Asianet Suvarna News Asianet Suvarna News

ಹುಬ್ಬಳ್ಳಿ-ಧಾರವಾಡದಲ್ಲಿ ಹೆಚ್ಚಾದ ಅನಧಿಕೃತ ಲೇಔಟ್ ಹಾವಳಿ: ನಿಮ್ಮ ಮನೆಯ ದಾಖಲೆ ಪರಿಶೀಲಿಸಿಕೊಳ್ಳಿ

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಅನಧಿಕೃತ ಲೇಔಟ್‌ಗಳ ಸಂಖ್ಯೆಗಳು ಹೆಚ್ಚಾಗಿದ್ದು, ಕೂಡಲೇ ಮನೆ ಮಾಲೀಕರು ತಮ್ಮ ಮನೆಗಳ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು. 

Unauthorized layout menace on rise in Hubli Dharwad Check your house record sat
Author
First Published Jul 6, 2023, 11:36 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಜು.06): ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ನಿಯಮಾನುಸಾರ ಅನುಮತಿ ಪಡೆಯದೇ ಬಿಲ್ಡ್ ರಗಳು ಅನಧಿಕೃತವಾಗಿ ಲೇಔಟ್ ನಿರ್ಮಿಸಿ, ಗ್ರಾಹಕರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಅವಳಿ ನಗರದ ನಿವಾಸಿಗಳು ಹಾಗೂ ಗ್ರಾಹಕರು ಕಂತು ರಿಯಾಯಿತಿಗಳಿಗೆ ಮರುಳಾಗಿ ಮೋಸ ಹೋಗಬಾರದು ಎಂದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಹಾನಗರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಬಡಾವಣೆಗಳ ತೆರವುಗೊಳಿಸಲು ವಿವಿಧ ಇಲಾಖಾ ಅಧಿಕಾರಿಗಳ ಟಾಸ್ಕ್  ಪೋರ್ಸ್ ಸಮಿತಿ ರಚನೆ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಧಾರವಾಡ ನಗರದ ಗುಲಗಂಜಿಕೊಪ್ಪ ಅಮ್ಮಿನಭಾವಿ ರಸ್ತೆ, ಹೆಬ್ಬಳ್ಳಿ ರಸ್ತೆ, ನಿಗದಿ ರಸ್ತೆ ಸೇರಿದಂತೆ ಧಾರವಾಡ ನಗರ ಸುತ್ತ ಮುತ್ತ ಹಾಗೂ ಹುಬ್ಬಳ್ಳಿನಗರ ಸುತ್ತಲಿನ ಪ್ರದೇಶಗಳಲ್ಲಿ ಕೆಲವು ಮಾಲೀಕರು, ಬಿಲ್ಡರ್ ಗಳು ಅನುಮತಿ ಪಡೆಯದೇ ಅನಧೀಕೃತವಾಗಿ ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ಇಂತಹ ಅಕ್ರಮ ಬಡಾವಣೆಗಳನ್ನು ತೆರವುಗೊಳಿಸಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.

ಕೊಡಗಿನಲ್ಲಿ ರಣಭೀಕರ ಮಳೆ: ತ್ರಿವೇಣಿ ಸಂಗಮ ಮುಳುಗಡೆ, ನಾಪೋಕ್ಲು ರಸ್ತೆ ಸಂಪರ್ಕ ಕಡಿತ

ಕಂತು ರಿಯಾಯಿತಿ ಕೊಟ್ಟವರಿಂದಲೇ ಮೋಸ:  ನೋಂದಣಿ ಆಗದ ಸೈಟ್‍ಗಳನ್ನು ಯಾರು ಖರೀದಿಸಬಾರದು ಬಾಂಡ್ ಮೇಲೆ ಖರೀದಿಸಿದರೆ ನಿಮ್ಮ ಹಣಕ್ಕೆ ಅಥವಾ ಸೈಟ್‍ಗೆ ಸುರಕ್ಷತೆ ಇರುವುದಿಲ್ಲ ಲೇಔಟ್ ಮಾಲೀಕರು ನೀಡುವ ರಿಯಾಯಿತಿ ಅಥವಾ ಕಂತಿನ ಆಫರ್‍ಗಳಿಗೆ ಮರುಳಾಗಿ ಸೈಟ್ ಖರೀದಿಸಿ ಮೋಸ ಹೋಗಬಾರದು ಎಂದು ಎಚ್ಚರಿಸಿದರು ಈಗಾಗಲೇ ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಅನಧಿಕೃತ ಬಡಾವಣೆ ನಿರ್ಮಿಸಿದ್ದನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದೆ ಅವುಗಳನ್ನು ತೆರವುಗೊಳಿಸಲು ಕ್ರಮ ವಹಿಸಲಾಗುವುದು ಮತ್ತು ಅನಧಿಕೃತ ಬಡಾವಣೆ ನಿರ್ಮಿಸಿದವರ ವಿರುದ್ಧ ಎಫ್‍ಐಆರ್ ದೊಂದಿಗೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಹೇಳಿದರು.

ಸರ್ಕಾರಿ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ: ಅನಧಿಕೃತ ಬಡಾವಣೆಗಳನ್ನು ಗುರುತಿಸಲು ಮತ್ತು ಅವುಗಳನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲು  ಕ್ರಮವಹಿಸಲಾಗುತ್ತದೆ. ಇದಕ್ಕಾಗಿ ವಿವಿಧ ಇಲಾಖೆ ಅಧಿಕಾರಿಗಳ ತಂಡಗಳನ್ನು ರಚಿಸಲಾಗುತ್ತಿದೆ. ಅನಧಿಕೃತ ಬಡಾವಣೆ ನಿರ್ಮಿಸಲು ಸಹಕಾರ ನೀಡುವ ಮತ್ತು ಕಾನೂನು ಬಾಹಿರವಾಗಿ 11ಎ ಸ್ಕೇಚ್, ಖಾತಾ ಉತಾರ ನೀಡುವ, ಇಲಾಖಾ ನೋಂದಣಿ ಮಾಡಿಕೊಳ್ಳುವ ಸಿಬ್ಬಂದಿಗಳ ವಿರುದ್ಧ ತನಿಖೆ ಮಾಡಿ, ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ ಸರ್ಕಾರಿ ಕೆಲಸದಿಂದ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ ಪುರುಷ

ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಖಾತರಿ ಮಾಡಿಕೊಳ್ಳಿ:  ಪ್ಲಾಟ್ ಅಥವಾ ನಿರ್ಮಿತ ಮನೆ, ಫಾರ್ಮ್‍ಹೌಸ್ ಖರೀದಿಸುವ ಗ್ರಾಹಕರು ನಗರಾಭಿವೃದ್ಧಿ ಪ್ರಾಧಿಕಾರ ಅಥವಾ ಸೂಕ್ತ ಪ್ರಾಧಿಕಾರದಿಂದ ಬಡಾವಣೆ ನಿರ್ಮಾಣಕ್ಕೆ ಅಗತ್ಯ ಅನುಮತಿ ಪಡೆದಿರುವುದನ್ನು ಖಾತರಿ ಮಾಡಿಕೊಳ್ಳಬೇಕು ಖರೀದಿಸುವ ಮೊದಲು ಪ್ರಾಧಿಕಾರದಲ್ಲಿ ಈ ಕುರಿತು ವಿಚಾರಿಸಿ, ದಾಖಲೆಗಳನ್ನು ಉಚಿತವಾಗಿ ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದರು.

ನಿವೇಶನಗಳಿಗೆ ಎನ್‌ಎ ಆಗಿದ್ದರೂ ಲೇಔಟ್ ಅಲ್ಲ: ಜಮೀನ ಮಾಲೀಕರು ಅಥವಾ ಬಿಲ್ಡರ್ ಗಳು ಎನ್ ಎ ಆಗಿದೆ ಎಂದು ಹೇಳಿ, ಪ್ಲಾಟ್ ಮಾಡಿ ಜನರಿಗೆ ಮಾರಾಟ ಮಾಡುತ್ತಾರೆ. ಎನ್ ಎ ಪ್ಲಾಟ್ ಮಾರಾಟಕ್ಕಿದೆ ಎಂಬ ಬೋರ್ಡ್ ನೋಡಿ, ಸೈಟ್ ಖರೀದಿಸಬಾರದು. ಎನ್ ಎ ಅಂದ್ರೆ ಸದರಿ ಭೂಮಿ ಕೃಷಿಯೇತರ ಬಳಕೆಗೆ ಅನುಮತಿಸಲು ಜಿಲ್ಲಾಧಿಕಾರಿಗಳು ನಿಯಮಾನುಸಾರ ನೀಡಿರುವ ಬಿನ್ ಶೆತ್ಕಿ ಬಳಕೆ ಪತ್ರ ಈ ಪತ್ರದೊಂದಿಗೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, ಪ್ರಾಧಿಕಾರ ಅನುಮಿಸುವ ಲೇಔಟ್ ನಕ್ಷೆ ಅನುಸಾರ ಬಡಾವಣೆ ನಿರ್ಮಿಸಿ, ರಸ್ತೆ, ಪಾರ್ಕ, ಸಿಎ ಸೈಟ್ಗಳನ್ನು ಸಂಬಂದಿಸಿದ ಇಲಾಖೆಗಳಿಗೆ ಹಸ್ತಾಂತರುಸಿದಾಗ ಬಿಲ್ಡರ್ ಗೆ ಸಿ.ಸಿ.ಸರ್ಟಿಪಿಕೆಟ್ ಸೀಗುತ್ತದೆ ಎಂದು ಮಾಹಿತಿ ನೀಡಿದರು.

ಒಂದು ಎಕರೆಯಲ್ಲಿ ಶೇ.45 ಭೂಮಿ ಮಾರುವಂತಿಲ್ಲ:  ಅಂದಾಜು ಒಂದು ಎಕರೆ ಎನ್ ಎ ಭೂಮಿಯಲ್ಲಿ ಬಡಾವಣೆ ನಿರ್ಮಿಸಿದರೆ ಅದರಲ್ಲಿನ ರಸ್ತೆ, ಪಾರ್ಕ್, ಸಿಎ ಸೈಟ್ ಸೇರಿ ಸುಮಾರು ಶೇ 45 ರಷ್ಟು ಭೂಮಿ ಸಾರ್ವಜನಿಕ ಬಳಕೆಗೆ ಮೀಸಲಿರುತ್ತದೆ. ಉಳಿದದ್ದನ್ನು ಗ್ರಾಹಕರಿಗೆ ಮಾರಬಹುದು. ಯಾವಯಲ್ಲಾ ಸೈಟ್ ಗಳನ್ನು ಖರೀದಿಸಬಹುದು ಎಂಬುದನ್ನು ಪ್ರಾಧಿಕಾರ ಅನುಮತಿಸಿರುವ ಸೈಟ್ ನಕ್ಷೆಯಲ್ಲಿ ಗ್ರಾಹಕರು ಗುರುತಿಸಬಹುದು. ಎಷ್ಟೊ ಸಂದರ್ಭದಲ್ಲಿ ರಸ್ತೆಗೆ ಮೀಸಲಿಟ್ಟ ಜಾಗದ ಮೇಲೆ ತೋರಿಸಿದ ಸೈಟ್ ಖರೀದಿಸಿ, ಗ್ರಾಹಕ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಲ್ಲ ರೀತಿಯಲ್ಲಿ ಪರಿಶೀಲಿಸಿ, ಗ್ರಾಹಕರು ಅಧಿಕೃತ ಬಡಾವಣೆಗಳಲ್ಲಿ ಮಾತ್ರ ಸೈಟ್ ಗಳನ್ನು ಖರೀದಿಸುವಂತೆ ಜನರಲ್ಲಿ ಜಾಗೃತಿ ಮೂಡಬೇಕೆಂದು ತಿಳಿಸಿದರು.

ಕೇವಲ 12 ಗಂಟೆಯಲ್ಲಿ 21 ಏಕರೆ ಬಿತ್ತನೆ ಮಾಡಿದ ಯುವರೈತ: ಹಲಗೆ ಬಾರಿಸಿದ ಗ್ರಾಮಸ್ಥರು

ಅನಧಿಕೃತವಾಗಿ ಕೃಷಿ ಭೂಮಿ ಮಾರ್ಪಾಡು: ಕೃಷಿ ಭೂಮಿಗಳಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಿಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಜಿಲ್ಲೆಯ ಯಾವುದೇ ಸ್ಥಳದಲ್ಲಿ ಅನಧಿಕೃತವಾಗಿ ಬಡಾವಣೆ ನಿರ್ಮಾಣವಾಗುತ್ತಿದ್ದರೆ ಸಾರ್ವಜನಿಕರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಅಗತ್ಯವಿದ್ದರೆ ಮಾಹಿತಿದಾರರ ಹೆಸರು ಗೌಪ್ಯವಾಗಿಟ್ಟು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ, ಜಮೀನು ವಶಪಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹಾಗೂ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯ ಕಾರ್ಯದರ್ಶಿ ಡಾ.ಸಂತೋಷಕುಮಾರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ ಸಭೆ ನಿರ್ವಹಿಸಿದರು.

ಸಭೆಯಲ್ಲಿ ಉಪಪೊಲೀಸ್ ಆಯುಕ್ತ ರಾಜೀವ ಎಂ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಹುಬ್ಬಳ್ಳಿ ನಗರ ತಹಶೀಲ್ದಾರ ಕಲ್ಲಗೌಡ ಪಾಟೀಲ, ಹೆಸ್ಕಾಂ ಇಇ, ಎಂ.ಎಂ. ನದಾಫ ಸೇರಿದಂತೆ ಭೂದಾಖಲೆಗಳ ಇಲಾಖೆ, ಹೆಸ್ಕಾಂ, ಉಪನೋಂದಣಿ, ಜಲಮಂಡಳಿ, ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Follow Us:
Download App:
  • android
  • ios