ಕೊಡಗಿನಲ್ಲಿ ರಣಭೀಕರ ಮಳೆ: ತ್ರಿವೇಣಿ ಸಂಗಮ ಮುಳುಗಡೆ, ನಾಪೋಕ್ಲು ರಸ್ತೆ ಸಂಪರ್ಕ ಕಡಿತ
ಕೊಡಗಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ರಣಭೀಕರ ಮಳೆಗೆ ನದಿ, ಹಳ್ಳ, ಕೊಳ್ಳಗಳು ಮೈದುಂಬಿ ಭೋರ್ಗರೆದು ಹರಿಯುತ್ತಿವೆ. ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿದ್ದು, ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.06): ಕಳೆದ ಎರಡು ದಿನಗಳ ರಣಮಳೆಗೆ ಕೊಡಗು ಜಿಲ್ಲೆ ತತ್ತರಿಸುವಂತೆ ಮಾಡಿದೆ. ಹೌದು ಒಂದು ವಾರದ ಹಿಂದಿನವರೆಗಷ್ಟೇ ಬರಗಾಲದ ಪರಿಸ್ಥಿತಿ ಎದುರಾಗಿದೆ ಎನ್ನುತ್ತಿದ್ದ ಜಿಲ್ಲೆಯಲ್ಲಿ ನದಿ, ಹಳ್ಳ, ಕೊಳ್ಳಗಳು ಮೈದುಂಬಿ ಭೋರ್ಗರೆದು ಹರಿಯುತ್ತಿವೆ. 24 ಗಂಟೆಯಲ್ಲಿ ಬರೋಬ್ಬರಿ 140 ಮಿಲಿ ಮೀಟರ್ ಮಳೆ ಸುರಿದ ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ.
ಅದರಲ್ಲೂ ಭಾಗಮಂಡಲ, ತಲಕಾವೇರಿ ಮತ್ತು ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆಯಿಂದ ಗುರುವಾರ ಬೆಳಿಗ್ಗೆವರೆಗೆ ಧಾರಕಾರವಾಗಿ ಮಳೆ ಸುರಿದಿದೆ. 24 ಗಂಟೆಯಲ್ಲಿ ಬರೋಬ್ಬರಿ 140 ಮಿಲಿ ಮೀಟರ್ ಮಳೆ ಸುರಿದಿದೆ. ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಪಿಂಡ ಪ್ರದಾನ ಮಾಡಿ ಸ್ನಾನ ಮಾಡುತ್ತಿದ್ದ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ರಭಸವಾಗಿ ನೀರು ಹರಿಯುತ್ತಿದ್ದು, ಬೃಹತ್ ಘಾತ್ರದ ಮರಗಳು ತೇಲಿ ಹೋಗಿವೆ. ಕನ್ನಿಕೆ, ಸುಜ್ಯೋತಿ ನದಿಗಳು ರಭಸವಾಗಿ ಹರಿಯುತ್ತಿದ್ದು ಸ್ನಾನಘಟ್ಟದ ಪ್ರದೇಶದಲ್ಲಿದ್ದ ಬಟ್ಟೆ ಬದಲಾಯಿಸುವ ಕಟ್ಟಡಕ್ಕೂ ನೀರು ನುಗ್ಗಿದೆ. ಸ್ನಾನಘಟ್ಟದ ಮೆಟ್ಟಿಲುಗಳೂ ಮುಳುಗಿ ಹೋಗಿದೆ.
ಕಾವೇರಿ ತವರಿನಲ್ಲಿ ಭರ್ಜರಿ ಮಳೆ: ನಾಳೆ ಕೊಡಗು ಜಿಲ್ಲಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ
ಕೊಡಗಿನಲ್ಲಿ ಪ್ರವಾಹದ ಭೀತಿ: ಬ್ರಹ್ಮಗಿರಿ ಮತ್ತು ತಲಾಕಾವೇರಿ ಭಾಗದಲ್ಲಿ ತೀವ್ರ ಮಳೆ ಸುರಿಯುತ್ತಿರುವುದರಿಂದ ಕಾವೇರಿ ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಇದು ಕಾವೇರಿ ನದಿ ಪಾತ್ರದ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸುವಂತೆ ಆಗಿದೆ. ಒಂದು ವೇಳೆ ಮಳೆ ಹೀಗೆ ಮುಂದುವರಿದರೆ ಕೊಡಗಿನಲ್ಲಿ ಪ್ರವಾಹದಂತಹ ಸಾಕಷ್ಟು ಸಮಸ್ಯೆ ಎದುರಾಗುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಂದೆಡೆ ಭಾಗಮಂಡಲ ಮತ್ತು ನಾಪೋಕ್ಲು ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.
ನಾಪೋಕ್ಲು ರಸ್ತೆ ಸಂಪರ್ಕ ಕಡಿತ: ತಲಕಾವೇರಿ ಭಾಗದಲ್ಲಿ ಬುಧವಾರ ಬೆಳಿಗ್ಗೆಯಿಂದ ಗುರುವಾರ ಸಂಜೆ ನಾಲ್ಕು ಗಂಟೆಯವರೆಗೆ ರಣಭೀಕರ ಮಳೆ ಸುರಿದಿದೆ. ಪರಿಣಾಮವಾಗಿ ಭಾಗಮಂಡಲದಲ್ಲಿ ಸುಜ್ಯೋತಿ ಮತ್ತು ಕನ್ನಿಕೆ ನದಿಗಳು ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಹೀಗಾಗಿ ನಾಪೋಕ್ಲು ರಸ್ತೆಯ ಮೇಲೆ ಮೂರು ಅಡಿಯಷ್ಟು ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಅನಿವಾರ್ಯ ಕಾರಣದಿಂದ ಕೆಲವು ವಾಹನ ಸವಾರರು ರಸ್ತೆ ಮೇಲೆ ಹರಿಯುತ್ತಿರುವ ಮೂರು ಅಡಿಯ ನೀರಿನಲ್ಲೇ ಅಪಾಯಕಾರಿಯಾಗಿ ವಾಹನ ಚಲಾಯಿಸಿ ಸಾಗುತ್ತಿದ್ದಾರೆ.
ನಾಲ್ಕು ವರ್ಷವಾದರೂ ಸೇತುವೆ ಕಾಮಗಾರಿ ಅಪೂರ್ಣ: ಭಾಗಮಂಡಲದಿಂದ ಕೋರಂಗಾಲ ಮತ್ತು ಕುಯ್ಯಂಗೇರಿ ಭಾಗಕ್ಕೆ ಹೋಗಿದ್ದ ಆಟೋಗಳು ನಾಪೋಕ್ಲು ರಸ್ತೆಯಲ್ಲೇ ಸಿಲುಕಿವೆ. ಜೊತೆಗೆ ತಮ್ಮ ಊರುಗಳಿಗೆ ತೆರಳಬೇಕಾಗಿದ್ದ ಜನರು ಬೇರೆದಾರಿಯಿಲ್ಲದೆ, ಪ್ರವಾಹದಂತೆ ಹರಿಯುತ್ತಿದ್ದ ನೀರಿನಲ್ಲೇ ನಡೆದು ಸಾಗುತ್ತಿದ್ದಾರೆ. ಇನ್ನು ಭಾಗಮಂಡಲದಲ್ಲಿ ಪ್ರತಿ ವರ್ಷ ಪ್ರವಾಹದಿಂದ ಸಂಪರ್ಕ ಕಡಿತಗೊಳ್ಳುವುದನ್ನು ತಪ್ಪಿಸುವುದಕ್ಕಾಗಿ ನಾಲ್ಕು ವರ್ಷಗಳ ಹಿಂದೆಯೇ ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಗಿದೆ. ಮೇಲ್ಸೇತುವೆ ಮಾಡಿದ್ದರೂ ಅದಕ್ಕೆ ಬೇಕಾಗಿರುವ ಸಂಪರ್ಕ ರಸ್ತೆಯನ್ನೇ ಮಾಡಿಲ್ಲ. ಇದರಿಂದಾಗಿ ಮೇಲ್ಸೇತುವೆ ಇದ್ದರೂ ಅದು ಬಳಕೆಗೆ ಇಲ್ಲದಂತಾಗಿ ಜನರು ಪ್ರವಾಹದ ನೀರಿನ್ನಲೇ ಓಡಾಡುವಂತೆ ಆಗಿದೆ.
ಕೇವಲ 12 ಗಂಟೆಯಲ್ಲಿ 21 ಏಕರೆ ಬಿತ್ತನೆ ಮಾಡಿದ ಯುವರೈತ: ಹಲಗೆ ಬಾರಿಸಿದ ಗ್ರಾಮಸ್ಥರು
ಜುಲೈ 8ರವರೆಗೆ ಆರೆಂಜ್ ಅಲರ್ಟ್ ಘೋಷಣೆ: ನಾಪೋಕ್ಲು ರಸ್ತೆ ಬಂದ್ ಆಗುತ್ತಿದ್ದಂತೆ ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದಷ್ಟು ಶೀಘ್ರವೇ ಸಂಪರ್ಕ ರಸ್ತೆ ಮಾಡಿ, ಜನರ ಓಡಾಟಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿದರು.ಮಳೆ ಇಷ್ಟೇ ಪ್ರಮಾಣದಲ್ಲಿ ಹೀಗೆಯೇ ಮುಂದುವರಿದಲ್ಲಿ ಇಡೀ ಭಾಗಮಂಡಲ ಮುಳುಗಡೆಯಾಗುವ ಸಾಧ್ಯತೆ ಇದೆ. ಕಳೆದ 24 ಗಂಟೆಯಲ್ಲಿ 140 ಮಿಲಿಮೀಟರ್ ಮಳೆ ಸುರಿದಿದ್ದು, ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಮಳೆ ಸುರಿಯುವ ಸಾಧ್ಯತೆ ಹಿನ್ನಲೆಯಲ್ಲಿ ಶುಕ್ರವಾರ ಜಿಲ್ಲೆಯ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ರಣ ಭೀಕರ ಮಳೆ ಸುರಿಯುತ್ತಿದ್ದು ಜನರು ತತ್ತರಿಸುವಂತೆ ಆಗಿದೆ.