ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ, ಚಿಕ್ಕಮಗಳೂರಿನ ಮೂಡಿಗೇರೆ ತಾಲೂಕಿನ ಕಾಫಿ ತೋಟದಲ್ಲಿ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಐವರು ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ, ಮಲೆನಾಡಲ್ಲಿ ಅಕ್ರಮ ವಲಸಿಗರಿದ್ದಾರೆ ಎಂಬ ಹಿಂದೂ ಸಂಘಟನೆಗಳ ಆರೋಪಗಳಿಗೆ ಪುಷ್ಟಿ ನೀಡಿದೆ.
ಚಿಕ್ಕಮಗಳೂರು (ಆ.4): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೇರೆ ತಾಲೂಕಿನ ಬಣಕಲ್ ಸಮೀಪದ ತೋಟದಲ್ಲಿ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಐವರು ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ಕಾಫಿನಾಡು ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಪೊಲೀಸರು ದಾಳಿ ನಡೆಸಿ ಐವರನ್ನ ಬಂಧಿಸಲಾಗಿದ್ದು ಇನ್ನಷ್ಟು ಮಂದಿ ಇರುವ ಶಂಕೆ ಹಿನ್ನೆಲೆ ಬಂಧಿತ ಐವರು ಅಕ್ರಮ ಬಾಂಗ್ಲಾದೇಶಿಯರನ್ನ ತೀವ್ರ ವಿಚಾರಣೆಗೊಳಪಡಿಸಲಿದ್ದಾರೆ. ಸದ್ಯ ಬಂಧಿತರು ಡಿ.ಆರ್. ಪೊಲೀಸ್ ಠಾಣೆಯಲ್ಲಿದ್ದಾರೆ. ಮುಂದಿನ ಕ್ರಮಕ್ಕಾಗಿ ಪೊಲೀಸ್ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಪೊಲೀಸರು ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅಕ್ರಮ ಬಾಂಗ್ಲಾದೇಶಿಯರ ಮಾಹಿತಿ ನೀಡಿದವರ ವಿರುದ್ಧವೇ ದೂರು! ಪೊಲೀಸರ ನಡೆ, ಸರ್ಕಾರದ ಓಲೈಕೆ ವಿರುದ್ಧ ಹೈ ಗರಂ
ಬಿಜೆಪಿ, ಬಜರಂಗದಳ ಆರೋಪ ನಿಜವಾಯ್ತು!
ಮಲೆನಾಡಿನ ಕಾಫಿ ತೋಟಗಳಲ್ಲಿ ಕಾರ್ಮಿಕರ ಸೋಗಿನಲ್ಲಿ ಸಾವಿರಾರು ಅಕ್ರಮ ಬಾಂಗ್ಲಾ ನಿವಾಸಿಗಳಿದ್ದಾರೆ, ಪತ್ತೆ ಹಚ್ಚಿ ಗಡಿಪಾರು ಮಾಡುವಂತೆ ಹಿಂದಿನಿಂದಲೂ ಬಿಜೆಪಿ ಭಜರಂಗದಳ ಕಾರ್ಯಕರ್ತರು ಆರೋಪ ಮಾಡಿದ್ದರು. ಇದೀಗ ಕೇಂದ್ರ ಗುಪ್ತಚರ ಮಾಹಿತಿ ಹಿನ್ನೆಲೆ ಆರೋಪಗಳಿಗೆ ಪುಷ್ಠಿ ನೀಡಿದಂತಾಗಿದೆ. ಪೊಲೀಸರು ಅಲರ್ಟ್ ಆಗಿದ್ದು ಇನ್ನಷ್ಟು ಅಕ್ರಮ ಬಾಂಗ್ಲಾದೇಶಿಯರ ಪತ್ತೆ ಮುಂದಾಗಿದ್ದಾರೆ.
ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಎಸ್‌ಐಅರ್ ಪ್ರಕ್ರಿಯೆ ಆರಂಭಿಸಿದ ಬಳಿಕ ಸಾವಿರಾರು ಜನರು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಯ್ತು. ಇನ್ನು ಕೆಲವರು ಬಾಂಗ್ಲಾದೇಶಕ್ಕೆ ವಾಪಸ್ ಆಗದೆ ರೈಲುಗಳ ಮೂಲಕ ಬೆಂಗಳೂರು, ಮಂಗಳೂರು ತಲುಪಿ ಅಲ್ಲಿಂದ ಕೊಡಗು, ಮಲೆನಾಡು ಭಾಗಗಳಲ್ಲಿ ಕಾರ್ಮಿಕರ ಸೋಗಿನಲ್ಲಿ ನುಸುಳಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪ ಮಾಡುತ್ತ ಬಂದಿವೆ. ಬೆಂಗಳೂರಿನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಸರ್ಕಾರ ಅಕ್ರಮ ಬಾಂಗ್ಲಾದೇಶಿಯರನ್ನ ಗಡಿಪಾರು ಮಾಡುವ ಬದಲು ಪತ್ತೆ ಹಚ್ಚಿದವರನ್ನೇ ಬೆದರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದವು. ಇದೀಗ ಮಲೆನಾಡ ಭಾಗದಲ್ಲಿ ಐವರು ಅಕ್ರಮ ಬಾಂಗ್ಲಾ ಪ್ರಜೆಗಳ ಬಂಧನ ಹಿನ್ನೆಲೆ ಆತಂಕ ಶುರುವಾಗಿದೆ.


