ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು ಮತ್ತು ತುಮಕೂರು ಭಾಗದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ, ಬಹುನಿರೀಕ್ಷಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗವನ್ನು 2028ರೊಳಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಘೋಷಿಸಿದರು. ಜೊತೆಗೆ, ತುಮಕೂರು-ರಾಯದುರ್ಗ ಯೋಜನೆ ಮತ್ತು 32 ಆರ್‌ಒಬಿ/ಆರ್‌ಯುಬಿ ಕಾಮಗಾರಿಗಳ ಪ್ರಗತಿಯನ್ನೂ ಪರಿಶೀಲಿಸಲಾಯಿತು.

ಬೆಂಗಳೂರು: ಬೆಂಗಳೂರು ಮತ್ತು ತುಮಕೂರು ಭಾಗಗಳಲ್ಲಿ ನಡೆಯುತ್ತಿರುವ ಹಾಗೂ ಪ್ರಸ್ತಾವಿತ ರೈಲ್ವೆ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಂಗಳವಾರ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಸಮೀಕ್ಷಾ ಸಭೆ ನಡೆಸಿದರು. ಈ ಪರಿಶೀಲನೆಯಲ್ಲಿ ರಸ್ತೆ ಮೇಲ್ಸೇತುವೆಗಳು (ROB), ರಸ್ತೆ ಕೆಳಸೇತುವೆಗಳು (RUB) ಮತ್ತು ಪಾದಚಾರಿ ಮೇಲ್ಸೇತುವೆಗಳು (FOB) ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳು ಒಳಗೊಂಡಿದ್ದವು. ಈ ವೇಳೆ ಕರ್ನಾಟಕ ಬಹುನಿರೀಕ್ಷಿತ ಹೊಸ ರೈಲು ಯೋಜನೆಯಾದ ತುಮಕೂರು ಚಿತ್ರದುರ್ಗ ದಾವಣಗೆರೆ ನೇರ ರೈಲು ಮಾರ್ಗವು 2028ರಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಚಿವರ ಸ್ವಕ್ಷೇತ್ರ ತುಮಕೂರಿನಲ್ಲಿ 32 ಆರ್‌ಒಬಿ, ಆರ್‌ಯುಬಿ ಕಾಮಗಾರಿ: 2026-27ರ ಗಡುವು

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 32 ROB ಮತ್ತು RUB ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪಂಡಿತನಹಳ್ಳಿ, ಮೈದಾಳ, ಬಡ್ಡಿಹಳ್ಳಿ, ಬಟವಾಡಿ, ಹೆಗ್ಗೆರೆ, ಮಲ್ಲಸಂದ್ರ, ಬೆಂಚೆಗೆರೆ, ನಿಟ್ಟೂರು-ಮೈಸೂರು ಮಾರ್ಗ, ನಂದಿಹಳ್ಳಿ ಗೇಟ್ ಹಾಗೂ ಹಾಸನ ಮತ್ತು ಬಿದಿರೆಗುಡಿ ಕಡೆಗೆ ಬಿಎಚ್ ರಸ್ತೆಯಲ್ಲಿನ ಸೇತುವೆಗಳು ಪ್ರಮುಖವಾಗಿವೆ. ಈ ಎಲ್ಲಾ ಕಾಮಗಾರಿಗಳನ್ನು 2026–27ರೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ರೂ. 1,801 ಕೋಟಿ ವೆಚ್ಚದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ

ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಇಲಾಖೆಯ ನಡುವೆ 50:50 ವೆಚ್ಚ ಹಂಚಿಕೆ ಮಾದರಿಯಡಿಯಲ್ಲಿ ಒಟ್ಟು 1,801 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೊಳ್ಳುತ್ತಿರುವ 191 ಕಿ.ಮೀ. ಉದ್ದದ ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಯನ್ನು ಸಚಿವರು ಸೂಕ್ಷ್ಮವಾಗಿ ಪರಿಶೀಲಿಸಿದರು. ಈ ಯೋಜನೆಯು ಮಧ್ಯ ಕರ್ನಾಟಕದ ಕನೆಕ್ಟಿವಿಟಿಗೆ ಹೊಸ ಕ್ರಾಂತಿಯನ್ನೇ ತರಲಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿಯಲ್ಲಿನ ಶೇ.92ಕ್ಕಿಂತ ಹೆಚ್ಚು ಭಾಗವನ್ನು ಈಗಾಗಲೇ ಸ್ವಾಧೀನಪಡಿಸಿಕೊಂಡಿರುವುದಾಗಿ ಸಚಿವರು ತಿಳಿಸಿದರು. ಉರುಕೆರೆ–ತಿಮ್ಮರಾಜನಹಳ್ಳಿ (13.31 ಕಿ.ಮೀ.) ವಿಭಾಗ ಪೂರ್ಣಗೊಂಡಿದ್ದು, ಕಾರ್ಯಾಚರಣೆಗೆ ಸಿದ್ಧವಾಗಿದೆ. ಸಂಪೂರ್ಣ ಯೋಜನೆಯನ್ನು ಫೆಬ್ರವರಿ 2028ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

 ರೂ. 2,496 ಕೋಟಿ ವೆಚ್ಚದ ತುಮಕೂರು-ರಾಯದುರ್ಗ ಅಂತರರಾಜ್ಯ ಯೋಜನೆ 

ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಬೆಸೆಯುವ ಅತ್ಯಂತ ಮಹತ್ವಾಕಾಂಕ್ಷೆಯ 206 ಕಿ.ಮೀ. ಉದ್ದದ ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಪ್ರಗತಿಯನ್ನು ಸಭೆಯಲ್ಲಿ ಮುನ್ನೆಲೆಗೆ ತರಲಾಯಿತು. ಈ ಬೃಹತ್ ಯೋಜನೆಗೆ ಒಟ್ಟು 2,496 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತಿದೆ.

ಈ ಯೋಜನೆಯ ಒಟ್ಟು ಉದ್ದದ ಪೈಕಿ ಈಗಾಗಲೇ 83 ಕಿ.ಮೀ. ರೈಲು ಮಾರ್ಗ ಯಶಸ್ವಿಯಾಗಿ ಕಾರ್ಯಾರಂಭ ಮಾಡಿದೆ. ಪ್ರಸ್ತುತ ಪ್ರಗತಿಯಲ್ಲಿರುವ ತುಮಕೂರು-ಉರುಕೆರೆ ವಿಭಾಗವು ಶಾಸನಬದ್ಧ ಸುರಕ್ಷತಾ ತಪಾಸಣೆಯಲ್ಲಿ (Statutory Safety Inspection) ಉತ್ತೀರ್ಣಗೊಂಡಿದ್ದು, ಪಾವಗಡ-ದೊಡ್ಡಹಳ್ಳಿ ವಿಭಾಗವು ಉದ್ಘಾಟನೆಗೆ ಸಂಪೂರ್ಣ ಸಜ್ಜಾಗಿದೆ. ಇನ್ನುಳಿದ ಮಾರ್ಗಗಳ ಕಾಮಗಾರಿಗಳು ಅತ್ಯಂತ ವೇಗವಾಗಿ ಪ್ರಗತಿಯಲ್ಲಿದ್ದು, ಶೇ. 97 ಕ್ಕೂ ಹೆಚ್ಚು ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಉಳಿದ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರಗೊಳಿಸಲು, ರಸ್ತೆ ಮುಚ್ಚುವಿಕೆ ಮತ್ತು ತಿರುವುಗಳಿಗೆ ಸಮಯೋಚಿತ ಅನುಮೋದನೆ ಪಡೆಯಲು ಹಾಗೂ ವಿದ್ಯುತ್ ಮಾರ್ಗಗಳು, ನೀರಿನ ಪೈಪ್‌ಲೈನ್‌ಗಳು ಮತ್ತು ಅರಣ್ಯ ಅನುಮತಿಗಳಂತಹ ಉಪಯುಕ್ತತೆ ಸ್ಥಳಾಂತರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಅತ್ಯವಶ್ಯಕ ಎಂದು ಸೋಮಣ್ಣ ಒತ್ತಿ ಹೇಳಿದರು. ಈ ಸಭೆಯಲ್ಲಿ ನೈಋತ್ಯ ರೈಲ್ವೆಯ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮಾ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.