Mandya: ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ: ಶಾಸಕ ರವಿಕುಮಾರ್ ಗೌಡ
ತಾಲೂಕಿನ ಬಸರಾಳು ಹಾಗೂ ಕೆರಗೋಡು ಸಮುದಾಯ ಆರೋಗ್ಯ ಕೇಂದ್ರಗಳನ್ನು 50 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಪಿ.ರವಿಕುಮಾರ್ ಗೌಡ ಹೇಳಿದರು.
ಮಂಡ್ಯ (ಜೂ.03): ತಾಲೂಕಿನ ಬಸರಾಳು ಹಾಗೂ ಕೆರಗೋಡು ಸಮುದಾಯ ಆರೋಗ್ಯ ಕೇಂದ್ರಗಳನ್ನು 50 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಪಿ.ರವಿಕುಮಾರ್ ಗೌಡ ಹೇಳಿದರು. ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸರಾಳು ಮತ್ತು ಕೆರಗೋಡು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆಯೇ ಎಂದು ಪ್ರಶ್ನಿಸಿದರು.
ಆ ಸಮಯದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಜವರೇಗೌಡ ಮಾತನಾಡಿ, ಎರಡೂ ಆಸ್ಪತ್ರೆಗಳನ್ನು 30 ಬೆಡ್‌ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಾಗ, 30 ಹಾಸಿಗೆಗಳ ಬದಲು 50 ಹಾಸಿಗೆಗಳಿಗೆ ಹೆಚ್ಚಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಬಸರಾಳು ಆಸ್ಪತ್ರೆಗೆ ಹೇಮಾವತಿ ವಸತಿಗೃಹದಲ್ಲಿ ಸ್ಥಳ ಒದಗಿಸಲಾಗಿದೆ. ಕೆರಗೋಡು ಆಸ್ಪತ್ರೆಗೆ ಇನ್ನೂ ಜಾಗದ ದೊರಕಿಲ್ಲವೆಂದು ವೈದ್ಯಾಧಿಕಾರಿಗಳು ತಿಳಿಸಿದಾಗ, ಕೆರಗೋಡಿನಲ್ಲಿ ಜಾಗವಿರುವುದಾಗಿ ಪಂಚಾಯಿತಿಯವರು ನನಗೆ ತಿಳಿಸಿದ್ದಾರೆ. ಆ ಜಾಗ ದೊರಕಿಸಿಕೊಡುವ ಜವಾಬ್ದಾರಿ ನನ್ನದು ಎಂದು ಹೊಣೆಗಾರಿಕೆ ವಹಿಸಿಕೊಂಡರು.
ಕಾಂಗ್ರೆಸ್ ಗ್ಯಾರಂಟಿ ಜಾರಿಗೆ ಕರಾರು: ಸಂಸದ ಎಸ್.ಮುನಿಸ್ವಾಮಿ ಆಕ್ಷೇಪ
ಪಶು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ಮಂಡ್ಯ ತಾಲೂಕಿನಲ್ಲಿರುವ 45 ಪಶುಪಾಲನಾ ಕೇಂದ್ರಗಳ ಪೈಕಿ 25 ಕೇಂದ್ರಗಳು ಮಂಡ್ಯ ಕ್ಷೇತ್ರಕ್ಕೆ ಒಳಪಡಲಿವೆ. ಬಹುಮುಖ್ಯವಾಗಿ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ. 93 ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸಬೇಕಾದ ಜಾಗದಲ್ಲಿ 36 ಜನರು ಕಾರ್ಯನಿರ್ವಹಿಸುತ್ತಿದ್ದಾರೆ. 26 ಜನ ಅಧಿಕಾರಿ ವರ್ಗದವರಿಗೆ 8 ಮಂದಿ ಮಾತ್ರ ಕರ್ತವ್ಯದಲ್ಲಿ ತೊಡಗಿದ್ದಾರೆ. 15 ಜನ ರೇಷ್ಮೆ ಸಹಾಯಕರಿಗೆ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಹೀಗಾದರೆ ರೇಷ್ಮೆ ಬೆಳೆಗಾರರಿಗೆ ತಾಂತ್ರಿಕ ಅರಿವು ಮೂಡಿಸುವುದಾದರೂ ಹೇಗೆ ಎಂದು ಇಲಾಖೆ ಅಧಿಕಾರಿಯೊಬ್ಬರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಶಾಸಕ ಪಿ.ರವಿಕುಮಾರ್, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಯೇ ಎಂದಾಗ. ಹಿಂದೆಯೇ ಪ್ರಸ್ತಾವನೆ ಕಳುಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು. ಇದೀಗ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ತಾಪಂ ಇಓ ವೇಣುಗೋಪಾಲ್, ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು, ಸಿಪಿಒ ಶ್ರೀನಿವಾಸ್ ಇದ್ದರು.
ತುರ್ತು ನಿಧಿ ಅವಶ್ಯ: ಸರ್ಕಾರಿ ಶಾಲೆಗಳ ತುರ್ತು ದುರಸ್ತಿಗೆ ಅನುಕೂಲವಾಗುವಂತೆ ತುರ್ತು ನಿಧಿಯನ್ನು ಸ್ಥಾಪಿಸುವ ಅವಶ್ಯಕತೆ ಇರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಗೆ ತಿಳಿಸಿದರು. ನಮ್ಮ ವ್ಯಾಪ್ತಿಯಲ್ಲೇ 35 ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳಿಗೆ ಅಂದಾಜು ಪಟ್ಟಿತಯಾರಿಸಿ, ಪ್ರಸ್ತಾವನೆ ಸಲ್ಲಿಸಿ, ಮಂಜೂರಾಗಿ ಬರುವುದು ವಿಳಂಬವಾಗುತ್ತಿದೆ. ಇದರಿಂದ ಸಾಕಷ್ಟುಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇದಕ್ಕೆ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದರು. ಅದೇ ರೀತಿ ಮಂಡ್ಯ ನಗರ ವ್ಯಾಪ್ತಿಯಲ್ಲಿ 102 ಅಂಗನವಾಡಿ ಶಾಲೆಗಳಿವೆ. ಅದರಲ್ಲಿ 55 ಗ್ರಾಮಾಂತರ ಪ್ರದೇಶದಲ್ಲಿವೆ. ಚಿಕ್ಕಮಂಡ್ಯ ಅಂಗನವಾಡಿ ಶಾಲೆ ದುರಸ್ತಿಗೆ 2 ಲಕ್ಷ ಬಿಡುಗಡೆಯಾಗಿದ್ದು ಬಿಟ್ಟರೆ ಉಳಿದ ಹಣ ಬಿಡುಗಡೆಯಾಗಿಲ್ಲ. ಇನ್ನೂ 4 ಲಕ್ಷ ರು. ಅವಶ್ಯಕತೆ ಇದೆ ಎಂದಾಗ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡರ ಅನುದಾನದಲ್ಲಿ ಹಣ ದೊರಕಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ನಾನು ಬಂದು ಕರೆಂಟ್ ಕಿತ್ತಾಕಿಸ್ದೆ ಅನ್ಕೊಳೋಲ್ವಾ: ಸಾತನೂರು ಸುತ್ತಮುತ್ತಲ ಗ್ರಾಮದ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ವಿದ್ಯುತ್ ಪೂರೈಕೆಗೆ ಬದಲಾವಣೆ ಮಾಡಲಾಗಿದೆ. ಈ ಮೊದಲು ಮಂಡ್ಯ ಸಿಟಿ ಫೀಡರ್‌ಗೆ ಒಳಪಟ್ಟಿದ್ದರಿಂದ 24 ತಾಸು ವಿದ್ಯುತ್ ಸರಬರಾಜಾಗುತ್ತಿತ್ತು. ಈಗ ಅದನ್ನು ಬದಲಾಯಿಸಿ 7 ಗಂಟೆಗಳ ವಿದ್ಯುತ್ ಪೂರೈಕೆಗೆ ಪರಿವರ್ತಿಸಲಾಗಿದೆ ಎಂದು ಸೆಸ್ಕಾಂ ಅಧಿಕಾರಿಗಳು ಹೇಳಿದರು. ಈ ಮೊದಲೆಲ್ಲಾ ಆ ಭಾಗದ ಜನರಿಗೆ 24 ಗಂಟೆ ವಿದ್ಯುತ್ ಕೊಟ್ಟು ಈಗ ನಾನು ಬಂದ ಮೇಲೆ ಬದಲಾವಣೆ ಮಾಡಬೇಕಿತ್ತೇನ್ರೀ. ಈಗ ಜನ ಏನು ಅಂದ್ಕೋತಾರೆ. ಇವನು ಬಂದು ನಮ್ಮ ಕರೆಂಟ್ ಕಿತ್ತುಹಾಕಿಸಿದಾ ಅನ್ಕೋಳೋಲ್ವಾ.
ಗ್ರಾಮೀಣ ಮಹಿಳೆಯರಿಗೆ ಉಚಿತ ಪ್ರಯಾಣ ಹೇಗೆ?: ಹಲವು ಗ್ರಾಮಗಳಲ್ಲಿ ಬಸ್ ಸೌಲಭ್ಯ ಇಲ್ಲ!
ಮತ್ತೆ 24 ಗಂಟೆ ವಿದ್ಯುತ್ ಪೂರೈಕೆ ಮಾಡುವಂತೆ ಆಲೋಚಿಸಿ ನೋಡಿ ಎಂದು ಶಾಸಕ ರವಿಕುಮಾರ್ ಅಧಿಕಾರಿಗಳಿಗೆ ತಿಳಿಸಿದರು. ಒಮ್ಮೆ ಫೀಡರ್‌ನಿಂದ ಬದಲಾವಣೆ ಮಾಡಲಾಯಿತೆಂದರೆ ಮತ್ತೆ ಜೋಡಣೆ ಮಾಡುವುದು ಕಷ್ಟವಿದೆ. ಈಗಿರುವ ವ್ಯವಸ್ಥೆಯಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುವುದು ಎಂದು ಅಧಿಕಾರಿಗಳು ನಿಸ್ಸಹಾಯಕರಾಗಿ ಹೇಳಿದಾಗ, ಈ ವಿಷಯವಾಗಿ ಸೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದರು. ರಾಸುಗಳು ಸಾವನ್ನಪ್ಪಿದ ಸಮಯದಲ್ಲಿ 24 ಗಂಟೆಯೊಳಗೆ ಪರಿಹಾರ ಹಣ ರೈತರ ಕೈಸೇರಬೇಕು. ಈ ಪರಿಹಾರ ತಲುಪುವಲ್ಲಿ ವಿಳಂಬವಾಗುತ್ತಿದೆ. ಅದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.