ಕೊಪ್ಪಳ ಜಿಲ್ಲೆಯ ಹಿಟ್ನಾಳ ಬಳಿ ಟೋಲ್‌ಗೇಟ್‌ ಅವೈಜ್ಞಾನಿಕ| 6 ಕಿಮೀ ಅಂತರದಲ್ಲೇ ಮತ್ತೊಂದು ಟೋಲ್‌| ಹಲವು ಹೋರಾಟ ಮಾಡಿದರೂ ಆಗಿಲ್ಲ ಪ್ರಯೋಜನ| ತಪ್ಪಿತಸ್ಥರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೊಳಪಡಿಸಲಾಗುವುದು: ಕೊಪ್ಪಳ ಎಸ್ಪಿ ಟಿ. ಶ್ರೀಧರ|  

ಸೋಮರಡ್ಡಿ ಅಳವಂಡಿ

ಕೊಪ್ಪಳ(ಮಾ.28): ಟೋಲ್‌ ರಸ್ತೆಯಲ್ಲಿ ಸಂಚಾರ ಮಾಡುವುದೇ ಇಲ್ಲ. ಆದರೂ ಕೇವಲ ಟೋಲ್‌ ದಾಟಲು ಟೋಲ್‌ ಕಟ್ಟಬೇಕು. ಕೊಪ್ಪಳ ತಾಲೂಕಿನ ಹಿಟ್ನಾಳ ಮತ್ತು ಶಹಾಪುರ ಬಳಿ ಇರುವ ಅವೈಜ್ಞಾನಿಕ ಟೋಲ್‌ ಸಮಸ್ಯೆ ಇದು. ಸಾಮಾನ್ಯವಾಗಿ ಟೋಲ್‌ ರಸ್ತೆಯಲ್ಲಿ 40 ಕಿಮೀ ಸಂಚಾರ ಮಾಡುವುದಕ್ಕೆ ಟೋಲ್‌ ಪಾವತಿ ಮಾಡಬೇಕು. ಕನಿಷ್ಠ 40 ಕಿಮೀ ಅಂತರದಲ್ಲಿ ಟೋಲ್‌ಗೇಟ್‌ ಇರಬೇಕು. ಆದರೆ, ಕೊಪ್ಪಳ ತಾಲೂಕಿನ ಹಿಟ್ನಾಳ ಟೋಲ್‌ಗೇಟ್‌ ಮಾತ್ರ ಇದ್ಯಾವ ನಿಯಮಗಳು ಅನ್ವಯ ಆಗುವುದಿಲ್ಲ.

ಟೋಲ್‌ ರಸ್ತೆಯಲ್ಲಿ ಸಂಚಾರ ಮಾಡದವರು ಟೋಲ್‌ ಪಾವತಿ ಮಾಡಬೇಕಾದ ಸ್ಥಿತಿ ಇದೆ. ಕೊಪ್ಪಳ ಸೇರಿದಂತೆ ನಾನಾ ಜಿಲ್ಲೆ, ರಾಜ್ಯದಿಂದ ಕೊಪ್ಪಳ ಮಾರ್ಗವಾಗಿ ಹುಲಿಗಿಯ ಹುಲಿಗೆಮ್ಮಾ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ತೆರಳುತ್ತಾರೆ. ಇದರಲ್ಲಿ ಬಹುತೇಕರು ಕಾರು, ಟ್ಯಾಕ್ಸಿ ಸೇರಿದಂತೆ ಮೊದಲಾದ ವಾಹನಗಳಲ್ಲಿ ತೆರಳುತ್ತಾರೆ.

ಇವರ್ಯಾರು ಟೋಲ್‌ ರಸ್ತೆಯಲ್ಲಿ ಅರ್ಧ ಕಿಮೀ ಸಂಚಾರ ಮಾಡುವುದಿಲ್ಲ. ಆದರೆ, ಹಿಟ್ನಾಳ ಬಳಿ ಇರುವ ಈ ಟೋಲ್‌ ದಾಟುವುದಕ್ಕಾಗಿಯೇ ಟೋಲ್‌ ಪಾವತಿ ಮಾಡಬೇಕು. ಕೊಪ್ಪಳ ಮಾರ್ಗವಾಗಿ ಹುಲಿಗಿಗೆ ತೆರಳುವವರು ಟೋಲ್‌ ದಾಟುತ್ತಿದ್ದಂತೆ ಹುಲಿಗಿ ರಸ್ತೆಗೆ ಹೋಗುತ್ತಾರೆಯೇ ಹೊರತು ಟೋಲ್‌ ರಸ್ತೆಯಲ್ಲಿ ತೆರಳುವುದಿಲ್ಲ. ಆದರೂ ಇವರೆಲ್ಲಾ ಟೋಲ್‌ ಪಾವತಿ ಮಾಡಬೇಕು.

ಕೊಪ್ಪಳ: ಬಸಂತಿ ಸಾಂಗ್‌ಗೆ ಭರ್ಜರಿ ಡ್ಯಾನ್ಸ್‌ ಮಾಡಿದ ಶಿಕ್ಷಕಿ..!

ಇದು ತೀರಾ ಅವೈಜ್ಞಾನಿಕ. ಇದು ಸಾಲದು ಎಂಬಂತೆ ಹಿಟ್ನಾಳ ಟೋಲ್‌ಗೇಟ್‌ಗೆ 6 ಕಿಮೀ ಅಂತರದಲ್ಲಿ ಮತ್ತೊಂದು ಟೋಲ್‌ ಇದೆ. ಕುಷ್ಟಗಿಯಿಂದ ಬರುವ ವಾಹನಗಳು ತಪ್ಪಿಸಿಕೊಳ್ಳುತ್ತವೆ ಎಂದು ಅಲ್ಲೊಂದು ಟೋಲ್‌ಗೇಟ್‌ ಮಾಡಿದ್ದಾರೆ. ಕೇವಲ 6 ಕಿಮೀನಲ್ಲಿ ಎರಡು ಟೋಲ್‌. ಹೀಗಾಗಿ ಕೆರೆಹಳ್ಳಿ, ಹುಲಿಗಿ, ಅಗಳಿಕೇರಿ, ಬಸಾಪುರ ಸೇರಿದಂತೆ ಅನೇಕ ಗ್ರಾಮಕ್ಕೆ ತೆರಳುವವರು ಟೋಲ್‌ ರಸ್ತೆಯಲ್ಲಿ ಸಂಚಾರ ಮಾಡದಿದ್ದರೂ ಟೋಲ್‌ ಪಾವತಿ ಮಾಡಬೇಕು.

ಅನೇಕ ಬಾರಿ ಹೋರಾಟ:

ಈ ಕುರಿತು ಅನೇಕ ಬಾರಿ ಹೋರಾಟವೂ ಆಗಿದೆ. ಕೆಲ ವರ್ಷಗಳ ಹಿಂದೆ ಸ್ವತಃ ಜಿಲ್ಲಾಧಿಕಾರಿಗಳೇ ಈ ಟೋಲ್‌ಗಳು ಅವೈಜ್ಞಾನಿಕ ಎಂದು ವರದಿ ಸಲ್ಲಿಸಿದ್ದಾರೆ. ಕೆಲ ದಿನಗಳ ಕಾಲ ಬಂದ್‌ ಸಹ ಮಾಡಿದ್ದರು. ಆದರೂ ರಾಜಕೀಯ ಒತ್ತಡ ತಂದು ಪುನಃ ಪ್ರಾರಂಭಿಸಿದರು.

ಇದರ ವಿರುದ್ಧ ಸಾಲು ಸಾಲು ಹೋರಾಟಗಳು ನಡೆದಿವೆ. ರೊಚ್ಚಿಗೆದ್ದ ಜನರು ಟೋಲ್‌ಗೆ ಬೆಂಕಿ ಹಚ್ಚಿ, ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಚುನಾಯಿತ ಜನಪ್ರತಿನಿಧಿಗಳ ಮೌನದಿಂದ ಟೋಲ್‌ಗೇಟ್‌ ಅಟ್ಟಹಾಸ ಮುಂದುವರಿದಿದೆ. ಇವುಗಳ ಎತ್ತಂಗಡಿಯಾಗಬೇಕು ಎನ್ನುವ ಬಹುದಿನಗಳ ಕೂಗಿಗೆ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಧ್ವನಿಗೂಡಿಸುವರೇ ಎನ್ನುವುದೇ ಬಹುದೊಡ್ಡ ಪ್ರಶ್ನೆ.

ಶಾಸಕ ರಾಘವೇಂದ್ರ ಹಿಟ್ನಾಳ ಅವರು ವಿಧಾನಸಭೆಯಲ್ಲಿ ಅವೈಜ್ಞಾನಿಕ ಟೋಲ್‌ಗೇಟ್‌ಗಳ ಕುರಿತು ಪ್ರಶ್ನೆ ಮಾಡಿದ್ದಾರೆ. ಇವುಗಳನ್ನು ತೆಗೆಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಆದರೂ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಇದುವರೆಗೂ ಬಂದಿಲ್ಲ.

ಕೊಪ್ಪಳ: ಲಾಕ್‌ಡೌನ್‌ನಲ್ಲಿ ಬ್ಯಾಟರಿ ಸೈಕಲ್‌ ಕಂಡುಹಿಡಿದ ಬಾಲಕ..!

ದಾದಾಗಿರಿ:

ಅವೈಜ್ಞಾನಿಕವಾಗಿ ಇರುವ ಟೋಲ್‌ಗೇಟ್‌ನಲ್ಲಿ ಹಣ ಪಾವತಿ ಮಾಡುವುದಕ್ಕೆ ಜನರು ಆಗಾಗ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೆಲ್ಲ ಪ್ರಯತ್ನದ ಫಲವಾಗಿ ಸುತ್ತಮುತ್ತ ಗ್ರಾಮಗಳ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಸ್ಥಳೀಯರಲ್ಲದವರು ಹುಲಿಗಿ ಮತ್ತಿತರ ಗ್ರಾಮಗಳಿಗೆ ಸಂಚಾರ ಮಾಡುವವರು ಟೋಲ್‌ ದಾಟುವುದಕ್ಕಾಗಿಯೇ ಟೋಲ್‌ ಪಾವತಿ ಮಾಡಬೇಕಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದು ಒಂದು ಕಡೆಯಾದರೆ ಮತ್ತೊಂದು ಶಹಾಪುರ ಮತ್ತು ಹಿಟ್ನಾಳ ಟೋಲ್‌ಗೇಟ್‌ನಲ್ಲಿ ದಾದಾಗಿರಿ ಮಾಡಲಾಗುತ್ತದೆ. ಅಲ್ಲಿಯ ಸಿಬ್ಬಂದಿ ದುಂಡಾವರ್ತನೆ ಹೇಳತೀರದು. ಟೋಲ್‌ ಕುರಿತು ಒಂಚೂರು ಚಕಾರ ಎತ್ತಿದರೆ ಸಾಕು ಹರಿದು ತಿಂದುಬಿಡುತ್ತಾರೆ. ಅವರ ಗೂಂಡಾವರ್ತನೆ ಬಯಲಾಗಿದೆ. ಇತ್ತೀಚೆಗೆ ಎಂಜಿನಿಯರ್‌ ಮೇಲೆ ಹಲ್ಲೆ ಮಾಡಿದ ವೀಡಿಯೋ ಹಾಗೂ ಎಎಸ್‌ಐ ಬಾಬುರಾವ್‌ ಮೇಲೆ ಮಾಡಿರುವ ಹಲ್ಲೆಯಿಂದಲೇ ಇವರ ಬಣ್ಣ ಬಯಲಾಗಿದೆ.

ಈ ಹಿಂದೆಯೂ ‘ಕನ್ನಡಪ್ರಭ’ ಅನೇಕ ಬಾರಿ ‘ಹಿಟ್ನಾಳ ಟೋಲ್‌ಗೇಟ್‌ನಲ್ಲಿ ಗೂಂಡಾಗಿರಿ’ ಎನ್ನುವ ತಲೆಬರಹದಡಿ ಸರಣಿ ವರದಿಗಳನ್ನು ಪ್ರಕಟಿಸಿ ಗಮನ ಸೆಳೆದಿದೆ. ಹಿಟ್ನಾಳ ಮತ್ತು ಶಹಾಪುರ ಟೋಲ್‌ಗೇಟ್‌ನಲ್ಲಿರುವ ಸಿಸಿ ಕ್ಯಾಮೆರಾ 2 ವರ್ಷಗಳ ಫೂಟೇಜ್‌ ತೆಗೆಸಿ ನೋಡಿದರೂ ಅಲ್ಲಿಯ ಸಿಬ್ಬಂದಿ ಗೂಂಡಾಗಿರಿ ಅನಾವರಣಗೊಳುತ್ತದೆ. ಇಲ್ಲಿ ಮಹಿಳೆಯರನ್ನು ಲೆಕ್ಕಿಸದೆ ಅವಾಚ್ಯ ಶಬ್ದಗಳಿಂದ ಬೈಯ್ಯಲಾಗುತ್ತದೆ. ಅನೇಕರ ಚಾಲಕರ ಮೇಲೆ ಹಲ್ಲೆ ಮಾಡಿದ್ದಾರೆ. ಟೋಲ್‌ ಅವೈಜ್ಞಾನಿಕವಾಗಿರುವುದನ್ನು ಪ್ರಶ್ನಿಸಿದರೆ ಸಾಕು ಹರಿದು ತಿಂದುಬಿಡುವಂತೆ ಮುಗಿಬೀಳುತ್ತಾರೆ. ಸೌಜನ್ಯಕ್ಕೂ ಗೌರವದಿಂದ ಮಾತನಾಡುವುದಿಲ್ಲ.

ಟೋಲ್‌ಗೇಟ್‌ನಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇದೆಲ್ಲವನ್ನೂ ಪರಿಶೀಲನೆ ಮಾಡಲಾಗುತ್ತಿದೆ. ತಪ್ಪಿತಸ್ಥರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೊಳಪಡಿಸಲಾಗುವುದು ಎಂದು ಕೊಪ್ಪಳ ಎಸ್ಪಿ ಟಿ. ಶ್ರೀಧರ ತಿಳಿಸಿದ್ದಾರೆ. 
ಹಿಟ್ನಾಳ ಮತ್ತು ಶಹಾಪುರ ಟೋಲ್‌ಗೇಟ್‌ ಅವೈಜ್ಞಾನಿಕವಾಗಿದ್ದು, ಅಲ್ಲಿ ದರ್ಪ ಮೆರೆಯಲಾಗುತ್ತಿದೆ. ನಮ್ಮ ಆರೋಗ್ಯ ಇಲಾಖೆಯ ಸಿಬ್ಬಂದಿಗೂ ಅಗೌರವ ತೋರಿದ್ದಾರೆ ಎಂದು ಕೊಪ್ಪಳ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ ಹೇಳಿದ್ದಾರೆ.