Uttara kannada rain: ಕರಾವಳಿಯಲ್ಲಿ ಮುಂದುವರಿದ ಮಳೆ: ವೃದ್ಧೆ ಬಲಿ
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆಯ ಅಬ್ಬರ ಬುಧವಾರವೂ ಮುಂದುವರಿದಿದ್ದು, ಕಾರವಾರದಲ್ಲಿ ವೃದ್ಧೆ ಬಲಿಯಾಗಿದ್ದಾಳೆ. ಭಟ್ಕಳದಲ್ಲಿ ಹೆದ್ದಾರಿ ಜಲಾವೃತವಾಗಿ ಸಂಚಾರಕ್ಕೆ ವ್ಯತ್ಯಯ ಆದರೆ, ಭಾಸ್ಕೇರಿ ಹೊಳೆ ಅಪಾಯದ ಮಟ್ಟಮೀರಿದ್ದು ಅಡಕೆ, ತೆಂಗಿನ ತೋಟಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಕಾರವಾರದ ಚೆಂಡಿಯಾ, ಹೊಸಾಳಿ ಮತ್ತಿತರ ಪ್ರದೇಶಗಳಿಗೆ ನೀರು ನುಗ್ಗಿದೆ.
ಕಾರವಾರ (ಜು.6) : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆಯ ಅಬ್ಬರ ಬುಧವಾರವೂ ಮುಂದುವರಿದಿದ್ದು, ಕಾರವಾರದಲ್ಲಿ ವೃದ್ಧೆ ಬಲಿಯಾಗಿದ್ದಾಳೆ. ಭಟ್ಕಳದಲ್ಲಿ ಹೆದ್ದಾರಿ ಜಲಾವೃತವಾಗಿ ಸಂಚಾರಕ್ಕೆ ವ್ಯತ್ಯಯ ಆದರೆ, ಭಾಸ್ಕೇರಿ ಹೊಳೆ ಅಪಾಯದ ಮಟ್ಟಮೀರಿದ್ದು ಅಡಕೆ, ತೆಂಗಿನ ತೋಟಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಕಾರವಾರದ ಚೆಂಡಿಯಾ, ಹೊಸಾಳಿ ಮತ್ತಿತರ ಪ್ರದೇಶಗಳಿಗೆ ನೀರು ನುಗ್ಗಿದೆ.
ಮಂಗಳವಾರ ರಾತ್ರಿ ಭಾರಿ ಮಳ ಸುರಿಯುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಅರಗಾ ಗ್ರಾಮದ ತಾರಾಮತಿ ನಾಯ್ಕ ಮನೆಯಂಗಳದಲ್ಲಿ ತುಂಬಿದ್ದ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಚೆಂಡಿಯಾ, ಅರಗಾ, ಹೊಸಾಳಿ ಮತ್ತಿತರ ಕಡೆ ನೀರು ನುಗ್ಗಿದೆ. ಚೆಂಡಿಯಾ ಹಾಗೂ ಅರಗಾದಲ್ಲಿ ಮನೆಗಳೂ ಜಲಾವೃತವಾಗುವ ಆತಂಕ ಉಂಟಾಗಿದೆ. ಮುಂಜಾಗರೂಕತಾ ಕ್ರಮವಾಗಿ ಕಾಳಜಿ ಕೇಂದ್ರ ತೆರೆಯಲು ಜಿಲ್ಲಾಆಡಳಿತ ಮುಂದಾಗಿದೆ. ಕಾರವಾರದ ಸಾರಿಗೆ ಘಟಕದಲ್ಲೂ ನೀರು ತುಂಬಿಕೊಂಡಿದ್ದು, ಬಸ್‌ಗಳು ನೀರಿನಲ್ಲಿಯೇ ನಿಂತಿವೆ.
ಉತ್ತರ ಕನ್ನಡದಲ್ಲಿ ಭಾರೀ ಮಳೆ: ಹೊನ್ನಾವರದಲ್ಲಿ ಪ್ರವಾಹ ಪರಿಸ್ಥಿತಿ
ಹೊನ್ನಾವರದಲ್ಲಿ ಭಾಸ್ಕೇರಿ ಹೊಳೆ ಉಕ್ಕಿ ಹರಿಯುತ್ತಿದೆ. ಹೊಳೆಯ ಇಕ್ಕೆಲಗಳಲ್ಲಿನ ಅಡಕೆ, ತೆಂಗಿನ ತೋಟಗಳು ಜಲಾವೃತವಾಗಿವೆ. ಕೆಲವು ಮನೆಗಳ ಅಂಗಳದ ತನಕ ನೀರು ಉಕ್ಕೇರಿದೆ. ಮಳೆ ಮುಂದುವರಿದಲ್ಲಿ ಮನೆಗಳಿಗೂ ನೀರು ನುಗ್ಗುವ ಅಪಾಯ ಇದೆ. ಕವಲಕ್ಕಿ ಸಮೀಪದ ರಸ್ತೆಯ ಮೇಲೆ ಗುಡ್ಡ ಕುಸಿದು ಕೆಲ ಸಮಯ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
ಭಟ್ಕಳದಲ್ಲಿ ಮಳೆ ಮುಂದುವರಿದಿದ್ದು ಶಂಸುದ್ದೀನ್ ಸರ್ಕಲ್, ರಂಗಿಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನುಗ್ಗಿದ್ದು ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಭಟ್ಕಳಕ್ಕೆ ತೆರಳಿ ಹೆದ್ದಾರಿ ಜಲಾವೃತವಾಗಿರುವುದನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ವಿದ್ಯಾರ್ಥಿಗಳ ಪರದಾಟ ತಪ್ಪಿತು. ಮಳೆಯಿಂದಾಗಿ ಜನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಮಳೆಯ ಪ್ರಮಾಣ:
ಮಂಗಳವಾರ ಮುಂಜಾನೆ 8 ಗಂಟೆಯಿಂದ ನಂತರದ 24 ಗಂಟೆಗಳಲ್ಲಿ ಉಂಟಾದ ಮಳೆಯ ಪ್ರಮಾಣ ಹೀಗಿದೆ.
ಭಟ್ಕಳದ ಮುಂಡಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 193 ಮಿ.ಮೀ ಮಳೆಯಾಗಿದೆ. ಕಾರವಾರದ ಶಿರವಾಡದಲ್ಲಿ 188 ಮಿ.ಮೀ. ಹಾಗೂ ಭಟ್ಕಳ ಬೆಳಕೆಯಲ್ಲಿ 187.5 ಮೀ.ಮೀ.ಮಳೆಯಾಗಿದೆ.
ಅಂಕೋಲಾ 73.6 ಮಿ.ಮೀ, ಭಟ್ಕಳ 148 .8 ಮಿ.ಮೀ., ಹೊನ್ನಾವರ 126.4 ಮಿ.ಮೀ, ಕಾರವಾರ 102.6 ಮಿ,ಮೀ, ಕುಮಟಾ 94.4 ಮಿ.ಮೀ, ಸಿದ್ಧಾಪುರ 66 ಮಿ.ಮೀ, ಮಳೆಯಾಗಿದೆ.
ಕರಾವಳಿಯ 3 ಜಿಲ್ಲೆಗಳಿಗೆ ಇಂದು ‘ರೆಡ್ ಅಲರ್ಟ್’: 20 ಸೆಂ.ಮೀ.ವರೆಗೂ ಮಳೆಯಾಗುವ ಸಂಭವ
ತಾಲೂಕುವಾರು ಮಳೆಯ ಪ್ರಮಾಣ
ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಸುರಿದ ಮಳೆಯ ಪ್ರಮಾಣ ಇಂತಿದೆ. ಅಂಕೋಲಾ 71.1 ಮಿಮೀ, ಭಟ್ಕಳ 184 ಮಿಮೀ, ದಾಂಡೇಲಿ 23 ಮಿಮೀ, ಹಳಿಯಾಳ 15.8 ಮಿಮೀ, ಹೊನ್ನಾವರ 177.1 ಮಿಮೀ, ಜೊಯಿಡಾ 19.4 ಮಿಮೀ, ಕಾರವಾರ 177.6 ಮಿಮೀ, ಕುಮಟಾ 116.9ಮಿಮೀ, ಮುಂಡಗೋಡ 18.2 ಮಿಮೀ, ಸಿದ್ದಾಪುರ 55.4 ಮಿಮೀ, ಶಿರಸಿ 23 ಮಿಮೀ, ಯಲ್ಲಾಪುರ 25.6 ಮಿಮೀ ಮಳೆಯಾಗಿದೆ.