ಮಂಡ್ಯ (ಜ.29):  ಸತ್ತ ಮಹಿಳೆಯ ಎಸ್‌ಬಿ ಖಾತೆಯಲ್ಲಿದ್ದ ಹಣವನ್ನು ಐದು ವರ್ಷಗಳ ಬಳಿಕ ಅಪರಿಚಿತರೊಬ್ಬರು ಎಗರಿಸಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಕೆರಗೋಡು ಉಪ ಅಂಚೆ ಕಚೇರಿಯಲ್ಲಿ ಈ ಗೋಲ್‌ಮಾಲ್‌ ನಡೆದಿದ್ದು, ಮೂರು ವರ್ಷಗಳ ಹಿಂದೆಯೇ ಈ ಸಂಬಂಧ ಅಂಚೆ ಇಲಾಖೆ ಅಧೀಕ್ಷಕರಿಗೆ ದೂರು ನೀಡಿದ್ದರೂ ಅದಿನ್ನೂ ತನಿಖಾ ಹಂತದಲ್ಲಿಯೇ ಇದೆ.

ಕಿಡಿಗೇಡಿಗಳು ಹಚ್ಚಿದ ಬೆಂಕಿ : ಸಿಲಿಂಡರ್‌ ಸ್ಫೋಟಗೊಂಡು ಲಕ್ಷಾಂತರ ರು. ಹಾನಿ ..

ಕೆರಗೋಡು ಗ್ರಾಮದ ವಿಜಯಾಂಬ ಅವರ ಹೆಸರಿನಲ್ಲಿ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಸತ್ತ ಐದು ವರ್ಷಗಳ ಬಳಿಕ ಅಪರಿಚಿತರೊಬ್ಬರು ಡ್ರಾ ಮಾಡಿದ್ದಾರೆ. ಯಾರು ಅಕ್ರಮವಾಗಿ ಹಣವನ್ನು ಪಡೆದಿದ್ದಾರೆ ಎನ್ನುವುದು ಇಂದಿಗೂ ಬೆಳಕಿಗೆ ಬಂದಿಲ್ಲ. ವಿಜಯಾಂಬ ಅಳಿಯ ಜೆ.ಎನ್‌.ಶಿವಪ್ರಕಾಶ್‌ ಅಂಚೆ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದುವರೆಗೆ ಸತ್ಯಾಂಶ ಹೊರಬಂದಿಲ್ಲ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:

ವಿಜಯಾಂಬ ಅವರಿಗೆ ಸೇರಿದ ಕಟ್ಟಡವನ್ನು ಮೂರು ದಶಕಗಳಿಂದ ಅಂಚೆ ಕಚೇರಿಗೆ ಬಾಡಿಗೆ ನೀಡಿದ್ದರು. ಈ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ(ನಂ.7367117604) ತೆರೆದು ಅದರಲ್ಲಿ 19 ಸಾವಿರ ಹಣ ಇಟ್ಟಿದ್ದರು. ಈ ವಿಷಯ ಮನೆಯವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. 18 ಜೂನ್‌ 2011ರಲ್ಲಿ ವಿಜಯಾಂಬ ಮೃತಪಟ್ಟರು. ಆನಂತರದಲ್ಲಿ 28 ಜೂನ್‌ 2016ರಲ್ಲಿ ವಿಜಯಾಂಬ ಅವರ ಖಾತೆಯಿಂದ 19 ಸಾವಿರ ರು. ಹಣ ಡ್ರಾ ಮಾಡಲಾಗಿದೆ.

ನಾಗಮಂಗಲ; ಖಾರದ ಪುಡಿ ಎರಚಿ ಹೆತ್ತವರೆ ಮಗನ ಥಳಿಸಿದರು! ..

2018ರ ಅ.25ರಂದು ಮನೆ ಕ್ಲೀನಿಂಗ್‌ ಮಾಡುವ ಸಮಯದಲ್ಲಿ ವಿಜಯಾಂಬ ಹೆಸರಿನಲ್ಲಿದ್ದ ಅಂಚೆ ಕಚೇರಿಯ ಎಸ್‌ಬಿ ಪಾಸ್‌ ಪುಸ್ತಕ ಅಳಿಯ ಜೆ.ಎನ್‌.ಶಿವಪ್ರಕಾಶ್‌ ಅವರಿಗೆ ಸಿಕ್ಕಿದೆ. ಆ ಪಾಸ್‌ ಪುಸ್ತಕವನ್ನು ತೆಗೆದುಕೊಂಡು ಕೆರಗೋಡು ಅಂಚೆ ಕಚೇರಿಗೆ ಹೋಗಿ ವಿಚಾರಿಸಿದಾಗ ಎರಡು ವರ್ಷದ ಹಿಂದೆಯೇ ಹಣ ಡ್ರಾ ಮಾಡಿರುವುದು ಗೊತ್ತಾಗಿದೆ. ಅಂದೇ ಜಿಲ್ಲಾ ಅಂಚೆ ಅಧೀಕ್ಷಕರ ಕಚೇರಿಗೆ ಪಾಸ್‌ ಪುಸ್ತಕ ತಂದು ಅಧೀಕ್ಷಕ ಶ್ರೀನಿವಾಸ್‌ ಅವರಿಗೆ ದೂರು ನೀಡಲಾಗಿತ್ತು.

ದೂರು ನೀಡಿದ್ದರೂ ಉತ್ತರ ಬಂದಿಲ್ಲ:

ಆನಂತರದಲ್ಲಿ ಸುಮಾರು 8ರಿಂದ 10 ಬಾರಿ ಮೌಖಿಕವಾಗಿ ಭೇಟಿ ಮಾಡಿ ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಪ್ರಶ್ನಿಸಿದಾಗ, ವಿಚಾರಣೆ ಇನ್ನೂ ತನಿಖಾ ಹಂತದಲ್ಲಿದೆ ಎಂದು ಹೇಳಿದ್ದರು. 13 ಮೇ 2020ರಲ್ಲಿ ಮತ್ತೆ ದೂರಿನ ಸಂಬಂಧ ಜ್ಞಾಪನಾ ಪತ್ರವನ್ನು ಸಹಾಯಕ ಅಂಚೆ ಅಧೀಕ್ಷಕರಾಗಿದ್ದ ಮಂಜುನಾಥರಾವ್‌ ಅವರಿಗೆ ನೀಡಿದ್ದೆವು. 4 ಜೂನ್‌ 2020ರಂದು ನಾನು ವಾಸವಿರುವ ಕೊಳ್ಳೇಗಾಲಕ್ಕೆ ಬಂದು ವಿಚಾರಣೆ ನಡೆಸಿದ್ದರು. ಆದರೆ, ಈವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಶಿವಪ್ರಕಾಶ್‌ ಅವರು ತಿಳಿಸಿದ್ದಾರೆ.

ಅಧಿಕಾರಿಗಳ ಕಾರ‍್ಯ ವೈಖರಿಗೆ ಅಸಮಾಧಾನ:

ಜಿಲ್ಲಾ ಪೊಲೀಸ್‌ ಅಂಚೆ ಅಧೀಕ್ಷಕರಿಂದ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಬೆಂಗಳೂರಿನ ಚೀಫ್‌ ಪೋಸ್ಟ್‌ಮಾಸ್ಟರ್‌ ಜನರಲ್‌, ಪೋಸ್ಟ್‌ ಮಾಸ್ಟರ್‌ ಜನರಲ್‌ ಸೇರಿದಂತೆ ಅಂಚೆ ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳಿಗೂ ದೂರು ನೀಡಲಾಗಿದೆ. ಎಲ್ಲರೂ ಇನ್ನೂ ತನಿಖಾ ಹಂತದಲ್ಲಿದೆ ಎಂದು ಹೇಳುತ್ತಿದ್ದಾರೆ ಎಂದು ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕೆರಗೋಡು ಉಪ ಅಂಚೆ ಕಚೇರಿಯಲ್ಲಿ ವಿಜಯಾಂಬ ಅವರ ಉಳಿತಾಯ ಖಾತೆಯಲ್ಲಿ ಹಣವನ್ನು ಅವರು ಸತ್ತ ಬಳಿಕ ಡ್ರಾ ಮಾಡಿರುವ ಬಗ್ಗೆ ದೂರು ಬಂದಿರುವುದು ನಿಜ. ಅದರ ಬಗ್ಗೆ ತನಿಖೆ ನಡೆಯುತ್ತಿದೆ. ದೂರುದಾರರು ಹಣ ಬೇಕೆಂಬ ಬಗ್ಗೆ ಇದುವರೆಗೂ ಕ್ಲೇಮು ಮಾಡಿಲ್ಲ. ಅವರು ಹಣ ಯಾರು ಡ್ರಾ ಮಾಡಿದ್ದಾರೆ ಎಂದು ಕೇಳುತ್ತಿದ್ದಾರೆ. ಅದನ್ನು ಪತ್ತೆ ಹಚ್ಚಲು ಪಾಸ್‌ಬುಕ್‌ನ್ನು ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ವಿಜಯಾಂಬ ಅವರ ಸಹಿ ಹಾಗೂ ಹಣ ಡ್ರಾ ಮಾಡಿದವರ ಸಹಿಯ ತಾಳೆ ನೋಡಬೇಕಿದೆ. ಹಾಗಾಗಿ ಅದರ ತನಿಖೆ ಮುಂದುವರಿದಿದೆ.

- ಮಂಜುನಾಥರಾವ್‌, ಜಿಲ್ಲಾ ಅಂಚೆ ಅಧೀಕ್ಷಕರು, ಮಂಡ್ಯ