ಬೆಂಗಳೂರಿನ 'ನಮ್ಮ ಮೆಟ್ರೋ' ಆಗಸ್ಟ್ 10 ರಂದು ಸಾರ್ವಕಾಲಿಕ ದಾಖಲೆ ಬರೆದಿದೆ. ಅಂದು ಒಂದೇ ದಿನದಲ್ಲಿ 11.19 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಇದು ಈ ತಿಂಗಳ ಅತ್ಯಧಿಕ ದೈನಂದಿನ ಬೋರ್ಡಿಂಗ್ ಸಂಖ್ಯೆಯಾಗಿದೆ. ನಗರದ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರ್ಯಾಯವಾಗಿ ಮೆಟ್ರೋ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ಬೆಂಬಲಕ್ಕೆ ಬಿಎಂಆರ್‌ಸಿಎಲ್ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದೆ.
ಬೆಂಗಳೂರು (ಆ.11): ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನಾಡಿಯಾಗಿರುವ 'ನಮ್ಮ ಮೆಟ್ರೋ' ಸಾರ್ವಕಾಲಿಕ ದಾಖಲೆಯೊಂದನ್ನು ಬರೆದಿದೆ. ಆಗಸ್ಟ್ 10 ರಂದು ಒಂದೇ ದಿನ ಬರೋಬ್ಬರಿ 11,19,815 (11.19 ಲಕ್ಷ) ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುವ ಮೂಲಕ, ಈ ತಿಂಗಳ ಅತ್ಯಧಿಕ ದೈನಂದಿನ ಪ್ರಯಾಣಿಕರ ಬೋರ್ಡಿಂಗ್ ಸಂಖ್ಯೆಯನ್ನು ದಾಖಲಿಸಿದೆ.
ಬೆಂಗಳೂರು ಮಹಾನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರ್ಯಾಯವಾಗಿ ನಮ್ಮ ಮೆಟ್ರೋವನ್ನು ನೆಚ್ಚಿಕೊಳ್ಳುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಅಭೂತಪೂರ್ವ ಬೆಂಬಲಕ್ಕೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಗರದ ಸಾರ್ವಜನಿಕರಿಗೆ ಧನ್ಯವಾದಗಳನ್ನು ತಿಳಿಸಿದೆ.
ಮಾರ್ಗವಾರು ಬೋರ್ಡಿಂಗ್ ವಿವರಗಳು:
- ನೇರಳೆ ಮಾರ್ಗ (Purple Line - Line 1): 5,54,161 ಪ್ರಯಾಣಿಕರು
- ಹಸಿರು ಮಾರ್ಗ (Green Line - Line 2): 4,22,315 ಪ್ರಯಾಣಿಕರು
- ಹಳದಿ ಮಾರ್ಗ (Yellow Line - Line 3): 1,43,339 ಪ್ರಯಾಣಿಕರು
- ಒಟ್ಟು ಬೋರ್ಡಿಂಗ್‌ಗಳು: 11,19,815
ಐಟಿ-ಬಿಟಿ ಉದ್ಯೋಗಿಗಳು ಹಾಗೂ ವಾಣಿಜ್ಯ ಪ್ರದೇಶಗಳನ್ನು ಸಂಪರ್ಕಿಸುವ ನೇರಳೆ ಮಾರ್ಗದಲ್ಲಿ (ಪರ್ಪಲ್ ಲೈನ್) ಎಂದಿನಂತೆ ಅತ್ಯಂತ ಹೆಚ್ಚು ಅಂದರೆ 5.54 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸಿದ್ದಾರೆ. ಇನ್ನು ಹಸಿರು ಮಾರ್ಗದಲ್ಲಿ 4.22 ಲಕ್ಷ ಹಾಗೂ ನೂತನ ಹಳದಿ ಮಾರ್ಗದಲ್ಲಿ 1.43 ಲಕ್ಷಕ್ಕೂ ಹೆಚ್ಚು ಬೋರ್ಡಿಂಗ್‌ಗಳು ದಾಖಲಾಗಿವೆ. 'ಧನ್ಯವಾದಗಳು ಬೆಂಗಳೂರಿಗರೇ! ನಿಮ್ಮ ನಿರಂತರ ಬೆಂಬಲದಿಂದ ಇದು ಸಾಧ್ಯವಾಗಿದೆ' ಎಂದು ಬಿಎಂಆರ್‌ಸಿಎಲ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ಹರ್ಷ ವ್ಯಕ್ತಪಡಿಸಿದೆ.


