ್ಲಿ ಹಿಡಿಯುತ್ತಿದ್ದರೆಂದು ಈ ವೀರಗಲ್ಲಿನ ಮೂಲಕ ಗುರುತಿಸಬಹುದಾಗಿದೆ. ಹಬ್ಬ ಹರಿದಿನಗಳಲ್ಲಿ ಗ್ರಾಮಸ್ಥರು ಈ ವೀರಗಲ್ಲಿಗೆ ಪೂಜೆ ಸಲ್ಲಿಸುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಸಂಶೋಧಕ ಡಾ. ಯಮನೂರಪ್ಪ ನಾಯಕ ತಿಳಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ವಡಕಿ ಗ್ರಾಮದ ಹಳೇ ಊರಲ್ಲಿ ಪತ್ತೆಯಾಗಿದ್ದ ವೀರಗಲ್ಲು!

12ನೇ ಶತಮಾನದ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ವೀರಗಲ್ಲೊಂದು ತಾಲೂಕಿನ ವಡಕಿ ಗ್ರಾಮದ ಹಳೇ ಊರಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಪತ್ತೆ ಮಾಡಲಾಗಿತ್ತು. ವಡಕಿ ಗ್ರಾಮದ ಹಳೆಯ ಊರಿನ ಪ್ರದೇಶದಲ್ಲಿ ಪುರಾತನ ಕಾಲದ ಅವಶೇಷಗಳಿದ್ದು, ಆಯಾತಾಕಾರದ ಏಕ ಶಿಲಾ ವೀರಗಲ್ಲು ಗ್ರಾಮದ ಲಕ್ಷಪತಿ ಪಾಟೀಲ್ ಅವರಿಗೆ ಸೇರಿದ ಜಮೀನಿನಲ್ಲಿ ಪತ್ತೆಯಾಗಿತ್ತು.

ಮುಳ್ಳುಗಿಡಗಳಲ್ಲಿ ಮುಚ್ಚಿ ಹೋಗಿದ್ದರಿಂದ ಈ ವೀರಗಲ್ಲನ್ನು ಯಾರೂ ಗುರುತಿಸಿರಲಿಲ್ಲ. ತೀವ್ರ ಬರಗಾಲ ಹಿನ್ನಲೆಯಲ್ಲಿ ಕುರಿಗಾಹಿಗಳು ಕುರಿಗಳೊಂದಿಗೆ ಈ ಮುಳ್ಳಿನ ಕಂಠಿಯಲ್ಲಿ ತಪ್ಪಲು ಕೊಯ್ಯುವಾಗ ವೀರಗಲ್ಲುನ್ನು ನೋಡಿದ್ದರು. ಆಗ ಮಾಹಿತಿ ತಿಳಿದ ಸಂಶೋಧಕ ಡಾ. ಯಮನೂರಪ್ಪ ನಾಯಕ ವಡಕಿ ಸ್ಥಳಕ್ಕೆ ಹೋಗಿದ್ದು, ವೀರಗಲ್ಲನ್ನು ಪತ್ತೆ ಮಾಡಿದ್ದರು. 6.5 ಅಡಿ ಉದ್ದ ಹಾಗೂ 2.5 ಅಡಿ ಅಗಲ ವಿಸ್ತೀರ್ಣ ಹೊಂದಿದೆ. ಆಯತಾಕಾರದ ಏಕಶಿಲಾ ಪಟ್ಟಿಕೆ 10 ಇಂಚು ಎತ್ತರ, ಮಧ್ಯದ ಪಟ್ಟಿಕೆ 13 ಇಂಚು ಎತ್ತರ ಹಾಗೂ ಕೆಳ ಭಾಗದ ಪಟ್ಟಿಕೆ 23 ಇಂಚು ಎತ್ತರವಾಗಿದೆ. ಬಲಭಾಗದ ಕೆಳಗೆ ಅಲ್ಪ ಪ್ರಮಾಣದಲ್ಲಿ ಭಿನ್ನವಾಗಿತ್ತು.

ಈ ವೀರಗಲ್ಲು ಗಮನಿಸಿದಾಗ ಕೆಳಗಿನ ಅಂಕಣದಲ್ಲಿ ವೀರನು ಹಾಗೂ ಇಬ್ಬರು ಶತ್ರುಗಳು ಕುದುರೆ ಸವಾರರೊಂದಿಗೆ ಬಿಲ್ಲು, ಬಾಣಗಳಿಂದ ಯುದ್ಧ ಮಾಡಿದ ಸನ್ನಿವೇಶ ಹಾಗೂ ವೀರನ ಹಿಂದೆ ಇಬ್ಬರು ಅಪ್ಸರೆಯರನ್ನು ಕೆತ್ತಲಾಗಿದೆ. ಮಧ್ಯ ಭಾಗದಲ್ಲಿ ವೀರನು ರಣರಂಗದಲ್ಲಿ ಯುದ್ಧ ಮಾಡಿ ವೀರ ಮರಣ ಅಪ್ಪಿದ ನಂತರ ಅಪ್ಸರೆಯರು ಆತನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಸ್ವರ್ಗಕ್ಕೆ ಕರೆದೊಯ್ಯುವ ದೃಶ್ಯ ಕಾಣಬಹುದು.

ಇನ್ನೂ ಮೇಲ್ಭಾಗದ ಸನ್ನಿವೇಶದಲ್ಲಿ ವೀರನು ತನ್ನ ಇಷ್ಟ ದೈವವಾದ ಶಿವಲಿಂಗ ಮುಂದೆ ಕೈ ಮುಗಿದು ಆರಾಧಿಸುತ್ತಿರುವುದು, ಶಿವನ ಕೈಯಲ್ಲಿ ಢಮರುಗದ ಚಿತ್ರಣವನ್ನು ಕೆತ್ತಲಾಗಿದೆ. ವೀರನ ಚಿತ್ರಣದಲ್ಲಿ ಆತನ ಸಾಹಸಕ್ಕೆ ತಕ್ಕಂತೆ ಕೈಗಡಗ, ತೋಳ್ಬಂದಿ, ಕಾಲ್ಗಡಗ, ಕೋರಳಲ್ಲಿ ಹಾರ, ಹಾಗೂ ಕಿವಿಯ ಓಲೆಗಳಂತಹ ಆಭರಣಗಳ ಜತೆಗೆ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರನ್ನು ಕೆತ್ತಲಾಗಿದೆ. ಇಲ್ಲಿ ಯಾವುದೇ ಪ್ರತ್ಯೇಕವಾಗಿ ಲಿಖಿತ ರೂಪದ ಶಾಸನ ದೊರೆತಿಲ್ಲ. ಆದರೆ ಇನ್ನೂ ಇದೇ ಕಾಲದ ವೀರಗಲ್ಲುಗಳು ದೊರೆಯುವ ಸಾಧ್ಯತೆ ಇದೆ.

ಅತಿಥಿ ಶಿಕ್ಷಕ ಕೆಂಚಪ್ಪ ನಾಯಕ, ಗ್ರಾಮದ ಹಿರಿಯರಾದ ದ್ಯಾಮಣ್ಣ ಬೈರಾಪುರ, ದುರುಗೇಶ, ಲಕ್ಷ್ಮೀಕಾಂತ ನಡದಾಳ ಅವರು ವೀರಗಲ್ಲು ಸಂಶೋಧನೆಗೆ ಸಹಕರಿಸಿದ್ದಾರೆ.

ವಿಜಯನಗರ ಸಾಮ್ರಾಜ್ಯದ್ದು!

ಆಯತಾಕಾರದಲ್ಲಿರುವ ಈ ವೀರಗಲ್ಲನ್ನು ಕಪ್ಪುಶಿಲೆಯಲ್ಲಿ ಕೆತ್ತನೆ ಮಾಡಲಾಗಿದೆ. ಶಿಲೆ ಮತ್ತು ಕೆತ್ತನೆಯ ರೂಪವನ್ನು ಗಮನಿಸಿದಾಗ ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ.12ನೇ ಶತಮಾನದ ಹಿಂದೆ ಈ ಪ್ರದೇಶದಲ್ಲಿ ಜನ ವಾಸಿಸುತ್ತಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿ ಮಡಿಕೆ ಚೂರುಗಳಿವೆ ಎಂದು ಸಂಶೋಧಕ ಡಾ. ಯಮನೂರಪ್ಪ ನಾಯಕ ಹೇಳಿದರು.