ಉಡುಪಿ (ಡಿ.19): ಸೋನಿ ಟಿವಿಯಲ್ಲಿ ಖ್ಯಾತ ನಟ ಅಮಿತಾಬ್‌ ಬಚ್ಚನ್‌ ನಡೆಸಿಕೊಡುವ ಜನಪ್ರಿಯ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ವಿದ್ಯಾರ್ಥಿಗಳ ಆವೃತ್ತಿಯಲ್ಲಿ ಉಡುಪಿಯ ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ನ ಏಳನೇ ತರಗತಿ ವಿದ್ಯಾರ್ಥಿ 12 ವರ್ಷದ ಅನಾಮಯ ಯೋಗೀಶ್‌ 50 ಲಕ್ಷ ರು. ಗೆದ್ದುಕೊಂಡಿದ್ದಾನೆ.

 1 ಕೋಟಿ ರು. ಗೆಲ್ಲಲು ಒಟ್ಟು 12 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಬೇಕಾಗಿತ್ತು. ಆದರೆ ಮಹಾಭಾರತ ಯುದ್ಧದಲ್ಲಿ ಬದುಕುಳಿದ ಕರ್ಣದ ಮಗನ ಹೆಸರೇನು ಎಂಬ 12ನೇ ಪ್ರಶ್ನೆಗೆ ತನಗೆ ಉತ್ತರ ಗೊತ್ತಿರಲಿಲ್ಲ, ಈ ಸಂದರ್ಭದಲ್ಲಿ ಒಂದು ಲೈಫ್‌ಲೈನ್‌ ಇದ್ದರೂ ಅದನ್ನು ಬಳಸಿಕೊಳ್ಳುವ ಧೈರ್ಯ ಸಾಕಾಗಲಿಲ್ಲ ಎಂದು ಅನಾಮಯ ಹೇಳಿದ್ದಾನೆ.

ಕೆಬಿಸಿಯಲ್ಲಿ ಗೆದ್ದವನೀಗ ಏನು ಮಾಡುತ್ತಿದ್ದಾನೆ

ಉತ್ತರ ಗೊತ್ತಿಲ್ಲದೆ ಅರ್ಧದಲ್ಲೇ ಸ್ಪರ್ಧೆಯಿಂದ ಹೊರಗೆ ಬಂದ ಅನಾಮಯ, 11 ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಿ .50 ಲಕ್ಷಗಳೊಂದಿಗೆ ಹಿಂತಿರುಗಿದ್ದಾನೆ.

ಕಾರುಗಳ ಬಗ್ಗೆ ವಿಪರೀತ ಕ್ರೇಜ್‌ ಇರುವ ಅನಾಮಯ, ಮುಂದೆ ಸ್ವಂತ ಕಾರುಗಳ ಕಾರ್ಖಾನೆಯೊಂದನ್ನು ಆರಂಭಿಸಿ, ಅತಿ ಶ್ರೀಮಂತರ ಜತೆಗೆ ಅತೀ ಬಡವರೂ ಖರೀದಿಸಲು ಸಾಧ್ಯವಾಗುವ ಕಾರುಗಳನ್ನು ಉತ್ಪಾದಿಸಬೇಕು ಎನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದಾನೆ. ಅದಕ್ಕಾಗಿಯೇ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದೇನೆ ಎನ್ನುತ್ತಾನೆ ಅನಾಮಯ. ಈತ ಉಡುಪಿಯ ಅಜ್ಜರಕಾಡಿನ ಉದ್ಯಮಿ ಯೋಗೀಶ್‌ ದಿವಾಕರ್‌ ಮತ್ತು ಅನುರಾಧ ಅವರ ಪುತ್ರ.