ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವಕರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಮಕ್ಕಳ ಬೈಕ್ ಹಾಗೂ ಶೂಗಳು ಪತ್ತೆಯಾದ ಬೆನ್ನಲ್ಲೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ತುಮಕೂರು: ತಾಲೂಕಿನ ಪಾಲಸಂದ್ರ ಪಾಳ್ಯ ಹಾಗೂ ಕಡಬ ಮೂಲದ ಇಬ್ಬರು ಯುವಕರು ನಿಗೂಢವಾಗಿ ಕಣ್ಮರೆಯಾಗಿದ್ದು, ಪೋಷಕರಲ್ಲಿ ಆತಂಕ ವ್ಯಕ್ತವಾಗಿದೆ. ಪಾಲಸಂದ್ರ ಪಾಳ್ಯ ಗ್ರಾಮದ ದರ್ಶನ್ (21) ಹಾಗೂ ಗುಬ್ಬಿ ತಾಲೂಕಿನ ಕಡಬ ಮೂಲದ ರಜಿನಿಕಾಂತ್ (20) ನಾಪತ್ತೆ ಆದವರು. ಇವರಿಬ್ಬರು ತುಮಕೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಆತಂಕಕ್ಕೆ ಕಾರಣ ಏನು?
ತುಮಕೂರು ಹೊರವಲಯದ ಶೆಟ್ಟಿಹಳ್ಳಿ ಸಮೀಪದ ಉತ್ತರಕಟ್ಟೆ ಕೆರೆಯ ಸಮೀಪ ಯುವಕರ ಬೈಕ್ ಮತ್ತು ಶೂ ಪತ್ತೆ ಆಗಿದೆ. ಹೀಗಾಗಿ ಕೆರೆಯಲ್ಲಿ ಈಜಲು ಹೋಗಿ ದುರಂತ ಅಂತ್ಯಕಂಡರಾ ಎಂಬ ಅನುಮಾನ ಶುರುವಾಗಿದೆ. ಉತ್ತರಕಟ್ಟೆ ಕೆರೆಯ ಪಕ್ಕದಲ್ಲಿ ಯುವಕರ ಬೈಕ್ ನಿಲ್ಲಿಸಿದ್ದಾರೆ. ಅಲ್ಲಿ ಬಟ್ಟೆಗಳು ಹಾಗೂ ಎರಡು ಜೊತೆ ಶೂಗಳು ಪತ್ತೆಯಾಗಿವೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯುವಕರು ಈಜಲು ಕೆರೆಗೆ ಇಳಿದು ನೀರಿನ ಆಳ ತಿಳಿಯದೆ ಮುಳುಗಿರಬಹುದು ಎಂದು ಶಂಕಿಸಲಾಗಿದೆ.
ಶೋಧಕಾರ್ಯ ತೀವ್ರ
ವಿಷಯ ತಿಳಿಯುತ್ತಿದ್ದಂತೆಯೇ ಜಯನಗರ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. 10ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಬೋಟ್ ಮತ್ತು ಗಾಳಗಳ ನೆರವಿನೊಂದಿಗೆ ಕೆರೆಯಲ್ಲಿ ಯುವಕರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ಕೆರೆಯಲ್ಲಿ ಯುವಕರು ಮುಳುಗಿದ್ದಾರೆ ಅನ್ನೋದಕ್ಕೆ ಯಾವುದೇ ಸುಳಿವು ಇಲ್ಲ. ಆದರೂ ಅನುಮಾನದ ಮೇಲೆ ಅಧಿಕಾರಿಗಳು ಹುಟುಕಾಟ ನಡೆಸ್ತಿದ್ದಾರೆ.
ಇನ್ನು, ಸ್ಥಳದಲ್ಲಿ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಕೆರೆಯ ಸುತ್ತ ಕೆರೆಯ ಸುತ್ತಮುತ್ತ ನೂರಾರು ಜನರು ಜಮಾಯಿಸಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಶೀಲನೆ ನಡೆಸುತ್ತಿದ್ದಾರೆ.


