ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೈಕ್ಷಣಿಕ ಅರ್ಹತೆ ಹಾಗೂ ಜಿಲ್ಲಾ ಪ್ರಾತಿನಿಧ್ಯದ ಆಧಾರದ ಮೇಲೆ ತಮಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು, ಆದರೆ ಅವಕಾಶ ನೀಡದಿರುವುದು ತೀವ್ರ ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ ಬುಗಿಲೆದ್ದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಟೀಂನಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಶಾಸಕಿ ನಯನಾ ಮೋಟಮ್ಮ ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.
ಮಹಿಳೆಯರ ಕಡೆಗಣನೆಗೆ ಬೇಸರ
ಸುದ್ದಿಗಾರರೊಂದಿಗೆ ಮಾತನಾಡಿದ ನಯನಾ ಮೋಟಮ್ಮ, ಖಂಡಿತಾ ಮಹಿಳೆಯರಿಗೆ ಅವಕಾಶ ಕೊಡದ ವಿಚಾರ ನನಗೆ ತೀವ್ರ ಬೇಸರ ತಂದಿದೆ. ಇದು ಪಕ್ಷವು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಎಂದು ಹೇಳುವ ಮೂಲಕ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವಕ್ಕೆ ನೇರವಾಗಿಯೇ ಟಾಂಗ್ ನೀಡಿದ್ದಾರೆ.
ಮಹಿಳಾ ಮೀಸಲಾತಿ ಬಿಲ್ ಪ್ರಸ್ತಾಪ
ದೇಶದಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿ ಜಾರಿಗೆ ಬರಬೇಕಿದೆ. ಇಂತಹ ಹಂತದಲ್ಲೇ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಪಕ್ಷ ಇದನ್ನು ಯಾವ ರೀತಿ ನಿಭಾಯಿಸುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್, ಅಧಿಕಾರ ಹಂಚಿಕೆಯಲ್ಲಿ ಮಹಿಳೆಯರನ್ನು ಮರೆತಿದೆ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷೆ ಬಿಚ್ಚಿಟ್ಟ ನಯನಾ
ಇದೇ ವೇಳೆ ತಮಗಿದ್ದ ಸಚಿವ ಸ್ಥಾನದ ಆಕಾಂಕ್ಷೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ ನಯನಾ ಮೋಟಮ್ಮ, ಮೊದಲ ಬಾರಿಗೆ ಗೆದ್ದವರಿಗೆ ಪ್ರಾತಿನಿಧ್ಯ ಕೊಡುತ್ತಾರೆ ಎಂಬ ಮಾತಿತ್ತು. ಶೈಕ್ಷಣಿಕವಾಗಿ ನಾನು ಅರ್ಹತೆ ಹೊಂದಿದ್ದೇನೆ ಮತ್ತು ಜಿಲ್ಲಾ ಪ್ರಾತಿನಿಧ್ಯದ ಅಡಿಯಲ್ಲಿ ನನಗೂ ಅವಕಾಶ ಸಿಗಬೇಕಿತ್ತು. ಚಿಕ್ಕಮಗಳೂರು ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದೇವೆ. ಇದೆಲ್ಲವನ್ನು ಗಮನಿಸಿದಾಗ ನನಗೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ನಾನು ಎಲ್ಲ ನಾಯಕರನ್ನೂ ಮಾತನಾಡಿಸಿದ್ದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನಿನ್ನೆಯಷ್ಟೇ ಡಿ.ಕೆ.ಶಿವಕುಮಾರ್ ಅವರ ತಂಡಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗಿದೆ. ಈ ತಂಡದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ನಯನಾ ಮೋಟಮ್ಮ ಅವರ ಈ ಹೇಳಿಕೆ ಈಗ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದ್ದು, ಸರ್ಕಾರ ಮತ್ತು ಸಂಘಟನೆಯಲ್ಲಿ ಮಹಿಳಾ ಶಾಸಕಿಯರ ಅಸಮಾಧಾನ ಸ್ಫೋಟಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಒಟ್ಟಿನಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಜಿಲ್ಲೆಯ ರಾಜಕೀಯ ಪ್ರಾಬಲ್ಯದ ಆಧಾರದ ಮೇಲೆ ಮಂತ್ರಿಗಿರಿಯ ನಿರೀಕ್ಷೆಯಲ್ಲಿದ್ದ ನಯನಾ ಮೋಟಮ್ಮ ಅವರಿಗೆ ನಿರಾಸೆಯಾಗಿದ್ದು ಇದು ಮುಂಬರುವ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


