ಹುನಗುಂದ: ಕಾರು ಡಿಕ್ಕಿ; ಇಬ್ಬರು ವಿದ್ಯಾರ್ಥಿನಿಯರ ದುರ್ಮರಣ
* ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಸಮೀಪದ ನಡೆದ ಘಟನೆ
* ಶಾಲೆಗೆ ತೆರಳಿದ್ದ ಕಂದಮ್ಮಗಳು ಮನೆಗೆ ಬರದೇ ಮಸಣಕ್ಕೆ ತೆರಳಿದರು
* ಈ ಕುರಿತು ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಅಮೀನಗಡ(ಮೇ.26): ಶಾಲೆ ಬಿಟ್ಟು ಮರಳಿ ಊರಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರಿಗೆ ಎದುರುಗಡೆಯಿಂದಲೇ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಶಾಲಾ ವಿದ್ಯಾರ್ಥಿನಿಯರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಸಮೀಪದ ಕ್ಯಾದಿಗೇರಿ ಚಿಲಾಪುರ ತಿರುವಿನ ರಾಮಲಿಂಗೇಶ್ವರ ದೇಗುಲದ ಬಳಿ ಬುಧವಾರ ಸಂಭವಿಸಿದೆ. ಘಟನೆಯಲ್ಲಿ ಇನ್ನೂ ಮೂವರು ವಿದ್ಯಾರ್ಥಿನಿಯರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಚಿರ್ಲಾಪೂರ ಗ್ರಾಮದ 8ನೇ ತರಗತಿಯ ಬಸಮ್ಮ ಮಹಾಂತೇಶ ರಗಟಿ ಹಾಗೂ 9ನೇ ತರಗತಿಯ ಅಂಜಲಿ ಯಮನಪ್ಪ ಸೂಡಿ ಮೃತಪಟ್ಟವಿದ್ಯಾರ್ಥಿನಿಯರು. ಸುನಿತಾ ಬೈಲಪ್ಪ ಸೂಡಿ, ಕಾವೇರಿ ಹೊನ್ನಪ್ಪ ಹುಬ್ಬಳ್ಳಿ, ಸುನಂದಾ ಮುದಿಯಪ್ಪ ಸೂಡಿ ತೀವ್ರವಾಗಿ ಗಾಯಗೊಂಡಿದ್ದಾರೆ.
Chitradurga: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಕಾರು ಅಪಘಾತ
ಏನಿದು ಘಟನೆ?:
ಐಹೊಳೆ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಂಜೆ ಶಾಲೆ ಬಿಟ್ಟಿದ್ದರಿಂದ ಐಹೊಳೆ ಶಾಲೆಯಿಂದ ಮೂರು ಕಿಮೀ ದೂರದಲ್ಲಿರುವ ಚೀರ್ಲಾಪೂರಕ್ಕೆ ಐವರು ವಿದ್ಯಾರ್ಥಿನಿಯರು ರಾಜ್ಯ ಹೆದ್ದಾರಿಯಲ್ಲಿ ನಡೆದುಕೊಂಡು ಹೊರಟಿದ್ದರು. ಈ ವೇಳೆ ಎದುರುಗಡೆಯಿಂದ ಬಂದ ಕಾರೊಂದು ನಿಯಂತ್ರಣ ತಪ್ಪಿ ಐವರು ವಿದ್ಯಾರ್ಥಿನಿಯರ ಮೇಲೆ ಹರಿದಿದೆ. ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಸ್ಥಳದಲ್ಲೇ ಅಸುನೀಗಿದರೆ ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡರು.
ಡಿಕ್ಕಿ ಹೊಡೆದ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಐಹೊಳೆ ಪ್ರವಾಸದಲ್ಲಿದ್ದ ಸಚಿವ ಮುನಿರತ್ನ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪಘಾತದ ವಿವರ ಪಡೆದರು. ಈ ಕುರಿತು ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.