Asianet Suvarna News

ಹೊಸಪೇಟೆ: ತುಂಗಭದ್ರೆ ಒಡಲಿಗೆ ಹರಿದು ಬಂದ ಅಪಾರ ನೀರು..!

* ಒಂದೇ ದಿನದ ಅಂತರದಲ್ಲಿ 2 ಟಿಎಂಸಿ ನೀರು
* ಡ್ಯಾಂನ ಒಳ ಹರಿವಿನಲ್ಲಿ ಹೆಚ್ಚಳ
* ರೈತರ ಮೊಗದಲ್ಲಿ ಮಂದಹಾಸ
 

Two TMC Water Flowing to the Tungabhadra Dam In a Single Day in Hosapete grg
Author
Bengaluru, First Published Jun 20, 2021, 3:38 PM IST
  • Facebook
  • Twitter
  • Whatsapp

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಜೂ.20): ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದ್ದು, ಒಂದೇ ದಿನದಲ್ಲಿ ಎರಡು ಟಿಎಂಸಿಯಷ್ಟು ನೀರು ಜಲಾಶಯದ ಒಡಲು ಸೇರಿದೆ.

ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಮಳೆಯಾ ಆಗುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಒಂದೇ ದಿನದಲ್ಲಿ ಎರಡು ಟಿಎಂಸಿಯಷ್ಟು ನೀರು ಡ್ಯಾಂನಲ್ಲಿ ಸಂಗ್ರಹವಾಗಿದೆ. ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಜೀವನಾಡಿ:

ತುಂಗಭದ್ರಾ ಜಲಾಶಯ ರಾಜ್ಯದ 4 ಜಿಲ್ಲೆಗಳ ರೈತರ ಹಾಗೂ ಜನರ ಜೀವನಾಡಿಯಾಗಿದೆ. ರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್‌ ಕೃಷಿ ಪ್ರದೇಶಕ್ಕೆ ತುಂಗಭದ್ರಾ ಜಲಾಶಯ ನೀರು ಒದಗಿಸುತ್ತದೆ. ಜತೆಗೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೂ ನೀರು ಒದಗಿಸುತ್ತದೆ. ಅದರಲ್ಲೂ ಆಂಧ್ರಪ್ರದೇಶದ ಕರ್ನೂಲ, ಕಡಪ ಮತ್ತು ಅನಂತಪುರ ಜಿಲ್ಲೆಗಳ ಪ್ರದೇಶಕ್ಕೂ ನೀರು ಒದಗಿಸುತ್ತದೆ.

'ಮೋದಿ, ಯಡಿಯೂರಪ್ಪ ಬಗ್ಗೆ ನಾಲಿಗೆ ಹರಿಬಿಡಬೇಡಿ'

ಆಧಾರ:

ಕೊರೋನಾ ಸಂಕಷ್ಟ ಕಾಲದಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕಳೆದುಕೊಂಡು ಯುವಕರು ಮನೆಗಳಿಗೆ ಮರಳುತ್ತಿದ್ದಾರೆ. ಈಗ ಜಲಾಶಯದ ಒಡಲಾಳದಲ್ಲಿ ನೀರು ಸೇರುತ್ತಿರುವುದರಿಂದ ಕೃಷಿ ವಲಯದಿಂದ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಅದರಲ್ಲೂ ಮಹಾನಗರಗಳಿಂದ ಊರುಗಳಿಗೆ ಮರಳಿರುವ ಯುವಕರಲ್ಲಿ ಕೃಷಿ ಕೈಹಿಡಿಯುವ ಆಶಾಭಾವ ಮೊಳೆತಿದೆ. ಇನ್ನು ಗುಳೆ ಹೋಗುವವರ ಸಂಖ್ಯೆಯಲ್ಲೂ ಈ ಬಾರಿ ಕಡಿವಾನ ಬೀಳುವ ಸಾಧ್ಯತೆ ಇದೆ. ಜಲಾಶಯದ ನೀರನ್ನು ನೆಚ್ಚಿ ಬತ್ತ, ಬಾಳೆ, ಕಬ್ಬು, ಮೆಣಸಿನಕಾಯಿ, ಮೆಕ್ಕೆಜೋಳ, ಹತ್ತಿ ಬೆಳೆಗಳನ್ನು ನಾಲ್ಕು ಜಿಲ್ಲೆಗಳ ರೈತರು ಬೆಳೆಯುತ್ತಾರೆ. ಅದರಲ್ಲೂ ಬತ್ತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವುದರಿಂದ ಅಕ್ಕಿ ಗಿರಣಿ ವಲಯದಲ್ಲೂ ಚೇತರಿಕೆ ಕಾಣಲಿದೆ.

ಹೆಚ್ಚಿದ ಒಳ ಹರಿವು:

ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಡ್ಯಾಂಗೆ ಜೂ. 19ರಂದು 27,947 ಕ್ಯುಸೆಕ್‌ ನೀರು ಹರಿದು ಬಂದಿದೆ. ಜೂ. 18ರಂದು 7113 ಕ್ಯುಸೆಕ್‌ನಷ್ಟುಒಳ ಹರಿವು ಇತ್ತು. ಒಮ್ಮಲ್ಲೇ ಒಳ ಹರಿವಿನಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಒಂದೇ ದಿನದ ಅಂತರದಲ್ಲಿ 2 ಟಿಎಂಸಿಯಷ್ಟು ನೀರು ಡ್ಯಾಂನಲ್ಲಿ ಸಂಗ್ರಹವಾಗಿದೆ. ಒಳ ಹರಿವಿನ ಪ್ರಮಾಣ ಇದೇ ರೀತಿಯಲ್ಲಿದ್ದರೆ ಈ ಬಾರಿ ಜಲಾಶಯ ಬೇಗನೆ ಭರ್ತಿಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಜೂ. 19ರಂದು 6.105 ಟಿಎಂಸಿಯಷ್ಟು ನೀರಿತ್ತು. ಕಳೆದ ಹತ್ತು ವರ್ಷದ ಸರಾಸರಿ ಲೆಕ್ಕ ಹಾಕಿದರೆ ಜಲಾಶಯದಲ್ಲಿ 7.553 ಟಿಎಂಸಿಯಷ್ಟು ನೀರಿತ್ತು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಜಲಾಶಯದಲ್ಲಿ ಈಗಲೇ ಸಂಗ್ರಹವಾಗಿರುವುದರಿಂದ ಎರಡು ಬೆಳೆಗಳಿಗೆ ನೀರು ಲಭ್ಯವಾಗುವ ಸಾಧ್ಯತೆ ಈಗಲೇ ಗರಿಗೆದರಿದೆ. ಹೀಗಾಗಿ ಜಲಾಶಯ ಭರ್ತಿಯಾಗುತ್ತಿರುವುದರಿಂದ ಈ ಭಾಗದ ಕೆರೆಗಳು, ಹಳ್ಳ ಮತ್ತು ಕೃಷಿಹೊಂಡಗಳು ಭರ್ತಿಯಾಗಲಿದ್ದು, ಅಂತರ್ಜಲ ಮಟ್ಟವೂ ಹೆಚ್ಚಲಿದೆ ಎಂಬುದು ಕೃಷಿತಜ್ಞರ ಅಭಿಮತವಾಗಿದೆ.

ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಈ ಬಾರಿ ಕೃಷಿ ಚಟುವಟಿಕೆಗೆ ಸಮಸ್ಯೆಯಾಗುವುದಿಲ್ಲ. ಡ್ಯಾಂನಿಂದ ಕಾಲುವೆಗಳಿಗೆ ಬೇಗನೆ ನೀರು ಹರಿಸಿದರೆ, ರೈತರಿಗೆ ಅನುಕೂಲವಾಗಲಿದೆ ಎಂದು ಕಮಲಾಪುರದ ರೈತರು ಮಣಿಕಂಠ, ಕಿರಣ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios