ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಅ.07): ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡಿದ್ದ ಲಾಕ್‌ಡೌನ್‌ನಿಂದ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಮಲ್ಲಿಗೆ ಹಾಗೂ ತೋಟಗಾರಿಕೆ ಬೆಳೆಗಾರರು ಕಂಗೆಟ್ಟು ಹೋಗಿದ್ದು, ತೋಟಗಾರಿಕೆ ಬೆಳೆಗಳಿಗೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಧನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಹೌದು, ತಾಲೂಕಿನ ಹೂವಿನಹಡಗಲಿ, ಹನಕನಹಳ್ಳಿ, ದೇವಗೊಂಡನಹಳ್ಳಿ, ಹುಗಲೂರು, ಗುಜನೂರು, ಮೀರಾಕೂರ್ನಹಳ್ಳಿ, ನಾಗತಿ ಬಸಾಪುರ, ಕೊಂಬಳಿ ಸೇರಿದಂತೆ ಇತರೆ ಕಡೆಗಳಲ್ಲಿನ ಮಲ್ಲಿಗೆ ಬೆಳೆಗಾರರು, ಲಾಕ್‌ಡೌನ್‌ನಿಂದ ಹೂವುಗಳಿಗೆ ಮಾರುಕಟ್ಟೆವ್ಯವಸ್ಥೆ ಇಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಇದರಿಂದ ರೈತರ ಹಿತ ಕಾಪಾಡಲು 1 ಹೆಕ್ಟೇರ್‌ ಮಲ್ಲಿಗೆ ಬೆಳೆಯುವ ಬೆಳೆಗಾರರಿಗೆ 25 ಸಾವಿರ ರು.ಗಳ ಪರಿಹಾರ ಧನವನ್ನು ಸರ್ಕಾರ ಘೋಷಣೆ ಮಾಡಿತ್ತು. ಈವರೆಗೂ 67 ಮಂದಿ ರೈತರಿಗೆ 7.79 ಲಕ್ಷ ರು.ಗಳು ಮಾತ್ರ ಬಿಡುಗಡೆಯಾಗಿದೆ. ಉಳಿದಂತೆ ಇನ್ನು 300 ಎಕರೆ ಪ್ರದೇಶದಲ್ಲಿನ 374 ರೈತರಿಗೆ 30 ಲಕ್ಷ ರು.ಗಳ ಪರಿಹಾರ ಧನವನ್ನು ಸರ್ಕಾರ ಬಿಡುಗಡೆ ಮಾಡಬೇಕಿದೆ.

ತೋಟಗಾರಿಕೆ ಬೆಳೆಗಳಾದ ಬಾಳೆ, ಪಪ್ಪಾಯಿ ಮತ್ತು ಕಲ್ಲಂಗಡಿ ಹಣ್ಣು ಬೆಳೆದಿರುವ ರೈತರಿಗೆ ಮಾರುಕಟ್ಟೆವ್ಯವಸ್ಥೆ ಇಲ್ಲದೇ ಹಣ್ಣುಗಳು ಜಮೀನಿನಲ್ಲೇ ಕೊಳೆತು ಹೋಗಿ ರೈತರು ಸಾಕಷ್ಟುನಷ್ಟಅನುಭವಿಸಿದ್ದರು. ಅವರಿಗೂ ಸಹ ಸರ್ಕಾರ ಹೆಕ್ಟೇರ್‌ಗೆ 15 ಸಾವಿರ ರು.ಗಳ ಪರಿಹಾರ ಘೋಷಣೆ ಮಾಡಿತ್ತು. ಈವರೆಗೂ ತಾಲೂಕಿನಲ್ಲಿ 59 ಮಂದಿ ರೈತರಿಗೆ 7.32 ಲಕ್ಷ ರು.ಗಳು ಪರಿಹಾರ ಮಾತ್ರ ಬಿಡುಗಡೆಯಾಗಿದೆ. ಉಳಿದಂತೆ ಇನ್ನು 122 ಎಕರೆ ಪ್ರದೇಶದಲ್ಲಿನ 14 ಜನ ರೈತರಿಗೆ 1.33 ಲಕ್ಷ ರು.ಗಳ ಪರಿಹಾರ ಧನ ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ತಾಲೂಕಿನ 174 ಎಕರೆ ಪ್ರದೇಶದಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದ 76 ಜನ ರೈತರಿಗೆ 10.47 ಲಕ್ಷ ರು.ಗಳ ಪರಿಹಾರ ಧನ ಇನ್ನು ಬಿಡುಗಡೆಯಾಗಿಲ್ಲ.

ಶಾಸಕ ಭೀಮಾ ನಾಯ್ಕ ರಾಬಕೊ ಹಾಲು ಒಕ್ಕೂಟದ ಅಧ್ಯಕ್ಷಗಿರಿಗೆ ಕುತ್ತು

ಮಲ್ಲಿಗೆ ಬೆಳೆಗಾರರ ರು. 30 ಲಕ್ಷ, ಹಣ್ಣು ಬೆಳೆಗಾರರ ರು. 1.33 ಲಕ್ಷ, ತರಕಾರಿ ಬೆಳೆಗಾರರ 10.47 ಲಕ್ಷ ರು.ಗಳು ಸೇರಿದಂತೆ ಒಟ್ಟು ಸರ್ಕಾರ ಇನ್ನು 42 ಲಕ್ಷ ರು.ಗಳ ಪರಿಹಾರ ಧನವನ್ನು ಬಿಡುಗಡೆ ಮಾಡಬೇಕಿದೆ. ಸರ್ಕಾರದಿಂದ ಪರಿಹಾರ ಧನ ಬಿಡುಗಡೆ ಮಾಡಲು ರೈತರ ಕೆಲ ದಾಖಲಾತಿಗಳು ಹೊಂದಾಣಿಕೆಯಾಗುತ್ತಿಲ್ಲ. ದಾಖಲಾತಿಗಳನ್ನು ಸರಿಪಡಿಸಿದ ನಂತರದಲ್ಲಿ ತೋಟಗಾರಿಕೆ ಇಲಾಖೆಗೆ ಮಾಹಿತಿ ನೀಡಬೇಕಿದೆ. ಪಹಣಿ, ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಪಾಸ್‌ ಬುಕ್‌ಗಳಲ್ಲಿ ಹೆಸರುಗಳ ಬದಲಾವಣೆಯ ಜತೆಗೆ ಹೊಂದಾಣಿಕೆ ಆಗದಿರುವ ಹಿನ್ನೆಲೆಯಲ್ಲಿ ಪರಿಹಾರ ವಿಳಂಬವಾಗಿರಬಹುದು ಮತ್ತು ಬೆಳೆ ದರ್ಶಕ (ಬೆಳೆ ಸಮೀಕ್ಷೆ) ರೈತರು ತಮ್ಮ ಜಮೀನುಗಳಲ್ಲಿ ಬೆಳೆಯುತ್ತಿರುವ ತೋಟಗಾರಿಕೆ ಬೆಳೆಗಳ ಮಾಹಿತಿಯು ಪಹಣಿಯಲ್ಲಿ ಕಡ್ಡಾಯವಾಗಿ ನಮೂದು ಮಾಡಬೇಕಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈಗಾಗಲೇ 67 ಮಂದಿ ಮಲ್ಲಿಗೆ ಬೆಳೆಗಾರರಿಗೆ 7.79 ಲಕ್ಷ ರು.ಗಳ ಪರಿಹಾರ ಧನ ನೀಡಲಾಗಿದೆ, ಉಳಿದಂತೆ 300 ಎಕರೆಯ 374 ಜನ ಮಲ್ಲಿಗೆ ಬೆಳೆಗಾರರಿಗೆ 30 ಲಕ್ಷ ರು.ಗಳ ಪರಿಹಾರ ಧನ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಣ ಬಿಡುಗಡೆಯಾದ ಕೂಡಲೇ ರೈತರ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಲಿದೆ ಎಂದು ಹೂವಿನಹಡಗಲಿ ಸಹಾಯಕ ತೋಟಗಾರಿಕೆ ನಿರ್ದೇಶಕ ಚಂದ್ರು ಕುಮಾರ ಎಂ.ಎಲ್‌. ಅವರು ತಿಳಿಸಿದ್ದಾರೆ. 

ಮಲ್ಲಿಗೆ ಬೆಳೆಗಾರರಿಗೆ ಪರಿಹಾರ ಧನ ನೀಡುತ್ತೇವೆಂದು ಸರ್ಕಾರ ಘೋಷಣೆ ಮಾಡಿ 3-4 ತಿಂಗಳು ಕಳೆದಿದೆ. ಈವರೆಗೂ ಪರಿಹಾರ ಧನಕ್ಕಾಗಿ ರೈತರನ್ನು ಸರ್ಕಾರ ಚಾತಕ ಪಕ್ಷಿಯ ರೀತಿ ಕಾಯುವಂತೆ ಮಾಡಿದೆ ಎಂದು ಮೀರಾಕೂರ್ನಹಳ್ಳಿಯ ಮಲ್ಲಿಗೆ ಬೆಳೆಗಾರ ಬಸವರೆಡ್ಡಿ ತಿಳಿಸಿದ್ದಾರೆ. 

ಈ ಬಾರಿ ಭರಪೂರ ಪಪ್ಪಾಯಿ ಬೆಳೆ ಬಂದಿತ್ತು. ಆದರೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹಣ್ಣು ಹೊಲದಲ್ಲೇ ಕೊಳೆತು ಹೋಗಿದೆ. ಇದರಿಂದ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಆದರೆ ಸರ್ಕಾರ ನೀಡುವ 15 ಸಾವಿರ ಹಣ ಇನ್ನು ಬಿಡುಗಡೆಯಾಗಿಲ್ಲ ಎಂದು ಮಾಗಳ ರೈತ ಕವಸರ ನಾಗರಾಜ ತಿಳಿಸಿದ್ದಾರೆ.

ಮಲ್ಲಿಗೆ ಬೆಳೆಗಾರರು ಹಾಗೂ ತೋಟಗಾರಿಕೆ ಬೆಳೆಗಾರರು ಕೊರೋನಾ ಸಂದರ್ಭದಲ್ಲಿ ಮಾರುಕಟ್ಟೆ ಇಲ್ಲದೇ ಕಂಗಾಲಾಗಿದ್ದರು. ಸರ್ಕಾರ ಘೋಷಣೆ ಮಾಡಿರುವ ಹಾಗೆ ಪರಿಹಾರ ಮಾತ್ರ ಇನ್ನು ರೈತರಿಗೆ ತಲುಪಿಲ್ಲ. ಹೋರಾಟ ಮಾಡಿದರೂ, ಸರ್ಕಾರ ರೈತರ ಕೂಗನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದು ಹನಕನಹಳ್ಳಿ ರಾಜ್ಯ ಮಲ್ಲಿಗೆ ಬೆಳೆಗಾರರ ಸಂಘ ಅಧ್ಯಕ್ಷ ಎಸ್‌.ಹಾಲೇಶ ಅವರು ತಿಳಿಸಿದ್ದಾರೆ.