ಬಳ್ಳಾರಿ(ಅ.08): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮನೆಯ ಮೇಲಿನ ಸಿಬಿಐ ದಾಳಿ ಪ್ರತಿಪಕ್ಷಗಳ ಧ್ವನಿಯನ್ನು ಕುಗ್ಗಿಸುವ ಬಿಜೆಪಿಯ ಷಡ್ಯಂತ್ರವಾಗಿ​ದೆ ಎಂದು ದೂರಿರುವ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ನಿಜಕ್ಕೂ ಬಿಜೆಪಿಗೆ ತಾಕತ್ತಿದ್ದರೆ 20 ವರ್ಷಗಳಲ್ಲಿ ಅಧಿಕಾರದಲ್ಲಿದ್ದ ಎಲ್ಲ ಪಕ್ಷಗಳ ಮುಖಂಡರ ಮನೆಗಳ ಆಸ್ತಿಯನ್ನು ಸುಪ್ರೀಂಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ನಿಷ್ಪಕ್ಷವಾದ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿ.ಎಸ್‌. ಉಗ್ರಪ್ಪ ಅವರು, ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಟ್ಟುಕೊಂಡು ಸಿಬಿಐ, ಇಡಿ ಮತ್ತಿತರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಪ್ರತಿಪಕ್ಷಗಳಿಗಿರುವ ಪ್ರಜಾಸತ್ತಾತ್ಮಕ ಜನಪರ ಧ್ವನಿಯನ್ನು ಸಹ ಅಡಗಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿ.ಟಿ. ರವಿ ಆಸ್ತಿ ಎಷ್ಟಿತ್ತು ಎಂದು ಹೇಳುತ್ತಾರೆಯೇ?

ಡಿ.ಕೆ. ಶಿವಕುಮಾರ್‌ ಅವರ ಆಸ್ತಿ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಿ.ಟಿ. ರವಿ ಅವರು, ಡಿಕೆಶಿಯವರು ಹೊಲದಲ್ಲಿ ಚಿನ್ನ ಬೆಳೆದಿದ್ದರಾ? ಎಂದು ಕೇಳಿದ್ದಾರೆ. ಸಿ.ಟಿ. ರವಿ ಅವರು ಮೊದಲ ಬಾರಿಗೆ ಶಾಸಕರಾಗಿದ್ದಾಗ ಅವರ ಆಸ್ತಿ ಎಷ್ಟಿತ್ತು? ಅವರ ಬಂಧು ಬಳಗದ ಆಸ್ತಿ ಎಷ್ಟಿತ್ತು? ಈಗ ಎಷ್ಟಾಗಿದೆ ಎಂದು ಅವರು ಹೇಳುತ್ತಾರೆಯೇ? ಅಷ್ಟೊಂದು ಪ್ರಮಾಣದ ಆಸ್ತಿ ಮಾಡಲು ಹೇಗೆ ಸಾಧ್ಯವಾಯಿತು ಎಂಬುದನ್ನು ಸಿ.ಟಿ. ರವಿ ಹೇಳುತ್ತಾರೆಯೇ ಎಂದು ಉಗ್ರಪ್ಪ ಪ್ರಶ್ನಿಸಿದರಲ್ಲದೆ, ಬಿಜೆಪಿ ಎಂದರೆ ಭ್ರಷ್ಟಜನರ ಪಕ್ಷ ಎಂದು ಈಗಾಗಲೇ ನಾಡಿನ ಜನರು ಆಡಿಕೊಳ್ಳುತ್ತಿದ್ದಾರೆ ಎಂದರು.

ಹೂವಿನಹಡಗಲಿ: ಹಣ್ಣು, ಹೂವು ಬೆಳೆಗಾರರಿ​ಗೆ ಸಿಕ್ಕಿಲ್ಲ ಕೊರೋನಾ ಪರಿಹಾರ

ನನ್ನದು ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಮುಖಂಡರು ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬ ಎಲ್ಲದರ ಆಸ್ತಿಯನ್ನು ಸುಪ್ರೀಂಕೊರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನಿಷ್ಪಕ್ಷಪಾತವಾದ ತನಿಖೆ ನಡೆಸಲಿ. ಆಗ ಎಲ್ಲವೂ ಹೊರ ಬರುತ್ತದೆ. ತಪ್ಪಿತಸ್ಥರು ಕಂಡು ಬಂದರೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕುವುದಷ್ಟೇ ಅಲ್ಲ, ಕ್ರಿಮಿನಲ್‌ ಮೊಕದ್ದಮೆ ಹಾಕಲಿ. ತನಿಖೆಗೆ ಮುಖ್ಯಮಂತ್ರಿಗಳು ಮುಂದಾಗಲಿ. ಆಗ ಬಿಜೆಪಿಯವರ ನಿಜವಾದ ಸಾಚಾತನ ಗೊತ್ತಾಗಲಿದೆ ಎಂದು ಉಗ್ರಪ್ಪ ಹೇಳಿದರು.

ಯುಪಿ ರಾವಣರಾಜ್ಯ

ಉತ್ತರಪ್ರದೇಶ ರಾಮರಾಜ್ಯವಲ್ಲ. ರಾವಣರಾಜ್ಯವಾಗಿದೆ. ಆ ರಾಜ್ಯದಲ್ಲಿ ದಲಿತರು, ಶೋಷಿತ ಸಮುದಾಯಗಳಿಗೆ ರಕ್ಷಣೆ ಇಲ್ಲ. ಅಲ್ಲಿನ ಮುಖ್ಯಮಂತ್ರಿಗಳು ಬರೀ ರಾಮರಾಜ್ಯದ ಬಗ್ಗೆ ಮಾತನಾಡಿದರೆ ಸಾಲದು. ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಅವರ ಸಮುದಾಯದಕ್ಕೆ ಸೇರಿದ ಯುವತಿಯ ಮೇಲೆಯೇ ಅತ್ಯಾಚಾರ-ಕೊಲೆಯಾಗಿದೆ. ಇಷ್ಟಾಗಿಯೂ ಅಲ್ಲಿನ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಈ ಕುರಿತು ನರೇಂದ್ರ ಮೋದಿ ಅವರು ಒಂದೇ ಒಂದು ಮಾತನಾಡುತ್ತಿಲ್ಲ ಏಕೆ? ರಾಜ್ಯ ಬಿಜೆಪಿ ಸರ್ಕಾರದ ನಾಯಕರು ಈ ಘಟನೆಯ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ? ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ರಮೇಶ್‌ ಜಾರಕಿಹೊಳಿ ಅವರು ಮೌನವಹಿಸಿರುವುದೇಕೆ? ಎಂದು ಉಗ್ರಪ್ಪ ಪ್ರಶ್ನಿಸಿದರು.

ಯೋಗಿ ರಾಜಿನಾಮೆ ನೀಡಲಿ...

ಉತ್ತರಪ್ರದೇಶದಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ದಲಿತರ ಮೇಲೆ ನಿರಂತರವಾಗಿ ಆ ರಾಜ್ಯದಲ್ಲಿ ದಾಳಿ-ದಬ್ಬಾಳಿಕೆಗಳು ನಡೆಯುತ್ತಲೇ ಇದ್ದು, ನಿಯಂತ್ರಿಸಲು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದಾಗುತ್ತಿಲ್ಲ. ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ರಕ್ಷಣೆಗೆ ನಿಂತಿದ್ದಾರೆ. ಯುವತಿ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಗಳ ಪರವಾದ ಗುಂಪು ಸಾರ್ವಜನಿಕವಾಗಿ ಸಭೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಅಲ್ಲಿನ ಸರ್ಕಾರ ಹಾಗೂ ಪೊಲೀಸ್‌ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂದು ಗೊತ್ತಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಜಕ್ಕೂ ಮಹಿಳಾ ಕಾಳಜಿ ಇದ್ದರೆ, ಜನಪರ ನಿಲುವು ಅವರಾಗಿದ್ದರೆ ಕೂಡಲೇ ಯೋಗಿ ಆದಿತ್ಯನಾಥ ಅವರಿಂದ ರಾಜಿನಾಮೆ ಪಡೆಯಲಿ ಎಂದು ಆಗ್ರಹಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಮಹ್ಮದ್‌ ರಫೀಕ್‌, ಪಕ್ಷದ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ, ಹನುಮಕಿಶೋರ್‌, ಅಸುಂಡಿ ನಾಗರಾಜಗೌಡ, ಮಾಧ್ಯಮ ವಕ್ತಾರ ವಿಲ್ಸನ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.