ಮೆಟ್ರೋ ನಿಲ್ದಾಣಗಳಲ್ಲಿ ಐಬಿಎಸ್, ಬಿಟಿಎಸ್ ಸೆಲ್ಯೂಲಾರ್ ಟವರ್ ಮತ್ತು ಪೋಲ್‌ಗಳನ್ನು ಇಟ್ಟು ವೈಫೈ ಮೂಲಕ ಗ್ರಾಹಕರಿಗೆ 4ಜಿ, 5ಜಿ ಸೇವೆ ಲಭ್ಯವಾಗುವಂತೆ ಮಾಡಲು ಮುಂದಾಗಿದೆ.
ಬೆಂಗಳೂರು (ಜು.17): ಮೆಟ್ರೋ ಮಾರ್ಗದಲ್ಲಿ ಉಂಟಾಗುವ ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ ಬಿಎಂಆರ್‌ಸಿಎಲ್, ಮೆಟ್ರೋ ನಿಲ್ದಾಣಗಳಲ್ಲಿ ಐಬಿಎಸ್, ಬಿಟಿಎಸ್ ಸೆಲ್ಯೂಲಾರ್ ಟವರ್ ಮತ್ತು ಪೋಲ್‌ಗಳನ್ನು ಇಟ್ಟು ವೈಫೈ ಮೂಲಕ ಗ್ರಾಹಕರಿಗೆ 4ಜಿ, 5ಜಿ ಸೇವೆ ಲಭ್ಯವಾಗುವಂತೆ ಮಾಡಲು ಮುಂದಾಗಿದೆ.
ನಮ್ಮ ಮೆಟ್ರೋ ಎರಡನೇ ಹಂತದ ಸುರಂಗ ಹಾಗೂ ಎತ್ತರಿಸಿದ ಮಾರ್ಗದಲ್ಲಿ ನಿರಂತರ ಮತ್ತು ಸುಗಮ ಮೊಬೈಲ್ ಸಂಪರ್ಕವನ್ನು ಒದಗಿಸಲು ಅಡ್ವಾನ್ಸ್ಡ್ ಕಮ್ಯೂನಿಕೇಶನ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಕಂಪನಿ (ಎಸಿಎಎಸ್) ಸಂಸ್ಥೆಯೊಂದಿಗೆ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಸದ್ಯ ಮೆಟ್ರೋ ಮಾರ್ಗದ ಅಲ್ಲಲ್ಲಿ ಪ್ರಯಾಣಿಕರಿಗೆ ಉಂಟಾಗುತ್ತಿರುವ ನೆಟ್‌ವರ್ಕ್ ಸಮಸ್ಯೆ ತಪ್ಪಲಿದೆ. ಜತೆಗೆ ವಿಶೇಷವಾಗಿ ಭೂಗತ ಮಾರ್ಗವಿರುವ ಡೈರಿ ವೃತ್ತದಿಂದ ನಾಗವಾರದವರೆಗೆ (13.76 ಕಿಮೀ) ಇಲ್ಲಿನ 12 ನಿಲ್ದಾಣಗಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.
ಇದರಿಂದ ನಿಗಮಕ್ಕೆ ಪ್ರಯಾಣ ದರದ ಹೊರತಾದ ಆದಾಯ (ವೈ-ಫೈಗೆ ವಿಧಿಸುವ ಶುಲ್ಕದ ರೂಪದಲ್ಲಿ) ಕೂಡ ಬರಲಿದೆ. ಇದು 13 ವರ್ಷಗಳ ಪರವಾನಗಿ ಅವಧಿಯ ಒಪ್ಪಂದವಾಗಿದೆ. ಎಸಿಇಎಸ್ ಇಂಡಿಯಾ ಸಂಸ್ಥೆಯು ಮೆಟ್ರೋ ಹಂತ-1 ರ ನಾಲ್ಕುದಿಕ್ಕು ವಿಸ್ತರಣೆ ಹಾಗೂ ಹಂತ-2 ರ ರೀಚ್-5 ಮತ್ತು ರೀಚ್-6 ಮಾರ್ಗ ಮೆಟ್ರೋ ನಿಲ್ದಾಣಗಳಲ್ಲಿ ನೆಟ್‌ವರ್ಕ್ ಪೂರೈಸಲು ಕಂಬವನ್ನು ಅಳವಡಿಸಿ ಕಾರ್ಯನಿರ್ವಹಿಸಿ, ನಿರ್ವಹಣೆ ಮಾಡಲಿದೆ.
ಈ ವೇಳೆ ಬಿಎಂಆರ್‌ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ (ಸಿಸ್ಟಮ್ಸ್) ಎ.ಎಸ್. ಶಂಕರ್ ಎಸಿಇಎಸ್‌ಇ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಎನ್. ಮಝರ್ ಸಹಿ ಹಾಕಿದರು. ಬಿಎಂಆರ್‌ಸಿಎಲ್ ನಿರ್ದೇಶಕ ಸುಮಿತ್ ಭಟ್ನಾಗರ್, ಹಾಗೂ ಎಸಿಇಎಸ್ ಸಿಇಒ ಡಾ. ಅಕ್ರಮ್ ಅಬುರಾಸ್ ಹಾಗೂ ಅಧಿಕಾರಿಗಳು ಇದ್ದರು.
