ಆಂತರಿಕ ಸುರಕ್ಷತೆಗೆ ಗಮನ ಕೊಡಿ, ಅಪರಾಧ ನಿಯಂತ್ರಣಕ್ಕೆ ಉತ್ತಮ ತಂತ್ರಜ್ಞಾನ, ತಜ್ಞರ ತಂಡಗಳು ಅವಶ್ಯ, ಸೈಬರ್‌ ಕ್ರೈಂ, ಡ್ರಗ್ಸ್‌, ಕೋಮು ಸಂಘರ್ಷ ಮಟ್ಟಹಾಕಲು ಕರೆ, ಸೇಫ್‌ ಸಿಟಿ ಯೋಜನೆ ಪ್ರಧಾನಿ ಕನಸು: ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಬೆಂಗಳೂರು(ಮಾ.04): ಅಪರಾಧ ನಿಯಂತ್ರಣದ ಜತೆಗೆ ಆಂತರಿಕ ಸುರಕ್ಷತೆಗೆ ಸರ್ಕಾರಗಳು ಹೆಚ್ಚಿನ ಗಮನ ಕೊಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ನಗರದ ಪುರಭವನದಲ್ಲಿ ಗೃಹ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇಫ್‌ ಸಿಟಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಅಪರಾಧ ನಿಯಂತ್ರಣಕ್ಕೆ ಉತ್ತಮ ತಂತ್ರಜ್ಞಾನ ಮತ್ತು ತಜ್ಞರ ತಂಡಗಳ ಅವಶ್ಯಕತೆಯಿದೆ. ಹೀಗಾಗಿ ತಂತ್ರಜ್ಞಾನದಲ್ಲಿ ನಾವು ಮುಂದಿರಬೇಕು. ಅಪರಾಧ ನಿಯಂತ್ರಣ ಒಂದೆಡೆಯಾದರೆ, ಆಂತರಿಕ ಸುರಕ್ಷತೆಗೂ ಹೆಚ್ಚಿನ ಗಮನ ಕೊಡಬೇಕು ಎಂದರು.

ಸೇಫ್‌ ಸಿಟಿ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ. ಇದಕ್ಕೆ ಚಾಲನೆ ನೀಡುತ್ತಿರುವುದು ನನಗೆ ಖುಷಿ ತಂದಿದೆ. ಅವಕಾಶ ಮಾಡಿಕೊಟ್ಟಕರ್ನಾಟಕ ಸರ್ಕಾರಕ್ಕೆ ಅಭಿನಂದನೆಗಳು ಎಂದರು. ಈ ಸೇಫ್‌ ಸಿಟಿ ಯೋಜನೆ ಬೆಂಗಳೂರು ಸೇರಿದಂತೆ ದೇಶದ 8 ನಗರಗಳಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದೆ. ಕೇಂದ್ರ ಸರ್ಕಾರ ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿದೆ. ಇದರಲ್ಲಿ ಅತ್ಯಾಧುನಿಕ ಕ್ಯಾಮರಾ, ಎಫ್‌ಎಸ್‌ಎಲ್‌, ತಂತ್ರಜ್ಞಾನ ಸೇರಿದಂತೆ ಹಲವು ಅಂಶಗಳು ಒಳಗೊಂಡಿವೆ. ಪ್ರಧಾನಿ ಸೇಫ್‌ ಸಿಟಿ ಯೋಜನೆ ಮುಂದಿನ 20 ವರ್ಷದ ನೀಲನಕ್ಷೆ ರೂಪಿಸಿದ್ದಾರೆ. ತಂತ್ರಜ್ಞಾನ ಬಳಸಿಕೊಂಡು ಸೈಬರ್‌ ಕ್ರೈಂ, ಮಾದಕವಸ್ತು ದಂಧೆ, ಅಪರಾಧ ನಿಯಂತ್ರಣಕ್ಕೆ ಒತ್ತು ನೀಡಬೇಕು. ತಂತ್ರಜ್ಞಾನ ಬಳಸಿಕೊಂಡು ಕೋಮು ಸಂಘರ್ಷ ಮಟ್ಟಹಾಕಬೇಕಿದೆ ಎಂದು ಹೇಳಿದರು.

ಮೋದಿ, ಶಾ ಬಂದಾಗಲೆಲ್ಲಾ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆ ಉದ್ಘಾಟನೆ: ಸಿಎಂ ಬೊಮ್ಮಾಯಿ

ದೇಶದ ಎಂಟು ಪ್ರಮುಖ ನಗರಗಳ ಪೈಕಿ ಬೆಂಗಳೂರು ಮಹತ್ವದ ಸ್ಥಾನ ಪಡೆದಿದೆ. ಕಳೆದ 12 ವರ್ಷಗಳಿಂದ ನಾನು ಗಮನಿಸಿದ್ದೇನೆ. ಬೆಂಗಳೂರು ಪೊಲೀಸರು ಎಲ್ಲರಿಗಿಂತ ಎರಡು ಹೆಜ್ಜೆ ಮುಂದಿರುತ್ತಾರೆ. ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವರಾದ ವಿ.ಸೋಮಣ್ಣ, ಎಸ್‌.ಟಿ.ಸೋಮಶೇಖರ್‌, ಶಾಸಕ ಉದಯ ಗರುಡಾಚಾರ್‌, ಸಂಸದ ತೇಜಸ್ವಿ ಸೂರ್ಯ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

99.9% ಪೊಲೀಸ್‌ ಠಾಣೆ ಆನ್‌ಲೈನ್‌

ನ್ಯಾಷನಲ್‌ ಸೈಬರ್‌ ಟ್ರೈನಿಂಗ್‌ ಸೆಂಟರ್‌, ನ್ಯಾಷನಲ್‌ ಸೈಬರ್‌ ಕ್ರೈಮ… ರಿಸಚ್‌ರ್‍ ಸೆಂಟರ್‌ ಸೇರಿದಂತೆ ಎಲ್ಲವೂ ಒಟ್ಟಿಗೆ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಮೋದಿ ಪ್ರಧಾನಿಯಾದ ಬಳಿಕ ಈ ದೇಶದಲ್ಲಿ ಅನೇಕ ಬದಲಾವಣೆ ಆಗಿವೆ. ಶೇ.99.9 ಪೊಲೀಸ್‌ ಠಾಣೆ ಆನ್‌ಲೈನ್‌ ಆಗಿವೆ. ಶೇ.1 ಠಾಣೆ ಕನೆಕ್ಟಿವಿಟಿ ಇಲ್ಲ. ಸಿಸಿ ಕ್ಯಾಮರಾದಲ್ಲಿ 3,000 ಕೋಟಿ ಪೊಲೀಸ್‌ ರೆಕಾರ್ಡ್‌ ಇದೆ. 12 ಕೋಟಿ ದೂರು ಆನ್‌ಲೈನ್‌ನಲ್ಲಿ ದಾಖಲಾಗಿವೆ ಎಂದು ಅಮಿತ್‌ ಶಾ ಮಾಹಿತಿ ನೀಡಿದರು.

ಮಹಿಳೆಯರ ಸುರಕ್ಷತೆಗೆ ಒತ್ತು: ಸಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶದ 130 ಕೊಟಿ ಜನಸಂಖ್ಯೆಯಲ್ಲಿ ಅರ್ಧದಷ್ಟುಮಹಿಳೆಯರಿದ್ದಾರೆ. ಅವರಲ್ಲಿ ಶಾಲೆಗೆ ಹೋಗಬೇಕು ಮತ್ತು ಉದ್ಯೋಗಕ್ಕೆ ಹೋಗಬೇಕು ಎನ್ನುವ ಉತ್ಸಾಹವಿದೆ. ನಿರ್ಭಯ ಪ್ರಕರಣದ ನಂತರ ಮಹಿಳೆಯರ ಸುರಕ್ಷತೆ ಹೆಚ್ಚಿನ ಒತ್ತು ಸಿಕ್ಕಿದೆ. ತಂತ್ರಜ್ಞಾನದ ಸಹಕಾರ ಇಲ್ಲದೆ ಸುರಕ್ಷತೆ ಕಷ್ಟಎಂಬುದನ್ನು ಅರಿತು ಕೇಂದ್ರ ಸರ್ಕಾರ .660 ಕೋಟಿ ಅನುದಾನದಲ್ಲಿ ಸುರಕ್ಷತೆ ಯೋಜನೆ ನೀಡಿದೆ. ಈ ಯೋಜನೆ ಯಾವ ರೀತಿ ಅನುಷ್ಠಾನಗೊಳಿಸಬೇಕು ಎನ್ನುವ ಕುರಿತು ಸಾಕಷ್ಟುಸಂಶೋಧನೆ ಮಾಡಲಾಗಿದೆ. ನಾನು ಗೃಹ ಸಚಿವನಾಗಿದ್ದಾಗ ಸಾಮಾನ್ಯ ಕ್ಯಾಮರಾ ಅಳವಡಿಸುವ ಬದಲು ಆರ್ಟಿಫಿಸಿಯಲ್‌ ತಂತ್ರಜ್ಞಾನ ಹೊಂದಿರುವ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿತ್ತು. ಈಗ ಎಲ್ಲ ಕಡೆ ಕ್ಯಾಮರಾ ಕಣ್ಣಿಡಲಾಗಿದೆ ಎಂದು ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ದೇಶದ ಎಂಟು ಮಹಾನಗರಗಳಲ್ಲಿ ಪೈಕಿ ಬೆಂಗಳೂರು ನಗರ ಅತೀ ವೇಗವಾಗಿ ಬೆಳೆಯುತ್ತಿದೆ. ಇದೇ ವೇಳೆ ಪೊಲೀಸ್‌ ಇಲಾಖೆ ಸೇಫ್‌ ಸಿಟಿ ಯೋಜನೆಯನ್ನು ಅತೀ ವೇಗವಾಗಿ ಅನುಷ್ಠಾನಗೊಳಿಸುವಲ್ಲಿ ಮೊದಲ ಸ್ಥಾನದಲ್ಲಿ ಇದೆ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ ಎಂದರು.

ಕಮಾಂಡ್‌ ಸೆಂಟರ್‌ಗೆ ಅಮಿತ್‌ ಶಾ ಭೇಟಿ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಸಂಜೆ ನಗರ ಪೊಲೀಸ್‌ ಆಯುಕ್ತ ಕಚೇರಿಯ ಕಟ್ಟಡದಲ್ಲಿ ಸ್ಥಾಪಿಸಿರುವ ಸೇಫ್‌ ಸಿಟಿ ಯೋಜನೆಯ ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರಕ್ಕೆ ಭೇಟಿ ನೀಡಿದರು. ಅಧಿಕಾರಿಗಳು ಪ್ರಾತ್ಯಕ್ಷಿಕೆ ಮುಖಾಂತರ ಅಲ್ಲಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಗರದಲ್ಲಿ ಸೇಫ್‌ ಸಿಟಿ ಯೋಜನೆ ಹಾಗೂ ಅದರ ಅನುಷ್ಠಾನದ ಬಗ್ಗೆ ವಿವರಿಸಿದರು. ಕಮಾಂಡ್‌ ಸೆಂಟರ್‌ಗೆ ಅಮಿತ್‌ ಶಾ ಮೆಚ್ಚುಗೆ ವ್ಯಕ್ತಪಡಿಸಿದರು.

ಚುನಾ​ವ​ಣೆ ಗೆಲ್ಲಲು ಅಮಿತ್‌ ಶಾ ಪಂಚ​ಸೂ​ತ್ರ: ಮೋದಿ, ಪಕ್ಷದ ಹೆಸ​ರಲ್ಲಿ ಚುನಾವಣಾ ಪ್ರಚಾರ ನಡೆ​ಸಿ

ಏನಿದು ಸೇಫ್‌ ಸಿಟಿ ಯೋಜನೆ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಯೋಜನೆ ಇದಾಗಿದೆ. 60:40 ಅನುಪಾತದಲ್ಲಿ ನಿರ್ಭಯ ನಿಧಿಯಿಂದ ಒಟ್ಟು .667 ಕೋಟಿಯನ್ನು ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಯಡಿ ಬೆಂಗಳೂರು ನಗರÜದ ಸಾರ್ವಜನಿಕರ ಸುರಕ್ಷತೆಗೆ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಮಕ್ಕಳ ಸಂರಕ್ಷಣೆಗೆ ಬೇಕಾದ ಅಗತ್ಯ ಪೊಲೀಸ್‌, ವೈದ್ಯಕೀಯ ಹಾಗೂ ಕಾನೂನು ನೆರವುಗಳನ್ನು ಒದಗಿಸುವ ನಿಟ್ಟಿನಲ್ಲಿ ತಾಂತ್ರಿಕ ವಿಧಾನಗಳನ್ನು ಬಳಸಿಕೊಂಡು ಶೀಘ್ರ ಮತ್ತು ಸುಧಾರಿತ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈ ಬೆಂಗಳೂರು ಸೇಫ್‌ ಸಿಟಿ ಯೋಜನೆ ಮುಖ್ಯಾಂಶಗಳು

*ಪ್ರಾರಂಭಿಕ ಹಂತದಲ್ಲಿ ನಗರದಾದ್ಯಂತ 4,100 ಕ್ಯಾಮರಾ ಅಳವಡಿಕೆ
*ಕಮಾಂಡ್‌ ಸೆಂಟರ್‌- ನಗರದ 1,640 ಸ್ಥಳಗಳಲ್ಲಿ ಅಳವಡಿಸಿರುವ 4,100 ಕ್ಯಾಮರಾಗಳ ದೃಶ್ಯಾವಳಿ ವೀಕ್ಷಿಸುವ ಸೌಲಭ್ಯ
*ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಗಳ ಕಚೇರಿ ಮತ್ತು 96 ಪೊಲೀಸ್‌ ಠಾಣೆಗಳಿಗೆ ಕ್ಯಾಮರಾ ದೃಶ್ಯಾವಳಿಗಳ ನೇರ ವೀಕ್ಷಣೆ
*ನಗರದ ಆಯ್ದ 30 ಸ್ಥಳಗಳಲ್ಲಿ ಸೇಫ್ಟಿಐಲ್ಯಾಂಡ್‌ ಸ್ಥಾಪನೆ
*ಎಲ್‌ ಆ್ಯಂಡ್‌ ಓ ಮೇಲೆ ನಿಗಾವಹಿಸಲು 8 ಡ್ರೋನ್‌
*400 ಬಾಡಿವೋರ್ನ್‌ ಕ್ಯಾಮರಾ ಅಳವಡಿಕೆ
*ಶೋಷಿತ ಮಹಿಳೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಆಪ್ತಸಮಾಲೋಚನೆ, ಕಾನೂನು ನೆರವು ನೀಡುವ ‘ನಿರ್ಭಯ ಕೇಂದ್ರ’
*ನಗರದ 8 ಆಸ್ಪತ್ರೆಗಳಲ್ಲಿ ಕ್ರಿಟಿಕಲ್‌ ಕೇರ್‌ ರೆಸ್ಪಾನ್ಸ್‌ ಯೂನಿಟ್‌(ಸಿಸಿಆರ್‌ಯು) ಸ್ಥಾಪನೆ
*8 ಫೋರಾನ್ಸಿಕ್‌ ವಾಹನಗಳ ಖರೀದಿ
*ಯೋಜನೆಯಡಿ ಖರೀದಿಸಿದ್ದ 112 ಹೋಯ್ಸಳ, 112 ಜೀಪು, 224 ಬೈಕ್‌ ಲೋಕಾರ್ಪಣೆ