ಉಡುಪಿ(ಏ.26): ರಾಜ್ಯ ಸರ್ಕಾರವು ಕೊಂಚಮಟ್ಟಿಗೆ ಲಾಕ್‌ಡೌನ್‌ ಸಡಿಲಿಕೆ ಮಾಡಿ ಆದೇಶಿಸಿರುವ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾಡಳಿತ ತನ್ನ ನಿರಾಶ್ರಿತರ ಶಿಬಿರಗಳಲ್ಲಿದ್ದ ಸುಮಾರು 500 ಮಂದಿ ವಲಸೆ ಕಾರ್ಮಿಕರನ್ನು ಆವರ ಊರಿಗೆ ಕಳುಹಿಸಿಕೊಟ್ಟಿತು.

ಉಡುಪಿ ಜಿಲ್ಲೆ ಹೊರಜಿಲ್ಲೆಯ ವಲಸೆ ಕಾರ್ಮಿಕರಿಗೆ ದುಬೈ ಇದ್ದಂತೆ, ತಮ್ಮೂರಿಗಿಂತ ಇಲ್ಲಿ ದುಪ್ಪಟ್ಟು ಸಂಬಳ ಸಿಗುತ್ತದೆ. ಆದ್ದರಿಂದ ಉಡುಪಿ ಜಿಲ್ಲೆಗೆ ಉದ್ಯೋಗವನ್ನರಿಸಿ ಬಂದಿದ್ದ ಈ ವಲಸೆ ಕಾರ್ಮಿಕರು, ಲಾಕ್‌ಡೌನ್‌ನಿಂದಾಗಿ ಉದ್ಯೋಗ, ಕೂಲಿ ಇಲ್ಲದೆ ತೀವ್ರ ಸಂಕಷ್ಟಕ್ಕೊಳಗಾಗಿದ್ದರು. ಊರಿಗೆ ಹೋಗುವುದಕ್ಕೂ ಬಸ್ಸುಗಳಿರಲಿಲ್ಲ, ಸಾಕಷ್ಟುಮಂದಿ ಕಾಲ್ನಡಿಗೆಯಲ್ಲಿ ಊರಿಗೆ ಹೊರಟಿದ್ದರು. ಅವರನ್ನು ಜಿಲ್ಲೆಯ ಗಡಿಗಳಲ್ಲಿ ತಡೆದು, ಕರೆತಂದು ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ನೀಡಿ, ಜಿಲ್ಲಾಧಿಕಾರಿ ಜಿ.ಜಗದೀಶ್‌ ಅವರು ದಾನಿಗಳ ಮೂಲಕ ಊಟೋಪಚಾರದ ವ್ಯವಸ್ಥೆ ಮಾಡಿದ್ದರು.

ಪ್ರತಿಭಟನೆಯಲ್ಲಿ ಮಾತ್ರವಲ್ಲ ಲಾಕ್‌ಡೌನ್‌ ಸಮಯದಲ್ಲೂ ವಾಟಾಳ್ ನಾಗರಾಜ್ ಪ್ರಾಣಿ ಪ್ರೇಮ

ಇದೀಗ ಕಾರ್ಮಿಕರನ್ನು ಬಸ್ಸುಗಳಲ್ಲಿ ಊರಿಗೆ ಕಳುಹಿಸಬಹುದು ಎಂದು ಸರ್ಕಾರ ಆದೇಶಿರುವುದರಿಂದ ಶನಿವಾರ ಉಡುಪಿಯಿಂದ ಸುಮಾರು 20 ಸರ್ಕಾರಿ ಬಸ್‌ಗಳಿಗೆ ರೂಟ್‌ ಫಿಕ್ಸ್ ಮಾಡಿ ತಲಾ 25 ಕಾರ್ಮಿಕರಂತೆ 500 ಮಂದಿಯನ್ನು ಅವರರ ಜಿಲ್ಲೆಗಳಿಗೆ ಕಳುಹಿಸಲಾಯಿತು. ಉಡುಪಿ ನಗರದ ಬೋರ್ಡ್‌ ಸ್ಕೂಲ್‌ನ ನಿರಾಶ್ರಿತರ ಕೇಂದ್ರದಲ್ಲಿ ಅತೀ ಹೆಚ್ಚು ಮಂದಿ ಕಾರ್ಮಿಕರಿದ್ದರು, ಜೊತೆಗೆ ಬ್ರಹ್ಮಾವರ, ಕುಂದಾಪುರ ಕೇಂದ್ರಗಳಿಂದಲೂ ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ, ವಿಜಯಪುರ ಮುಂತಾದ ಜಿಲ್ಲೆಗಳ ಕಾರ್ಮಿಕರನ್ನು ಕಳುಹಿಸಲಾಗಿದೆ.

ಪ್ರತಿಯೊಬ್ಬರಿಗೂ ಸ್ಯಾನಿಟೈಸರ್‌, ಮಾಸ್ಕ್ ಮತ್ತು ಆಹಾರದ ಕಿಟ್‌ಗಳನ್ನು ನೀಡಿ, ಅವುಗಳನ್ನು ಸರಿಯಾಗಿ ಬಳಸುವಂತೆ ತಿಳಿಹೇಳಿ ಉಡುಪಿ ನಗರಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್‌ ಬೀಳ್ಕೊಟ್ಟರು.

ಕನ್ನಡ ಪತ್ರಕರ್ತನಿಗೆ ವಕ್ಕರಿಸಿದ ಕೊರೋನಾ: ಹಲವು ಮಾಧ್ಯಮ ಸಿಬ್ಬಂದಿ ಕ್ವಾರಂಟೈನ್

ಸಂಕಷ್ಟದ ಈ ದಿನಗಳಲ್ಲಿಯೂ ತಮ್ಮೂರಿಗೆ ಹೋಗುವುದಕ್ಕಾಗದೆ ನಿರಾಶರಾಗಿದ್ದ ಈ ಕಾರ್ಮಿಕರು ಊರುಗಳಿಗೆ ಕುಟುಂಬಸಮೇತರಾಗಿ ತೆರಳುವಾಗ ಬಹಳ ಸಂತೋಷದಿಂದಿದ್ದರು. ಹೊಟ್ಟೆಗಿಲ್ಲದೆ ಕಷ್ಟದಲ್ಲಿದ್ದಾಗ ತಮ್ಮ ಕೈಬಿಡದೆ ಮೂರು ಹೊತ್ತು ಊಟೋಪಚಾರ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತದ ಶ್ರಮವನ್ನು ನೆನೆದು ಕೆಲವು ಕಾರ್ಮಿಕರು ಭಾವುಕರಾದರು, ಎಲ್ಲವೂ ಸರಿಯಾದಲ್ಲಿ ಮತ್ತೆ ಮರಳಿ ಉಡುಪಿಗೆ ಬರುವುದಾಗಿ ಹೇಳುತ್ತಿದ್ದರು.