ಮದ್ದೂರು (ಜ.24):  ಕಿಡಿಗೇಡಿಗಳ ಗುಂಪು ಹೋಟೆಲ್‌ವೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ ಸಿಲಿಂಡರ್‌ ಸ್ಫೋಟಗೊಂಡು ವಿದ್ಯುತ್‌ ಉಪಕರಣ ಸೇರಿದಂತೆ ಹಲವು ವಸ್ತುಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರು. ಹಾನಿ ಸಂಭವಿಸಿರುವ ಘಟನೆ ತಾಲೂಕಿನ ಕೂಳಗೆರೆ ಗೇಟ್‌ ಬಳಿ ಮಧ್ಯರಾತ್ರಿ ಜರುಗಿದೆ.

ಸಿಲಿಂಡರ್‌ ಸ್ಫೋಟದ ರಭಸಕ್ಕೆ ರಸ್ತೆ ಮತ್ತು ಅಕ್ಕಪಕ್ಕದ ಪ್ರದೇಶಗಳಿಗೆ ಅವಶೇಷಗಳು ಸಿಡಿದು ಬಿದ್ದಿದೆ. ಇದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗ್ರಾಮದ ದೇವು ಬಿರಿಯಾನಿ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಹೋಟೆಲ್‌ನಲ್ಲಿದ್ದ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಮತ್ತೆರಡು ಸಿಲಿಂಡರ್‌ಗಳು ಹಾನಿಗೊಳಗಾಗಿದ್ದು ಹೋಟೆಲ್‌ನ ವಿದ್ಯುತ್‌ ಉಪಕರಣಗಳು, ದವಸ ಧಾನ್ಯ, ಪಾತ್ರೆ ಸೇರಿದಂತೆ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ. ಇದರಿಂದ 1.50 ಲಕ್ಷ ರು. ಹಾನಿ ಸಂಭವಿಸಿದೆ ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ.

ಶಿವಮೊಗ್ಗ : ಲಾರಿ ಚಾಲಕನ ಎಡವಟ್ಟಿಂದ ಸ್ಫೋಟ? ...

ಮೂಲತಃ ಚನ್ನಪಟ್ಟಣ ತಾಲೂಕು ವಿರೂಪಾಕ್ಷಿಪುರ ಹೋಬಳಿಯ ನೆರಳೂರು ಗ್ರಾಮದ ಮಹದೇವ ಎಂಬುವವರು ಕೂಳಗೆರೆ ಗೇಟ್‌ ಬಳಿ ದೇವು ಬಿರಿಯಾನಿ ಹೋಟೆಲ್‌ ನಡೆಸುತ್ತಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕಿಡಿಗೇಡಿಗಳು ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮದ್ದೂರು ಅಗ್ನಿಶಾಮಕ ಸಿಬ್ಬಂದಿ ಹನುಮಂತಯ್ಯ, ಅಂಜನಿ, ವೆಂಕಟೇಶ್‌ ಹಾಗೂ ಲೋಕೇಶ್‌ ನಾಯಕ್‌ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.