ಉಡುಪಿಯಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆ ನಡೆಯಲಿರುವ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದಲ್ಲಿ ಸಂಭ್ರಮದಿಂದ ಭಾಗವಹಿಸಲು ಉಡುಪಿಯ ಜನತೆ ಕಾತುರರಾಗಿದ್ದಾರೆ.

ಉಡುಪಿ: ಉಡುಪಿಯಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆ ನಡೆಯಲಿರುವ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದಲ್ಲಿ ಸಂಭ್ರಮದಿಂದ ಭಾಗವಹಿಸಲು ಉಡುಪಿಯ ಜನತೆ ಕಾತುರರಾಗಿದ್ದಾರೆ. ಜನರ ನಿರೀಕ್ಷೆಯಂತೆ ಪರ್ಯಾಯೋತ್ಸವವನ್ನು ವೈಭವದಿಂದ ನಡೆಸಲು ಶಿರೂರು ಮಠದಲ್ಲಿ ಅಂತಿಮ ಸಿದ್ದತೆಗಳಾಗುತ್ತಿವೆ.

ಪುತ್ತಿಗೆ ಶ್ರೀಗಳಿಗೆ ಪೌರಸನ್ಮಾನ: ಶೀರೂರು ಪರ್ಯಾಯ ಸ್ವಾಗತ ಸಮಿತಿಯ ವತಿಯಿಂದ, ತಮ್ಮ ಚತುರ್ಥ ಪರ್ಯಾಯ ಮಹೋತ್ಸವವನ್ನು ಯಶಸ್ವಿಯಾಗಿ ಪೂರೈಸಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ಸಂಜೆ 4.30ಕ್ಕೆ ಗಂಟೆಗೆ ರಥಬೀದಿಯ ಪೂರ್ಣಪ್ರಜ್ಞಾ ವೇದಿಕೆಯಲ್ಲಿ ಪೌರ ಸನ್ಮಾನ ನೀಡಲಾಗುತ್ತಿದೆ.

ಲಕ್ಷ ಮಂದಿಗೆ ಅನ್ನಪ್ರಸಾದ:

ಈ ಪರ್ಯಾಯೋತ್ಸವದಲ್ಲಿ ಸುಮಾರು 2 ಲಕ್ಷಕ್ಕೂ ಮಿಕ್ಕಿ ಭಕ್ತರು ಭಾಗಿಯಾಗುವ ನಿರೀಕ್ಷೆ ಇದ್ದು, ಭಕ್ತಜನರಿಗೆ ಮಹಾಅನ್ನಪ್ರಸಾದ ವಿತರಣೆ ನಡೆಯಲಿದೆ. ಭಾನುವಾರ ಮಧ್ಯಾಹ್ನ 50 ಸಾವಿರ ಮಂದಿಗೆ ಮತ್ತು ಶನಿವಾರ ರಾತ್ರಿ ಕೂಡಾ 40 ಸಾವಿರ ಮಂದಿಗೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ.

80 ಸಾಂಸ್ಕೃತಿಕ ತಂಡಗಳು:

ಭಾನುವಾರ ಮುಂಜಾನೆ 2 ಗಂಟೆಯಿಂದ ಜೋಡುಕಟ್ಟೆಯಿಂದ ಭಾವಿ ಪರ್ಯಾಯ ಪೀಠಾಧೀಶ ಶಿರೂರು ಶ್ರೀಗಳನ್ನು ಅಷ್ಟ ಮಠಾಧೀಶರು ಬರ ಮಾಡಿಕೊಳ್ಳುವ ಭವ್ಯ ಶೋಭಾಯಾತ್ರೆ ನಡೆಯಲಿದೆ. ಸುಮಾರು 85 ಕ್ಕೂ ಅಧಿಕ ವಿವಿಧ ರಾಜ್ಯಗಳ ಕಲಾ ತಂಡಗಳು, ವೈವಿಧ್ಯಮಯ ಆಕರ್ಷಕ ಸ್ತಬ್ಧ ಚಿತ್ರಗಳನ್ನೊಳಗೊಂಡ ಮೆರವಣಿಗೆಯು ಉಡುಪಿ ರಾಜಮಾರ್ಗದಲ್ಲಿ ರಥಬೀದಿಗೆ ಸಾಗಿ ಬರಲಿದೆ.

ದರ್ಬಾರ್‌ಗೆ ಅತಿಥಿಗಣ್ಯರು:

ಗೌರವ ಉಪಸ್ಥಿತಿ : ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಮುಖ್ಯ ಅತಿಥಿಗಳು ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಗೃಹಸಚಿವ ಡಾ. ಜಿ. ಪರಮೇಶ್ವರ್, ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಾಸಕರು, ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಉದ್ಯಮಿಗಳಾದ ನಾಡೋಜ ಡಾ ಜಿ. ಶಂಕರ್, ಬಂಜಾರ ಪ್ರಕಾಶ್ ಶೆಟ್ಟಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ ಎಂ. ಮೋಹನ್ ಆಳ್ವ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ ಎಂ. ಎನ್. ರಾಜೇಂದ್ರ ಕುಮಾರ್, ಇಸ್ಕಾನ್ ಉಪಾಧ್ಯಕ್ಷ ಚಂಚಲದಾಸ ಪತಿ, ಕೆನರಾ ಬ್ಯಾಂಕ್ ಎಂಡಿ - ಸಿಇಓ ಹರಿದೀಪ ಸಿಂಗ್ ಅಹ್ಲುವಾಲಿಯಾ ಮತ್ತಿತರರು ಭಾಗವಹಿಸಲಿದ್ದಾರೆ

ಪರ್ಯಾಯೋತ್ಸವ ಹೀಗೆ ನಡೆಯುತ್ತದೆ...

ಶೀರೂರು ಮಠದ ಯತಿ ಶ್ರೀ ವೇದವರ್ಧನ ತೀರ್ಥರ ಪರ್ಯಯ ಮಹೋತ್ಸವವು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ನಡೆಯಲಿದೆ.

ಪ್ರಾತಃ ಕಾಲ 1.15 : ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ

2.00: ಜೋಡುಕಟ್ಟೆಯಿಂದ ವೈಭವದ ಪರ್ಯಾಯ ಮೆರವಣಿಗೆ ಪ್ರಾರಂಭ

ಬೆಳಗ್ಗೆ 5.15 : ರಥಬೀದಿ ಪ್ರವೇಶ, ಕನಕನ ಕಿಂಡಿಯಲ್ಲಿ ಶ್ರೀಕೃಷ್ಣದರ್ಶನ, ಶ್ರೀ ಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ದರ್ಶನ.

5:45 : ವೇದವರ್ಧನ ಶ್ರೀಪಾದರಿಂದ ಶ್ರೀ ಸರ್ವಜ್ಞ ಪರ್ಯಾಯ ಪೀಠಾರೋಹಣ,

5:55 : ಬಡಗು ಮಾಳಿಗೆಯ ಅರಳು ಗದ್ದುಗೆಯಲ್ಲಿ ಸಾಂಪ್ರದಾಯಿಕ ದರ್ಬಾರ್ ಹಾಗೂ ಅಷ್ಟ ಮಠಾಧೀಶರಿಗೆ ಮಾಲಿಕೆ ಮಂಗಳಾರತಿ

6.15 : ರಾಜಾಂಗಣಕ್ಕೆ ಆಗಮನ, ಬಹಿರಂಗ ದರ್ಬಾರ್, ಅಷ್ಟಮಠಾಧೀಶರಿಂದ ಹಾಗೂ ಪರ್ಯಾಯ ಪೀಠಾಧೀಶರಿಂದ ಅನುಗ್ರಹ ಸಂದೇಶ

10.30 : ಶಿರೂರು ಶ್ರೀಗಳಿಂದ ಶ್ರೀಕೃಷ್ಣ ದೇವರಿಗೆ ಪ್ರಥಮ ಮಹಾಪೂಜೆ, ನಂತರ ಅನ್ನ ಸಂತರ್ಪಣೆಗೆ ಪಲ್ಲಪೂಜೆ.