Asianet Suvarna News Asianet Suvarna News

ಕರಾವಳಿಯ 3 ಜಿಲ್ಲೆಗಳಿಗೆ ಇಂದು ‘ರೆಡ್‌ ಅಲರ್ಟ್‌’: 20 ಸೆಂ.ಮೀ.ವರೆಗೂ ಮಳೆಯಾಗುವ ಸಂಭವ

ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂದಿನ 24 ಗಂಟೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಈ ಮೂರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಎಚ್ಚರಿಕೆ ನೀಡಿದೆ. 

Red alert for 3 coastal districts on july 5th Meteorological department forecast gvd
Author
First Published Jul 5, 2023, 6:03 AM IST

ಬೆಂಗಳೂರು (ಜು.05): ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂದಿನ 24 ಗಂಟೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಈ ಮೂರು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಎಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ 20 ಸೆಂ.ಮೀ.ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂದುವರೆದು, ಕರಾವಳಿ ಜಿಲ್ಲೆಗಳಿಗೆ ಜುಲೈ 6 ಮತ್ತು 7ಕ್ಕೆ ಆರೆಂಜ್‌, 8 ಮತ್ತು 9ಕ್ಕೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ಉಳಿದಂತೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಮತ್ತು ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಇನ್ನು ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ 17 ಸೆಂ.ಮೀ. ಮಳೆಯಾಗಿದೆ. ಪಣಂಬೂರು, ಮಂಗಳೂರಿನಲ್ಲಿ ತಲಾ 15, ಉತ್ತರ ಕನ್ನಡದ ಅಂಕೋಲಾದಲ್ಲಿ 12, ಶಿರಾಲಿ, ಹೊನ್ನಾವರ, ಮಂಕಿಯಲ್ಲಿ ತಲಾ 9, ಗೋಕರ್ಣ, ಬೇಲಿಕೇರಿ, ಕುಂದಾಪುರದಲ್ಲಿ ತಲಾ 8, ಗೇರಸೊಪ್ಪಾ, ಕಾರವಾರ, ಕೋಟ ಹಾಗೂ ಉಡುಪಿಯಲ್ಲಿ ತಲಾ 7 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗ್ಯಾರಂಟಿಗೆ ಬಿಜೆಪಿ ಹೋರಾಟ: ಬಿಎಸ್‌ವೈ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಪ್ರತಿಭಟನೆ

ಕರಾವಳಿಯಲ್ಲಿ ಭಾರಿ ಮಳೆ, ಜನಸಂಚಾರದಲ್ಲಿ ವ್ಯತ್ಯಯ: ಉತ್ತರ ಕನ್ನಡದ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದೆ. ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಕೆಲವೆಡೆ ಮನೆಗಳ ಮೇಲೆ ಮರ ಉರುಳಿ ಹಾನಿ ಉಂಟಾಗಿದೆ. ಜಿಲ್ಲೆಯ ಕರಾವಳಿಯ ಕೆಲವೆಡೆ ಸೋಮವಾರ ರಾತ್ರಿ ಆಗಾಗ ಭಾರಿ ಮಳೆಯಾಗಿತ್ತು. ಭಟ್ಕಳದಲ್ಲಿ ಸೋಮವಾರ ರಾತ್ರಿ ಭಾರಿ ಮಳೆ ಸುರಿದರೆ, ಮಂಗಳವಾರ ಮಧ್ಯಾಹ್ನದಿಂದ ಭಾರಿ ಮಳೆ ಮುಂದುವರಿದಿದೆ. ಇದರಿಂದ ರಂಗಿನಕಟ್ಟಾ, ಶಂಸುದ್ದೀನ್‌ ಸರ್ಕಲ್‌ ಜಲಾವೃತವಾಗಿ ಸಂಚಾರಕ್ಕೆ ತೊಂದರೆ ಉಂಟಾಯಿತು.

ಭಟ್ಕಳದ ದೇವಾಲಯ ಹಾಗೂ ಮನೆಯ ಮೇಲೆ ಮರ ಉರುಳಿ ಹಾನಿ ಉಂಟಾಗಿದೆ. ಹೊನ್ನಾವರದಲ್ಲೂ ಎರಡು ಮನೆಗಳ ಮೇಲೆ ಮರ ಉರುಳಿದೆ. ಮಂಗಳವಾರ ಸಂಜೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರಗಳಲ್ಲೂ ಭಾರಿ ಮಳೆಯಾಗುತ್ತಿದೆ. ಕಾರವಾರದ ಹೈಚರ್ಟ್‌ ರಸ್ತೆ, ಮಾರಿಯಾ ನಗರ ಹಾಗೂ ಸಂಕ್ರಿವಾಡದಲ್ಲಿ ರಸ್ತೆಯ ಮೇಲೆ ನೀರು ನುಗ್ಗಿದೆ. ಮಳೆ ಮುಂದುವರಿದಲ್ಲಿ ಇನ್ನಷ್ಟು ಪ್ರದೇಶ ಜಲಾವೃತವಾಗುವ ಸಾಧ್ಯತೆ ಇದೆ. 

ದ.ಕ ಜಿಲ್ಲೆ ಭಾರೀ ಮಳೆ ಸಾಧ್ಯತೆ: ತಹಶೀಲ್ದಾರ್‌ಗಳಿಗೆ ಶಾಲೆಗಳಿಗೆ ರಜೆ ಘೋಷಿಸುವ ಅಧಿಕಾರ: ಡಿಸಿ ಆದೇಶ

ಭಾರಿ ಮಳೆಯಿಂದ ಮಂಗಳವಾರ ಸಂಜೆಯಿಂದ ಕರಾವಳಿಯಲ್ಲಿ ಜನಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವೆಡೆ ವಿದ್ಯುತ್‌ ಕೂಡ ಕೈಕೊಟ್ಟಿದೆ. ಕಳೆದ ನಾಲ್ಕು ದಿನಗಳಿಂದ ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿತ್ತು. ಮಂಗಳವಾರ ಸಂಜೆಯಾಗುತ್ತಿದ್ದಂತೆ ಮಳೆ ಬಿರುಸಾಗಿ ಬೀಳುತ್ತಿದೆ. ಇನ್ನೂ ಮೂರು ದಿನಗಳ ಕಾಲ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೇಂಜ್‌ ಅಲರ್ಟ್‌ ನೀಡಲಾಗಿದೆ.

Follow Us:
Download App:
  • android
  • ios