ನಂಜನಗೂಡು[ಸೆ.30]: ವರುಣ ವಿಧಾನಸಭಾ ಕ್ಷೇತ್ರದ ಜನತೆರ ದೊಡ್ಡ ಋಣ ನನ್ನ ಮೇಲೆ ಸಾಕಷ್ಟಿದೆ. ನನ್ನನ್ನು ಮುಖ್ಯಮಂತ್ರಿ ಮಾಡಿದ ಅದೃಷ್ಟದ ಕ್ಷೇತ್ರ ನಾನು ಇಲ್ಲಿಂದಲೇ ಸ್ಪರ್ಧೆ ಮಾಡಬೇಕಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದರು.

ತಾಲೂಕಿನ ಎಸ್. ಹೊಸಕೋಟೆಯಲ್ಲಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ವರುಣ ಕ್ಷೇತ್ರದ ಲಾನುಭವಿಗಳಿಗೆ ಸಾಲ ಸೌಲಭ್ಯ ಗಳ ಸವಲತ್ತು ವಿತರಣೆ ಮಾಡಿ ಅವರು ಮಾತನಾಡಿದರು.

ವರುಣ ಕ್ಷೇತ್ರ ನನ್ನನ್ನು ಮೊದಲನೇ ಬಾರಿಗೆ ಶಾಸಕಾಂಗ ಪಕ್ಷದ ವಿರೋಧ ಪಕ್ಷದ ನಾಯಕನನ್ನಾಗಿಸಿತು. 2ನೇ ಅವಗೆ ಮುಖ್ಯಮಂತ್ರಿಯನ್ನಾಗಿಸಿ ಮಾಡಿತು. ನಾನು ಇಲ್ಲಿಂದಲೇ  ಸ್ಪರ್ಧಿಸಬೇಕಿತ್ತು. ನೀವು ನನ್ನನ್ನು ಬಿಟ್ಟುಕೊಡುತ್ತಿರಲಿಲ್ಲ. ಆದರೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆಂದು ಘೋಷಣೆ ಮಾಡಿದ್ದರಿಂದಾಗಿ ಘೋಷಣೆಗೆ ಬೆನ್ನು ತೋರಿಸಬಾರದೆಂದು ಅಲ್ಲಿಂದಲೇ ಸ್ಪರ್ಧೆ ಮಾಡಿದೆ. ಆದರೆ ಹೊಟ್ಟೆ ಕಿಚ್ಚಿನಿಂದ ನಾನು ಸಿಎಂ ಆಗಬಾರದೆಂದು ನನ್ನನ್ನು ಸೋಲಿಸಲು ಸಂಚು ಮಾಡಿ ಶನಿ,ರಾಹು, ಕೇತು ಎಲ್ಲಾ ಶಕ್ತಿಗಳೂ ಒಂದಾಗಿ ಕಾಲು ಹಿಡಿದು ಎಳೆದು ಸೋಲಿಸಿದರು ಎಂದರು.

ಮಾದರಿ ಕ್ಷೇತ್ರ: 
ಮುಂದಿನ 2 ವರ್ಷಗಳಲ್ಲಿ ಇಲ್ಲಿಗೆ ಬೇಕಾದ ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಮುಗಿಸಿ ಯಾವ ಅಭಿವೃದ್ಧಿ ಕೆಲಸಗಳೂ ಬಾಕಿ ಇಲ್ಲದಂತೆ ಮಾದರಿ ಕ್ಷೇತ್ರವನ್ನಾಗಿಸುತ್ತೇನೆ ಎಂದ ಅವರು, ವರುಣ ಕ್ಷೇತ್ರದ ಜನತೆ ಋಣ ತೀರಿಸಲು ನಾನು ರಾಜಕಾರಣದಲ್ಲಿರುವವರೆವಿಗೂ ಶ್ರಮಿಸುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಂಸದ ಆರ್. ಧ್ರುವನಾರಾಯಣ ಅವರನ್ನು ಕೈಹಿಡಿಯಿರಿ ಎಂದರು.

ನಾನು ಹಳ್ಳಿಯಿಂದ ಬಂದು ಬಡವರ ಕಷ್ಟ ಗೊತ್ತಿದ್ದರಿಂದಾಗಿ ಮುಖ್ಯಮಂತ್ರಿಯಾದ ನಂತರ ಉಚಿತ ಅಕ್ಕಿ ವಿತರಣೆ ಘೋಷಣೆ ಮಾಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಎಸ್ಟಿ, ಎಸ್ಸಿ ಜನರ ಜನ ಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಖರ್ಚು ಮಾಡುವಂತೆ ಕಾನೂನು ಜಾರಿಗೆ ತಂದೆ. ಹಿಂದಿನ ಯಾವ ಮುಖ್ಯಮಂತ್ರಿಯ ಕೈಲೂ ಇದು ಸಾಧ್ಯವಾಗಿರಲಿಲ್ಲ. ಇದನ್ನು ಮುಂದೆ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇರುವ ಸಂಪನ್ಮೂಲಗಳ ಮಿತಿಯೊಳಗೆ ಎಲ್ಲಾ ಜಾತಿ ಜನರ ಬಡವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ ಆದರೂ ರಾಜ್ಯದ ಜನತೆ ನನ್ನನ್ನು ಕೈಹಿಡಿಯಲಿಲ್ಲ ನನಗೆ ಸಿಎಂ ಆಗಿ ಬಡವರ ಪರ ಕೆಲಸ ಮಾಡಿದ ತೃಪ್ತಿ ನನಗೆ ಸಿಕ್ಕಿದೆ ಎಂದರು.

ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ನಂತರ ಅಭಿವೃದ್ದಿಯಲ್ಲಿ 9ನೇ ಸ್ಥಾನದಲ್ಲಿದ್ದ ಕರ್ನಾಟಕ ರಾಜ್ಯವನ್ನು ಮೊದಲೆ ಸ್ಥಾನಕ್ಕೆ ತಂದರು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವರುಣ ಕ್ಷೇತ್ರದ ಎಲ್ಲ ವರ್ಗದ ಜನರ ಬೀದಿಗಳಿಗೂ ಕಾಂಕ್ರಿಟ್ ರಸ್ತೆ ಆಗಿದ್ದು, ಕ್ಷೇತ್ರ ಕಚ್ಚಾ ರಸ್ತೆ ರಹಿತ ಮಾದರಿ ಕ್ಷೇತ್ರ ವಾಗಲಿದೆ ಎಂದರು. 

ಮಾಜಿ ಶಾಸಕ ಕಳಲೆ ಎನ್. ಕೇಶವಮೂರ್ತಿ, ತಾಪಂ ಉಪಾಧ್ಯಕ್ಷ ಗೋವಿಂದ ರಾಜು, ಎಪಿಎಂಸಿ ಅಧ್ಯಕ್ಷ ಮಾದಪ್ಪ, ವಾಲ್ಮಿಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ಜಿಪಂ ಸದಸ್ಯೆ ಲತಾಸಿದ್ದಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯರಂಗಸ್ವಾಮಿ, ಮೂಗಶೆಟ್ಟಿ, ಮುಖಂಡರಾದ ಹೊಸಕೋಟೆ ಬಸವರಾಜು, ಗೋಣಹಳ್ಳಿ ಕುಮಾರ್, ಕೆ. ಮಾರುತಿ, ಕೆಪಿಸಿಸಿ ಸದಸ್ಯ ಅಕ್ಬರ್ ಅಲೀಂ ಸೇರಿದಂತೆ ಹಲವಾರು ಪ್ರಮುಖರು ಇದ್ದರು.