ಕೊಪ್ಪಳ: ಲಾಕ್‌ಡೌನ್‌ನಲ್ಲಿ ಬ್ಯಾಟರಿ ಸೈಕಲ್ ಕಂಡುಹಿಡಿದ ಬಾಲಕ..!
ಕೊಪ್ಪಳ(ಮಾ.21): ನಗರದ ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಬಾಳೇಶ ವಿಶ್ವನಾಥಯ್ಯ ಹಿರೇಮಠ ಎನ್ನುವ ವಿದ್ಯಾರ್ಥಿ ಹಳೆಯ ಸಾಮಗ್ರಿಗಳನ್ನು ಬಳಸಿ ಬ್ಯಾಟರಿ ಚಾಲಿತ ‘ಇಕೋ ಸೈಕಲ್’ ಸಿದ್ಧ ಮಾಡಿದ್ದಾನೆ.
ಸೈಕಲ್ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 30-35 ಕಿಮೀ ಓಡುತ್ತದೆ.
ಈ ಸೈಕಲ್‌ನಲ್ಲೇ ಶಾಲೆಗೆ ಹೋಗುವುದು, ಬರುವುದು ಮಾಡುತ್ತಾನೆ ಬಾಳೇಶ. ಇದು ಲಾಕ್‌ಡೌನ್ ವೇಳೆಯಲ್ಲಿ ಮನೆಯಲ್ಲಿಯೇ ಇದ್ದಾಗ ಮಾಡಿದ ಆವಿಷ್ಕಾರದ ಫಲ
ಹಳೆಯ ಸೈಕಲ್ ಬಿಡಿಭಾಗಗಳನ್ನು ಮತ್ತು ಇತರೆ ಬಿಡಿಭಾಗಗಗಳನ್ನು ಬಳಕೆ ಮಾಡಿ ಬ್ಯಾಟರಿ ಚಾಲಿತ ಸೈಕಲ್ ಕಂಡು ಹಿಡಿದ ಬಾಳೇಶ ವಿಶ್ವನಾಥಯ್ಯ ಹಿರೇಮಠ
ಈ ಸೈಕಲ್ ಸಿದ್ಧಪಡಿಸಲು ಸುಮಾರು ನಾಲ್ಕಾರು ತಿಂಗಳ ಕಾಲ ನಿರಂತರವಾಗಿ ಪರಿಶ್ರಮ ಹಾಕಿದ್ದಾನೆ. ಅನೇಕ ಬಾರಿ ವಿಫಲವಾಗಿದ್ದಾನೆ. ಆದರೂ ಹಠ ಬಿಡದೆ ಕೊನೆಗೂ ಯಶಸ್ವಿಯಾದ ಬಾಳೇಶ
ಲ್ಯಾಪ್‌ಟಾಪ್ ಬ್ಯಾಟರಿ ಸೇರಿದಂತೆ ನಾನಾ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಬಳಕೆ ಮಾಡಿದ್ದಾನೆ. ಯುಟ್ಯೂಬ್‌ನಲ್ಲಿ ನೋಡಿ ಈ ಬ್ಯಾಟರಿ ಚಾಲಿತ ಸೈಕಲ್ ಸಿದ್ಧ ಮಾಡಿದ್ದಾನೆ. ಇದಕ್ಕೆ ಆತ ಇಕೋ ಸೈಕಲ್ ಎಂದು ಹೆಸರಿಟ್ಟಿದ್ದಾನೆ.
ಬ್ಯಾಟರಿ ಚಾಲಿತ ಸೈಕಲ್‌ಗೆ ಸುಮಾರು 9500 ಖರ್ಚು ಮಾಡಿದ್ದಾನೆ. ತಾನು ಸಿದ್ಧ ಮಾಡಿರುವ ಸೈಕಲ್‌ನಲ್ಲಿಯೇ ಶಾಲೆಗೆ ನಿತ್ಯ ಹೋಗಿ ಬರುತ್ತಿರುವುದಕ್ಕೆ ಹೆಮ್ಮೆಪಡುತ್ತಾನೆ.
ತಮ್ಮ ಶಾಲೆಯಲ್ಲಿನ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇದಕ್ಕೆ ಅತ್ಯುತ್ತಮ ಪ್ರಶಸ್ತಿ ಕೂಡ ಲಭಿಸಿದೆ.
ಕಡಿಮೆ ದರದಲ್ಲಿ ಬೈಕ್ ಕಂಡುಹಿಡಿಯಬೇಕು ಎನ್ನುವುದು ನನ್ನ ಬಹುದೊಡ್ಡ ಆಸೆ. ಕೇವಲ ಹತ್ತು ಸಾವಿರ ರುಪಾಯಿಯಲ್ಲಿ ಬೈಕ್ ದೊರೆಯುವಂತಾಗಬೇಕು. ಈ ದಿಸೆಯಲ್ಲಿ ಮೊದಲ ಹಂತವಾಗಿ ಇಕೋ ಸೈಕಲ್ ಕಂಡು ಹಿಡಿದ್ದೇನೆ ಎಂದು ಬಾಳೇಶ ಹಿರೇಮಠ ತಿಳಿಸಿದ್ದಾನೆ.