* ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ನೇಮಿರಾಜ್‌ ನಾಯ್ಕ್‌* ದೇಶದ 80 ಕೋಟಿ ಜನತೆಗೆ ದೀಪಾವಳಿಯವರೆಗೂ ಉಚಿತ ಆಹಾರ ವಿತರಿಸುವಂತೆ ಆದೇಶ*  ಸ್ಥಾನಮಾನಗಳ ಬಗ್ಗೆ ಗೌರವ ಇರಲಿ

ಹಗರಿಬೊಮ್ಮನಹಳ್ಳಿ(ಜೂ.14): ಸಿದ್ದರಾಮಯ್ಯ ಅವರೇ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ನೀವು ಕೂಡ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು, ಸ್ಥಾನಮಾನಗಳ ಬಗ್ಗೆ ಗೌರವ ಇರಲಿ ಎಂದು ಮಾಜಿ ಶಾಸಕ ನೇಮಿರಾಜ್‌ ನಾಯ್ಕ್‌ ಕುಟುಕಿದ್ದಾರೆ. 

ಪಟ್ಟಣದ ಕೂಡ್ಲಿಗಿ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಆಟೋ ಚಾಲಕರು ಮತ್ತು ಅಲೆಮಾರಿ ಸಮುದಾಯಗಳ ಕುಟುಂಬಗಳಿಗೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಹಾರ ಕಿಟ್‌ಗಳನ್ನು ವಿತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ದೇಶದ 80 ಕೋಟಿ ಜನತೆಗೆ ದೀಪಾವಳಿಯ ವರೆಗೂ ಉಚಿತ ಆಹಾರ ವಿತರಿಸುವಂತೆ ಆದೇಶಿಸಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಡವರನ್ನು ಗುರುತಿಸಿ ಒಟ್ಟು 3 ಸಾವಿರಕ್ಕೂ ಹೆಚ್ಚು ಶ್ರಮಿಕರಿಗೊಂದು ನಮನ ಎನ್ನುವ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಅಲ್ಲದೆ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಅನೇಕ ಸಂಘ- ಸಂಸ್ಥೆಗಳು ಆಹಾರ ಕಿಟ್‌ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದರು.

'ಲಸಿಕೆ ಒದಗಿಸುವಲ್ಲಿ ಸರ್ಕಾರ ವಿಫಲ: ವ್ಯಾಕ್ಸಿನ್‌ಗೆ 1 ಕೋಟಿ ಅನುದಾನ ನೀಡುವೆ, ಭೀಮಾನಾಯ್ಕ

ಲಸಿಕೆಗಾಗಿ 100 ಕೋಟಿಗಳನ್ನು ನೀಡುವ ಕಾಂಗ್ರೆಸ್‌ನವರು ಅನುದಾನ ಬಿಟ್ಟು ಸ್ವಂತ ಹಣ ನೀಡಲಿ. ಅದು ಬಿಟ್ಟು ಕ್ಷೇತ್ರದ ಜನರನ್ನು ಸೆಳೆಯಲು ನಾನು 1 ಕೋಟಿ ಅನುದಾನ ನೀಡುತ್ತೇನೆ ಎಂದು ಹೇಳುವ ಇವರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ವಿನಿಯೋಗವಾಗಲಿ. ಅದು ಸರ್ಕಾರದ ದುಡ್ಡು, ಲಸಿಕೆಗಾಗಿ ಪ್ರಧಾನಮಂತ್ರಿ ಉಚಿತ ಲಸಿಕೆ ಹಾಕುವಾಗ ನಿಮ್ಮ ಅನುದಾನ ಏಕೆ ಬೇಕು ಎಂದು ಶಾಸಕ ಎಸ್‌. ಭೀಮಾನಾಯ್ಕ್‌ ಹೆಸರೇಳದೆ ಮಾರ್ಮಿಕವಾಗಿ ಮಾತನಾಡಿದರು.

ಪುರಸಭೆ ಸದಸ್ಯ ಬಿ. ಗಂಗಾಧರ, ಬದಾಮಿ ಮುತ್ತುರಾಜ್‌, ಚಿತ್ತವಾಡ್ಗಿ ಪ್ರಕಾಶ, ಬಡಿಗೇರ್‌ ಬಸವರಾಜ್‌, ಬಿಜೆಪಿ ಮಂಡಲ ಕಾರ್ಯದರ್ಶಿ ನಾಗರಾಜ್‌ ಬ್ಯಾಟಿ, ನಗರ ಘಟಕದ ಅಧ್ಯಕ್ಷ ಜೆ.ಎಂ. ಜಗದೀಶಯ್ಯ, ಕಿನ್ನಾಳ್‌ ಸುಭಾಷ್‌, ಭದ್ರವಾಡಿ ಚಂದ್ರಶೇಖರ್‌, ಗರಗ ಪ್ರಕಾಶ್‌, ಟಿ. ಮಹೇಂದ್ರ, ಕುರುಬರ ವೆಂಕಟೇಶ, ಉಮಾದೇವಿ, ಜ್ಯೋತಿರಾಜ್‌, ಶೋಭಾ, ಉಮಾಪತಿ, ಐನಳ್ಳಿ ಶೇಖರ್‌, ನಾಗರಾಜ್‌, ಬಿ.ಜಿ. ಬಡಿಗೇರ್‌, ಸಿದ್ದರಾಜು ಹಾಗೂ ರಾಹುಲ್‌ ಇದ್ದರು.