ಮಂಗಳೂರು(ಫೆ.02): ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕರಾವಳಿ ಜನತೆಗೂ ಒಂದಷ್ಟು ಪೂರಕ ಅಂಶಗಳು ಕಂಡುಬಂದಿವೆ. ಪ್ರತಿ ಜಿಲ್ಲೆಗೆ ಸರ್ಕಾರಿ ಆಸ್ಪತ್ರೆ ಇರುವಲ್ಲಿ ಮೆಡಿಕಲ್ ಕಾಲೇಜು ತೆರೆಯುವ ಪ್ರಸ್ತಾಪ ಮಾಡಲಾಗಿದೆ.

ಬಜೆಟ್‌ನಲ್ಲಿ ಕರಾವಳಿಗೆ ಏನು ಲಾಭ?

ಪ್ರತಿ ಜಿಲ್ಲೆಗೆ ಸರ್ಕಾರಿ ಆಸ್ಪತ್ರೆ ಇರುವಲ್ಲಿ ಮೆಡಿಕಲ್ ಕಾಲೇಜು ತೆರೆಯುವ ಪ್ರಸ್ತಾಪ ಮಾಡಲಾಗಿದೆ. ಇದು ಜಾರಿಯಾದರೆ, ಮಂಗಳೂರಿನಲ್ಲೂ ಬಹುದಿನಗಳ ಸರ್ಕಾರಿ ಮೆಡಿಕಲ್ ಕಾಲೇಜಿನ ಬೇಡಿಕೆ ಈಡೇರಲಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರದಿಂದಲೇ ಮೊಬೈಲ್ ಫೋನ್ ಒದಗಿಸಬೇಕು ಎನ್ನುವ ಕೂಗು ಕರಾವಳಿಯಿಂದಲೇ ಪ್ರಬಲವಾಗಿ ಕೇಳಿಬಂದಿತ್ತು. ಅದು ಕೂಡ ಈಗ ಸಕಾರಗೊಂಡಿದೆ. 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ಒದಗಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ಕೃಷ್ಯುತ್ಪನ್ನಗಳ ಸಾಗಾಣಿಕೆಗೆ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕಿಸಾನ್ ರೈಲು ಕರಾವಳಿಯನ್ನು ಹಾದುಹೋದರೂ ಹೋಗಬಹುದು.

 

ಮಂಗಳೂರು ಕಳೆದ ಬಾರಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ, ಈ ಬಾರಿ ಮೀನುಗಾರರ ಅಭಿವೃದ್ಧಿಗೆ ‘ಸಾಗರ ಮಿತ್ರ’ ಯೋಜನೆ ಕೇಂದ್ರ ಸರ್ಕಾರ ಶನಿವಾರ ಮಂಡಿಸಿದ ಬಜೆಟ್ ನಲ್ಲಿ ಕರಾವಳಿ ಕರ್ನಾಟಕಕ್ಕೆ ಪ್ರತ್ಯೇಕ ಯೋಜನೆ ಘೋಷಣೆಯಾಗದಿದ್ದರೂ, ಕರಾವಳಿ ತೀರದ ಮುಖ್ಯಕಸುಬು ಮೀನುಗಾರಿಕೆ ಉತ್ತೇಜನ ಟಾನಿಕ್ ಲಭ್ಯವಾಗಿದೆ. ಇದು ಮೀನುಗಾರರ ಬದುಕಿಗೂ ನೆರವಾಗಲಿದೆ.

 

ಕರಾವಳಿ ಜಿಲ್ಲೆಗಳಿಗೆ ಕೇಂದ್ರ ಯಾವುದೇ ನಿರ್ದಿಷ್ಟ ಕೊಡುಗೆ ಪ್ರಕಟಿಸಿಲ್ಲ. ರೈಲ್ವೆ ವಿಚಾರದಲ್ಲೂ ಹೊಸ ಯೋಜನೆಗಳು ಪ್ರಸ್ತಾಪಗೊಂಡಿಲ್ಲ. ಬಾಕಿ ಇರುವ ಯೋಜನೆಗಳಿಗೆ ಒಂದಷ್ಟು ಹಣಕಾಸಿನ ನೆರವು ನೀಡಿರುವ ಸಾಧ್ಯತೆಯನ್ನು ಹೇಳಲಾಗುತ್ತಿದೆ. ಅಲ್ಲದೆ ಬಜೆಟ್‌ನಲ್ಲಿ ಪ್ರಕಟಿಸಿರುವ ವಿವಿಧ ಯೋಜನೆಗಳಲ್ಲಿ ಕೆಲವು ಕರಾವಳಿಗರ ನಿತ್ಯ ಬದುಕಿಗೂ ಅನ್ವಯವಾಗಲಿವೆ. ಇವುಗಳನ್ನು ಹೊರತುಪಡಿಸಿದರೆ, ಈ ಬಜೆಟ್‌ನಲ್ಲಿ ಕರಾವಳಿಗೆ ಮಹತ್ವದ ಗಿಫ್ಟ್ ಎಂಬುದು ಯಾವುದೂ ಇಲ್ಲ. ಕಡಲ ಮಕ್ಕಳಿಗೆ ಸಾಗರ ಮಿತ್ರ: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ‘ಸಾಗರ ಮಿತ್ರ’ ಎಂಬ ಹೊಸ ಯೋಜನೆಯನ್ನು ಪ್ರಕಟಿಸಲಾಗಿದೆ.

 

2023ರೊಳಗೆ 200 ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದನೆಯ ಗುರಿ ಹೊಂದಲಾಗಿದೆ. 1 ಲಕ್ಷ ಕೋಟಿ ರು.ಗೂ ಅಧಿಕ ಮೀನು ರಫ್ತು ಗುರಿ ಹಾಕಿಕೊಳ್ಳಲಾಗಿದೆ. ಪ್ರಸ್ತುತ ದಿನಗಳಲ್ಲಿ ಮತ್ಸ್ಯಕ್ಷಾಮದ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆ ಮೀನುಗಾರರಲ್ಲಿ ಆಶಾವಾದ ಮೂಡಿಸುವ ಸಾಧ್ಯತೆ ಇದೆ. ಯೋಜನೆಯ ಸ್ವರೂಪ ಹಾಗೂ ಯಾವುದನ್ನೆಲ್ಲ ಒಳಗೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ.

ಮಂಗಳೂರಿಗೂ ಎಕ್ಸ್‌ಪ್ರೆಸ್ ಕಾರಿಡಾರ್?:

ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ಹೆದ್ದಾರಿ ಯೋಜನೆಯನ್ನು ಒಂದೇ ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ಹೇಳಲಾಗಿದೆ. ಇದರ ಎರಡನೇ ಹಂತವಾಗಿ ಬೆಂಗಳೂರು- ಮಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಸಾಗರಮಾಲಾ ಹಾಗೂ ಬಂದರುಗಳ ಜೋಡಣೆ ಯೋಜನೆಯಲ್ಲಿ ಇದು ಕೂಡ ಅನುಷ್ಠಾನಕ್ಕೆ ಬರುವ ಸಾಧ್ಯತೆಯನ್ನು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಈ ಬಜೆಟ್ ನಲ್ಲಿ ಕರಾವಳಿ ಮತ್ತು ಒಳನಾಡು ಬಂದರು ಸಂಪರ್ಕ ಅಭಿವೃದ್ಧಿಯ ಪ್ರಸ್ತಾಪವನ್ನು ಮಾಡಲಾಗಿದೆ.

ಹೊಸ ಶತಾಬ್ದಿ ರೈಲು?:

ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ೧೫೦ ಪ್ಯಾಸೆಂಜರ್ ರೈಲು ಆರಂಭಿಸುವ ಬಗ್ಗೆ ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ ಇದು ಎಲ್ಲೆಲ್ಲಿಗೆ ಎಂಬುದು ಸ್ಪಷ್ಟವಾಗಿಲ್ಲ. ಬಹುತೇಕ ಮಂಗಳೂರು-ಬೆಂಗಳೂರು ಮಧ್ಯೆ ಹೊಸ ಶತಾಬ್ದಿ ರೈಲು ಸಂಚಾರ ಆರಂಭಿಸಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ರೈಲ್ವೆ ಸಂಘಟನೆಗಳು ಹೇಳುತ್ತಿವೆ. ಈಗಾಗಲೇ ಮಂಗಳೂರು-ಬೆಂಗಳೂರು ಮಧ್ಯೆ ಮೂರು ರೈಲುಗಳ ಸಂಚಾರವಿದೆ. ಇನ್ನು ಹೊಸ ರೈಲು ಯಾವ ಸಮಯಕ್ಕೆ, ಯಾವ ಮಾರ್ಗದಲ್ಲಿ ಸಂಚರಿಸಲಿದೆ ಎಂಬುದು ನಿರ್ಧಾರವಾಗಬೇಕಾಗಿದೆ.