Udupi Paryaya 2022: ಜ.18ರಂದು ಪರ್ಯಾಯೋತ್ಸವ : ಅದಮಾರು ಮಠದಿಂದ ಕೃಷ್ಣಾಪುರ ಮಠಕ್ಕೆ ಪೂಜಾಧಿಕಾರ!
*ಅದಮಾರು ಮಠದಿಂದ ಕೃಷ್ಣಾಪುರ ಮಠಕ್ಕೆ ಕೃಷ್ಣ ಪೂಜಾಧಿಕಾರ
*ಸರ್ಕಾರದ ಕೋವಿಡ್ ಮಾರ್ಗದರ್ಶಿ ಸೂತ್ರಗಳ ಅನುಸರಣೆ
*ಮೆರವಣಿಗೆ ಸಾಗುವ ರಸ್ತೆಯಲ್ಲಿ ಹತ್ತಾರು ಕಮಾನುಗೋಪುರಗಳು
ಉಡುಪಿ (ಜ. 17): ಉಡುಪಿ ಶ್ರೀಕೃಷ್ಣ ಮಠದ (Shri Krishna Matha) ಪೂಜಾಧಿಕಾರ ಹಸ್ತಾಂತರ ಸಮಾರಂಭವಾದ ಪರ್ಯಾಯೋತ್ಸವ ಜ.18ರಂದು ನಡೆಯಲಿದ್ದು, ಕೋವಿಡ್ ನಡುವೆಯೇ ಸರಳ ಆಚರಣೆಗೆ ನಗರ ಸಿದ್ಧಗೊಳುತ್ತಿದೆ. 2 ವರ್ಷಕ್ಕೊಮ್ಮೆ ನಡೆಯುವ ಈ ಸಮಾರಂಭದಲ್ಲಿ ಪ್ರಸ್ತುತ ಪರ್ಯಾಯ ಪೀಠಾಧಿಪತಿಗಳಾದ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಗೆ ಪೊಡವಿಗೊಡೆಯ ಶ್ರೀಕೃಷ್ಣನ ಪೂಜಾಧಿಕಾರವನ್ನು ವಿಧ್ಯುಕ್ತವಾಗಿ ಹಸ್ತಾಂತರಿಸಲಿದ್ದಾರೆ.
ಸರ್ಕಾರದ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು (Covid 19 Guidelines) ಗಮನದಲ್ಲಿರಿಸಿಕೊಂಡು ಸ್ವಾಗತ ಸಮಿತಿಯು ಪರ್ಯಾಯೋತ್ಸವಕ್ಕೆ ತಯಾರಿಗಳನ್ನು ಮಾಡಿಕೊಂಡಿದೆ. ಮಠದೊಳಗಿನ ಧಾರ್ಮಿಕ ಸಂಪ್ರದಾಯಗಳನ್ನು ಹೊರತುಪಡಿಸಿ, ಮಠದ ಹೊರಗಿನ ಸಾಂಸ್ಕೃತಿಕ ಗೌಜುಗದ್ದಲಗಳಿಗೆ ಕಡಿವಾಣ ಹಾಕಿದೆ. ಈ ಮೂಲಕ ಜನರ ಭಾಗವಹಿಸುವಿಕೆ ಇಲ್ಲದೆ ಸರಳ ಪರ್ಯಾಯೋತ್ಸವ ನಡೆಸಲಾಗುತ್ತಿದೆ. ರಥಬೀದಿಯನ್ನು ದೀಪಾಲಂಕೃತಗೊಳಿಸಲಾಗಿದೆ. ಉಡುಪಿಯ ಬೀದಿಗಳು ದುರಸ್ತಿಗೊಂಡು ಸ್ವಚ್ಛವಾಗಿವೆ. ಪರ್ಯಾಯ ಮೆರವಣಿಗೆ ಸಾಗುವ ರಸ್ತೆಯಲ್ಲಿ ಹತ್ತಾರು ಕಮಾನುಗೋಪುರಗಳನ್ನೂ ನಿರ್ಮಿಸಲಾಗಿದೆ.
ಇದನ್ನೂ ಓದಿ: Weekend Curfew : ವೀಕೆಂಡ್ ಕರ್ಫ್ಯೂ ನಡುವೆಯೇ ಉಡುಪಿ ಕೃಷ್ಣಮಠದಲ್ಲಿ ಚೂರ್ಣೋತ್ಸವ
ಆಚರಣೆ ಹೇಗೆ?: ಮಂಗಳವಾರ ಪ್ರಾತಃ 2.15ಕ್ಕೆ ಭಾವಿ ಪರ್ಯಾಯ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಸಂಪ್ರದಾಯದಂತೆ ತಮ್ಮ ಮಠದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ದಂಡತೀರ್ಥಕ್ಕೆ ತೆರಳಿ ಪವಿತ್ರ ಸ್ನಾನ ಮಾಡಿ, 2.30ಕ್ಕೆ ಉಡುಪಿಯ ಜೋಡುಕಟ್ಟೆಗೆ ಆಗಮಿಸುತ್ತಾರೆ. ಅಲ್ಲಿ ಅವರನ್ನು ಉಳಿದ ಅಷ್ಟಮಠಾಧೀಶರು ಅವರನ್ನು ಸ್ವಾಗತಿಸುತ್ತಾರೆ. ನಂತರ ಕೃಷ್ಣಮಠಕ್ಕೆ ಮೆರವಣಿಗೆ ಆರಂಭವಾಗುತ್ತದೆ.
ಬೆಳಗ್ಗೆ 5.25ಕ್ಕೆ ಶ್ರೀಕೃಷ್ಣಮಠ ಪ್ರವೇಶ ಮಾಡಿ ದೇವರ ದರ್ಶನ ಪಡೆಯಲಿರುವ ಶ್ರೀಗಳಿಗೆ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಬೆಳಗ್ಗೆ 5.45ಕ್ಕೆ ಶ್ರೀ ಮನ್ಮಧ್ವಾಚಾರ್ಯ ಕರಾರ್ಚಿತ ಅಕ್ಷಯಪಾತ್ರ ಬೆಳ್ಳಿಯ ಸಟ್ಟುಗ ಹಸ್ತಾಂತರಿಸಿ, ಬೆಳಗ್ಗೆ 5.55ಕ್ಕೆ ಪವಿತ್ರ ಸರ್ವಜ್ಞ ಪೀಠಾರೋಹಣಗೊಳಿಸಲಿದ್ದಾರೆ.
ಇದನ್ನೂ ಓದಿ: Yakshagana: ಕಲಾವಿದರಿಗೆ ಕರ್ಫ್ಯೂ ಬಿಸಿ, ಕಾಲಮಿತಿಯೊಳಗೆ ಅವಕಾಶ ಕೊಡುವಂತೆ ಮನವಿ
ಬೆಳಗ್ಗೆ 6.45ಕ್ಕೆ ರಾಜಾಂಗಣದಲ್ಲಿ ಅಷ್ಟಮಠಾಧೀಶರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪರ್ಯಾಯ ದರ್ಬಾರ್ ಆರಂಭವಾಗಿ, 8.30ಕ್ಕೆ ಕೊನೆಗೊಳ್ಳಲಿದೆ. 10 ಗಂಟೆಗೆ ಶ್ರೀಗಳು ಕೃಷ್ಣನಿಗೆ ಮಹಾಪೂಜೆ ನೆರವೇರಿಸುವ ಮೂಲಕ ಮುಂದಿನ 2 ವರ್ಷಗಳ ಅವಧಿಯ ಕೃಷ್ಣಪೂಜೆಯ ಮಹಾಕೈಂಕರ್ಯ, ತಮ್ಮ 4ನೇ ಪರ್ಯಾಯವನ್ನು ವಿಧ್ಯುಕ್ತವಾಗಿ ಆರಂಭಿಸಲಿದ್ದಾರೆ. ಈ ಮೆರವಣಿಗೆಯೇ ಸ್ತಬ್ಧಚಿತ್ರ, ಸಾಂಸ್ಕೃತಿಕ ಕಲಾತಂಡಗಳು, ನಾನಾ ತರದ ವಾದ್ಯವಾದನಗಳಿಂದ ವೈಭವಪೂರ್ಣವಾಗಿರುತ್ತದೆ. ಆದರೆ ಈ ಬಾರಿ ಮಠಾಧೀಶರ ಪಲ್ಲಕ್ಕಿಗಳು ಮತ್ತು ಸಂಪ್ರದಾಯಕ್ಕೆ ಸಂಬಂಧಪಟ್ಟವಾದ್ಯಘೋಷಗಳಿಗಷ್ಟೇ ಅವಕಾಶ ನೀಡಲಾಗಿದೆ.